ದಾರಿಯೇನೂ ಅವಳಿಗೆ ಹೊಸದಲ್ಲ. ಅಲ್ಲಿರುವ ಮನೆಗಳೂ, ಅದರೊಳಗಿರುವವರು ಮಾತ್ರ ಅವಳಿಗೆ ಹೊಸದಲ್ಲ.
ಒಂದು ದಿನ, ಪ್ರತಿದಿನದಂತೆ, ಆ ದಾರಿಗುಂಟ ಬರುವಾಗ ಒಂದು ರಿಕ್ಷಾ ಅವಳ ಬದಿಯಿಂದಲೇ ದಾಟಿತು. ಒಂದು ಮನೆ ಮುಂದೆ ನಿಂತಿತು. ರಿಕ್ಷಾದಿಂದ ಎಳೆಯ ಮಗುವನ್ನು ಎದೆಗವಚಿಕೊಂಡು ಹಿರಿಯ ಹೆಂಗಸೊಂದು ಇಳಿಯಿತು. ಹಿಂದೆಯೇ, ಮಗುವಿನ ತಾಯಿ ಬಹುಶಃ, ಇಳಿದಳು. ಸರಿತಾ ನಡೆ ನಿದಾನ ಮಾಡುತ್ತ ಅತ್ತಲೇ ನೋಡುತ್ತ ನಡೆದಳು. ಸುತ್ತಿದ ಬಟ್ಟೆಯೊಳಗಿಂದ ಮಗುವಿನ ಗುಲಾಬಿ ಮೃದು ಪಾದ ಹೊರಗಿಣುಕಿ ಮುದವುಂಟು ಮಾಡಿತ್ತು. ಅವರು ಮನೆಯೊಳಗೆ ಮರೆಯಾದರು.
ಅಂದಿನಿಂದ ಆ ಮನೆ ದಾಟುವಾಗ ಅವಳ ದೃಷ್ಟಿ ಆಚೆಗೆ ಹೊರಳುತ್ತಿತ್ತು. ಹುಡುಕುತ್ತಿತ್ತು. ಅಲ್ಲಿ ಅಂಗಳದಲ್ಲಿ ಸಾಲಾನುಸಾಲು ತಂತಿಗಳು. ತಂತಿಗಳ ಮೇಲೆ ಪುಟ್ಟ ಪುಟ್ಟ ಅಂಗಿಗಳು, ನ್ಯಾಪ್‌ಕಿನ್‌ಗಳು ಹಾಸು – ಹೊದಿಕೆಗಳು ಮಗುವಿನ ಬಗ್ಗೆ ಮಾತಾಡಿದವು. ಮಗು ಕಾಣಿಸಲಿಲ್ಲ. ಮನೆಯಂಗಳದ ತಂತಿಯಲ್ಲಿ ಆ ಬಟ್ಟೆಗಳು ಎಷ್ಟು ಶೋಭಿಸುತ್ತವೆ! ಗಾಳಿ ಬೀಸಿ ತಂತಿಗಳು ಬಟ್ಟೆ ಹೊತ್ತು ಓಲಾಡುವಾಗ ಮಗುವಿಗೆ ಜೋಗಳ ಹಾಡುತ್ತಿರುವವೇನೋ ಅಂತ ಅನಿಸುತ್ತಿತ್ತು. ಒಮ್ಮೆ ಒಳಗೆ ಹೋಗಿ ನೋಡಬೇಕೆಂದುಕೊಂಡರೂ ಸಂಕೋಚ ಅವಳನ್ನು ಹೋಗಗೊಡಲಿಲ್ಲ. ಏನಂತ ಹೇಳುವುದು? ಮಗುವನ್ನು ನೋಡಲು ಬಂದೆನೆಂದೆ? “ಇಷ್ಟರವರೆಗೆ ಮಕ್ಕಳನ್ನು ನೋಡಿಲ್ಲವೆ?” – ಎಂದರೆ? ಆ ಮನೆಯವರು ಎಂತಹ ನಂಬಿಗೆಯವರೋ, “ಯಾರೋ ಗುರಿತಿಲ್ಲದವರು ಬಂದು ನೋಡಿ ಮಗುವಿಗೆ ದೃಷ್ಟಿಯಾಯಿತು” ಎಂದರೂಒ ಸರಿಯೇ. ಹೀಗೆಲ್ಲ ಲೆಕ್ಕಾಚಾರ ಹಾಕುತ್ತಲೇ ಮನೆಯ ಬಾಗಿಲು ದಾಟಿ ಹೋಗುತ್ತಿತ್ತು.
ಒಂದೊಂದು ದಿನ ಮಗುವಿನ ಅಳು ಕೇಳಿಸುತ್ತಿತ್ತು. ಅವಳು ಸ್ವಲ್ಪ ಹೊತ್ತು ಅಲ್ಲಿಯೇ ನಿಲ್ಲುತ್ತಿದ್ದಳು. ಆಲಿಸುತ್ತಿದ್ದಳು. ದನಿಕೊಟ್ಟರೆ ತನ್ನ ಮನಸ್ಸಿನ ಸ್ವರವೂ ಹಾಗೆಯೇ ಹೊರಟೀತು ಎಂತನಿಸುತ್ತಿತ್ತು. ಕರುಳಿನವರೆಗೆ ಕತ್ತಿ ಹಾಯಿಸಿದಂತಹ ಸಂಕಟದಿಂದ ನಲುಗುತ್ತಿದ್ದಳು. ಗುಲಾಬಿ ಮೃದು ಪಾದಗಳಿಗಾಗಿ ಹುಡುಕುತ್ತಿದ್ದಳು.
ಹಾಗಲ್ಲಿ ಹೆಚ್ಚು ಹೊತ್ತು ನಿಲ್ಲುವ ಹಾಗುಂಟೆ? ಯಾರಾದರೂ ಕಂಡರೆ ಯಾರು, ಯಾಕೆ ಇತ್ಯಾದಿ ಪ್ರವರ ಶುರುಮಾಡಿಯಾರು. ತಾನು ಒಂದೋ ಒಳಗೆ ಹೋಗಬೇಕು, ಇಲ್ಲ ಸೀದ ಮುಂದುವರಿಯಬೇಕು. ಅವಳು ಮುಂದುವರಿಯುತ್ತಿದ್ದಳು. “ಪ್ರಪಂಚದಲ್ಲಿ ಬಹಳ ಹೊತ್ತು ನಮಗಾಗಿ ನಾವು ಏನೂ ಮಾಡುವಂತಿಲ್ಲ. ಕದ್ದು ಪಡೆದ ಒಂದಷ್ಟು ನಿಮಿಷಗಳು ಮಾತ್ರ ನಮ್ಮವು. ಉಳಿದೆಲ್ಲವೂ ಅಕ್ಕಪಕ್ಕದವರದ್ದು, ಸಮಾಜದ್ದು, ಬಂಧು ಬಳಗದ್ದು.” ಹೀಗೆಲ್ಲ ಮೆಲುಕು ರಸ್ತೆ ದಾಟಿಸುತ್ತಿತ್ತು.
ಒಮ್ಮೆ ಮಗುವಿನ ಉಂಗುರ್ರ್ ರಾಗ, ಕಾಲುಗೆಜ್ಜೆಯ ಝಿಣಿ ಝಿಣಿ ಕೇಳಿ ಮೊಳೆ ಹೊಡೆದವಳಂತೆ ಅಲ್ಲಿಯೇ ನಿಂತಳು. ಮೃದು ಪಾದಗಳು ಬೆಳ್ಳಿ ಗೆಜ್ಜೆ ಘಲ್ಲೆನಿಸುತ್ತ ಪ್ರಪಂಚದ ಒಳಗೊಳಗೇ ಬರುತ್ತ ಇದ್ದವು. ಪಾದ ಕಾಣಿಸುತ್ತಿರಲಿಲ್ಲ. ಸ್ಮೃತಿಯಿಂದ ಗೆಜ್ಜೆಯ ಸ್ವರ ಮಾತ್ರ ಮಾಸುವುದೇ ಇಲ್ಲ. ಅವಳ ಕತ್ತಿನ ನರ ಬಿಗಿಯುತ್ತಿತ್ತು. ನುಂಗಿಕೊಂಡಷ್ಟೂ ಬಿಗಿತ ಹೆಚ್ಚುತ್ತಿತ್ತು.
ಕಿಟಕಿಯಿಂದ ಒಬ್ಬ ಹೆಂಗಸು “ಯಾರದು?” ಎಂದು ಹೆದರಿದ ದನಿಯಲ್ಲಿ ಮಕ್ಕಳ ಕಳ್ಳರೋ ಎಂಬಂತೆ ಪ್ರಶ್ನಿಸಿದಾಗಲೇ ಅವಳಿಗೆ ಎಚ್ಚರಾದದ್ದು. ಕೆನ್ನೆಯ ಮೇಲಿಳಿಯುತ್ತಿದ್ದ ಕಣ್ಣೀರ ಬಿಸಿಯ ಅರಿವಾದದ್ದು. ಆಕೆ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಂತೆ ಕಣ್ಣೊರಸಿಕೊಳ್ಳುತ್ತ ಅವಳು ಚಲಿಸಿದಳು. ಕಿವಿಯೊಳಗೆ ಗೆಜ್ಜೆಯ ಝಿಣಿಝಿಣಿ ಮಾತ್ರ ಮತ್ತೆ ಮತ್ತೆ ಗುಸುಗುಸುಗುಡುತ್ತಿದ್ದವು. ಕಾಲು ಕೆದರಿ ನೆನಪನ್ನು ಬಗೆಯುತ್ತಿದ್ದವು.
ಮಗು ಕವುಚಿಕೊಂಡಿರಬೇಕು. ತಾಯಿಯ ಹರ್ಷದ ನಗೆ ಕೇಳಿಸುತ್ತಿತ್ತು ಸರಿತಾ ದಾಟುತ್ತಿರುವಾಗಲೇ ಅವಳು ತಾಯಿಯನ್ನು ಕರೆದು ಮಗು ಕವುಚಿತೆಂತ ಕೂಗಿದ್ದು ಶುದ್ಧ ಕಾಕತಾಳೀಯ. “ಕವುಚಿತೇ? ಹಾಗಾದರೆ ಶಾಸ್ತ್ರ ಪ್ರಕಾರ ದೋಸೆ ಮಾಡಬೇಕು” – ಹಿರಿಯಾಕೆ ಎಂದಾಗ ಗಂಡುದನಿಯೊಂದು ತಮಾಷೆಯೆಂಬಂತೆ ಗಟ್ಟಿಯಾಗಿ ನಕ್ಕಿತು. “ಮುದ್ದುಗೆ ಅಪ್ಪ ಬಂದಿದ್ದಾರೆಂತ ಹೇಗೆ ತಿಳಿಯತೂ ಎಂತ……” ಇತ್ಯಾದಿಗಳನ್ನೆನ್ನುತ್ತಾ ಮಾತಿನಲ್ಲಿ ಮಗುವಾಡಿಸಿತು. ಶಿಳ್ಳಿನಲ್ಲಿ ಕೋಗಿಲೆ ಕೂಗಿತು.
ಸರಿತಾ ಈಗ ಅಲ್ಲಿಂದ ಖಂಡಿತ ಮುಂದುವರೆಯದಾದಳು.
ಗಗನದಲ್ಲಿ ಎಳೆಬೆಳಕು ಬೆಚ್ಚನೆ ಹರಡಿದಂತಹ ನಗೆ ಮುಖದ ತೀರ ಹತ್ತಿರ ಬಂದಿತ್ತು. ತಾನು ಪರವಶತೆಯಿಂದ ನಡುಗು ತುಟಿಯಿಂದ ಕಣ್ಣು ಮುಚ್ಚಿದ್ದೆ. ನಗೆ ಕುಡಿಸಿದ ಅಮಲಿಂದ, ಒರಗಿದರೆ ತಾನೆಂಬುದರ ಹುಟ್ಟನ್ನೇ ಅಡಗಿಸಬಲ್ಲ ದಟ್ಟಗೂದಲ ಪೊದೆ ಎದೆಯಿಂದ ಎಚ್ಚರಾಗಿ ಮುಖವೆತ್ತಿ ಸುತ್ತ ನೋಡಿದಾಗ ಏನಿತ್ತು? ಬಯಲೋ ಬಯಲು. ಸುತ್ತಿ ಕಡಲಿಗೆ ಒಗೆಯುವ ತಾಕತ್ತಿನ ಬಯಲು. ಘಮಘಮದ ಭಾವಗಳ ಮೃದು ಹೆಜ್ಜೆಗಳನ್ನೆಲ್ಲ ಧೂಳು ಹಾರಿಸಿ ಮುಚ್ಚಿ ಅಂತರಂಗದ ಆಳಕ್ಕೆ ತಳ್ಳಿ ಬಚ್ಚಿಟ್ಟುಕೊಂಡ ಬಯಲು, ಹಾಡುತ್ತಿದ್ದ ಕೋಗಿಲೆ ಎತ್ತ ಹಾರಿತು? ಹುಡುಕುತ್ತಿದ್ದೇನೆ ತಾನು ಗಾಳಿಯಲ್ಲಿ, ಚಿಗುರಿನಲ್ಲಿ, ಬಯಲಿನಲ್ಲಿ, ಹಾಡಿನಲ್ಲಿ.
ರಸ್ತೆ ಮಯಮಯವಾಯಿತು. ಕಣ್ಣಿಗೆ ಕಟ್ಟಿದ ನೀರಿನ ತೆಳು ಪರದೆ ಸರಿಸಿ ನಿಂತಲ್ಲೇ ತುದಿಗಾಲಿಂದ ಕಾಂಪೌಂಡಿನ ಆಚೆಗಿರುವ ಕಿಟಕಿಯೊಳಗೆ ಇಣುಕಿದಳು ಸರಿತಾ. ಎಂದಿಗೂ ಇನ್ನೊಬ್ಬರ ಮನೆಯನ್ನು ಹೀಗೆ ಇಣುಕಬಾರದು ಎಂದು ತಿಳಿದಿದ್ದರೂ, ಉತ್ಕಟ ಇಚ್ಛೆಯನ್ನು ತಪ್ಪು ಒಪ್ಪು ಮೀರಿ ಉತ್ಕಟವಾಗಿ ಅನುಭವಿಸಿದಾಗಲೇ ತೃಪ್ತಿ ಹೆಚ್ಚು ಎಂದುಕೊಳ್ಳುತ್ತ. ಆದರೆ ತಂದೆಯೂ ಕಾಣಲಿಲ್ಲ. ಮಗುವೂ. ಎದುರುಉ ಮನೆ ಹೆಂಗಸು ಇಣುಕಿ “ಯಾರು ನೀವು? ಯಾರು ಬೇಕಿತ್ತು? ಒಳಗೆ ಹೋಗಿ ಕೇಳಿ, ಅಡ್ಡಿಲ್ಲ” – ಎಂದದ್ದು ಕೇಳಿಸಿ ಸುಮ್ಮನೆ ತಲೆಯಾಡಿಸಿ ಹೊರಟುಹೋದಳು.
ಯಾರು ಬೇಕಿತ್ತು? ರಸ್ತೆಯ ಪರಿವೆಯಿಲ್ಲದೆ ಬಿಕ್ಕುತ್ತ ಸಾಗಿದಳು. ಮನಸ್ಸಿಗೆ ವಿಪರೀತ ಆಯಾಸವೆನಿಸುತ್ತಿತ್ತು. ಆದರೆ ಎಲ್ಲಿಯೂ ಒರಗಬೇಕೆನಿಸಲಿಲ್ಲ. ಒಂದು ಕ್ಷಣ ಸಹ ನಿಲ್ಲಬೇಕೆನಿಸಲಿಲ್ಲ.
ತಿಂಗಳುಗಳು ಕಳೆದ ಮೇಲೊಂದು ದಿನ ಮನೆಯೊಳಗೆ ತುಂಬ ಜನವಿದ್ದಂತಿತ್ತು. ದೊಡ್ಡವರ ಗಲಾಟೆಯಲ್ಲಿ ಹಸುಗೂಸಿನ ಸ್ವರವೇ ಮುಳುಗಿ ಹೋಗಿತ್ತು. ಒಂದೆರಡು ಕಾರುಗಳೂ ನಿಂತಿದ್ದವು. ಹೆಸರಿಡುವ ಸಮಾರಂಭವೋ? ಅಂದಂತೆ ಆ ಮಗು ಗಂಡೋ, ಹೆಣ್ಣೋ? ತಂತಿಯ ಮೇಲಿನ ಬಟ್ಟೆಗಳ ಮೇಲೆ ಕಣ್ಣಾಡಿಸಿದಳು ಸರಿತಾ. ತಿಳಿಯಲಿಲ್ಲ. ಅಲ್ಲಿರುವುದು ಬರಿಯ ಜುಬಲಾಗಳು. ಗಂಡುಗೂ ಸರಿ.ಹೆಣ್ಣಿಗೂ. ಹೆಸರೇನು ಇಡಬಹುದು? ….. ಯಾವುದೋ ಹೆಸರು ಮತ್ತೆ ಮತ್ತೆ ಮಿದುಳು ಕೊರೆಯುತ್ತಾ ಸಾಗಿ ಭಸ್ಮವಾಗಿ ಕಾಣೆಯಾಯಿತು. ತೀರ ಸಣ್ಣ ಹೆಜ್ಜೆಯಲ್ಲಿ ನಡೆದು ಅವಳು ಮುಂದೆ ಹೋದಳು.
ರಾತ್ರಿ ಕನಸಿನಲ್ಲಿ ಮಗು ಬಂದಿತ್ತು. ಗರ್ಭದಲ್ಲಿ ಎರಡೇ ಎರಡು ತಿಂಗಳು ಕಳೆದಂತಿತ್ತು. ಕೈಕಾಲು ಮುಖ ಒಂದೂ ಸ್ಪಷ್ಟವಾಗಿರಲಿಲ್ಲ. ಆದರೂ ಕವುಚಿಕೊಂಡು ಸುತ್ತು ಹೊಡೆಯುತ್ತಿತ್ತು. ಕೇಕೆ ಹಾಕುತ್ತಿತ್ತು. ಕೈ ಚಾಚಿದಳು. ಹೊಟ್ಟೆ ಎಳೆಯುತ್ತ ಗೆಜ್ಜೆ ಬಡಿಯುತ್ತ ಮುಂದೆ ಹೋಯಿತು. ಹಿಂಬಾಲಿಸಿದಳು. ಮಾಯವಾಯಿತು. ಅಷ್ಟೇ. ಬರೀ ಅಷ್ಟೇ.
ಬರೀ ಅಷ್ಟೆಯೇ?
ಭ್ರಮೆಯೆಂಬುದು ಸತ್ಯದ ವೇಷ ತೊಟ್ಟು ಮನುಷ್ಯನನ್ನು ಎಷ್ಟು ಸೊಗಸಾಗಿ ಮರಳುಗೊಳಿಸುತ್ತದೆ! ಮತ್ತೆ ಎಂತಹ ಭಯಾನಕ ಗುರುತು ಊರಿ ತಾನಲ್ಲ ಎಂಬಂತೆ ನಡೆದುಬಿಡುತ್ತದೆ!
ಮೋಡ ಕವುಚಿದರೂ ಮಳೆ ಸುರಿಯದಂತಹ ಅವಸ್ಥೆಯಲ್ಲಿಯೇ ಅಫೀಸಿಗೆ ಹರಟಳು. ಮನೆಯೆದುರು ಕೆಲವರು ಕಾರು ಹತ್ತುತ್ತಿರುವುದು ದೂರದಿಂದಲೇ ಕಾಣಿಸಿ ಆತಂಕವಾಯಿತು. ಬೇಗ ಬೇಗ ನಡೆದಳು. ಯಾರೋ ಒಬ್ಬರ ಕೈಯಲ್ಲಿ ಮಗುವಿತ್ತು. ಹತ್ತಿರ ಬಂದು ಸರಿಯಾಗಿ ನೋಡುವುದರೊಳಗೆ ಕಾರು ಹೊರಟು ಹೋಯಿತು. ಮನೆಯ ಮುಂದಿನ ಅಂಗಳ ಬೋಳುಬೋಳಾಗಿತ್ತು. ತಂತಿಗಳಲ್ಲಿ ಉಲ್ಲಸವಿರಲಿಲ್ಲ. ತೋರಣವಿಲ್ಲದ ಚಪ್ಪರದಂತೆ ಮನೆ ನಿಂತಿತ್ತು. ಆ ಹಿರಿಯಾಕೆ ಗೇಟಿನ ಬಳಿಯೇ ಖಿನ್ನರಾಗಿ ನಿಂತಿದ್ದರು.ಎದುರು ಮನೆ ಹೆಂಗಸು ಕಿಟಕಿಯಿಂದ ಇಣುಕಿತು. “ಇನ್ನು ನಿಮಗೆ ಬಹಳ ಬೇಜಾರು ಅಲ್ಲವೇ?” ಎನ್ನುತ್ತ ಅವರ ಖಿನ್ನತೆಯನ್ನು ಮತ್ತಷ್ಟು ಪರಚಿತು. ಅವಳನ್ನು ಕಂಡದ್ದೇ “ಮಗು ಹೊರಟುಹೋಯಿತಲ್ಲ! ದಿನಾ ನಿಲ್ಲುತ್ತಿದ್ದಿರಿ. ಯಾಕೆ? ಮಗುವನ್ನು ನೋಡಲಿಕಾಗಿಯೇ ಎಂದು ನಾನು ಗ್ರಹಿಸಿಕೊಂಡೆ. ಒಳಗೆ ಹೋಗಿ ಒಮ್ಮೆ ನೋಡಬಹುದಿತ್ತು. ಹೌದೆ? ….. ಅಂದ ಹಾಗೆ ನಿಮಗೆಷ್ಟು ಮಕ್ಕಳು? ಕುತ್ತಿಗೆಗೆ ಕರಿಮಣಿ ಹಾಕದಿರುವುದು ಈಗಿನದೊಂದು ಕೆಟ್ಟ ಫ್ಯಾಷನ್. ಅಥವಾ ಮದುವೆಯೇ ಆಗಲಿಲ್ಲವೋ?” ಕಿಟಕಿಯಲ್ಲಿ ಬೇಡದಷ್ಟು ಕುತೂಹಲವೇ ಮೈಯಾಗಿರುವ ತನ್ನ ಸ್ವರವನ್ನು ತೂರಿಸಿತು. ಸರಿತಾ ಮಾತಾಡದೆ ಹಿರಿಯಾಕೆಯನ್ನು ನೋಡಿದಳು. “ಬಹಳ ಬೇಸರ. ಒಳಗೆ ಬನ್ನಿ, ಸ್ವಲ್ಪ ಹೊತ್ತು ಕಾಲು ನೀಡಿ ಕುಳಿತು ಮಾತಾಡುವ” ಎಂದು ಬಹುಕಾಲದ ಪರಿಚಯಸ್ಥರಂತೆ ನುಡಿದರು. ಆಗ ಕಿಟಕಿಯಾಕೆ “ಹಾಗಾದರೆ ನಾನೂ ಬಂದೆ. ಒಂದೇ ನಿಮಿಷ” ಎಂದು ಉತ್ಸಾಹ ಎರಚಿಕೊಂಡಳು.
ಶತಮಾನಗಳಿಂದ ಕದಲದೇ ನಿಂತ ಬಂಡೆಗಳಿಗಾದರೂ, ಅವು ಹೀರಲಿ ಬಿಡಲಿ, ಒಮ್ಮೆ ಒಳಗಿನದನ್ನು ಹೇಳಿ ಹೇಳಿಯೇ ಖಾಲಿಮಾಡಿಕೊಳ್ಳಬೇಕು ಎಂಬಷ್ಟು ಹೊರೆಯಿತ್ತು. ಆದರೆ ಆ ಭಾರ ಕೂಡಾ ಇಳಿದು ತಾನು ಪೂರ್ತಿ ಹಗುರಾಗಿ ಬಿಟ್ಟರೆ ಎಂಬ ಎಣಿಕೆ ಮಾತ್ರದಿಂದಲೇ ಕಂಪಿಸುವಂತಾಯಿತು. ಹೊರಚಿಮ್ಮಲು ಬಂದ ಚೆನ್ನೆನಪಿನ ಒದ್ದೆ ನುಡಿಗಳನ್ನೆಲ್ಲ ಜೋಪಾನವಾಗಿ ಮುಚ್ಚಿಡುತ್ತ “ಇಲ್ಲ. ಆಫೀಸಿಗೆ ಹೊತ್ತಾಯಿತು. ನಾ ಹೋಗುತ್ತೇನೆ” ಎಂದವಳು ಒಂದು ಕ್ಷಣ ಕೂಡ ಅಲ್ಲಿ ನಿಲ್ಲಲಿಲ್ಲ. “ಎಲ್ಲೋ ಕಾಲುತಪ್ಪಿ ಎಲ್ಲ ಮುಗಿದಿರಬೇಕು. ಪಾಪ. ಅವಳ ಕಣ್ಣಲ್ಲಿ ನೀರಿತ್ತು. ಅಲ್ಲ?” ಕಿಟಕಿಯಾಕಿ ಪಿಸುಗುಟ್ಟಿದ್ದು ಅಟ್ಟಿಸಿದಂತೆ ಬಂತು. ಸರಿತಾ ಓಡಲಿಲ್ಲ. ಉಲ್ಲಾಸದ ತೋರಣವೇ ಇಲ್ಲದೆಯೂ ಕುಸಿಯದೇ ಧೈರ್ಯವಾಗಿ ಮಾತಿಲ್ಲದೆ ನಿಂತಿದ್ದ ಮನೆ ಕಣ್ಣ ಮುಂದಿತ್ತು. ಸಾಲು ಮರಗಳಿಲ್ಲದೇ ಉದ್ದಕ್ಕೂ ನಾಲಿಗೆಯಂತೆ ಚಾಚಿ ನಿಂತಿದ್ದ ಕೊನೆಯೇ ಕಾಣದಿದ್ದ ಕಪ್ಪು ರಸ್ತೆಯ ಮೇಲೆ ಸತ್ತವರನ್ನೆಲ್ಲ ರಾತ್ರಿ ಹೊತ್ತು ನಕ್ಷತ್ರಗಳನ್ನಾಗಿ ಮೆರೆಸುತ್ತ ಹಗಲಿನಲ್ಲಿ ನೀಲಿಗಟ್ಟಿದ ಹೊದಿಕೆಯೊಳಗೆ ಮುಚ್ಚಿಡುವ ಅಂತರಿಕ್ಷದ ಕೆಳಗೆ ನಡಿಗೆಯನ್ನು ಮುಂದರಿಸಿದಳು, ಒಬ್ಬಳೇ, ಅರ್ಥವಾಗದ ಅರ್ಥದಂತೆ.
*****
