ರಾಗ — ಪೂರ್ವಿ
ತಾಳ — ಅಟ್ಟ
ಬಂದೆವಯ್ಯ ಗೋವಿಂದಶೆಟ್ಟಿ ||ಪ||
ಇಂದು ನಿಮ್ಮ ಹರಿವಾಣ ಪ್ರಸಾದವುಂಟೆನಲಾಗಿ ||ಅ.ಪ||
ಆಪ್ಪಾಲು ಅತಿರಸ ತುಪ್ಪ ಕಜ್ಜಾಯವು |
ಒಪ್ಪುವ ಯಾಲಕ್ಕಿ ಶುಂಠಿ ಮೆಣಸು ||
ಅಪ್ಪರೂಪವಾದ ಕಜ್ಜಾಯರಾಶಿಗಳ |
ಛಪ್ಪನ್ನದೇಶಕೆ ಮಾರುವ ಶೆಟ್ಟಿ ||೧||
ಒಡೆದ ಮಡಕೆಯನ್ನು ಇಡದೆ ನಾಮವ ಮಾಡಿ |
ಕೊಡುವೆ ನೀ ಕಾಸಿಗೆ ಒಂದೊಂದನು ||
ಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿ |
ಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ ||೨||
ಶೇಷಗಿರಿಯ ಮೇಲೆ ಇಪ್ಪ ತಿಮ್ಮಶೆಟ್ಟಿ |
ದೇಶಕೆ ಪ್ರಸಾದವ ನಡಸುವ ಶೆಟ್ಟಿ ||
ಆಶೆಯಿಂದ ಹಣ – ಕಾಸ ಗಳಿಸುವ ಆದಿ – |
ಕೇಶವನಾರಯಣನೆಂಬ ಶೆಟ್ಟಿ ||೩||