ಜಾಜಿ – ೨

ದೂರ ದೂರದ ತನಕ
ದಾರಿ ಕಾಯುವ ಹುಡುಗಿ
ಏನು ಹೇಳೆ ನಿನ್ನ ಮನದ ಅಳಲು.

ಯಾವ ಊರಿನ ಅವನು!
ಯಾವ ಊರಿನ ಇವಳು!

ಆಲಿಕಲ್ಲಿನ ಮಳೆಯ ಕಪ್ಪು ಮೋಡ ಜಾಡು
ನದಿಯ ನಾಡಿಯಲ್ಲೆಲ್ಲಾ ತಣ್ಣನೆಯ ಕೊರೆತ.

ಒಂದೂರಿನಲ್ಲಿ ಒಂದು ಸಂಜೆ…..
ಅವಳಿಗೂ ತಿಳಿದಿತ್ತು ಅವನ ಮಿಡಿತ.

ಅವನ ಉಸಿರಿನ ಬಿಸಿಯು
ಗಲ್ಲದಂಚಿನ ಮೇಲೆ
ತೋರುಬೆರಳಿನ ಸ್ಪರ್ಷ
ತೋಳುಗಳ ಮೇಲೆ
ಹಾಗೆ ಬೆಚ್ಚಗೆ ಕುಳಿತು ಕಾಡಬೇಕೆ?

ತಣ್ಣಗೆ ಸುಳಿದು, ಸಣ್ಣಗೆ ಸುಯ್‌ಗುಡುತ್ತಾ
ಎಲ್ಲರ ಮಲಗು ಕೋಣೆಯಲ್ಲೂ
ಹಣಕಿ ಹಾಯುತ್ತದೆ
ಲಜ್ಜೆಗೆಟ್ಟ ಗಾಳಿ.

ರಾತ್ರಿ ಕಣ್ಣಿನ ತುಂಬ
ಚುಕ್ಕಿ ಚಂದ್ರನ ತಂಪು
ಸುಳಿದಿತ್ತು ಗಾಳಿಯಲಿ ಜಾಜಿ ಕಂಪು.
ಉರಿವ ಸೂರ್ಯನ ಕೆಳಗೆ
ಜಾಜಿ ಹೂವಿನ ಪ್ರೀತಿ!
ಹರಿವ ನದಿಗೇಕೆ ಹೊತ್ತ ಚಿಂತೆ?

ಈಗ ಜಾಜಿಯ ಮಟ್ಟಿ
ಮೈಯ್ಯೆಲ್ಲ ಮುಳ್ಳು
ಹಸಿರು ತೊಟ್ಟಿನ ತುದಿಗೆ
ಕಪ್ಪು ಗೊಂಚಲ ಕಾಯಿ
ಒಳಗೆ ಕರಿ ಬೀಜ.

ಬಿತ್ತಿದರೆ ಹುಟ್ಟುವುದೆ ಮತ್ತೆ ಕನಸು?
ನವಿರು ಹಳದಿಯಹಾಗೆ,
ಅವನ ಸ್ಪರ್ಷದ ಹಾಗೆ
ಮಕರಂದ ಚೆಲ್ಲುವುದೆ ಗಾಳಿಯಲ್ಲಿ.
*****