ರಾಗ — ಕಾಂಬೋದಿ
ತಾಳ — ಝಂಪೆ
ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ |
ಅಜಸುರೇಂದ್ರಾದಿಗಳು ಆದಿವಂದಿತಪಾದ ||ಪ||
ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ |
ಕಾಕುಶಕಟನ ತುಳಿದು ಕೊಂದ ಪಾದ ||
ಲೋಕೇಶನಿಗೆ ಒಲಿದು ಪೂಜೆಗೊಂಬುವ ಪಾದ |
ಲೋಕಪಾವನೆ ಗಂಗೆ ಜನಿಸಿದಾ ಪಾದ ||೧||
ಶಿಲೆಯ ಸತಿಯಳನು ಸೌಂದರ್ಯಗೊಳಿಸಿದ ಪಾದ |
ಒಲಿದು ಪಾರ್ಥಗೆ ಧರೆಯನೊತ್ತಿದ ಪಾದ ||
ಕೊಲಿಸಿ ಕೌರವರ ಕಾಳಗದಿ ಕೆಡಹಿದ ಪಾದ ||
ಬಲಿದ ಕಾಳಿಂಗನನು ತುಳಿದ ಪಾದ ||೨||
ಗರುಡ – ಶೇಷಾದಿಗಳು ಪೊತ್ತುಕೊಂಡಿಹ ಪಾದ |
ಧರೆಯ ಈರಡಿ ಮಾಡಿ ಅಳೆದ ಪಾದ ||
ಸಿರಿ ತನ್ನ ತೊಡೆಯಮೇಲಿರಿಸಿ ಸೇವಿಪ ಪಾದ |
ವರ ಕಾಗಿನೆಲೆಯಾದಿಕೇಶವನ ಪಾದ ||೩||
*****