ಸಮಾಧಿ ದರ್‍ಶನ

ಆ ಕೋಣೆಯಿಂದ ಕೆಳಗಿಳಿದು ಬಂದು ಈ ಮೇಣೆಯಲ್ಲಿ ಕುಳಿತು
ಎಲ್ಲ ವೀಣೆದನಿ ಹಿಂದೆ ಇರುವ ಓಂಕಾರದಲ್ಲಿ ಬೆರೆತು,
ಸ್ವಪ್ರಕಾಶದಲಿ ಇರುಳ ಬೆಳಗಿ, ಬೆಳಗಿನಲಿ ಶಾಂತವಾಯ್ತು
ನೂರು ಚಿಕ್ಕೆ ಚಂದ್ರಮರ ಪಕ್ಕದಲಿ ಚೊಕ್ಕ ಬೆಳ್ಳಿ ಬೆಳಕು.

ಅಲ್ಲಿ ಕಡಲ ತೆರೆತೆರೆಗಳೆದ್ದು ಬರಿ ನೊರೆಯ ಚೆಲ್ಲುತಿಹವು
ಇಲ್ಲಿ ಮೌನ ಮಹದಾಳಕಿಳಿದು ಮುತ್ತುಗಳ ಹುಡುಕುತಿಹುದು.
ಅಲ್ಲಿ ಏರಿ ಮುಗಿಲಲ್ಲಿ ತೂರಿ, ಹಗಲಿರುಳು ಸುತ್ತುತಿಹರು-
ಇದರ ಬಳಿಗೆ ಬಲವಂದು ಬೆಳಕು-ಹೆಜ್ಜೆಗಳ ಕಾಂಬ ಹಲರು.

ಅಲ್ಲಿ ಉಸಿರ ಕಟ್ಟಿಸುವ ಹೊಗೆಯು, ಧಗಧಗಿಸುವುರಿಯು ಒಳಗೆ,
ಇಲ್ಲಿ ಜೀವದುಸಿರಿನಲಿ ಬಸಿರು ಮಗಮಗಿಸುತಿಹುದು ಮರೆಗೆ.
ಅಲ್ಲಿ ಗಾಳಿ ಭೋರ್‍ಗರೆದು ಕಣ್ಣು, ಕಿವಿ, ಮೂಗಿನಲ್ಲಿ ಧೂಳಿ
ಇಲ್ಲಿ ಮಂದ ಸೌಗಂಧದೆಲರು ವಸುಧೈವ ದೈವಕೇಳಿ.

ಅಲ್ಲಿ ಗಿರಣಿ ಬಂಬುಗಳ ಧೂಮ ಬಾನೆಲ್ಲ ಕಪ್ಪು ಕಲೆಯು,
ಇಲ್ಲಿ ಊದುಬತ್ತಿಯಲ್ಲಿ ಊರ್‍ಧ್ವಮತಿ ನೀಲವೊಂದೆ ನೆಲೆಯು.
ಅಲ್ಲಿ ಕೆರೆಯ ನೀರೆಲ್ಲ ಕಲಕಿ ಹೂಗಿಡಕೆ ಸಿಡಿವ ಕೆಸರು.
ಇಲ್ಲಿ ತೊರೆಯು ಜಲಜಲನೆ ಹರಿದು ಹೂ ಹೂವಿಗೊಂದು ಹೆಸರು.

ಅಲ್ಲಿ ಹೊಸ್ತಿಲಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜವು ತುಂಬಿ
ಮನೆಯ ಒಳಗೆ ಮನೆಯೊಡೆಯನಿಲ್ಲ, ನೀ ಹೌದೊ ಅಲ್ಲೊ ಎಂಬಿ,
ಇಲ್ಲಿ ನೆಲವು ಕನ್ನಡಿಯು, ಮೆಲ್ಲ ನಡೆ ಅಚ್ಚ ಹೊಸತು ಗುಡಿಯು.
ಎಲ್ಲಿ ಆಡಿದರು, ಬಳಲಿ ಬಾಡಿದರು ಒಂದೆ ತಾಯ ತೊಡೆಯು.

‘ಅಂಬೆ’ ‘ಅಂಬೆ’ ಎಂದೊರಲಿ ಬರುವವೋ ಅಲ್ಲಿ ನೂರು ಕರುವು.
ನಂಬಿದವಗೆ ತಂಬಿಗೆಯ ತುಂಬ ನೊರೆವಾಲು ಕರುಣೆ ಕುರುಹು.
ಮನದ ಒಳಗೆ ಮಲಗಿರುವ ತೆರೆಯ ತುತ್ತೂರಿ ಬರುವ ಸೂರ್‍ಯ
ಮೋಡದೊಳಗೆ ತಂಗಾಳಿ ಸುಳಿದು ಹನಿಯಾಗಿ ಇಳಿವ ಕಾರ್‍ಯ.

ಇಲ್ಲಿ ಲೌಕಿಕವು ಪಾರಮಾರ್‍ಥದೊಳಗಲೌಕಿಕವ ತೆರೆದು
ತನ್ನದೊಂದು ಹೊಸಲೋಕ ಕಟ್ಟಿ ಸಂಪೂರ್‍ಣಯೋಗ ಬೆರೆದು.
ಅಲ್ಲಿ ಕಡಲು ಅಪ್ಪಳಿಸುತಿರಲು ಒಡಲಿಲ್ಲಿ ಸಪ್ಪಳಿಲ್ಲ
ತಪ್ಪು-ನೆಪ್ಪುಗಳ ಚಿಪ್ಪನೊಡೆದು ತೆಗೆದಪ್ಪಿದವನೆ ಬಲ್ಲ.
*****
ಪಾಂಡಿಚೇರಿಯಲ್ಲಿ ಶ್ರೀ ಅರವಿಂದರ ಸಮಾಧಿ ದರ್‍ಶನ ಪಡೆದು.