ಬರಬಾರದು ಹೀಗೆ ನೀವು

ಬರಬಾರದು ಹೀಗೆ ನೀವು
ನಮ್ಮೊಳಗೆ,
ನವಿಲ ಗರಿಯೊಳಗೆ ಬಂದ
ನೀಲಿ ಕಣ್ಣಂತೆ.

ಮಾತನಾಡಲಿಲ್ಲ ನಾವು
ಎಂದೂ
ಹತ್ತಿರ ಕೂತು ಹೊತ್ತು ಕಳೆದಿಲ್ಲ
ಆದರೂ ಕೇಳುತ್ತದೆ ಎದೆಬಡಿತ
ಮಳೆಗೆ ಮುಂಚೆ ಸಿಡಿಲು ಹೊಡೆದಂತೆ.

ಮೋಹಕ್ಕೆ ಸಾವಿರ ಕಣ್ಣು
ಬೆಂಕಿ ನಾಲಗೆ ಅದಕೆ
ಯಾಕೆ ಹೀಗೆ ಕಾಡುತ್ತದೆ
ಸುಮ್ಮ ಸುಮ್ಮನೆ ಸುಳಿದು
ನಮ್ಮ ನಡುವೆ.

ನಾಡಿಯಲ್ಲೆಲ್ಲಾ ಬೆಂಕಿ ಇಳಿದು
ನಡುಗುವುದು ಮೈ ನಖ ಶಿಖಾಂತ
ನಕ್ಷತ್ರ ಗುಛ್ಚ ಹೊತ್ತು ಉರಿದಂತೆ.

ಮಾತನಾಡುವುದೇ ಬೇಡ
ಸುಮ್ಮನೆ ಕರಗಿ ಬಿಡಬೇಕು
ನಿಮ್ಮಲ್ಲಿ
ಕಣಿವೆ ಕಂದರ ಹೊದ್ದ
ದಟ್ಟ ಹಸಿರಂತೆ
ಕಡಲ ನೀರಲ್ಲಿ ನೀಲಿ ಬೆರೆತಂತೆ….

ಕೂಸು ಕೈ ಹಿಡಿದು ಜಗ್ಗುತ್ತದೆ
ಕೆಲವು ಸಾರಿ ಹೀಗೇ!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ