ಕಾವ್ಯದ ಆತ್ಮಾನುಸಂಧಾನ

ಕಣ್ಣು ತಪ್ಪಿಸಿ ಅಜ್ಜನ ನಿಮಿತ್ಯದ ಕವಡೆ
ಆಡಿದ್ದು ಉಂಟು;
ಕಣ್ಮರೆಯಾದದ್ದನ್ನು ಹಳೆಮನೆಯ ನಾಗಂದಿಗೆಯಲ್ಲಿ ಕಂಡು
ಈಗ ಅನಿಮಿತ್ತ ನನಗೆ ನಾನೇ ಆಡಿಕೊಳ್ಳುವ ವಾರಿಧಿಯ ಅವಶೇಷವಾದ
ಈ ವಿಶೇಷ

ಮುಷ್ಠಿಯಲ್ಲಿ ಜಾರುವ ನಯದ ತಕರಾರು ಎನ್ನಿಸಿ
ಹಾರಿಸಿ
ಬಾಲಕನಂತೆ ಚಪ್ಪಾಳೆ ತಟ್ಟಿ
ಚಾಚಿದ ಮುಂಗೈ ಮೇಲೆ ಬಾಲ್ಯದಲ್ಲಿ ಕರಗತವಾದ ಕೌಶಲ್ಯದಲ್ಲಿ ಹಿಡಿದು
ಮುಂಗೈಯಿಂದ ಇನ್ನೂ ಮೇಲೆ ಎಸೆದು
ಸಾವಾಕಾಶದಲ್ಲಿ ಆಚೀಚೆ ಆಡಿಸಿ ತಡೆದು
ಮತ್ತೆ ಮುಂಗೈ ಮೇಲೆ ತಂಗಿಸಿಕೊಂಡು
ಇನ್ನೂ ಮೇಲೆ ಮೇಲೆ ಚಿಮ್ಮಿಸಿ ಮತ್ತೆ ಮತ್ತೆ ಪಡೆದು
ತೊಡೆ ತಟ್ಟಿ, ತಟ್ಟಿ, ಚಾಚಿ ಕಾಯುವ ಮುಂಗೈಗೆ ಮುದ ತಂದದ್ದನ್ನು
ಕ್ಷಣದಲ್ಲಿ ಹಾರಿಸಿ
ಮುಂಗೈ ಮುಷ್ಟಿಯಲ್ಲಿ ಈಗ ಅಧೀನವೆನ್ನಿಸುವ
ಅನ್ಯಕ್ಕೆ ಹಿಗ್ಗುವುದು

ತೆರೆದ ಅಂಗೈಮೇಲೆ ಹೊಳೆಯುವ ನಿಮಿತ್ಯದ ಪರವಸ್ತುವಿಗೇ
ಆಸೆ ಹುಟ್ಟಿಸುವಂತೆ ನೋನುತ್ತ
ಇಕೋ ದೇವರೇ ಎಂದು
ಆಕಾಶಕ್ಕೆ ಎಸೆದು
ಅವಸರದ ಬೆರಳುಗಳು ಹೊಂಚಿ ನರ್‍ತಿಸುವ ನಿರೀಕ್ಷೆಯಲ್ಲಿ
ಮಗುಚಿ ಬೀಳುವುದೆ ಸಹಜವಾದ ಪದಾರ್‍ಥ
ಅಂಗಾತ ಬಿದ್ದು ನಾಲ್ಕು ಕಣ್ಣುಗಳಾಗಿ ಒದಗಲೆಂದು
ಪ್ರಾಣವನ್ನೆ ಕಣ್ಣಲ್ಲಿ ತಂದು ಹಸಿಯುವುದು

ನಾನು ಆಡುವ ಮಾತು ನನ್ನನ್ನೇ ಕಾಣಬಲ್ಲವೆ?

ಕಷ್ಟ, ಸಂಕಲ್ಪ ಸಾಲದು; ಅದೃಷ್ಟ ಬೇಕು
*****