ರಂಜನಾ

ರಂಜನಾ-
ಎಲ್ಲಿ ಕುಳಿತರು ಬಂದು ಕಿವಿಗೆ ಝೇಂಕರಿಸುವುದು
ಮನೆ ತುಂಬ ಹರಿದಾಡಿ ಮರಿದುಂಬಿ ಗುಂಜನ;
ಕಣ್ಣು ನೀಲಾಂಜನ, ಕರಗಿಸಿದ ನಕ್ಷತ್ರ
ಮೂಗು ಹಟಮಾರಿತನಕೊಡೆದ ಮೊಗ್ಗು –
ಗೋಣು ಹೊರಳಿಸಿ ಸೋಗು ಮಾಡಿ ಕುಣಿವೀ ನವಿಲು
ಎತ್ತಿಕೊಂಡರೆ ಮುಗಿಲತನಕ ಹಿಗ್ಗು!

ದಿನದಿನದ ಬೆಳಗು ಹೊಂಗಿರಣದ ಕಿರೀಟ-
ನೂರು ಬಣ್ಣದ ಹೂವ ನರುಗಂಪನೊಮ್ಮೆಲೇ ಚಿಮ್ಮಿಸುವ ತೋಟ.
ಇದು ಯಾವ ಹಕ್ಕಿ-ಹಾಡಿನ ಮಧುರ ಸಂಪುಟ?
ಎಲ್ಲ ಸಂತೋಷಕೂ ಕನ್ನಡಿಯ ಹಿಡಿಯುವುದು ಈ ಮುಖದ
ಮುದ್ದು ಮಾಟ.

ಆನಂದ ಬಂದರಿವಳಾಡಿಸುವನು
ಚಂದ್ರ ಒಂದೇ ಸವನೆ ಕಾಡಿಸುವನು
ಮೂವರೂ ಕೂಡಿದರೆ ಮೂರು ಲೋಕಕು ದಾಳಿ
ಯಾವ ದೇವರು ಬಂದು ಬಿಡಿಸುವವನು?

ಮೂರು ಸಲ ಒಪ್ಪಂದ, ನೂರು ಸಲ ಯುದ್ಧ
ಅವರಿವರ ಸಂಧಾನ ಮೊದಲೇ ನಿಷಿದ್ದ!
ಪಡುವಣಕೆ ಸಂದ ರವಿ ಮೂಡಣದಿ ಎದ್ದ
ರಂಗ ಭೂಮಿಗೆ ಮತ್ತೆ ರಥ ಕುದುರೆ ಸಿದ್ಧ.

ರಂಜನಾ
ಇವಳ ದೀರ್ಘಸ್ವರದ ನಡುವೆ ಅವರಿಬ್ಬರೂ ಬರಿ ವ್ಯಂಜನ,
ಸೆಡವು ಬಂದರೆ ಸುತ್ತಿ ಬೀಸುವ ಪ್ರಭಂಜನ!
ತಕ್ಷಣವ ಕೇಳುವದು ಗುಡುಗು ಮಿಂಚಿನ ತಾನ

ಮರುಚಣದಿ ಮಳೆಬರುವ ಮೇಳಗಾನ,
ಸುತ್ತಿ ಸುಳಿವುದು ಮತ್ತೆ ಮಂದ ಪವನ,
ಮುಗಿಲು ತೆರೆವುದು ತನ್ನ ಕಲೆಯ ಭವನ.
ನೀರಿನೊಳು ಆಡುವವು ಮೂರು ಮೀನ.
ದೇವಲೋಕದ ಸರಕು ಹೊತ್ತು ತಂದಿಹ ಹಡಗು
ಈ ದಡವ ತುಂಬಿರುವದಿದರ ಬೆಡಗು;
ಕ್ಷಿತಿಜದಂಚಿನವರೆಗೆ ತೆರೆ-ನೊರೆಯ ಕೌತುಕವು
ತೆರೆಯುವದು ದಿನಕೊಂದಮೌಲ್ಯವಸ್ತು.

ಇರುಳ ಮೌನಕೆ ಬೆಳಗು ತೊದಲು ನುಡಿದು,
ಮೂಡ ಪಡುವಣದಲ್ಲಿ ಜೀವ ಒಡನುಡಿದು;
ಬೆಳಕು-ಬಯಕೆಯ ಬಳ್ಳಿ ನಾಲ್ದೆಸೆಗು ಹಬ್ಬಿ
(ಮರ ಮರವನಾಡಿಸಿವೆ ತರತರದ ಗುಬ್ಬಿ)
ಹೂವ ಸೂಸಿದೆ ಸುತ್ತ ಪಾರಿಜಾತ
ಹಸುಳೆ ನಗೆ, ಹೂ ಬಿಸಿಲು ಓ! ಎಂಥ ಚಿತ್ರ.

ರಂಜನಾ
ರಂಜನಾ
ಕುಹೂ ಕುಹೂ ಕೂಜನ
ವಾತ್ಸಲ್ಯದ ಕೇತನ
ಇಲ್ಲಿ ಬಾ, ಹೆಜ್ಜೆಗಳ ಕುಣಿಸಿ ತೋರಿಸು, ಜಾಣಿ
ನೋಡೋಣ, ಕಾರಂಜಿ ಬೃಂದಾವನ!

ಈ ಸೃಷ್ಟಿ ನೂತನ
ನೀನೆಮ್ಮ ಚೇತನ
ತೃಣಮಪಿ ನ ಚಲತಿ ನಿನ್ನ ವಿನಾ, ನಿನ್ನ ವಿನಾ, ನಿನ್ನ ವಿನಾ.
*****