ಮಾಯಾ ಕೋಲಾಹಲ

ಮಮಕಾರ ಮೋಹಿನಿಯರೊಸೆದಿಟ್ಟ ಮೂರ್ತಿಯೆನೆ
ಚೆಲುವು ಮೈವೆತ್ತಂತೆ, ರತಿಯ ಪುತ್ಥಳಿಯಂತೆ
ಜನಿಸಿರ್ದ ಮಾಯೆ ಕಳೆಯೇರಿ ಬಗೆಗೊಳ್ಳುತ್ತಿರೆ,
ವಿಧ ವಿಧದ ಹಾವಭಾವಂಗಳಲಿ ಭಣಿತೆಯಲಿ
ಎಸೆದಿರಲು, ಜ್ಞಾನಿ ನಿರಹಂಕಾರರಮಿತ ತಪ-
ಸೂನು ಶಿವರೂಪಾದ ಅಲ್ಲಮಂ ಮಧುಕೇಶ
ಗುಡಿಯಲ್ಲಿ ನುಡಿಸುತಿರೆ ಮದ್ದಳೆಯ ಸೊಲ್ಲಿಗನು-
ಮೋದಿಸುತ ಮೋಹಿಸಿದಳಾ ಮಾಯೆ ಕಾಮಿನಿಯು!

ಪಾರ್ವತಿಯ ತಾಮಸದ ಗುಣಗಳಿಕೆ ಮಾಯೆಯಲಿ
ಮದನಾಗ್ನಿ ಹೊತ್ತಿತೆನೆ ಬೇಟವಟಮಟಿಸುತಿರೆ,
ಅಲ್ಲಮನು ಕಂಗಳಿಗೆ ಮಿಂಚುತಿರೆ, ಚುಂಬನಕೆ
ನಿಲುಕದಿರೆ, ಅಪ್ಪುಗೆಗೆ ಸಿಲುಕದಿರೆ, ಬರಿ ಬಯಲು
ಚಪ್ಪರಿಸಿ ಮೈ ಸೋತ ಮಾಯೆ ಚಿಂತಾಕುಲಂ
ಭಾವಿಸಲು ನಿರ್ವಯಲು ಮಾಯೆ ಕೋಲಾಹಲಂ.
*****