ತೂಗಿರೆ ರಂಗನ ತೂಗಿರೆ ಕೃಷ್ಣನ

ಶಂಕರಾಭರಣ ಚಾಪು

ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯ್ತಾನಂತನ ಪ

ತೂಗಿರೆ ವರಗಿರಿಯಪ್ಪ, ತಿಮ್ಮಪ್ಪನ
ತೂಗಿರೆ ಕಾವೇರಿ ರಂಗಯ್ಯನ ಅ

ನಾಗಲ್ಕದ ನಾರಾಯಣ ಮಲಗ್ಯಾನೆ
ನಾಗಕನ್ನಿಕೆಯರು ತೂಗಿರೆ
ನಾಗವೇಣಿಯರು ನೇಣಿ ಪಿಡಿದುಕೊಂಡು
ಬೇಗನೆ ತೊಟ್ಟಿಲ ತೂಗಿರೆ ೧

ಇಂದ್ರಲೋಕದಲ್ಲುಪೇಂದ್ರ ಮಲಗ್ಯಾನೆ
ಇಂದುಮುಖಿಯರೆಲ್ಲ ತೂಗಿರೆ
ಇಂದ್ರ ಕನ್ನಿಕೆಯರು ಚಂದದಿ ಬಂದು ಮು
ಕುಂದನ ತೊಟ್ಟಿಲ ತೂಗಿರೆ ೨

ಆಲದೆಲೆಯ ಮೇಲೆ ಶ್ರೀಲೊಲ ಮಲಗ್ಯಾನೆ
ನೀಲಕುಂತಳೆಯರು ತೂಗಿರೆ
ವ್ಯಾಳಶಯನ ಹರಿ ಮಲಗು ಮಲಗುಯೆಂದು
ಬಾಲಕೃಷ್ಣಯ್ಯನ ತೂಗಿರೆ ೩

ಸಾಸಿರನಾಮನೆ ಸರ್ವೊತ್ತನೆಂದು
ಸೂಸುತ್ತ ತೊಟ್ಟಿಲ ತೂಗಿರೆ
ಲೇಸಾಗಿ ಮಡುವಿನೋಳ್ ಶೇಷನ ತುಳಿದಿಟ್ಟ
ದೋಷವಿದೂರನ ತೂಗಿರೆ ೪

ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ
ತೆರಳನ ತೊಟ್ಟಿಲ ತೂಗಿರೆ
ಸಿರಿದೇವಿ ರಮಣನೆ ಪುರಂದರ ವಿಠಲನೆ
ಕರುಣದಿ ಮಲಗೆಂದು ತೂಗಿರೆ ೫
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ