ಹರ ಹರ ಮಹಾದೇವ!
ಒಡಲ ಹರಿದು ಛಿದ್ರಗೊಳಿಸಿದ ವಿಷ ಕಂಠ.
ಕಂಠದ ವಿಷ ನರ ನಾಡಿಗಳಲ್ಲಿ-
ಕಹಿ ಮನಸ್ಸಿನ ಮೈಯೆಲ್ಲ ನೀಲಿ;
ಆಕಾಶದುದ್ದಗಲಕ್ಕೂ ಹರಡಿ ನೀಲಿ
ಸಮುದ್ರದಾಳದ ಹವಳ ಮುತ್ತುಗಳೆಲ್ಲ
ನೀಲಿ ನೀಲಿ.
ಸಾವ ತೊಟ್ಟಿಲಿನಲ್ಲಿ ಇಟ್ಟು ತೂಗುವಹೊತ್ತು
ಹಾಯಿ ಹಾಯಿ, ಜೋ ಜೋ ಜೋಕೆ ಕಂದ!
ರಕ್ತ ಮಾಂಸದ ಮಡುವಿನಲ್ಲೇ
ಹೊಳೆಯುತ್ತದೆ ಕಸಾಯಿಯ ಖಡ್ಗ.
ನಾಭಿಯಿಂದೆರಡಿಂಚು ಕೆಳಗೆ..
ಥಳ ಥಳಿಸುವ ಮೊನಚು,
ಸರ್ರಂತ ಸಿಗಿದು…
ಅಯ್ಯೋ!!
ಅನ್ನುವುದಕ್ಕೆ ಮೊದಲೇ
ಪುರುಷಾರ್ಥ ಸಿದ್ಧಿ.
ಮೊಲೆಗೂ, ಯೋನಿಗೂ, ಮೊಲೆ ಹಾಲಿಗೂ,
ತಡೆ ಹಿಡಿದ ರಕ್ತ ಸ್ರಾವಕ್ಕೂ;
ಬೇರೆ ಬೇರೆಯೇ ಅರ್ಥ
ಧರ್ಮಕಾರಣದಲ್ಲಿ.
ಕೈ ಕಾಲು ರುಂಡ ಮುಂಡಗಳ ಜೊತೆ
ಪ್ರೀತಿ, ಪ್ರೇಮ, ದುಗುಡ, ದುಮ್ಮಾನಗಳೂ
ರಕ್ತ ಸಿಕ್ತ!
ನೋವಿಗೊಂದಷ್ಟು ನಿದ್ದೆ
ದ್ವೇಷದ ಬದಲು ಕೊಂಚ ಕಣ್ಣೀರು
ಹೃದಯದಲ್ಲಿ ಒಂದು ಚೂರು ಕರುಣೆ,
ಇರುವುದು ಧರ್ಮ!
ಇಲ್ಲದಿದ್ದರೆ ಎಲ್ಲವೂ ಅಧರ್ಮ
*****