ವರ್‍ತುಳ

ಈ ಮನದ ಮಧ್ಯಬಿಂದುವಿನಿಂದ ಹೊರಟ ವ-
ರ್‍ತುಳ ರೇಖೆ ಜೀವ ಜೀವಿಯ ಸುತ್ತಿ, ಬಾನಲೆವ
ಬೆಳಕನಾಲಿಂಗಿಸಿದೆ; ಗಾಳಿಯಲಿ ಯಾವುದೋ
ಗುಡಿಯ ಘಂಟಾನಾದ, ನಾದದೊಳಗೂ ಪ್ರತಿಮೆ.

ನೆಳಲು ಬೆಳಕಿನ ನಡುವೆ ಮಡುವಾಗಿ ಮಲಗಿಹುದು
ಯುಗ ಯುಗದ ನೆನಹು; ಬಿಟ್ಟೂ ಬಿಡದೆ ಜಿನುಗುವುದು.
ಒಂದು ಅಂಗುಲ ಜಾಗ ಬಿಡದೆ ಹೆಣೆದಿವೆ ತಂತಿ.
ತಂದೆ-ಮಗು, ಮಗು-ತಂದೆ ‘ಇಲ್ಲಿಗೇಕೈತಂದೆ?’

ಎಲ್ಲಿ ಹುಡುಕಿದರು ಕುಂದು ಕಲೆ ತೋರದಾಕಾಶ,
ಅಂಚಿನಿಂದಂಚಿಗೆ ರೆಕ್ಕೆ ಬೀಸೆ ಬೆಳ್ಳಕ್ಕಿ-
ಅಲ್ಲೆ ಕಾಮನ ಬಿಲ್ಲು, ಮೋಡ-ಮಿಂಚಿನ ಸೆಳೆತ
ಗುಡುಗು-ಸಿಡಿಲಿನ ಹೊಂಚು, ಕೊನೆಗೆ ಕರುಣಾವೃಷ್ಟಿ.

ತ್ರಿಕೋಣ, ಚೌಕೋಣ, ಅಷ್ಟಕೋಣದ ಸುತ್ತು
ವರ್‍ತುಳ, ಸೃಷ್ಟಿ ಪರಿಘದ ನಡುವ ದೃಷ್ಟಿ ಬಿಂದು.
*****