ಸುತ್ತು ಹತ್ತೂ ನಿಟ್ಟಿನಿಂದ ಸುತ್ತಿಗೆ ಹಿಡಿದು-
ನೆತ್ತಿ ಬಿರಿಯುವ ಬಿಸಿಲು. ಕತ್ತೆತ್ತಿದರೆ ಮೇಲೆ
ಕಾದ ತಗಡಿನ ಮುಗಿಲು. ಕೆಳಗೆ ಕಮ್ಮರ ಶಾಲೆ
ಉಸಿರ ತಿದಿಯೊತ್ತಿನಲಿ ನಿಟ್ಟುಸಿರುಗಳ ಬೆಸೆದು-
[ಗಾಳಿಗೆಲ್ಲೋ ಗಲ್ಲು, ಇಲ್ಲವೆ ಗಡೀಪಾರು]
ಕುಲಿಮೆ ಇದ್ದಲಿಯೊಳಗೆ ಕಾದು, ಕರಗಿದೆ ಪ್ರಾಣ
ಬದುಕಿನಡಿಗಲ್ಲಿನಲಿ ನೂರು ನೋವಿನ ಭ್ರೂಣ-
ತಾಳ-ಕುಡ-ಕುಳಗಳನ್ನು ಹಣಿದು ಕುಡಿಸಿದ ನೀರು.
ಅಡ್ಡಮಳೆ, ಸಡ್ಡು ಹೊಡೆಯುವ ಸಿಡಿಲು, ಸಿಕ್ಕುದನು
ತೆಕ್ಕೆ ಬಡಿಯುವ ಗಾಳಿ, ಬಯಲು ಟರಪರ ಹರಿದು
ನುಚ್ಚು ನೂರ್‍ಕಡಿ-ಮಿಂಚು. ಗುಡುಗು-ಗುಮ್ಮಟ ಬಾನು.
[ನೆಮ್ಮದಿ ವಸುಂಧರೆಗೆ ಗಂಡುಮಗುವನು ಹಡೆದು.]
ಬತ್ತಿರುವ ಬಾವಿ ತೊರೆಬಿಟ್ಟ ಕೆಚ್ಚಲು-ಚಿಲುಮೆ
ದಾಹವಾರಲಿಕೆಷ್ಟು? ಎಷ್ಟಿದ್ದರೂ ಕಡಮೆ.
*****
