೧
ಕಾಸಾರದ ಕೆಸರಿನಿಂದ
ಪಾಚಿ ಜೊಂಡು ನೀರಿನಿಂದ
ವಿಮಲ ಕಮಲ ಮೇಲಕ್ಕೆದ್ದು
ಕೊಳದ ಎದೆಯನಮರಿ ಗೆದ್ದು
ದಲ ದಲ ದಲವರಳುವಂತೆ
ಥಳ ಥಳ ಥಳ ತೊಳಗುವಂತೆ
ಎತ್ತು ಮೇಲಕನ್ನನು
ಜೀವಪಥದಿ ಪತಿತನು.
೨
ಮುಳ್ಳು ಬೆಳೆದ ಕಂಟಿಯಲ್ಲಿ
ಅದರ ಹರಿತ ಕೊರೆತದಲ್ಲಿ
ಚೆಂಗುಲಾಬಿ ಚಿಮ್ಮಿ ಬಂದು
ಹಂಗುದೊರದು ಅರಳಿನಿಂದು
ಪಕಳೆ ಪಕಳೆ ತೆರೆಯುವಂತೆ
ಚೆಲುವನೊಲಿದು ಕರೆಯುವಂತೆ
ಎತ್ತು ಮೇಲಕೆನ್ನನು
ಕಂಟಕದಲಿ ನೊಂದನು.
೩
ಕಡಲಿನೊಡಲು ಕಾದು ಕಾದು
ಉಗಿಯ ರೂಪವಾಗಿ ನೆಗೆದು
ಮೋಡವಾಗಿ ಬಾನನಲೆದು
ಬಂಧವಿರದ ಲೀಲೆ ಮೆರೆದು
ಮಿಂಚಿ, ಗುಡುಗಿ, ಹನಿಯುವಂತೆ
ಮಳೆಯಬಿಲ್ಲ ತಳೆಯುವಂತೆ
ಎತ್ತು ಮೇಲಕೆನ್ನನು
ಜಾಡ್ಯದಲ್ಲಿ ಸುಪ್ತನು.
೪
ಗಗನದಲ್ಲಿ ಹಕ್ಕಿ ಹಾರೆ
ಪುಚ್ಚವೊಂದು ತಿರೆಗೆ ಜಾರೆ,
ಸಿಳ್ಳುಗಾಳಿ ಸುತ್ತಿ ಸುಳಿಯೆ
ಗರಿಯು ಮತ್ತೆ ಜೀವತಳೆಯೆ
ಭೋಂಕನೆದ್ದು ಹಾರುವಂತೆ
ಮುಗಿಲಿಗಿದಿರು ಸಾರುವಂತೆ
ಎತ್ತು ಮೇಲಕೆನ್ನನು
ನಿಸ್ಸಹಾಯನೀತನು.
೫
ಬೀದಿಬದಿಯ ಧೂಳಿನಲ್ಲಿ
ಗೆಳೆಯರೊಡನೆ ಮೇಳದಲ್ಲಿ
ಮನೆಯ ಮರೆತು ಆಡುತಿರಲು
ಮತ್ತೆ ನೆನಸಿ ಆಳುತಲಿರಲು
ತಾಯಿ ಕೂಸನೆತ್ತುವಂತೆ
ಮುದ್ದು ಮೆದ್ದು ಅಪ್ಪುವಂತೆ
ಎತ್ತು ಮೇಲಕೆನ್ನನು
ಮೋಹಗೊಂಡ ಮರುಳನು.
*****