ಯಾಕೆ ಬಂದಿರಿ ನೀವು
ನಾವಿಲ್ಲದೂರಿಗೆ
ನಮ್ಮ ನಸರಸುತ್ತಾ ಕೇರಿ ಕೇರಿ.
ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ
ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು.
ನಾವಿಲ್ಲದೂರಲ್ಲಿ
ನೀವೆ ನಿಮ್ಮನು ಕೂಗಿ
ತಿರುವಿ ನೋಡುವಿರಲ್ಲ
ನಾವು ಕರೆದಂತೆ!
ನಿಮ್ಮ ಮಾತನೆ ಆಡಿ, ನಮ್ಮ ಮಾತೆನ್ನುವಿರಿ
ನಿಮ್ಮ ಹಾಡಿಗೆ ನೀವೇ ಮೋಡಿ ಹೋಗುವಿರಿ
ಹಿಡದ ಹಸಿರಲ್ಲಿ
ಕೊಳದ ನೀರಲ್ಲಿ
ಎದೆಯ ಉಸಿರಲ್ಲಿ
ಬಾನ ಅಂಗಳದಲ್ಲಿ
ಹುಡುಕುವಿರಿ ನಮ್ಮ ಸುಳಿವು
ಕೂಗಿ ಕರೆಯುವುವಿರಿ ನಮ್ಮನ್ನು ಮತ್ತೆ ಮತ್ತೆ.
ಗಾಳಿಯಲಿ ನಿಮ್ಮದನಿ ತೂರಿಬಿಟ್ಟಿರಿ,
ಅದು ಬೆಟ್ಟಕ್ಕೆ ಡಿಕ್ಕಿ ಹೊಡೆದು;
ತಿರುಗಿ ಬಂದರೆ ಮತ್ತೆ ನಮ್ಮ ಹಾಡೆನ್ನುವಿರಿ
ನಿಮ್ಮ ಹಾಡಿಯಲ್ಲೆಲ್ಲೂ ನಾವು ಇಲ್ಲ.
ನಮ್ಮ ಹೆಸರೇನೆಂದು
ಇನ್ನೂ ತಿಳಿಯದ ನೀವು
ನಿಮ್ಮ ಹೆಸರನ್ನೇ ನಮಗಿಟ್ಟಿರಿ.
ನಮ್ಮನ್ನು ಕಾಣುವಿರಿ ನಿಮ್ಮ ಬಿಂಬದ ಒಳಗೆ
ನಂಬುವಿರಿ ನಿಮ್ಮಾಸೆ ಕಾಣಬಯಸಿದ್ದು.
ನಾವು ಬಂದರೆ ಮರಳಿ
ಮರೆತ ಊರಿನ ಕಡೆಗೆ
ಕಾಣುವುದು ಎಲ್ಲೆಲ್ಲೂ ನಿಮ್ಮ ಛಾಪು.
ಈಗ ಇದು ನಿಮ್ಮೂರು(?)
ಊರ ಮುಂಬಾಗಿಲಿಗೇ
ಬರೆದು ಇಟ್ಟಿದ್ದೀರಿ ನಿಮ್ಮ ಹೆಸರು(!)
ಇಲ್ಲಂತೂ ಗಾಳಿಯಲೂ, ನೀರಲ್ಲೂ, ಹಾಡಲ್ಲೂ
ಎಲ್ಲೆಲ್ಲೂ ನಿಮ್ಮ ಉಸಿರೇ.
ನಿಮ್ಮ ಕನ್ನಡಿಯಲ್ಲಿ ನಮ್ಮ ಬಿಂಬವು ಕೂಡ
ಕಾಣುವುದು ಥೇಟು ನಿಮ್ಮ ಹಾಗೇ.
ನಮ್ಮನ್ನು ಅರಸುತ್ತಾ
ಅರಸು-ಆಟವನಾಡಿ
ಹೂಡಿಬಿಟ್ಟಿರಿ ಇಲ್ಲೂ ನಿಮ್ಮ ಸಾಮ್ರಾಜ್ಯ.
ಮರಳಿ ಬಾರೆವು ಇಲ್ಲಿ, ಈ ಊರು ನಮ್ಮದಲ್ಲ;
ನಾವು ನಿಮ್ಮಂತಿಲ್ಲ, ನಿಮಗೇಕೆ ತಿಳಿದಿಲ್ಲ.
*****