ನಿಕ್ಸನ್ನಿನ ಆಡಳಿತದ ಪ್ರತಿಯೊಂದೂ ನಿಮಿಷಕೊಂದು
ವಿಯಟ್ನಾಮಿನಲ್ಲಿ ಬಾಂಬು,
ಯುದ್ಧವನ್ನು ಪ್ರತಿಭಟಿಸುವ ಶಾಂತಿಯ ಮೆರವಣಿಗೆ ಮೇಲೆ
ಪೋಲೀಸರ ಲಾಠಿ ಗುಂಡು
ನಾನು ಕಂಡ ಅಮೆರಿಕ.
ಶಿಕ್ಷಣಕ್ಕೆ ದುಡ್ಡಿಲ್ಲದ, ದೇಣಿಗೆಗಳ ಇಳಿಗಾಲದ,
ಬಾಂಬು ತಯಾರಿಕೆಗೆ ಮಾತ್ರ ಕೋಟ್ಯಾಂತರ ಸುರಿಯುತ್ತಿದ್ದ
ಡೇಲಿಯಂತವರು ಮಾತ್ರ ಪುನಃ ಮೇಯರಾಗುತ್ತಿದ್ದ
ನ್ಯೂಯಾರ್ಕಿನ ಆರ್ಥಿಕಸ್ಥಿತಿ ದಿನದಿನವೂ ಕುಸಿಯುತ್ತಿದ್ದ
ನಾನು ಕಂಡ ಅಮೆರಿಕ.
ಗಂಡುಬೀರಿಯರನು ಕಂಡು ದಿಗಿಲುಕೊಂಡ ಗಂಡಸರು
ಗಂಡು ಗಂಡಿನೊಡನೆ ಮದುವೆ, ಹೆಣ್ಣು ಹೆಣ್ಣಿನೊಡನೆ.
ಗಂಡು ತಾನು ಹೆಣ್ಣಾಗಲು ನಡೆಯುತ್ತಿತ್ತು ಶಸ್ತ್ರಕ್ರಿಯೆ
ಹೆಣ್ಣು ತಾನು ಗಂಡಾಗಲು ಕೃತಕಶಿಶ್ನ ಸಿದ್ಧತೆ
ಮದುವೆಯ ಅಭದ್ರತೆ
ಅಸೀಮ ಸ್ವಾತಂತ್ರಕ್ಕಾಗಿ ಅಮೆರಿಕನರ ಸಿದ್ಧತೆ
ನಾನು ಕಂಡ ಅಮೆರಿಕ.
ಕರಿಬಿಳಿಯರ ಮಿಶ್ರಣಕ್ಕೆ ತಿಣುಕ್ಕುತ್ತಿತ್ತು ಅಮೆರಿಕ.
ಒಡೆಯುತ್ತಿದ್ದ ಕುಟುಂಬದಲ್ಲಿ, ಕಾನೂನಿನ ಶೂಲದಲ್ಲಿ,
ನೋಯುತ್ತಿತ್ತು, ನರಳುತ್ತಿತ್ತು, ನಿದ್ರೆ ಗುಳಿಗೆ ನುಂಗುತ್ತಿತ್ತು,
ಬಿಯರು ವೈನು ವಿಸ್ಕಿಯಲ್ಲಿ ತನ್ನ ತಾನೆ ಮರೆಯುತ್ತಿತ್ತು,
ಎದ್ದೊಡನೆಯೆ ಕಾಯುತ್ತಿತ್ತು ಮನೋವೈದ್ಯ ಕೊಟ್ಟ ಸಮಯ –
ನಾನು ಕಂಡ ಅಮೆರಿಕ.
ಅಜ್ಜ ಅಜ್ಜಿಯರನು ಒಯ್ದು ವೃದ್ದಗೃಹಕೆ ಸೇರಿಸಿತ್ತು
ಮೊಮ್ಮಕ್ಕಳ ದೂರದೂರ ಒಯ್ಯುತ್ತಿತ್ತು ಅಮೆರಿಕ.
ಸ್ವಾತಂತ್ರ್ಯದ ಸಾಣೆಯಲ್ಲಿ ಸ್ವಾರ್ಥವನ್ನು ಹರಿತಮಾಡಿ
ಮಕ್ಕಳ ಸುಖ ಕೊಯ್ಯುತ್ತಿತ್ತು ನಾನು ಕಂಡ ಅಮೆರಿಕ.
ಸೋಲೆಂದರೆ ದುಸ್ವಪ್ನದ ಒತ್ತುಗಕ್ಕೆ ಬೆಚ್ಚುವವರು
’ಟೀವಿ’ ಕೊಡುವ ಆದರ್ಶದ ಬಣ್ಣಗಳೇ ಕಣ್ಣತುಂಬಿ
ಫ್ಯಾಷನ್ನಿನ ಗತ್ತಿನಲ್ಲಿ, ಮತ್ತಿನಲ್ಲಿ ನಡೆಯುವವರು.
ಒಂದು ರೀತಿ ಮುಗ್ಧರು ಅಥವಾ ಅಪ್ರಬುದ್ಧರು,
ಜಾಹಿರಾತು ಸ್ಲೋಗನ್ನಿನ ಬೆಂಕಿಯಲ್ಲಿ ದಗ್ಧರು
ನಾನು ಕಂಡ ಅಮೆರಿಕ.
ಒಂದು ಕಡೆಗೆ ಸರ್ವರಾಷ್ಟ್ರ ಸ್ವಾತಂತ್ರ್ಯದ ಘೋಷಣೆ
ಉದಯೋನ್ಮುಖ ರಾಷ್ಟ್ರಗಳಿಗೆ ಸಾಲದಿಂದ ಪೋಷಣೆ
ಸಾಲದ ಬೆನ್ನಲ್ಲೆ ಉಂಟು ಭಾರಿ ಗೂಢ ಸೂತ್ರ :
ಎಲ್ಲದಕ್ಕೂ ಮೊದಲಿಗರು ಅಮೆರಿಕನರು ಮಾತ್ರ.
ಗೋರಿವರೆಗು ವಯಸ್ಸಂಧಿ ಕಾಲದಲ್ಲೆ ನಡೆಯುವರು
ನಾನು ಕಂಡ ಅಮೆರಿಕ.
ಹಿಮದ ಹಗಲು ಹಿಮದ ರಾತ್ರಿ ಬಿಳಿಯ ಕೊರೆತದಲ್ಲಿ
ಕೇಳಿಸಿತೆ ಅಥವಾ ಭ್ರಮೆಯೆ ಕುಹೂ ಕುಹೂ ಕೋಗಿಲೆ ?
ಕನಸೊ ಅಥವಾ ವಾಸ್ತವವೊ ನಾ ಕೇಳಿದ ಕೋಗಿಲೆ ?
ಖಂಡಿತಾ ತೆರುವುದೆಂದು ಅಸೀಮ ಸುಖದ ಬಾಗಿಲೆ
ಕೂಗುತ್ತಿತ್ತೆ ನನ್ನ ಭ್ರಮೆಯ ಕುಹೂ ಕುಹೂ ಕೋಗಿಲೆ ?
ಕೇಳು ಇಲ್ಲಿ ಅಮೆರಿಕ, ನಾನು ಕಂಡ ಅಮೆರಿಕ
ನಾನು ಬಂದೆ ಹುಡುಕಿಕೊಂಡು ಎಮರ್ಸನನ ನಾಡಿಗೆ.
ಮೆಲ್ವಿಲ್ಲನ ವಿಟ್‌ಮನ್ನನ ಆದರ್ಶದ ಬೀಡಿಗೆ,
ಇತ್ತು ನಿಜ ಚಳಿಯ ದಿವಸ ನಾನು ಬಂದ ಸಮಯ,
ಬೇರಿನಲ್ಲೆ ಇತ್ತೊ ಏನೊ ಎಮರ್ಸನನ ಗಳಿಕೆ,
ನಾಳೆ ಒಡೆಯಬಹುದೊ ಏನೊ ಅಂಥ ನೂರು ಮೊಳಕೆ.
*****
೧೯-ನವೆಂಬರ-೧೯೭೮