ಕವಿತೆ

ಇರುಳು
ನಕ್ಷತ್ರ ಮಿನುಗುತ್ತವೆ-
ಎಂದರೆ,
ಬೆಳಕು ಬಾಯ್‌ಬಿಟ್ಟು, ತುಟಿಗೆ ತುಟಿ
ಹಚ್ಚದೆ ಮಾತಾಡಿಕೊಳ್ಳುತ್ತವೆ. ಕವಿತೆ
ಕಿವಿಗೊಟ್ಟು ಕೇಳುತ್ತದೆ.

ಮಂದ ಬೆಳಕಿನಲ್ಲಿ ಗಿರಿ ಶಿಖರ
ಗಿರಿಗಿರಿ ಬುಗುರಿಯಾಡಿ
ಇದ್ದಲ್ಲೆ ನಿದ್ದೆ ಹೋಗುತ್ತವೆ.
ಗಿಡಮರಗಳು ಆಕಾಶದಲ್ಲಿ
ಬೇಕಾದ ಹಾಗೆ ಹಾರಾಡಿ
ಬಂದು ತೂಕಡಿಸುತ್ತವೆ.
ಮರೆಯಲ್ಲಿ ನಿಂತು ಕವಿತೆ
ಬಟ್ಟಲುಗಣ್ಣು ತೆರೆದು ನೋಡುತ್ತದೆ.

ಹಳ್ಳ -ಹೊಳೆ ನಿರಂತರ ಹರಿದು
ಕಡಲ ಒಡ ಹಾಯ್ದು
ಮಿಂಚಿ, ಗುಡುಗಿ, ಕಾವ್ಯಮೇಘದಮೋಘ ಸಾಲು
ಅನುಸರಣಿಸಿ ಮಣ್ಣರಳಿಸುತ್ತದೆ.

ಹೂ- ಮಕ್ಕಳ ನಗೆಯರಳಿ, ಕೊಳದಲ್ಲಿ
ಮೀನು ಹೊಡಮರಳಿ;
ಬಾಗಿ ನೇಗಿಲು ಹೊಡೆದು ಇಳಿದ ಬೆವರಿಗೆ
ಮುತ್ತು-ಕಾಳು ತೆನೆ ಹಿಡಿದು
ಕವಿತೆ ಹೊಳೆಯುತ್ತದೆ.

ಕಸದ ತೊಟ್ಟಿಗೆ ಹಸಿವೆ
ಮುಗಿಬಿದ್ದು ಅನ್ನದಗುಳನು ಹೆಕ್ಕಿ
ತೆಗೆವಾಗ-
ಮಂತ್ರಿಗಿಂದ್ರ ಪದವಿಯ ಭೋಗ;
ಕವಿತೆ ತುಟಿ ಕಚ್ಚಿ ತಲೆ ತಗ್ಗಿಸುತ್ತದೆ.

ಹಲವು ದಾರಿಗೆ ಹಲವು ಗುರಿ ನೇರೆ-ವಕ್ರ,
ಅತಿಕ್ರಮಿಸಿದ ವೇಗ ಎಡರು-ತೊಡರಾಗಿ
ಅಪಘಾತ; ಲಯ ತಪ್ಪಿಹೋದ ಕವಿತೆ
ಮಾನವ ಭಗ್ನ ಪ್ರತಿಮೆ.

ಕಣ್ಣಲ್ಲಿ ಕಣ್ಣಿಟ್ಟು ಕಡೆದ ಶಿಲಾ-
ಬಾಲಿಕೆಯರೆದ್ದು ಬರುವಂತೆ
ವಾದ್ಯವೃಂದೋನ್ಮಾದವಿಳಿದಾಗ, ಬಳಿಗೆ
ನುಸುಳಿತು ಕಾವ್ಯದೇಕತಾರಿ.

ಬಟ್ಟ ಬಯಲಿನ ನಡುವೆ ಬೆಟ್ಟ-
ಬಂಡೆ ಅಖಂಡ ಗೊಮ್ಮಟ ಕಲೆ:
ನೆಲದಿಂದ ಮುಗಿಲವರೆಗೂ
ಕವಿತೆ, ಬರಿಬತ್ತಲೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ