ಆರು ಬಾಳಿದರೇನು

ರಾಗ — ಮೋಹನ
ತಾಳ — ಅಟ್ಟ

ಆರು ಬಾಳಿದರೇನು ಆರು ಬದುಕಿದರೇನು |
ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ||

ಉಣ್ಣಬರದವರಲ್ಲಿ ಊರೂಟವಾದರೆ ಏನು |
ಹಣ್ಣು ಬಿಡದ ಮರಗಳು ಹಾಳಾದರೇನು ||

ಕಣ್ಣಿಲದವಗಿನ್ನು ಕನ್ನಡಿಯಿದ್ದು ಫಲವೇನು |
ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು? ||೧||

ಅಕ್ಕರಿಲ್ಲದವಗೆ ಮಕ್ಕಳಿದ್ದು ಫಲವೇನು |
ಹೊಕ್ಕು ನಡೆಯದ ನಂಟತನದೊಳೇನು ||

ರೊಕ್ಕವಿಲ್ಲದವಗೆ ಬಂಧುಗಳಿದ್ದರೇನು |
ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು ||೨||

ಅಲ್ಪ ದೊರೆಗಳ ಜೀತ ಎಷ್ಟು ಮಾಡಿದರೇನು |
ಬಲ್ಪಂಥವಿಲ್ಲದವನ ಬಾಳ್ವೆಯೇನು ||
ಕಲ್ಪಕಲ್ಪಿತ ಕಾಗಿನೆಲೆಯಾದಿಕೇಶವನ |
ಅಲ್ಪವೂ ನೆನೆಯದ ನರನಿದ್ದರೇನು? ||೩||
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.