ಈ ಮಲ್ಲಿಗೆ ಈ ಗುಲಾಬಿ
ಚೆಲುವಿನೆರಡು ಕಣ್ಣು-ಗೊಂಬೀ!
ರಾಗದಾ ಪರಾಗ ತುಂಬಿ
ಬದುಕು ಬಣ್ಣ ಪಡೆಯಿತಂಬಿ-
ನಸುಕು ತುಟಿಯ ತೆರೆದಿದೇ
ಜೀವರಸವನೆರೆದಿದೆ!
ಸ್ವರ್‍ಣಕಿರಣದರುಣ ಕಂದ
ಈ ಸುಗಂಧದಲ್ಲಿ ಮಿಂದ;
ಗಾಳಿ ತೀಡೆ ಮಂದ ಮಂದ
ಆನಂದವೊ ಅನಿರ್‍ಬಂಧ
ಹೂವಿನಂತೆ ನುಣ್ಣಗೆ-
ಕಂಡ ಕಣ್ಣು ತಣ್ಣಗೆ.
ಮಡಿಯನುಟ್ಟ ಮಲ್ಲಿ ತೆಲರು
ನೆಲದ ಗಲ್ಲ ಮುಟ್ಟೆ ಹಸುರು
ನಿಮಿರಿ ನಿಂತ ಕಲಾಕುಸುರು!
ಇಳೆಗಿಳಿದರೆ ಬಾನಿನವರು
ಮಂಜು ಹನಿಯ ರೂಪದಿ?
ಅಪ್ಸರೆಯರು ಶಾಪದಿ!
ಕಣ್ಣ ಬೆಳಕ ಕಣ್ಣು ಕುಡಿದು
ಹೃದಯದಂತರಾಳಕಿಳಿದು
ಒಲವಿನಗ್ನಿಕುಂಡದಲ್ಲಿ
ಕರಗಿ ಮಿರುಗಿ ಹೊಮ್ಮಿತಿಲ್ಲಿ
ಉಷಃಕಾಲದಾರತಿ
ಚೈತನ್ಯದ ಪ್ರದ್ಯುತಿ!
ಈ ಪ್ರಶಾಂತ ಕಾಲದಲ್ಲಿ
ಮೌನವೀಣೆ ಮಿಡಿವುದಿಲ್ಲಿ.
ಈ ಮಹಾಂತ ಧಾಮದಲ್ಲಿ
ಸ್ವರ್‍ಗ ಭಿಕ್ಷೆ ಬೇಡಿತಿಲ್ಲಿ
ಇಲ್ಲಿ ಎಲ್ಲ ಪ್ರೀತವು.
ಮಾತು ಕೂಡ ಗೀತವು!
ಬಂತು ತುಂಬಿ ಗಾನ ತುಳುಕಿ,
ಬಂತು ಚಿಟ್ಟೆ ಬಣ್ಣ ಸೋಕಿ;
ಒಂದು ಜೇನು ಹನಿಯ ಹುಡುಕಿ
ಒಂದು ಬಣ್ಣಕ್ಕಾಗಿ ಬೆದಕಿ-
ಭೃಂಗ ಗುಂಗು ಹಿಡಿಸಿತೋ!
ಚಿಟ್ಟೆ ನೃತ್ಯವಾಡಿತು.
ಎಲೆ ಮಲ್ಲಿಗೆ, ಚೆಲು ಗುಲಾಬಿ
ಬಾರ ಚಿಟ್ಟೆ, ಬಾರ ತುಂಬಿ
ಮನದ ತುಂಗ ಶೃಂಗದಲ್ಲಿ
ಎನ್ನ ಹೃದಯ ರಂಗದಲ್ಲಿ
ದ್ವೈತವಿರದ ಕೂಟದಲ್ಲಿ
ಆತ್ಮನಮರ ತೋಟದಲ್ಲಿ
ಸದಾನಂದದೂಟೆಯಲ್ಲಿ
ಹಾಡಿ ನೃತ್ಯವಾಡಿರೇ
ಚಿರಂಜೀವಿಯಾಗಿರಿ.
*****