ಸಿಟ್ಟೋ ಸೆಡವೋ ಹಠವೋ ಜ್ವರವೋ
ತನಗೇ ತಿಳಿಯದೇ ಧುಮುಗುಡುವ ಸೂರ್ಯ,
ಕರಗುವುದ ಮರೆತು ಬಿಳುಚು ಹೊಡೆದು
ಹಿಂಜಿದ ಹತ್ತಿಯಂತಹ ಮೋಡಗಳು,
ಹನಿ ನೀರಿಗೆ ಕಳವಳಿಸಿದ ವಿಭ್ರಾಂತ ಭುವಿ,
ಕಾಕಾ ಎನ್ನಲೂ ತ್ರಾಣವಿಲ್ಲದ ಮರದ ಮೇಲಿನ ಕಾಗೆ…
ಬಿರುಬೇಸಿಗೆಯ ನಡು ಮಧ್ಯಾಹ್ನಗಳು
ಸ್ತಬ್ಧ ಚಿತ್ರಗಳಂತೆ.. ಅಲ್ಲಾಡದ ಎಲೆಗಳಚಿತೆ;
ಇಂಥ ಮಧ್ಯಾಹ್ನ
ಪುಟ್ಟ ಬೆರಳಲಿ ಬಾಗಿಲು ತೆರೆದು
ಗೇಟು ಸಂಧಿಯಲಿ ತೂರಿಕೊಂಡು
ಮಗುವೊಂದು ಓಡುತಿದೆ ರಸ್ತೆಯಲಿ
ಚಪ್ಪಲಿ ಕೂಡ ಹಾಕದ ಗುಲಾಬಿ ಪಾದಗಳು
ಯಾವುದೋ ಕರೆಯ ಬೆನ್ನತ್ತಿದಂತೆ,
ಮಗು ಎದುರು ಮನೆಯ ಬಾಗಿಲು ಬಡಿಯುತಿದೆ
ಎಳೆ ಬೆರಳ ಮಾಂತ್ರಿಕ ಸ್ಪರ್ಶಕೆ ತಟ್ಟನೆ ತೆರೆದ ಬಾಗಿಲು..
ತೆಕ್ಕೆ ಬಡಿದ ಬಾಹುಗಳಲಿ
ಪುಟ್ಟ ಮಗುವಿನ ಕೇಕೆ..
ಇಂಥ ಮಧ್ಯಾಹ್ನ
ನನ್ನೊಳಗೆ ಬೆಂಕಿಹೂಗಳ ಅರಳಿಸಿ
ತಟಸ್ಥ ನಿಂತ ಕೆಂಡಸಂಪಿಗೆ ಮರ
ಧ್ಯಾನಿಸುತಿದೆ ಮಳೆಯ ಸಂಜೆಯನು,
ಮಾಗಿಯ ಬೆಳಗನು, ಆಳದ ಮೌನವನು,
ಅನವರತ ಕನವರಿಸುತಿದೆ
ತುಕ್ಕು ಹಿಡಿದ ಗೇಟಿನ ಬಳಿ
ಕೇಳಲಿರುವ ಅಂಚೆಯವನ ಕರೆಯನು.
*****