ದ್ವಂದ್ವ

ಎಲ್ಲಾ ಬಿಟ್ಟು ತಲೆಯೊಳಗೇ ಏಕೆ ಸುರುವಾಯ್ತೊ
ಹಾಳಾದ ಕಾರಖಾನೆ !
ನೂರು ಯಂತ್ರದ ಗಾಲಿ ಚೀತ್ಕರಿಸಿ ಓಡುತಿವೆ ಇಲ್ಲಿ ಒಂದೇಸವನೆ
ಹಗಲಿರುಳು ಬಿಟ್ಟೂ ಬಿಡದೆ ಕಪ್ಪು ಹೊಗೆಯುಗುಳಿ
ಅಳಿಸಿಬಿಟ್ಟಿದೆ ಅಗೊ ಆಕಾಶದ ನಕಾಶವನ್ನೆ !
ಎಲ್ಲಿ ಬಿರುಗಾಳಿಯಲಿ ಮಗುಚಿ ಮೋಡದ ದೋಣಿ
ಚಿಕ್ಕೆ ತಳಕಂಡವೋ,-
ಹಗಲು ಕಾಮನಬಿಲ್ಲ ಸೇತುವೆಯು ಮುರಿದಿರುಳ
ರಹದಾರಿ ಬಂದಾಯಿತೋ-
ಇಲ್ಲಿಯವರಿಗೇ ಮೊದಲು ನೆಲೆಯಿಲ್ಲ
ಅಲ್ಲಿಯವರನು ಕುರಿತ ಯೋಚನೆಗೆಲ್ಲಿ ಅವಕಾಶ ?
ಇಂದಿನ ಮುಖ್ಯ ರಾದ್ದಾಂತವಾಗಿದೆ ನೋಡಿ
ಉಳಿದದ್ದು ಮುಂದೆ ನೋಡೋಣ ಸಾವಕಾಶ.
* * * *
ಸೆಳಕಿನ ಹಿಂದೆ ಸೆಳಕು ಬೆಳಕಿನ ಹಿಂದೆ ಸೆಳಕು
ನಡುನಡುವೆ ಕುಲುಕುತಿಹುದಲ್ಲ ಇದು ಯಾವ ಬೆಳಕು !
ದಿಕ್ಕು ದಿಕ್ಕುಗಳಿಂದ ತೂರಿಬಿಟ್ಟಂತಿಹುದು ಹಸುರು ಸರ್ಚಲೈಟು
ಕಾಡುನಾಡೆನ್ನದೆಯೆ ಹುಲ್ಲು ಹಸುರಾಣಿಯಲಿ ಅದರ ಝೋಕು !
ಒಳಗೆ ಬೆಚ್ಚಗೆ ಕುಳಿತು ಚಹವ ಗುಟುಕರಿಸುತ್ತ
ಆಗಾಗ ಕಿಟಕಿಯಲಿ ಹಣಿಕಿದರೆ ಸಾಕು
ಇನ್ನೇನು ಬೇಕು ?-
ಆಹಾ ! ಹೀಗೆಯೇ ಸಾಗಲಿ ಈ ಜಗತ್ತು.

ಮರದ ಪೊಟರೆಯೊಳೊಂದೆ ಗಿಳಿಯಮರಿ-ಕಿಲಿ ಕಿಲಿ
ಜಿನುಗು ಮಳೆಯಲಿ ತೋಯ್ದು ತೆಪ್ಪಗಿವೆ ಉಳಿದೆಲ್ಲ ಹಕ್ಕಿಪಕ್ಕಿ
ತೊಟ್ಟಿಲಲಿ ಮಗುವಿನೆಳನಗೆಯ ತಲಕಾವೇರಿ !
ಅಂಗಳದ ಕಸಗಂಟೆಯಲಿ ರಸದ ವಿಜಯಧ್ವಜವನೆತ್ತಿಗೆವೆ ಗುಲಾಬಾಕ್ಷಿ;
‘ರಸೋವೈಸಃ’
ಮದುಗುಣಿಕೆ ಊದಿವೆ ತುತೂತುತ್ತು ತೂರಿ.
ಕಂಪೌಂಡುಗೋಡೆಯ ಮೇಲು ಬರೆದಿದ ಹಸಿರು ತನ್ನ ಸಂಪೂರ್‍ಣ ಹೆಸರು.
ಬೆಳ್ಳಗೆ ನಿರಿಯ ಚಿಮ್ಮುತ ಬಂದು
ನೆಲವ ಮೋಹಿಸಿ ಮತ್ತೆ ಬಾನಿಗೇರಿದೆ ಮಳೆಯಥಳಕು !
ನೀರೆಲ್ಲ ಬಸಿದು ರೇವೆ ಮಣ್ಣನು ಹರವಿ
ನಿಶ್ಚಿಂತ ನಿಂತಿಹುದು ಜೀವಝರಿಯು ;
ತೊಳೆದ ಮನಸಿನ ತೋಟದಲ್ಲಿ ಮೂಡಿವೆ ನೂರು ಡೇರೆಹೂ ಮರಿನೇಸರು.
ಎದೆ ಎದೆಗಳಲ್ಲಿ ಕುಣಿದು ಕೋಲಾಟವಾಡಿದೆ ಅದೇ :
‘ಚೆಲುವಯ್ಯ ಚೆಲುವೋ…. ಚೆಲುವಯ್ಯ ಚೆಲುವೋ ’
* * * *
ಅದಕಾಗಿ ಇದಕ್ಕಾಗಿ ಬೆದಕುತಿಹುದಲ್ಲ ಮನ-
ಅದಕಿಹುದೆ ಬೇರೆ ಬದುಕು ?
ತೊಟ್ಟು ಕುಣಿಯುತ್ತಿಹುದು ನಿಮಿಷ ನಿಮಿಷಕ್ಕೊಂದು ಬೇರೆ ಪೋಷಾಕು !
ಸಾಧನೆ ಸತ್ಯದಾರಾಧನೆಗಳೆಂದರದಕೆ ತಲೆಬೇನೆ,
ಈಗಿರುವ ಮೆದುಳೊ ? ಖಾಲಿ ಖಜಾನೆ.
ಇಷ್ಟರ ಮೇಲೆ ಹೇಗೆ ನಡೆದೀತು, ವರ್ಷಗಟ್ಟಲೆ ಈ ನಮ್ಮ ಕಾರಖಾನೆ-
ಇಲ್ಲವೆಂದರು ಬೇರೆ ಎಲ್ಲಿಂದ ತರುವದಿದೆ ಹೇಳಿ,
ಅದು ಮೊಟ್ಟ ಮೊದಲೇ ಬ್ರಹ್ಮ ಕೊಟ್ಟ ಆಸ್ತಿ !
ಸಂಪು ಹೂಡಿದರೂ ನಡೆಯುವುದಿಲ್ಲ
ಅದರ ಮಾಲಕನು ಅಷ್ಟಿಷ್ಟಕ್ಕೇ ಹಣಿಯುವುದಿಲ್ಲ ಮಾರಾಯಾ
ಆದುದಾಗಲಿ, ಕೊನೆಗೆ ಆಗಿಯೇ ಬಿಡಲಿ ಕುಸ್ತಿ
ನೋಡೋಣ ಒಂದು ಕೈ !
ಗೆದ್ದರೂ ಸೈ, ಗೆದೆಯದಿದ್ದರೂ ಸೈ.
*****