ಋತುಸಂಸಾರ

-೧-
ಮೂರು ತಿಂಗಳು
ಬೇಸರವ ನೀಗಿಕೊಳ್ಳಲು ಬಂದು ತಂಗಿದಳು
ಮಗಳ ಮನೆಯೊಳು ಮುದುಕಿ ಮೋಜುಗಾರ್‍ತಿ.
ಮೊದಲೆರಡು ದಿನ ಕ್ಷೇಮಸಮಾಚಾರದ ಸುದ್ದಿ,
ಬೇಡವೆಂದರು ಕೂಡ ಕೆಲಸಕ್ಕೆ ಹಾತೊರೆವ ಕೈ
ಹಾಗೆಯೇ ನಾಲ್ಕು ದಿನ ಸೈ ;
ಸುರುವಾಯ್ತು ರಗಳೆ
ಅಷ್ಟಿಷ್ಟು ಮಾತಿಗೇ ವಟವಟಾ ಪಿಟಿಪಿಟೀ … …
ಲಟಿಕೆ ಮುರಿದು ಚಿಟುಕು ಮುಳ್ಳಾಡಿಸುವ
ಸುಮ್ಮಸುಮ್ಮನೆ ಕೆಮ್ಮಿ ಕ್ಯಾಕರಿಪ ತಾಪ
ಗಿಡಬಳ್ಳಿಯನು ಹಿಡಿದು ಅಲ್ಲಾಡಿಸಿತು ಅವಳ ನಿಟ್ಟುಸಿರು ಶಾಪ!
ಅಣಕಿಸುತ ಗಾಳಿಯಲಿ ಹಾರಿಹೋದವು ಬತ್ತಿದೆಲೆಯ ಬಳಗ
ಗದಗುಟ್ಟಿ ನಡುಗಿ ಕಟಕಟ ಹಲ್ಲು ಕಡಿದರು ಮಂದಿ
ಮಾತು ಮಾತಿಗೆ ಅವಳು ಮಾತ್ರ, “ಏನಂದೀ?”
ಸುಕ್ಕುಗಟ್ಟಿದ ಮುಖಕೆ ಸೆರಗೆಳೆದು ಕೋಲೂರಿ
ಹೊರಟುಬಿಟ್ಟಳು, ಒಮ್ಮೆಲೇ ಗಂಟು ತಲೆಗಿಟ್ಟು
ಏನವಳ ಸೆಡವು ಸಿಟ್ಟು!

-೨-
ಮಾವು ಹೂವಿನ ಕೊಡೆ ವಿಮಾನದಿಂದಿಳಿತಂದು
ಬಂದ ಪ್ರೀತಿಯ ಕಂದ;
“ಕುವೂ, ಜಗ್ ಜಗ್, ಪುವ್ವೀಟುವಿಟ್ಟವೂ “
ಕಾಲೇಜು ಕಟ್ಟೆಯ ಹತ್ತಿ ಮೊದಲ ಸಲ ಊರಿನೆಡೆ
ಕನಸಿನಲ್ಲಿಯೆ ನಡೆದು ಬಂದಿಹನು ಹುಡುಗ
ಎತ್ತರೆತ್ತರದಲ್ಲಿ ಹಾರುತಿದೆ ಗಿಡುಗ!
ದಿನದಿನಕು ಕನಸುಗಳು ಚಿಗುರಿ ತೋರಣಕಟ್ಟಿ
ಬರೆದಿಹವು ‘ಸುಸ್ವಾಗತ’
ಕಾವ್ಯ ಕಾದಂಬರಿಯ ನಾಯಕರ ಜೊತೆಯಲ್ಲಿ
ನಿತ್ಯ ಸ್ವಗತ.
ಕೋಗಿಲೆಯ ಧ್ವನಿಗೆದೆಯ ಬಾಗಿಲವೆ ತೆರೆದಿಹುದು
ಮನದ ಮೇಲಿನ ಮಹಡಿಯಲ್ಲಿ ನಡೆದಿದೆ ಸರಸಸಂಗೀತಗೋಷ್ಠಿ!
ನುಗ್ಗೆ ಹೂವಿಗೆ ಲಗ್ಗೆಯಿಟ್ಟು ಮೊರೆದಿವೆ ದುಂಬಿ
ಕಣ್ಣೆದುರು ಕುಣಿಯುತಿವೆ ಕರ್ಪೂರಗೊಂಬಿ
ಹೋಳಿಹುಣ್ಣಿವೆ ಬಂತು ತಾಳಿ ಎನುತಿದೆ ಗಾಳಿ
ತಾಳಲಾರದು ಬಿಸಿದು ರಕ್ತನಾಡಿ!

-೩-
ಗಾಳಿ ಗಿರಿಗಿರಿ ಬುಗುರಿಯಾಡಿ ಹಕ್ಕಲುಹೊಲದ
ಹೊಟ್ಟು ರವುದೆಯ ತೊಟ್ಟು ಆಕಾಶಕೇರಿ
ಮೋಡನೋಡಕು ಹಾಯ್ದು ಝಾಡಿಸಿದೆ, ನೆರೆದಿರುವ
ಸಂತೆಯಲಿ ಬಿಡಬಹುದೆ ಇಂಥ ಹೋರಿ!
ಹೊತ್ತೇರಿದಂತೆ ನೆತ್ತಿಗೆ ಚುರುಕು ಬಡಿದಿತ್ತು
ತಳಿರು ನಾಲಗೆ ಚಾಚಿ ತೇಕುತಿತ್ತು
ಮರದ ಕೆಳಗಡೆ ನೆಳಲು ಮೈಚಾಚಿ ಮಲಗಿತ್ತು
ಬಿಸಿಲುಗುದುರೆಯು ವ್ಯರ್‍ಥ ಓಡುತಿತ್ತು.

-೪-
ಬಂತು ಮಳೆ ಹನಿಯಾಗಿ
ಜೀವವಾಹಿನಿಯಾಗಿ
ಬಾನ ಕೊಡುಗೈದೊರೆಗೆ ಇಳೆಯು ಋಣಿಯಾಗಿ;
ಹಳ್ಳ ಹೊಳೆ ಹಾಡಿದವು ಜಲಪಾತವಾಗಿ
ಗಿಡಗಿಡದ ನೆತ್ತಿಯನು ಅಡರಿ ಕುಳಿತಿಹ ಜಗದ ಧೂಳು ತೊಡೆದು
ಧಾರೆ ಎರೆಯುತ ಬಂದ ನವನೀರದ!
ಪುಲಕಗೊಂಡಳು ಪ್ರಕೃತಿ
ಹಸಿರುಟ್ಟು ಹೂವಿನಾರತಿಯೆತ್ತಿ ನಿಂತಿಹಳು
ಬಾನುದ್ದ ಬೆಳೆದಂತೆ ಜಗದ ಪ್ರೀತಿ!
ಒಸಗೆಯಾಯಿತು; ನರನ ಒಂದೊಂದು ಕೃತಿ ವಿಕೃತಿ
ಋತು‌ಋತುವಿನೊಡನಿಂತು ಬೆಸುಗೆಯಾಗಿ.