ತಾಯೆ ನಿನ್ನ ಮಡಿಲೊಳು

ನಿನ್ನ ಬಸಿರೊಳೊಗೆದು ಬಂದು
ಎದೆಯ ಹಾಲ ಕುಡಿದು ನಿ೦ದು
ತೋಳ ತೊಟ್ಟಿಲಲ್ಲಿ ತೂಗಿ ಲಾಲಿಯಾಡಿದೆ;

ನಿನ್ನ ಕರುಣ ರಸದೊಳಾಳ್ದು
ತೊದಲು ನುಡಿಯ ಜಾಲ ನೆಯ್ದು
ಹಸುಳೆತನದ ಹಾಲುಗಡಲ ಸವಿಯ ನೋಡಿದೆ.


ನಿನ್ನ ಮುತ್ತು ಸವಿಯ ತುತ್ತು
ದೂರಗೊಳಿಸಿತೆಲ್ಲ ಕುತ್ತು
ಎನ್ನನೊಂದು ರೂಪುಮಾಡಿ ಭೂಮಿಗಿಳಿಸಿತು;

ನೀನು ಪೇಳ್ದ ಕತೆಯ ತಂತ್ರ
ಸವಿಯ ಹಾಡಲೊರೆದ ಮಂತ್ರ
ಬಾಳ ಹಣತೆಯಲ್ಲಿ ತಾಯೆ; ಬೆಳಕ ಚಿಮ್ಮಿತು.


ನಿನ್ನ ಲಲಿತ ನುಡಿಯ ತತ್ತ್ವ
ನಡೆಯಲಿದ್ದ ಧೀರ ಸತ್ತ್ವ
ಎನ್ನ ಪ್ರಾಣಪಾತ್ರೆಯಲ್ಲಿ ಬೆರೆತು ಬಂದಿತು;

ಮಮತೆಯಲ್ಲಿ ಮೂರ್ತಿಗೊಂಡ
ಸಮತೆಯಲ್ಲಿ ಸ್ಫೂರ್ತಿಗೊಂಡ
ದಿವ್ಯತೇಜದಲ್ಲಿ ತಾಯೆ, ಕಾವ್ಯ ಮೊಳೆಯಿತು.


ಅಂದು ತೊದಲು ನುಡಿದ ಕಂದ
ಇಂದು ಹಾಡ ಪಡೆದು ಬಂದ-
ನಂತ ಕರುಣೆ ಅನ್ನಪೂರ್ಣೆ ಕೇಳಲಾಪೆಯಾ?

ಪ್ರೇಮಜೀವಿ ಪಟ್ಟ ಪಾಡು
ಕರುಳ ಬಗೆದು ಬಂದ ಹಾಡು
ತಾಯೆ! ನಿನ್ನ ಮಡಿಲೊಳಿಡಲು ಇಂಬುಗೊಡುವೆಯಾ?
*****