’ಎಂದಿಗೂ ಮುಗಿಯದ್ದು ಏನು..?’ ಹುಡುಗ ಕೇಳಿದ.
’ಮಾತು..’ಹುಡುಗಿ ಅಂದಳು.
’ಮುಗಿದು ಹೋಗುವುದಂಥದ್ದು ಏನು..?’ ಹುಡುಗನ ಪ್ರಶ್ನೆ.
’ಮೊಬೈಲ್ ಬ್ಯಾಟರಿ..’ ಹುಡುಗಿಯ ಉತ್ತರ.
ಇಬ್ಬರೂ ನಕ್ಕರು..
’ನಾಳೆ ಸ್ನಾನ ಗೀನ ಮುಗಿಸ್ಕೊಂಡು ಬೆಳಿಗ್ಗೆ ೯.೩೦ಕ್ಕೆ ಫ್ಯಾಬ್ಮಾಲ್ ಹತ್ರ ಬರ್ತೀನಿ..’ ಹುಡುಗ ಏನೋ ಹೇಳ್ತಿದ್ದ.
’ಸ್ನಾನ ಸರಿ.. ಗೀನ ಅಂದ್ರೆ ಏನು..?’ ಹುಡುಗಿಯ ತುಂಟ ಪ್ರಶ್ನೆ.
’ಸ್ನಾನ ಮಾಡುವಾಗ ನಿನ್ನ ನೆನೆಸ್ಕೋತೀನಲ್ಲಾ.. ಅದೇ ಗೀನ..’
ಮತ್ತೆ ಇಬ್ಬರೂ ನಕ್ಕರು.
ನಾನೂ ಸುಮಾರು ಒಂದೂವರೆ ಗಂಟೆಯಿಂದ ಅವರ ಮಾತುಗಳನ್ನ ಕೇಳಿಸ್ಕೋತಿದ್ದೇನೆ. ಪ್ರೇಮಿಗಳ ಮಾತುಗಳವು.ಹುಡುಗ ಯಾರೋ ಗೊತ್ತಿಲ್ಲ..ಹುಡುಗಿ ಚೆನ್ನಾಗಿ ಗೊತ್ತು..ನನ್ನ ತಂಗಿ..
**********
ಅಮ್ಮ ಒಂದೇ ವರಾತ. ಅಪ್ಪಂಗೆ ಗೊತ್ತಾದ್ರೆ ಗಲಾಟೆ ಮಾಡ್ತಾರೆ. ಅದೆಷ್ಟು ಚಡಪಡಿಸಿದ್ದಳೋ ಒಳಗೊಳಗೇ.. ಒಂದಿನ ಅಡುಗೆ ಮನೆಯೊಳಗೆ ಕರ್ಕೊಂಡು ಹೋಗಿ ನನಗಷ್ಟೇ ಕೇಳಿಸುವ ಧ್ವನಿಯಲ್ಲಿ ’ಮಂಗಳಿ ಬದಲಾಗಿದ್ದಾಳೆ.. ರಾತ್ರಿ ಎಷ್ಟೆಷ್ಟ್ಹೊತ್ತಲ್ಲೋ ಫೋನ್ನಲ್ಲಿ ಮಾತಾಡ್ತಿರ್ತಾಳೆ.. ’
’ಅಲ್ಲಮ್ಮ.. ನೀನ್ಯಾಕೆ ಬಾಗಿಲು ತೂತಿಗೆ ಕಿವಿ ಇಟ್ಟು ಕದ್ದು ಮುಚ್ಚಿ ಅದೆಲ್ಲಾ ಕೇಳೋಕೆ ಹೋದೆ..?’
’ನಾನು ಅವಳಮ್ಮ ಕಣಪ್ಪಾ..’
’ಅಧಿಕಾರಯುತವಾಗೇ ಅವಳನ್ನ ಕೇಳಬಹುದಿತ್ತಲ್ಲಾ.. ಹೋಗ್ಲಿ ಬಿಡು.. ಏನ್ ಮಾತಾಡ್ತಿದ್ಲು..’
’ಗೊತ್ತಿಲ್ಲಪ್ಪ.. ಯಾರೋ ಹುಡುಗನ ಜೊತೆ ಮಾತಾಡ್ತಿದ್ದ ಹಾಗಿತ್ತು..’
’ಹೇಗೆ ಹೇಳ್ತಿ..’
’ತುಂಬಾ ಕಮ್ಮಿ ಧ್ವನೀಲಿ ಮಾತಾಡ್ತಾ ಇದ್ದುದರಿಂದ..!’
**********
’ನಾನೇನು ಮಾಡ್ಬೇಕೂ ಅಂತೀ ಈಗ..?’
’ಲವ್ಗಿವ್ ಮಾಡ್ತಿದ್ದಾಳೋ ನೋಡಪ್ಪಾ.. ಮೊದ್ಲೇ ಅಪ್ಪಂಗೆ ಲವ್ ಅಂದ್ರೆ ಆಗಲ್ಲ..’
’ಅಲ್ಲಮ್ಮಾ.. ಅದ್ಹೆಂಗೆ ಲವ್ ಅಂದ್ರೆ ಆಗದ ಅಪ್ಪನ ಜೊತೆ ಇಷ್ಟು ವರ್ಷ ಸಂಸಾರ ಮಾಡಿದೆ..’
ಅಮ್ಮ ನನ್ನ ಜೋಕಿಗೆ ನಗಲಿಲ್ಲ. ’ನನ್ನ ಕರ್ಮ.. ಯಾರೂ ನನ್ನ ಮಾತನ್ನ ಕಿವಿಗೇ ಹಾಕ್ಕೊಳಲ್ಲ.. ನನ್ನ ಧಾವಂತ ನಿನಗೆ ಹೇಗೆ ಅರ್ಥವಾಗುತ್ತೆ.. ವ್ಯಾನಿಟಿ ಬ್ಯಾಗಲ್ಲಿ ದಿನಾ ಒಂದೊಂದು ಡ್ರೆಸ್ನ ಸಾಗಿಸಿ ಒಂದಿನ ಓಡ್ಹೋಗೇ ಬಿಟ್ಲಲ್ಲಾ..ವೀಣಾ. ನಿನಗೆ ಹೇಗೆ ಅರ್ಥ ಆಗುತ್ತೆ ನನ್ನ ಸಂಕಟ..’
ವೀಣಾ ನನ್ನ ದೊಡ್ಡಮ್ಮನ ಮಗಳು.
’ವೀಣಾ ಚೆನ್ನಾಗೆ ಇದ್ದಾಳಲ್ಲ ಗಂಡನ ಜೊತೆ.. ಅವಳ ಮಗು ಮೂರೂವರೆ ವರ್ಷದ್ದು, ’ಹೊಡಿಮಗ..ಹೊಡಿಮಗ..’ ಹಾಡು ಏನ್ ಚೆನ್ನಾಗಿ ಹೇಳುತ್ತೆ ಅಂತ ನೀನೆ ಹೇಳ್ತಿದ್ದೆ ಬಂದೋರ ಹತ್ರ ಎಲ್ಲಾ..’
ಅಮ್ಮ ನನ್ನನ್ನ ಮಡುಗಟ್ಟಿದ ಕಣ್ಣುಗಳಲ್ಲೇ ದುರುಗುಟ್ಟಿಕೊಂಡು ನೋಡಿದ್ಲು. ’..ಅದೇನು ಒಂಚೂರು ನೋಡೋ..ಯಾವ ಹುಡುಗಾನೋ ಏನೋ.. ಯಾವ ಸ್ಟೇಜ್ನಲ್ಲಿದ್ಯೋ ಲವ್ವು..’
*********
ಅಮ್ಮ ಸುಪಾರಿ ಕೊಟ್ಟಾಗಿನಿಂದ ನಂಗೊಂದೇ ಕೆಲ್ಸ.. ಮಂಗಳೀನ ಚೇಸ್ ಮಾಡೋದು.. ಅವಳಿಗೆ ಗೊತ್ತಾಗದ ಹಾಗೆ. ಅವಳ ಜೊತೆ ಆಡ್ತಿದ್ದ ಕಣ್ಣಾಮುಚ್ಚಾಲೆ ಆಟ ಜ್ಞಾಪಕಕ್ಕೆ ಬರ್ತಿತ್ತು.. ಅವಳು ಕಾಲೇಜಿನಿಂದ ಹೊರ ಬರ್ತಿದ್ದ ಹಾಗೇ ನಾನು ಆಗ ತಾನೆ ಅಚಾನಕ್ಕಾಗಿ ಅಲ್ಲಿ ಹೋದಂತೆ ಮೋಟಾರ್ಬೈಕ್ ನಿಲ್ಲಿಸಿದೆ..
’ಮಂಗಳೀ ಬರ್ತೀಯಾ ಮನೆಗೆ..’
ಅವಳು ನನ್ನನ್ನ ನಿರೀಕ್ಷಿಸಿರಲಿಲ್ಲ. ಕಣ್ಣುಗಳು ಹೇಳಬಹುದಾದ ಸುಳ್ಳನ್ನು ಹುಡುಕುತ್ತಿದ್ದವು.. ಟ್ಯೂಷನ್, ಸ್ನೇಹಿತರ ಮನೆ ಇತರ ಹಳೆಯ ಸವೆದುಹೋದ ಕಾರಣಗಳನ್ನು ಕೊಡುವಷ್ಟು ದಡ್ಡಿಯಲ್ಲ ನನ್ನ ತಂಗಿ. ಮನಸ್ಸಿಲ್ಲದ ಮನಸ್ಸಲ್ಲಿ ಮೋಟಾರ್ಬೈಕ್ ಹತ್ತಿ ಕೂತ್ಕೊಂಡ್ಲು..ಯಾರನ್ನೋ ಬಹುಶಃ ಹುಡುಕುತ್ತಾ. ಅವಳಿಂದ ಒಂದೇ ಒಂದು ಮಾತಿಲ್ಲ. ಹೆಲ್ಮೆಟ್ ಹಾಕ್ಕೊಂಡ್ರೆ ಅಕ್ಕಪಕ್ಕದ್ದೇ ಕಾಣಲ್ಲ.. ಇನ್ನು ಹಿಂದೆ ಕೂತಿರೋ ತಂಗಿಯ ವಿರಹದ ಭಾವಗಳು ಹೇಗೆ ಕಾಣುತ್ತೆ..? ಕನ್ನಡೀಲಿ..! ಕನ್ನಡೀಲಿ ಅವಳ ಮುಖ ನೋಡ್ತೀನಿ.. ತುಂಬಾ ಬೇಜಾರಲ್ಲಿದ್ದಾಳೆ. ಹುಡುಗನ್ನ ತುಂಬಾ ಹಚ್ಕೊಂಡ್ಬಿಟ್ಟಿದ್ದಾಳೆ ಅನ್ಸುತ್ತೆ. ಹಚ್ಚಿಕೊಂಡಿರೋ ಲಿಪ್ಸ್ಟಿಕ್ಗೆ ಕಳೆಯೇ ಇಲ್ಲ..
*********
ನನ್ನ ತಂಗಿ ಬುಧ್ಧಿವಂತೆ ಅಂತ ಗೊತ್ತಿತ್ತು.. ಇಷ್ಟೂಂತ ಗೊತ್ತಿರ್ಲಿಲ್ಲ. ಅಲ್ಲಾ ಪ್ರೇಮ ಅನ್ನೋದು ಬುಧ್ಧಿವಂತಿಕೇನ ಹೆಚ್ಚಿಸಿಬಿಡುತ್ತಾಂತ. ಪ್ರೇಮದಲ್ಲಿದ್ದಾಗ ಹೃದಯ ಮಿದುಳಿನ ಪಿಟಿಮೇಷ್ಟ್ರು ಥರಾ ಕೆಲ್ಸ ಮಾಡುತ್ತಲ್ಲಾ ಅನ್ನಿಸಿ ನಗು ಬಂತು.
ಅಲ್ಲಿಂದ ಹದಿನೈದಿಪ್ಪತ್ತು ದಿನ ರಾತ್ರಿ ಫೋನ್ಕಾಲ್ಗಳೇ ಇಲ್ಲ.. ಕಾಲೇಜಿನಿಂದ ಮನೆ..ಮನೆಯಿಂದ ಸೀದಾ ಕಾಲೇಜು.. ಟೈಮ್ ಟೈಂಗೆ. ತನ್ನನ್ನ ಮನೆಯೋರು ವಾಚ್ ಮಾಡ್ತಿದ್ದಾರೆ ಅಂತ ಗೊತ್ತಾಗಿಹೋಗಿದೆ ಅವಳಿಗೆ.. ಕಿಲಾಡಿ. ಬಹುಶಃ ಇಬ್ರೂ ಮಾತಾಡಿಕೊಂಡಿರಬೇಕು.. ಮೀಟ್ ಮಾಡೋದು, ಫೋನ್ನಲ್ಲಿ ಮಾತಾಡೋದು ಒಂದಷ್ಟು ದಿನಕ್ಕೆ ಬೇಡಾಂತ. ಪ್ರೇಮಿಗಳನ್ನು ದೂರ ಮಾಡಿದ್ರೆ ಅವರ ಪ್ರೇಮ ಇನ್ನೂ ಬಲಿತುಬಿಡುತ್ತೇಂತ ದೊಡ್ಡೋರಿಗೆ ಗೊತ್ತಿಲ್ಲ..ಪಾಪ.
*********
ಹುಡುಗ ಸಾಫ಼್ಟ್ವೇರ್ ಕೆಲಸದಲ್ಲಿದ್ದಾನೆ.. ತುಂಬು ಸಂಬಳ. ನನ್ನ ತಂಗಿ ಮಂಗಳಗೌರಿ, ಬಿ.ಎ. ಫ಼ೈನಲ್ ಇಯರ್. ಎಲ್ಲಿ ಪರಿಚಯವಾಯ್ತೂಂತ ನಂಗೆ ಗೊತ್ತಾಗಲಿಲ್ಲ. ತುಂಬ ದಿನಗಳಿಂದ ಅವರು ಮೀಟಿಂಗ್ ಮಾಡಿರಲಿಲ್ಲ.. ಇವತ್ತು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿಟ್ರು ನನ್ನ ಕೈಲಿ. ನನ್ನ ತಂಗಿ ಬಸ್ ಹತ್ತೋವರ್ಗೂ ಸುಮ್ಮನಿದ್ದೆ. ಹುಡುಗ ಮತ್ತೆ ಅವಳು ಜೀವನದಲ್ಲಿ ಸಿಗೋದೇ ಇಲ್ವೇನೋ ಅನ್ನುವಂತೆ ಟಾಟ ಮಾಡ್ತಿದ್ದ. ಬಸ್ ಹೊರಟೇಹೋಯಿತು. ಆಗ ನಾನು ಅವನನ್ನ ಹಿಡಿದೆ.
**********
ಸೇರೇಬಿಟ್ರಪ್ಪಾ ಒಂದು ಲಾರಿ ಜನ ನಮ್ಮನೇಲಿ ಅವತ್ತೊಂದು ಭಾನುವಾರ. ಅವರ ಮನೆ ಕಡೆಯವ್ರು.. ನಮ್ಮ ಮನೆಕಡೆಯವ್ರು. ನಾವು ತಲೆ ತಿಂತೀವೇ ಹೊರತು ಮಾಂಸ ತಿನ್ನಲ್ಲ. ಅವರು ತಲೇನೂ ತಿಂತಾರೆ ಮಾಂಸಾನೂ ತಿಂತಾರೆ. ಇದೇ ಈ ಪ್ರೇಮಕ್ಕೆ ಅಡ್ಡಿ.. ಕಬಾಬ್ ಮೆ ಹಡ್ಡಿ. ಎಲ್ಲ ದೊಡ್ಡೋರೂ ಸೇರಿ ಈ ಪ್ರೇಮವನ್ನ ಹೇಗೆಲ್ಲಾ ಮುಗಿಸಿಹಾಕಿಬಿಡಬೇಕೂಂತ ಸ್ಕೆಚ್ ಹಾಕ್ತಿದ್ದಾರೆ.. ಹುಡುಗ ನಿರಾಳಿ. ತಂಗಿ ರೂಮಿನ ಒಳಗಿದ್ಲು. ಅಮ್ಮ ನೊದಲು ಸೌಜನ್ಯಕ್ಕೆ ಪಾನಕ ಕೊಟ್ಲು. ಹುಡುಗ ಕುಡಿದ. ಆಮೇಲೆ ಮಜ್ಜಿಗೆ ಕೊಟ್ಲು.. ಹುಡುಗ ಅದನ್ನೂ ಕುಡಿದ. ಆಮೇಲೆ ಕಾಫ಼ಿ ಆಯ್ತು.. ಹುಡುಗ ಅದನ್ನೂ ಕುಡಿದ. ನಾನಾಗಲೇ ಡಿಸೈಡ್ ಮಾಡಿಬಿಟ್ಟೆ.. ನನ್ನ ತಂಗೀಗೆ ಇವನೊಳ್ಳೇ ಗಂಡು ಆಗ್ತಾನೇಂತ. ಪಾನಕ, ಮಜ್ಜಿಗೆ, ಕಾಫ಼ಿ ಎಂಬ ತದ್ವಿರುದ್ಧ ಭಾವಗಳನ್ನು ಕುಡಿದು ಜೀರ್ಣಿಸಿಕೊಳ್ತಾನೇಂದ್ರೆ ಜೀವನದಲ್ಲಿ ಏನನ್ನಾದ್ರೂ ಅರಗಿಸಿಕೊಳ್ತಾನೆ ಅನ್ನೋ ತರ್ಕ.
**********
ಈ ಘನ ಗಂಭೀರ ಸಮಸ್ಯೆ ಇತ್ಯರ್ಥವಾಗಲಿಲ್ಲ. ಹುಡುಗ ಇನ್ಮೇಲೆ ನಾನ್ವೆಜ್ ತಿನ್ನಲ್ಲಾಂತ ಅಂದ.. ಹುಡುಗಿ ಇನ್ಮೇಲೆ ಊಟಾನೇ ಮಾಡಲ್ಲಾಂತ ಹೆದರಿಸಿದ್ಲು. ಇವರ ಪ್ರೇಮವನ್ನ ಫ಼ುಟ್ಬಾಲ್ ಮಾಡ್ಕೊಂಡಿದ್ದ ದೊಡ್ಡೋರು ಇದರ ಬಗ್ಗೆ ತಲೆನೇ ಕೆಡಿಸಿಕೊಳ್ಳಲಿಲ್ಲ. ಹೀಗೆ ಎರಡು ಸೆಷನ್ ಆಯ್ತು.. ಏನೂ ನಿರ್ಧಾರವಾಗಲಿಲ್ಲ. ಸಮಸ್ಯೆ ಬಗೆಹರೆದದ್ದೇ ಬೇರೆ ಕಡೆಯಿಂದ.. ನನ್ನ ದೊಡ್ಡಮ್ಮನ ಮಗಳು ವೀಣಾ ಕಡೆಯಿಂದ. ಒಂದು ದಿನ ತನ್ನ ಮೂರೂವರೆ ವರ್ಷದ ಮಗೂನ ಎತ್ಕೊಂಡ್ ಸೆಷನ್ ಟೈಂಗೆ ಹಾಜರ್ರು. ತಾನೂ ಪ್ರೇಮಿಸಿ ಮದುವೆಯಾಗಿರುವುದಾಗಿಯೂ, ಗಂಡ-ಹೆಂಡತಿ ಅನ್ಯೋನ್ಯವಾಗಿರುವುದಾಗಿಯೂ.. ಪ್ರ್ಏಮ ದಿಟವಾಗಿದ್ದಲ್ಲಿ ಸಮಸ್ಯೆಗಳೇನೇ ಇದ್ದರೂ ತಾನೇತಾನಾಗಿ ಕರಗಿಹೋಗುವುದೆಂದು ಅದ್ಭುತವಾಗಿ ವಾದಿಸಿದಳು. ಅವಳ ಗಂಡನೂ ತಲೆಯಾಡಿಸಿದ. ಅವರ ಸಂತೃಪ್ತ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಅವಳ ಮಗು ಕೂತಿತ್ತು. ಎಲ್ಲರಿಗೂ ಕೇಳಿಸುತ್ತಿದಾದರೂ ತನಗೆ ತಾನೇ ಮಗು ಹಾಡಿಕೊಳ್ಳುತ್ತಿತ್ತು, ’..ಕರಿಯಾ.. ಐ ಲವ್ ಯೂ.. ಕರುನಾಡ ಮೇಲಾಣೆ..’
*********
ಹೀಗೆ ೮ ತಿಂಗಳ ಹಿಂದೆ ಮದುವೆಯಾಗಿ ನೆಮ್ಮದಿಯಾಗೇ ಜೀವಿಸ್ತಿರೋ ನನ್ನ ತಂಗಿ ಭಾವ ಮೊದಲನೇ ಯುಗಾದಿಗೇಂತ ಮೊನ್ನೆ ಮನೆಗೆ ಬಂದಿದ್ರು.. ಅಮ್ಮ ಅವರಿಗೆ ರೂಮ್ ರೆಡಿಮಾಡಿಕೊಡುವ ಜವಾಬ್ದಾರಿ ನನಗೆ ಹೊರಿಸಿದ್ದಳು. ಅಪ್ಪ ಅಳಿಯನ ಜೊತೆ ಕೂತು ಪಾನಕ, ಮಜ್ಜಿಗೆ, ಕಾಫ಼ಿಯ ಮಧ್ಯೆ ಒಂದು ಟೀ ಕುಡಿದ್ರೆ ಹೇಗಿರುತ್ತೇಂತ ಚರ್ಚಿಸುತ್ತಿದ್ದರು ಬಹುಶಃ..
**********
ಇಡೀ ಪ್ರಕರಣದಲ್ಲಿ ನಾನು ಗಮನಿಸಿದ್ದಿಷ್ಟು.. ಪ್ರೇಮ ನರಳಿದಾಗ ಬೇವು.. ಅರಳಿದಾಗ ಬೆಲ್ಲ. ಗಂಡ ಹೆಂಡತೀರು ಕಿತ್ತಾಡುವಾಗ ತಮಗಿಂತ ದುರದೃಷ್ಟರಿಲ್ಲಾಂತಾನೇ ಭಾವಿಸ್ತಾರೆ.. ಅದೇ ಮಿಲನದಲ್ಲಿ ತೊಡಗಿದ್ದಾಗ ತಮಗಿಂತ ಸುಖಿಗಳಿಲ್ಲಾಂತ ಅನಂದಿಸ್ತಾರೆ. ತಾವು ದುರದೃಷ್ಟವಂತರು, ತಾವು ಸುಖಿಗಳು ಎಂಬ ಎರಡು ವೈರುಧ್ಯ ಭಾವಗಳ ಮದುವೆಯೇ ದಾಂಪತ್ಯ.. ಯುಗಾದಿಯ ಬೇವು ಬೆಲ್ಲದ ಥರಾ..
**********
ಯುಗಾದಿಗೆ ಇಷ್ಟೆಲ್ಲಾ ಅರ್ಥವಿದೆಯಾ..?
ಸರ್ವರಿಗೂ ಸರ್ವಜಿತ್ ಸಂವತ್ಸರದ ಶುಭಾಶಯಗಳು. ಪಾಕ್ ಉಗ್ರಗಾಮಿಗಳನ್ನು ಬಿಟ್ಟು..
ನಿಮ್ಮವ,
ಗುರುಪ್ರಸಾದ್.