ಮೊನ್ನೆ ವೆಂಕಣ್ಣನ ಮನೆಗೆ ಹೋದಾಗ ಸಾಹಿತ್ಯ, ಸಂಗೀತ, ಸಿನಿಮಾ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದಾಗ, ಕಾಫಿ ತರಲು ಎದ್ದು ವೆಂಕಣ್ಣ “ಈ ಡೈರಿ ನೋಡ್ತಿರು-ಬಂದೆ” ಎಂದ. ಅಲ್ಲಿ ಸಿನಿ ಮುಹೂರ್ತಗಳ ಶತದಿನೋತ್ಸವಗಳ-ಪ್ರೆಸ್ ಮೀಟ್‌ಗಳ, ಲೇಖಕರ ಅನಿಸಿಕೆಗಳ ಬಗ್ಗೆ, ರಂಗಭೂಮಿ ಸ್ಥಿತಿಗತಿ ಬಗ್ಗೆ ಮೆಗಾ ಧಾರಾವಾಹಿಗಳ ಆಭಾಸಗಳ ಬಗ್ಗೆ, ಟೀಕೆ-ಟಿಪ್ಪಣಿಗಳಿದ್ದವು. ಅದು ಓದುಗರಿಗೂ ಪ್ರಿಯವಾದೀತೆಂದು ಈ ಬಾರಿ ಹಲವಾರನ್ನು ಟಿಪ್ಪಣಿಸಿರುವೆ.
* ಡಾ. ರಾಜ್‌ಕುಮಾರ್ ಅವರ ‘ಭಕ್ತ ಅಂಬರೀಶ’ಕ್ಕಾಗಿ ಹಾಡುಗಳ ಧ್ವನಿಮುದ್ರಣ ಅದ್ದೂರಿಯಾಗಿ ನಡೆಯಿತು. ನೃಪತುಂಗ, ಕರ್ಣ, ಗೌತಮಬುದ್ಧ ಮುಂತಾದ ಚಿತ್ರಗಳು ಅವರ ಮುಂದಿನ ಗುರಿ.
– ಸುದ್ದಿ
* ರೀಮೇಕ್ ಸಂಸ್ಕೃತಿ ಮತ್ತೆ ಬರಬೇಕೆಂದು ಅಂಬರೀಶ್, ಶಶಿಕುಮಾರ್ ಹಂಬಲಿಸಿ, ೧೦೦% ಟ್ಯಾಕ್ಸ್ ಫ್ರೀ ಸಿಗುವಂತೆ ಮಾಡಲು ನಾನಾ ಸರ್ಕಸ್ ಮಾಡುತ್ತಿರುವಾಗ ಡಾ. ರಾಜ್ ಕನ್ನಡಿಗರಿಗೆ ಪ್ರಿಯವಾಗುವ ನಮ್ಮ ಸಂಸ್ಕೃತಿಯ ಹೆಗ್ಗಳಿಕೆ ತೋರ ಹೊರಟಿರುವುದು ಸ್ತುತ್ಯಾರ್ಹ. ಅವರ ಗುರಿ ಅವರ ಕಿರೀಟಕ್ಕೆ ‘ಗರಿ’ ಆಗಲಿ.
* ಗಿರೀಶ್ ಕಾರ್ನಾಡ್, ಡಾ. ಚಂದ್ರಶೇಖರ ಕಂಬಾರ ರಂಗಭೂಮಿಯಿಂದ ಸಿನಿಮಾಗೆ ಬಂದವರು. ಬಾಗಲಕೋಟೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕ.ವೆಂ.ರಾಜಗೋಪಾಲ್ ಅವರ ಕೃತಿಗಳನ್ನು ವಿಶ್ಲೇಷಿಸುವ ಅತೀವ ಸಂಭ್ರಮದಲ್ಲಿ ಅನವಶ್ಯಕವಾಗಿ ರೇಡಿಯೋ ನಾಟಕಗಳನ್ನು ಎಳೆತಂದು “ರೇಡಿಯೋ ನಾಟಕ ನಾಟಕವೇ ಅಲ್ಲ ‘ಅಬ್ಬಬ್ಬ’ ಎಂದರೆ ಅರೆಬರೆ ನಾಟಕ ಎಂದಷ್ಟೇ ಕರೆಯಬಹುದು” ಎಂದರು.
– ಒಂದು ವರದಿ
* ಜಗತ್ತಿನಲ್ಲಿ ರೇಡಿಯೋ ನಾಟಕಗಳಿಗೊಂದು ಮಹತ್ವ ತಂದುಕೊಟ್ಟ ನಾರ್‍ಮನ್ ಕಾರ್‍ವಿನ್ ಹೆಸರು ಕೇಳಿಲ್ಲದವರು ಮಾತ್ರ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಬಹುದು. ಎಸ್.ಎನ್. ಶಿವಸ್ವಾಮಿ, ಎನ್ಕೆ ಮುಂತಾದವರ ರೇಡಿಯೋ ನಾಟಕಗಳನ್ನು ಈಗಲಾದರೂ ಓದಿ ಕ.ವೆಂ. ರೇಡಿಯೋ ನಾಟಕಗಳು ನಾಟಕವೇ ಅಲ್ಲ ಎಂಬ ಉದ್ಧಟತನದ ಹೇಳಿಕೆ ‘ಅರೆಬರೆ ವಿಮರ್ಶಕ’ ಮಾತ್ರ ನೀಡಬಲ್ಲ.
* ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ಈಗ ಚಲನಚಿತ್ರ ಮಾಡುವ ಸಂಭ್ರಮದಲ್ಲಿದ್ದಾರೆ ಡಿ. ರಾಜೇಂದ್ರಬಾಬು, ಗ್ರಾಮೀಣ ಸಂಸ್ಕೃತಿಯ ಸೊಗಡಿರುವ ಈ ಜಾನಪದ ಧಾಟಿಯ ನಾಟಕ ತುಂಬ ಯಶಸ್ವಿಯಾಗಿ ರಂಗಕ್ಕೆ ಬಂದಾಗ ಗಿರೀಶ್ ಕಾರ್ನಾಡ್, ಹೆಚ್.ಜಿ. ಸೋಮಶೇಖರರಾವ್ ಮುಂತಾದವರು ಅಭಿನಯಿಸಿದ್ದರು. ಈಗ ಡಿ.ರಾಜೇಂದ್ರ ಬಾಬು ಸಿನಿಮಾಟಿಕ್ ಟಚಸ್ ನೀಡಿ, ಹಿಂದೀ ಚಿತ್ರರಂಗದ ನಟೀಮಣಿಯರನ್ನು ಕರೆತರುವ ಯೋಚನೆಯಲ್ಲಿದ್ದಾರೆ.
– ಸುದ್ದಿ
* ರೀಮೇಕ್ ಚಿತ್ರಗಳನ್ನು ಯಶಸ್ವಿಯಾಗಿ ತೆರೆಗೆ ತಂದ ಡಿ. ರಾಜೇಂದ್ರಬಾಬು ಅವರಿಗೆ ‘ಕೃಷ್ಣಲೀಲೆ’ ಒಳ್ಳೆ ಹೆಸರು ತರಲಿಲ್ಲ. ಈಗ ಮತ್ತೆ ಸಾಹಿತ್ಯ ಕೃತಿಗಳತ್ತ ಇಣುಕುತ್ತಿರುವುದು ಶುಭ ಸೂಚನೆ.
‘ಜೋಕುಮಾರಸ್ವಾಮಿ’ ನಾಟಕದ ಸೂಕ್ಷ್ಮಗಳನ್ನೂ ಉಳಿಸಿಕೊಂಡು- ಬಾಬು ಒಳ್ಳೆ ಚಿತ್ರ ಮಾಡಲಿ.
* ರಂಗಭೂಮಿಯಿಂದ, ರಂಗಾಯಣದಿಂದ, ಅಭಿನಯ ತರಂಗದಿಂದ ಸಾಕಷ್ಟು ಮಂದಿ ಸಿನಿಮಾ ಹಾಗೂ ಟ.ವೀಗೂ ಹಾರಿದ್ದಾರೆ. ರವಿಚಂದ್ರನ್ ಅವರೊಂದಿಗೆ ಕಲಾ ನಿರ್ದೇಶಕರಾಗಿ ದುಡಿಯುತ್ತಿರುವ ‘ಅರುಣ್’ ಈಗ ಭಾರಿ ಹೆಸರು ಮಾಡಿದ್ದಾರೆ. ಕಲಾತ್ಮಕ ಸೆಟ್‌ಗಳು ಬೇಕೆಂದರೆ ಕೇಳಿಬರುವ ಇನ್ನೊಂದು ದೊಡ್ಡ ಹೆಸರು ಶಶಿಧರ್ ಅಡಪ, ಹೊಸದಾಗಿ ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿ ಬಂದ ಕೆ.ಸಿ.ರಾಮಮೂರ್ತಿ ಹಾಗೂ ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಅವರಿಗೆ ‘ರಂಗಭೂಮಿ ಕ್ರಿಯಾ ಸಮಿತಿ’ ತನ್ನ ಬೇಡಿಕೆಗಳನ್ನು ಸಲ್ಲಿಸಿದಂದು ರಂಗ ನಿರ್ದೇಶಕ ‘ಮಾಲತೇಶ್ ಬಡಿಗೇರ್’ ಸಚಿವೆಗೊಂದು ನೆನಪಿನ ಕೊಡುಗೆ ನೀಡುವಾಗ ಈಗ ಸಚಿವೆಗೆ ‘ಕಿರೀಟ ಧಾರಣೆ’ ಎಂದರು ನಿರೂಪಕರು. ಆಗ ಮಾಲತೇಶ್ ನೀಡಿದ್ದು ಒಂದು ಮುಖವಾಡ.
– ಸುದ್ದಿ
* ಸಚಿವೆ ರಾಣಿ ಸತೀಶ್ ‘ಮುಖವಾಡ’ ವೀಕ್ಷಿಸುತ್ತಿದ್ದಾಗ ಪ್ರೇಕ್ಷಕಾಂಗಣದಿಂದ ‘ಕಿರೀಟ ಧರಿಸಿ’ ಎಂಬ ಒತ್ತಾಯ ಬಂತು. ‘ಇದು ಕಿರೀಟವಲ್ಲ-ಮುಖವಾಡ’ ಎಂದರು ಸಚಿವೆ. ಪರವಾಗಿಲ್ಲ ಅದನ್ನೇ ಧರಿಸಿ ಎಂಬ ಬೇಡಿಕೆ ಮತ್ತೆ. ಆಗ ಸಚಿವೆ ಎದ್ದು “ನಾನು ಇದ್ದದ್ದು ಇದ್ದ ಹಾಗೆ ಹೇಳುವವಳು. ಮುಖವಾಡ ಹಾಕಿ ನನಗೆ ಅಭ್ಯಾಸವಿಲ್ಲ. ಅದರಿಂದ ಹಾಕಿಕೊಳ್ಳುವುದಿಲ್ಲ” ಎಂದರು. ಮಾಲತೇಶ್ ಬಡಿಗೇರ್ ಸಚಿವರಿಗೆ ‘ಮುಖವಾಡ’ ನೀಡುವ ಬದಲು-ಅದನ್ನೊಂದು ತೂಗಿ ಹಾಕುವ ಕಲಾತ್ಮಕ ವಸ್ತುವಾಗಿ ಮಾಡಿಕೊಡಬಹುದಿತ್ತು- ಅಲ್ವೇ ಮಾಲತೇಶ್?
* ‘ಉಪೇಂದ್ರ-ಮೊನಿಷಾ ಕೊಯಿರಾಲಾ-ಮುಂತಾದವರು ಅಭಿನಯಿಸಲಿರುವ ಎ.ಕೆ.೪೭ ರಾಮು ಅವರ ‘ಹಾಲಿವುಡ್’ ಚಿತ್ರದ ಮುಹೂರ್ತ ತುಂಬ ಭರ್ಜರಿಯಾಗಿ ಮಾಡಬೇಕೆಂದು- ಆ ಅದ್ದೂರಿ ಸಮಾರಂಭದಲ್ಲಿ ರಜನೀಕಾಂತ್, ನಾಗಾರ್ಜುನ, ಚಿರಂಜೀವಿ, ನಾಗೇಶ್ವರರಾವ್, ಅಮಿತಾ ಬಚನ್ ಹಾಗೂ ಜನಪ್ರಿಯ ಹಿಂದೀ ನಟ-ನಟಿಯರನ್ನೆಲ್ಲ ಆಹ್ವಾನಿಸುವ ಭರ್ಜರಿ ಕನಸು ರಾಮುಗಿದೆ. ಈ ನಿಟ್ಟಿನಲ್ಲಿ ಸಹಕರಿಸಬೇಕೆಂದು ಹಿಂದೀ ಚಿತ್ರರಂಗದ ಖ್ಯಾತ ನಿರ್ಮಾಪಕ-ನಿರ್ದೇಶಕರಾದ ಕನ್ನಡಿಗ ಎಸ್. ರಾಮನಾಥನ್ ಅವರಿಗೆ ಮೇಲಿಂದ ಮೇಲೆ ಫೋನ್ ಕರೆಗಳು ಹೋಗಿವೆ ರಾಮು, ಮಾಲಾಶ್ರೀ, ಉಪೇಂದ್ರ ಮುಂತಾದ ಎಲ್ಲರಿಂದ.
* ರಾಮನಾಥನ್ ಭೇಟಿಯಲ್ಲಿ ತಿಳಿದ ಅಂಶ.
* ಮುಹೂರ್ತವನ್ನೇ ‘ನಭೂತೋ’ ಎನ್ನುವಂತೆ ಮಾಡಿಬಿಟ್ಟರೆ- ಚಿತ್ರದಲ್ಲಿ ಚಿತ್ರರಸಿಕರು ಮತ್ತೂ ಮಹತ್ವದ ‘ಕ್ಲೈಮ್ಯಾಕ್ಸ್’ಗಳನ್ನು ಬಯಸುತ್ತಾರೆ. ಉಪೇಂದ್ರ ಗಿಮಿಕ್ಕುಗಳ ಸರದಾರ. ರಾಮುಗೆ ಪ್ರಚಾರ ತಂತ್ರ ಕರತಲಾಮಲಕ. ಇವರಿಬ್ಬರ ‘ಜೋಡಿ’ ಇನ್ನು ಎಂತೆಂತಹ ಗಿಮಿಕ್ಕುಗಳನ್ನು ಹಾಲಿವುಡ್‌ನಲ್ಲಿ ಮಾಡಲಿದ್ದಾರೆ ಎಂಬುದು ನಿಜವಾದ ಸಸ್ಪೆನ್ಸ್.
* “ಮಕ್ಕಳ ಚಲನಚಿತ್ರಗಳಿಗೆ ಸಬ್ಸಿಡಿ ವಿಶೇಷವಾಗಿ ನೀಡಲಿದ್ದೇವೆ” ಎಂದಿದ್ದಾರೆ ವಾರ್ತಾ ಸಚಿವ ಬಿ.ಕೆ.ಚಂದ್ರಶೇಖರ್. “ಮಕ್ಕಳ ರಂಗಭೂಮಿಗೆ ವಿಶೇಷ ನೆರವು ಅಗತ್ಯ” ಎಂದಿದ್ದಾರೆ ಸಚಿವೆ ರಾಣಿ ಸತೀಶ್. “ಮಕ್ಕಳ ಸಾಹಿತ್ಯ ತಾತ್ಸಾರಕೊಳಪಟ್ಟಿದೆ” ಎಂಬ ಮಾತು ಸಾಹಿತ್ಯ ಸಮ್ಮೇಳನದಲ್ಲೂ ಪ್ರತಿನಿಧಿಸಿದೆ.
– ಆಯ್ದ ಸುದ್ದಿಗಳು
* ಅಲ್ಲಿ ಸಾಹಿತ್ಯ ಸಮ್ಮೇಳನವಾಗುತ್ತಿದ್ದಾಗ ಉದಯ ಟಿ.ವಿ.ಯಲ್ಲಿ ಕವಿ ಹೆಚ್.ಎಸ್. ವೆಂಕಟೇಶಮೂರ್ತಿಯವರ ‘ಪರಿಚಯ’ ಕಾರ್ಯಕ್ರಮ ನೋಡುತ್ತಿದ್ದೆ ನಾನು. ‘ಮಕ್ಕಳ ರಂಗಭೂಮಿಯಲ್ಲೇನಾಗುತ್ತಿದೆ?’ ಎಂಬ ಶೈಲಜಾ ಅವರ ಪ್ರಶ್ನೆ ಹೆಚ್.ಎಸ್.ವಿ. ಜಾಣ್ಮೆಯಿಂದ ಜಾರಿಸಿ ಖ್ಯಾತ ನಿರ್ದೇಶಕರಿಗಾಗಿ ತಾವು ಬರೆದ ಮಕ್ಕಳ ನಾಟಕಗಳ ಪಟ್ಟಿ ಕೊಟ್ಟು ‘ಚಿನ್ನಾರಿ ಮುತ್ತ, ಜಂಬೂ ಸವಾರಿ’ ಮಕ್ಕಳ ಚಿತ್ರಗಳಿಗೆ ತಾವು ಹಾಡು ಬರೆದುದನ್ನು ಹೇಳಿದರು. ಮಕ್ಕಳ ರಂಗಭೂಮಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಸಂಸ್ಥೆಗಳು-ವ್ಯಕ್ತಿಗಳನ್ನೆಲ್ಲ ಅವರು ಬಲ್ಲರು. ಮಕ್ಕಳ ನಾಟಕ ಸ್ಪರ್ಧೆಗಳೂ ಅವರಿಗೆ ತಿಳಿದಿದೆ.
ಸಾರ್ವಜನಿಕವಾಗಿ ಮಾತನಾಡುವ ಅವಕಾಶ ಬಂದಾಗ ಹೆಚ್.ಎಸ್.ವಿ. ಅವರನ್ನು ಮರೆವು ಏಕೆ ಕಾಡುತ್ತದೆ ಎಂದು ನನಗಂತೂ ಅರ್ಥವಾಗಿಲ್ಲ.
*****
ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ