ಚಲನಚಿತ್ರ ಮುಹೂರ್ತಗಳು

ಆಷಾಢ ಮುಗಿದರೆ ಸಾಕೆಂದು ಚಿತ್ರ ನಿರ್ಮಾಪಕ- ನಿರ್ದೇಶಕರು ಹಪಹಪಿಸುತ್ತಿರುತ್ತಾರೆ. ಆನಂತರ ದಡಬಡ ಎಂದು ಮುಹೂರ್ತಗಳಾಗುತ್ತದೆ. ಶುಕ್ರವಾರ ಸುದ್ದಿ ವಿವರ ತಿಳಿಯಲಿ ಎಂದು ಚಿತ್ರರಸಿಕರು ಕಾತರರಾಗಿರುತ್ತಾರೆ ಎಂಬ ಕಾರಣಕ್ಕೆ ಪತ್ರಕರ್ತರಿಗಾಗಿ ನಿಗದಿಯಾದ ಸ್ಥಳದಿಂದ ವಾಹನ ಹೊರಡುತ್ತದೆ, ಹಲವು ಮುಹೂರ್ತಗಳು ರಾಜ ವೈಭವದಿಂದ ಕೂಡಿರುತ್ತವೆ. ಕೆಲವು ತುಂಬಾ ಸರಳ ವಾಗಿರುತ್ತವೆ. ಮತ್ತೆ ಕೆಲವು ಕನ್‌ಪ್ಯೂಷನ್ ಮಾಸ್ಟರ್ ಗಳಂತಿರುತ್ತವೆ.

ಪತ್ರಕರ್ತರ ರೋಚಕ ವರದಿಗಳನ್ನು ವಾರವಾರ ಓದುವ ಚಿತ್ರರಸಿಕರು ಅಲ್ಲಿ ಕಾರ್ಯಕ್ರಮ ನಡೆದ ಬಗೆಯನ್ನು ತಿಳಿದಿರುವದೂ ಲೇಸು. ೮ ಗಂಟೆಗೆ ವಾಹನ ಸಿದ್ಧವಿರುತ್ತದೆ ಎನ್ನುತ್ತಾರೆ ಪಿ.ಆರ್.ಓಗಳು ಹಾಗೂ ಹೀಗೂ ೯ ಗಂಟೆಗೆ ಲೋಕೇಷನ್ ತಲುಪಿದೆವು ಅನ್ನಿ. ಮಂತ್ರಿ ಮಾನ್ಯರು, ವಿಐಪಿಗಳನ್ನೆಲ್ಲ ಕಳಿಸಿ ಫೋಟೋ ಸೆಷನ್ ಮುಗಿಸುವ ಸಂಭ್ರಮದಲ್ಲೇ ಇರುತ್ತಾರೆ.

ಅವರದೂ ಏನು ತಪ್ಪಲ್ಲ ಪಾಪ. ಬಂದ ಅತಿಥಿಗಳನ್ನು ಬೀಳ್ಕೊಡದೆ ಹೇಗೆ ಬಂದಾರು? ತುಂಬಾ ಅವಸರ ಮಾಡಿದ ಸೂಚನೆ ಸ್ಪಷ್ಟವಾದಾಗ ಹಾಜರಾಗುತ್ತಾರೆ ೧೨ ಗಂಟೆ ಹೊತ್ತಿಗೆ ಏನೊ ಸುದ್ದಿ ಸಿಕ್ಕುತ್ತದೆ ಎಂದು ಬಕಪಕ್ಷಿಯಂತೆ ಕಾದ ಮಂದಿಗೆ ದಕ್ಕುವುದು ನಾಲ್ಕು ಸಾಲು.

“ಇದು ರೀಮೇಕಲ್ಲ ಸ್ವಂತ ಕಥೆ. ತುಂಬಾ ಡಿಫರೆಂಟಾಗಿದೆ. ಈವರೆಗೆ ಎಷ್ಟೋ ‘ಲೌ’ ಸ್ಟೋರಿಗಳು ಬಂದಿರಬಹುದು. ಆದರೆ ಇಂಥ ಕತೆ ಈವರೆಗೆ ಈ ಜಗತ್ತಿನಲ್ಲೇ ಸಿನಿಮಾ ಆಗಿಲ್ಲ” ಎನ್ನುತ್ತಾರೆ.

‘ಒಟ್ಟು ಕಥೆ ಏನು ಹೇಳುತ್ತದೆ ಸ್ವಾಮಿ’

‘ಅದು ಸಸ್ಪೆನ್ಸ್, ಅದಕ್ಕೆ ನೀವು ಚಿತ್ರ ನೋಡೋದೇ ವಾಸಿ’

‘ನಾಯಕ ಯಾರು-ನಾಯಕಿ ಯಾರು?’

‘ಇಲ್ನೋಡಿ ಇಲ್ಲಿದ್ದಾರೆ. ಇಬ್ಬರೂ ಹೊಸಬರೆ, ತುಂಬಾ ಟ್ಯಾಲೆಂಟೆಡ್, ಕನ್ನಡ ಚಿತ್ರರಂಗಕ್ಕೆ ಆಸ್ತಿ ಆಗಬಲ್ಲವರಿವರು’

‘ಎಲ್ಲಿಂದ ಹಿಡ್ಕೊಂಬಂದ್ರಿ ಇವರನ್ನ’ ‘ಈ ಬೆಡಗಿ ಲೇಡೀಸ್ ಕಾಲೇಜ್ ಹತ್ರ ಐಸ್‌ಕ್ರೀಂ ತಿಂತಿದ್ದಾಗ ನೋಡಿದೆ. ಈ ಹುಡುಗಿ ವಿಷಯಕ್ಕೆ ಪಕ್ಕದ ಮೈದಾನದಲ್ಲಿ ಈ ಇಬ್ಬರೂ ಫೈಟ್ ಮಾಡತಿದ್ರು, ಚಾಕ್‌ಲೇಟ್ ಫೇಸ್ ಇದ್ದವನ್ನ ಹೀರೋ ಮಾಡಿದೆವು. ರಫ್ ಅಂಡ್ ಟಫ್ ಆಗದ್ದವನ್ನ ವಿಲನ್ ಆಗಿ ಆರಿಸಿದೆವು.’

‘ಶಿವರಾಜ್‌ಕುಮಾರ್, ರವಿಚಂದ್ರನ್, ಅಪ್ಪು, ಉಪೇಂದ್ರ, ವಿಷ್ಣು ಮುಂತಾದವರು ಈ ಕಥೆಗೆ ಹೊಂದತ್ತಿರಲಿಲ್ವ?’

‘ಹೊಂದೋರು. ಆದ್ರೆ ಒಬ್ಬೊಬ್ಬ ಜನಪ್ರಿಯ ನಟನ ಪೇಮೆಂಟೂ ಮುಗಿಲು ಮುಟ್ಟಿರೋದ್ರಿಂದ ಅವರಿಗೊಬ್ಬರಿಗೆ ಕೊಡೋ ದುಡ್ಡಿನಲ್ಲೇ ಇಡೀ ಫಿಲಂ ತೆಗೀಬೇಕೊಂತಿರೋ ಲೋ ಬಜೆಟ್ ಫಿಲಂ ಮೇಕರ್ಸ್ ನಾವು’

‘ಎಲ್ಲಾ ತೀರ ಹೊಸಬರೆ ಆದ್ರೆ ಜನ ಚಿತ್ರಮಂದಿರಕ್ಕೆ ಬರಬೇಕಲ್ಲ’

‘ಹಳಬರನ್ನ ಟೀವೀಲಿ ನೋಡ್ತಾರೆ. ಹೊಸಬರನ್ನ ನೋಡೋಕೆ ಚಿತ್ರಮಂದಿರಕ್ಕೆ ಬಾರೆ’

‘ಬಂದೇ ಬರ್ತಾರೆ ಅಂತ ಏನು ಗ್ಯಾರಂಟಿ’

‘ಅರೆ, ಜನಪ್ರಿಯ ನಟ-ನಟಿಯರ ಚಿತ್ರಗಳು ಗುರ್ತಿಲ್ಲದೆ ಬಂದು ಅಡ್ರೆಸ್‌ಗಿಲ್ದೇ ಹೋಗಿದೆಯಲ್ಲ. ಸೂಪರ್ ಫ್ಲಾಪ್ ಆಗಿರೋ ಚಿತ್ರಗಳ ಪಟ್ಟಿ ಕೊಡಲೇ?’

‘ನಮ್ಮ ಓದುಗರಿಗೆ ಈ ಸಿನಿಮಾ ವಿಶೇಷ ಏನೂಂತ ಹೋಳೋಣ?’

‘ಹಾಡು, ಫೈಟು ಮಸಾಲೆ ತುಂಬಿ ತುಳುಕಿರೋ ಗರ್ಮಾಗರಂ ಚಿತ್ರ ಮೊದಲ ದೃಶ್ಯದಿಂದ ಕೊನೇ ದೃಶ್ಯದವರೆಗೆ ನೋಡಿದ್ರೆ ಮಾತ್ರ ಕಥೆ ಅರ್ಥ ಆಗೋದು ಅಂತ ಬರೀರಿ’

‘ಫಾರಿನ್‌ನಲ್ಲೇನಾದ್ರೂ ಶೂಟ್ ಮಾಡೋ ಯೋಚನೆ ಇದೆಯೋ’

‘ಫೈನಾನ್ಸ್‌ರ್ ಒಬ್ಬರು ನಿನ್ನೆ ಬಂದಿದ್ರು. ಅವರು ನೆರವಿಗೆ ಬಂದ್ರೆ ಒಂದು ಹಾಡು ಅಮೆರಿಕಾದಲ್ಲಿರುತ್ತೆ. ಆ ಫೈನಾನ್ಸರ್ ಯಾರೂ ಅನ್ನೊದು ಸಸ್ಪೆನ್ಸು. ಅವರು ಹಣಕೊಡಲಿಲ್ಲ ಅಂದ್ರೆ ಗುಡಿಸಲಲ್ಲಿ ಮಲಗಿದ ಹೀರೋ ಗುಡಿಸಲಲ್ಲೇ ಏಳ್ತಾನೆ’

‘ಫೈನಾನ್ಸರ್‌ಗಳು ಬಹಳ ಜನ ಮುಹೂರ್ತಕ್ಕೆ ಬಂದಿದ್ದು ನೋಡಿದೆವು. ನಿಮ್ ಫಾರಿನ್ ಶೂಟಿಂಗ್‌ಗೆ ಫೈನಾನ್ಸ್ ಮಾಡ್ತೀನಿ ಅಂದಿದ್ದೊರು ಬಂದಿದ್ರಾ?’

‘ಹಹಹ… ನೀವೆಷ್ಟೇ ತಿಪ್ಪರಲಾಗ ಹಾಕಿದ್ರೂ ಫೈನಾನ್ಸರ್ ಹೆಸರು, ಕತೆ ಎರಡೂ ಬಿಟ್ಟುಕೊಡಲ್ಲ’ ಎಂದು ನಕ್ಕರು.

‘ಹೀರೋ-ಹೀರೋಯಿನ್‌ಗಳು. ನೀವು ಏನು ಅಂತೀರಿ?’

‘ನಿರ್ದೇಶಕರು ನೀವೇನೂ ಮಾತಾಡಬೇಡಿ-ಕತೆ ಹೇಳಬೇಡಿ- ಅಂದಿದಾರೆ. ಅದರಿಂದ ನಮ್ಮದು ಮೌನವ್ರತ’

‘ಅಭಿನಯದಲ್ಲಿ ನಿಮ್ಮ ಅನುಭವ’

‘ಡೌ ಹಾಕೋದು ‘ಲೌ’ ಮಾಡೋದು ಕಾಲೇಜು ಹುಡುಗರಿಗೆ

ಅಭ್ಯಾಸವಾಗಿರುತ್ತೆ ಸಾಕಷ್ಟು’ ಅಂದ ಹೀರೋ.

ಹೀರೋಯಿನ್ ನಾಚಿ ‘ನನ್ನ ಬೆಡಗು-ಬಿನ್ನಾಣ-ನಖ್ರಾ ನೋಡಿದರೆ ಗೊತ್ತಾಗಲ್ವ- ಹುಡುಗರಿಗೆ ಚಳ್ಳೆಹಣ್ಣು ತಿನ್ನಿಸಬಲ್ಲೆ ನಾನು ಅಂತ’ ಅಂದಳು.

`ಚಿತ್ರಕ್ಕೆ ಧೋಖೆಬಾಜ್ ಅಂತ ಹೆಸರಿಟ್ಟಿದೀರಿ. ಇದು ಕನ್ನಡ ಚಿತ್ರ ಅಲ್ವೇ ನಿರ್ಮಾಪಕರೆ’

‘ಆ ಹೆಸರಿಗೆ ಒಂದು ತರಾ ‘ಧಂ’ ಇದೆ. ಕನ್ನಡದಲ್ಲಿ ಅದಕ್ಕೆ ಈಕ್ವಲ್ ಆದ ಹೆಸರೇ ಸಿಗಲಿಲ್ಲ’ ಎಂದಾಗ ತಲೆ ತಲೆ ಚಚ್ಚಿಕೊಂಡು ಗುಡ್ ವಿಷಸ್ ಹೇಳಿ ಹೊರಟೆವು. ಇದು ಒಂದು ಮೂಹೂರ್ತದ ಕಥೆ.

ಮತ್ತೊಂದು ಮುಹೂರ್ತಕ್ಕೆ ಮತ್ತೊಬ್ಬಾತ ಬಂದಿದ್ದ. ‘ಜನುಮದ ಜೋಡಿ’ಯ ‘ಮಣಿ ಮಣಿ ಮಣಿ ಮಣಿಗೊಂದು ದಾರ’ ಹಾಡನ್ನು ರಂಜನೆಗಾಗಿ ಆತ ಹಾಡುತ್ತಿದ್ದುದುಂಟು. ಪ್ರೆಸ್ ಮೀಟ್‌ಗೆ ಬಾರದವರಿಗೆ ‘ವಂಡರ್‌ಫುಲ್ ರಿಸೋರ್ಸ್ ಪರ್ಸನ್’ ಆತ.

ಹೀಗೇ ಆ ಮುಹೂರ್ತದಲ್ಲಿ ತುಂಬ ಕಾಯಿಸುತ್ತಿದ್ದಾಗ ಎಲ್ಲ ಗೊಣಗತೊಡಗಿದರು.

ಆಗ ಆತ ಒಂದು ಅದ್ಭುತ ಐಡಿಯಾ ಎಲ್ಲರ ಮುಂದಿಟ್ಟ, ‘ಇನ್ನು ಮುಂದೆ ಮುಹೂರ್ತಕ್ಕೆ ಆಹ್ವಾನ ಕಳಿಸಲಿ ಸಾಕು. ಬೇಕು ಬೇಕಾದವರು ಬೇಕಾದ ಹೊತ್ತಿಗೆ ಅವರವರ ಗಾಡೀಲಿ ಬಾರ್ತಾರೆ. ಪ್ರಾಲ್ಲಂ ಸಾಲ್ವ್’ ಎಂದ.

ಆಗ ಕೆಂಡಾಮಂಡಲವಾದ ನಮ್ಮ ಗಿರೀಶ್.

‘ನಿಮಗೆ ಹಣ ಹುಣೆಸೆಬೀಜ ಇರಬಹುದು. ಆದ್ರೆ ಎಲ್ರಿಗೂ ಅದೆಲ್ರಿ ಸಾಧ್ಯ? ಒಂದೆ ದಿನ ೨-೩ ಕಾರ್ಯಕ್ರಮವಿದ್ದರೆ ಹ್ಯಾಗ್ರೀ ಹೋಗೊಕೆ ಸಾಧ್ಯ? ಪ್ರಚಾರ ಬೇಕಿದ್ರೆ ವೆಹಿಕಲ್ ಕೊಟ್ಟು ಕರೆಸ್ಕೋತಾರೆ. ಬೇಡ ಪ್ರಚಾರ ಅಂದ್ರೆ ಬಿಡ್ಲಿ. ಹೀಗೆ ಯಾಕೆ ಕಾಯಿಸಬೇಕು. ಎರಡು ನಿಮಿಷ ಮಾತಾಡಿ ಕಳಿಸಿ’

‘ಅದನ್ನೇ ನಾನು ಹೇಳಬೇಕೊಂತಿದ್ದುದು’

‘ನೀವು ಸೀನಿಯರಾಗಿ ಮುಂಚೆ ಹೇಳಿದ Statement ಕೊಡಬಾರದಿತ್ತು. ‘Sorry’ ಎಂದಾಗ ಪರಿಸ್ಥಿತಿ ಗಂಭೀರವಾಯಿತು. ಮುಹೂರ್ತಗಳಲ್ಲಿ ಇಂಥ ಪ್ರಸಂಗಗಳು ನಡೆಯುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವುದು ಲೇಸು.
*****
(೩೦-೦೮-೨೦೦೨)