ಅಧ್ಯಾಯ ೧
ಎದುರಿಗೆ ಕೂತವನ ಕತ್ತಿನಲ್ಲಿದ್ದ ತಾಯಿತ ಕಣ್ಣಿಗೆ ಬಿದ್ದು ವಿಶ್ವನಾಥ ಶಾಸ್ತಿಗಳಿಗೆ ತನ್ನಲ್ಲಿ ಒಂದು ಅಪದೇವತೆ ಪ್ರವೇಶಿಸಿ ಬಿಟ್ಟಂತೆ ಆಯಿತು. ಅದೊಂದು ಅಕಸ್ಮಾತ್ ಉದ್ಭವಿಸಿದ ಸಂಜ್ಞೆಯಂತೆಯೂ ಇತ್ತು. ಅವನು ಸೀಟಿನ ಮೇಲೆ ಕಾಲುಗಳನ್ನು ಮಡಿಚಿ ಸುಖಾಸನದಲ್ಲಿ ಕೂತಿದ್ದ. ಸ್ಟೀಲಿನ ಬಟ್ಟಲಿನಿಂದ ಮೊಳಕೆಯೊಡೆದ ಹೆಸರು ಕಾಳನ್ನು ತನ್ನ ಬೆರಳುಗಳಿಂದ ಆರಿಸಿ, ತುಸುವೇ ತೆರೆದ ತುಟಿಗಳಲ್ಲಿಟ್ಟು, ಸೂಕ್ಷ್ಮವಾಗಿ ಗದ್ದವನ್ನಾಡಿಸುತ್ತ ಅದು ಪರಮಾನ್ನವೆಂಬಂತೆ ಸುಖದಲ್ಲಿ ತಿನ್ನುತ್ತಿದ್ದ. ಫಸ್ಟ್‌ಕ್ಲಾಸ್ ರೈಲಿನ ಹರಿದ ಕುಶನ್ನುಗಳ ಡಬ್ಬಿಯಲ್ಲಿ ತಾವಲ್ಲದೆ ಇನ್ನೂ ಇಬ್ಬರು ಇದ್ದರು. ಆದರೆ ಓಡುವ ರೈಲಿನ ಕಿಟಕಿಯಾಚೆ ಸತತವಾಗಿ ಕಣ್ಣುಗಳಿಗೆ ಏಳುತ್ತ ಒದಗುವ ಬಳ್ಳಾರಿ ಜಾಲಿಯ ಮೊಟ್ಟುಗಳನ್ನೂ, ಬಾಯಾರಿ ಕೂಗುವ ಕಾಗೆಗಳನ್ನೂ, ತಮ್ಮ ಮೈಗಳಿಗಷ್ಟೇ ಚಾಚುವ ನೆರಳುಗಳಲ್ಲಿ ಮಲಗಿರುವ ಎಮ್ಮೆಗಳನ್ನೂ ಯಾರ ಪರಿವೆಯೂ ಇಲ್ಲವೆಂಬಂತೆ ನೋಡುತ್ತ ಕೂತಿದ್ದ. ಅಯ್ಯಪ್ಪ ವ್ರತಧಾರಿಯಾದ ಅವನು ಕಪ್ಪುಜುಬ್ಬವನ್ನೂ ಕಪ್ಪು ಮುಂಡನ್ನೂ ತೊಟ್ಟು ಹೆಗಲಿನ ಮೇಲೊಂದು ಕಪ್ಪುವಸ್ತ ಚೆಲ್ಲಿದ್ದ. ಈ ಕಪ್ಪು ವಸ್ತದ ಮೇಲೆ ಅವನು ತೊಟ್ಟ ತಾಯಿತ ಬಂಗಾರದ ಚೈನಿನಲ್ಲಿ ತೋರುವಂತೆ ನೇತು ಬಿದ್ದಿತ್ತು. ಸೀಟಿನ ಮೇಲೆ ಕಿಟಕಿಗೆ ಎದುರಾಗಿ ಅವನು ಕೂತಿದ್ದರೆ ಕಿಟಕಿಯ ಪಕ್ಕ ವಿಶ್ವನಾಥಶಾಸ್ತಿ ಕೂತಿದ್ದರು. ತಿಂಗಳಿಗೊಮ್ಮೆ ಕ್ಷೌರ ಮಾಡಿಸಿಕೊಳ್ಳುವ ಅವರ ಮುಖದ ಮೇಲೆ ಬಿಳಿ ಕುರುಚಲು ಗಡ್ಡ ಬೆಳೆದಿತ್ತು. ಮೈಮೇಲೆ ಹಸಿರು ಅಂಚಿನ ಬಿಳಿಧೋತ್ರ ಹೊದ್ದಿದ್ದರು. ಅದೇ ಅಂಚಿನ ಪಂಚೆಯುಟ್ಟಿದ್ದರು. ಅವರ ವಯಸ್ಸು ಸುಮಾರು ಎಪ್ಪತ್ತರ ಒಳಗೆ ಎನ್ನಿಸುವಂತಿತ್ತು. ಪ್ಯಾಂಟು ಶರಟು ಧರಿಸಿದ ಉಳಿದ ಇಬ್ಬರಂತಲ್ಲದೆ, ಶಾಸ್ತಿಗಳು ಮತ್ತು ಅಯ್ಯಪ್ಪ ವ್ರತಧಾರಿಯಾದ ಅವನು ಫಸ್ಟ್‌ಕ್ಲಾಸ್ ಡಬ್ಬಿಯಲ್ಲಿ ವಿಶೇಷ ಗಮನ ಸೆಳೆಯುವಂತೆ ಇದ್ದರು. ಸಮಯ ಮಧ್ಯಾಹ್ನವಾಗಿತ್ತು. ಇನ್ನಿಬ್ಬರು ಹಿಂದಿನ ಸ್ಟೇಶನ್ನಿನಿಂದ ಊಟ ಪಡೆದಿದ್ದರು. ಅವರಲ್ಲಿ ಜೀನ್ಸ್ ತೊಟ್ಟವನೊಬ್ಬ ಮಾಂಸಾಹಾರಿಯಾದ್ದರಿಂದ ಜುಟ್ಟಿನಲ್ಲಿ ಬಾಡಿದ ತುಳಸಿಯನ್ನು ಮುಡಿದಿದ್ದ ಶಾಸ್ತಿಗಳಿಗೂ, ಕಪ್ಪು ವಸ್ತದ ಅಯ್ಯಪ್ಪ ಭಕ್ತನಿಗೂ ಮುಜುಗರವಾಗಬಾರದೆಂದು ಅಪ್ಪರ್ ಬರ್ತ್ ಹತ್ತಿ ನೆಟ್ಟಕೂರಲಾರದೆ ಬಾಗಿ ಕೂತು, ಕದ್ದು, ಮುಚ್ಚಿ , ಮೂಳೆ ಚೀಪುತ್ತಿದ್ದ. ಇನ್ನೊಬ್ಬ ಪ್ಯಾಂಟ್ ಧರಿಸಿ ಹಣೆಗೆ ಕುಂಕುಮ ಇಟ್ಟುಕೊಂಡವನು ಮದ್ರಾಸಿನ ಸಾಂಬಾರು ರಸ ಪಲ್ಯಗಳನ್ನೆಲ್ಲ ಒಟ್ಟುಮಾಡಿ ಕಿವುಚುತ್ತ ಉಂಡೆಕಟ್ಟಿ ಬಾಯಿಗೆಸೆದು ಸಶಬ್ದವಾಗಿ ತಿನ್ನುತ್ತಿದ್ದ. ಶಾಸ್ತಿಗಳು ತಮ್ಮ ಮಡಿಗಂಟಿನಿಂದ ಸ್ಟೀಲಿನ ಡಬ್ಬಿಯನ್ನು ಎತ್ತಿಕೊಂಡರು. ಆದರೆ ಅದರ ಮುಚ್ಚಳ ತೆರೆದು ತಿನ್ನಲಾರದಷ್ಟು ಅವರು ಬೆವರುತ್ತ ನಡುಗುತ್ತಿದ್ದರು. ಮತ್ತೆ ಮತ್ತೆ ಅವರ ಕಣ್ಣು ದುರೂಹ್ಯವಾದ ಸಂಜ್ಞೆಯನ್ನು ಬಿಡಿಸಿಕೊಳ್ಳಲು ಹೆಣಗುತ್ತ ತಾಯತವನ್ನು ದಿಟ್ಟಿಸುತ್ತಿತ್ತು. ಅವನು ಮಧ್ಯ ವಯಸ್ಕನೆ? ಅಥವಾ ಅದಕ್ಕಿಂತ ಕೊಂಚ ಇನ್ನೂ ಚಿಕ್ಕವನೆ? ಮುಖದಲ್ಲಿ ಬೆಳೆಯುತ್ತಿದ್ದ ಗಡ್ಡದಲ್ಲಿ ಅಲ್ಲೊಂದು ಇಲ್ಲೊಂದು ಬಿಳಿ ಕೂದಲಿದೆ – ಅಷ್ಟೆ. ನಾಟಕದಲ್ಲಿ ರಾಮನ ಪಾತ್ರಕ್ಕೆ, ಕೃಷ್ಣನ ಪಾತ್ರಕ್ಕೆ ಅರ್ಹವೆನ್ನಿಸುವಂತಹ ಗುಣಾತಿಶಯಗಳನ್ನು ತೋರುವ ಮುಖ. ಬಾಡಿದ ಮುಖ; ಆದರೆ ತೇಜಸ್ಸಿನ ಮುಖ. ಅವನ ನೀಳವಾದ ಮೂಗು, ಅವನ ಅಗಲವಾದ ಕಣ್ಣುಗಳ ಬಣ್ಣ, ಆ ನಿರ್ಲಕ್ಷ್ಯದ ಕಣ್ಣುಗಳ ಮೋಹಕತೆ ಥೇಟು ಸರೋಜಳದೇ ಎನ್ನಿಸಿ ಶಾಸ್ತಿಗಳು ಆವೇಗದಿಂದ ಉಸಿರಾಡತೊಡಗಿದರು. ಈಗ ತನ್ನ ಭಾವನೆಗಳಿಗೆ ಮಾತು ಕೊಡಲಾರದೆ ಅವಾಕ್ಕಾಗಿ ಬಿಟ್ಟಿದ್ದರು. ತದನಂತರದ ದಿನಗಳಲ್ಲಿ ಶಾಸ್ತಿಗಳು ತನ್ನಲ್ಲೊಂದು ಅಕ್ಕರೆಯ ಭಾವನೆ ಯಾವ ಹೊತ್ತಲ್ಲಿ ಹೀಗೆ ಉಮ್ಮಳಿಸಿ ಹುಟ್ಟಿಬಿಟ್ಟ ಪರಿಯನ್ನು ಅನಿಷ್ಟ ನಿವಾರಣೆಗಾಗಿ ನೆನೆಯುವರು. ಮೊಳಕೆಯೊಡೆದ ಹೆಸರುಕಾಳನ್ನು ಬಾಯಲ್ಲಿ ಆಡಿಸುತ್ತ ಕೂತಿದ್ದ ಅವನು ಮೈಮೇಲೆ ಬಿದ್ದ ಬಿಸಿಲನ್ನೂ ಮಳೆಯನ್ನೂ ಸ್ವೀಕರಿಸುತ್ತ ತಟಸ್ಥವಾಗಿ ಮೆಲುಕು ಹಾಕುವ ಹಸುಗರುವಿನಂತೆ ಕಂಡಿದ್ದ. ಅವನ ಬಟ್ಟಲು ಬರಿದಾಗಿದ್ದಿರಬೇಕು; ಅವನ ಕಣ್ಣು ನಿರೀಕ್ಷೆಯಲ್ಲಿ ಬಟ್ಟಲ ಕಡೆ ನೋಡಿದ್ದೇ ಶಾಸ್ತಿಗಳಿಗೆ ತಡೆದುಕೊಳ್ಳಲು ಆಗಿರಲಿಲ್ಲ. ತನ್ನಲ್ಲಿ ಕರುಣೆ ಉಕ್ಕಿ ಚಕಿತರಾಗಿದ್ದರು. ತನ್ನ ಬಟ್ಟಲಿನ ಮುಚ್ಚಳವನ್ನು ತೆರೆದು ಎಡಗೈಯೂರಿ ಸೀಟಿಂದ ಜರಿಯುತ್ತ, ಅವನಿಗೆ ಹತ್ತಿರವಾಗಿ ಅದನ್ನು ಒಡ್ಡಿದ್ದರು. ‘ಇಕೊ’ ಎನ್ನಬೇಕೆಂದರೂ ಅನ್ನಲಾರದೆ ‘ಇಕೊಳ್ಳಿ’ ಎಂದಿದ್ದರು. ಅವನಿಗೆ ಕನ್ನಡ ತಿಳಿಯದೆಂಬುದು ಅವನು ಪ್ರಶ್ನಾರ್ಥಕವಾಗಿ ತನ್ನ ಕಡೆ ನೋಡಿದ ಕ್ರಮದಿಂದ ಶಾಸ್ತಿಗಳಿಗೆ ಮನದಟ್ಟಾಗಿತ್ತು. ಹಾಗಾದರೆ ಇವನು ಯಾರೋ ಬೇರೆಯವನು ಎಂದು ಸಮಾಧಾನವಾಗಿತ್ತು. ಬೊಂಬಾಯಿಯಲ್ಲಿ ಸುಮಾರು ನಲವತ್ತೋ, ನಲವತ್ತೈದೋ ವರ್ಷಗಳ ಕೆಳಗೆ ಅಲೆದಾಡುತ್ತಿದ್ದಾಗ ತನ್ನ ಲಂಪಟತನದಿಂದಾಗಿ ಕಲಿತ ಒರಟಾದ ಹಿಂದೂಸ್ತಾನಿ ನೆನಪಾಗಿತ್ತು. ಅಯ್ಯಪ್ಪ ಭಕ್ತನಂತೆ ಕಂಡವನ ಜೊತೆ ಆ ಭಾಷೆಯಲ್ಲಿ ಮಾತಾಡಲು ಹಿಂಜರಿದಿದ್ದರು. ಅವರಿಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಒಡ್ಡಿದ ಬಟ್ಟಲಲ್ಲಿರುವುದನ್ನು ನೋಡಿ ಅವನು ತನ್ನ ಗಡ್ಡದಲ್ಲಿ ಬೆರಳಾಡಿಸುತ್ತ ಅಸ್ವಸ್ಥನಾಗಿಬಿಟ್ಟಂತೆ ಕಂಡಿದ್ದ. ಶಾಸ್ತಿಗಳು ಒಡ್ಡಿದ್ದು ಅವನಿಗೆ ನಿಧಾನವಾಗಿ ಗುರುತು ಹತ್ತಿರಬೇಕು. ‘ಕು…ಟ್ಟ…ವ…ಲ…ಕ್ಕಿ’ ಎಂದಿದ್ದ ಕೊಂಚ ನಡುಗುವ ಸ್ವರದಲ್ಲಿ.ಗುಹೆಯಿಂದ ಬಂದಂತಿದ್ದ ಶಬ್ದದಿಂದ ಶಾಸ್ತಿಗಳು ರೋಮಾಂಚಿತರಾಗಿದ್ದರು. ಆದರೆ ಮಾತು ಶುರು ಮಾಡುವವರ ಕೃತಕ ಸಲಿಗೆಯಿಂದ ಹೇಳಿದ್ದರು. “ ಹಾಗಾದರೆ ಇದು ಏನು ಗೊತ್ತು ನಿಮಗೆ. ಕುಟ್ಟವಲಕ್ಕಿ ಗೊತ್ತೆಂದರೆ ಒಂದೋ ನೀವು ಕನ್ನಡಾ ಜಿಲ್ಲೆಯವರು, ಅಥವಾ ನನ್ನಂತೆ ಯಾರೋ ಕನ್ನಡಾ ಜಿಲ್ಲೆಯವರು ನಿಮಗೆ ಹಿಂದೆಂದಾದರೂ ಗಂಟು ಬಿದ್ದಿರಬೇಕು. ನಾನು ಹರಿಕಥೆ ಮಾಡುತ್ತಾ ಹೇಳೋದಿದೆ: ಕುಚೇಲ ಕನ್ನಡ ಜಿಲ್ಲೆಯವನು. ಅವನು ತನ್ನ ಬಾಲ್ಯದ ಸ್ನೇಹಿತನಿಗೆ ಒಯ್ದದ್ದು ಕೇವಲ ಅವಲಕ್ಕಿಯಲ್ಲ-ಕುಟ್ಟವಲಕ್ಕಿ ಅಂತ.” ಶಾಸ್ತಿಗಳಿಗೆ ಗತ್ತಿನ ತನ್ನ ಪರಿಚಿತ ಭಾಷೆಗೆ ಹಿಂದಿರುಗಿ ಸ್ವಸ್ಥರಂತೆ ಕಾಣುವುದು ಸಾಧ್ಯವಾದರೂ ತನ್ನ ಒಳಗಿನ ತಳಮಳಕ್ಕೆ ತಕ್ಕ ಮಾತಲ್ಲವೆಂದು ಮುಜುಗರವಾಗಿತ್ತು. ಅವನು ಏನೂ ಅರ್ಥವಾಗದವನಂತೆ ವಿನಯದಲ್ಲಿ ಕೈಮುಗಿದು ತನ್ನ ಪಾಡಿಗೆ ತನ್ನನ್ನು ಬಿಡಿ ಎಂಬಂತೆ ಶಾಸ್ತಿಗಳಿಗೆ ತನ್ನ ಸ್ವಮನಸ್ಕನಾದ ಕಣ್ಣುಗಳಿಂದ ಸೂಚಿಸಿದ್ದ. ಆ ಕಣ್ಣುಗಳು ಮತ್ತೆ ಗೂಢವಾಗಿ ಶಾಸ್ತಿಗಳನ್ನು ಬಾಧಿಸುತ್ತಿದ್ದಂತೆ ಅವನು ‘ಅಚ್ಛಾ’ ಎಂದು ಕುಟ್ಟವಲಕ್ಕಿಗೆ ಕೈಯೊಡ್ಡಿದ್ದ. ಶಾಸ್ತಿಗಳು ಅಕ್ಕರೆಯಲ್ಲಿ ಅವನ ಕೈಮೇಲೆ ಸುರಿದದ್ದನ್ನು ಬಾಯಿಗೆ ಹಾಕಿಕೊಂಡಿದ್ದ. ಅದರ ರುಚಿ ಅವನ ಕಣ್ಣುಗಳನ್ನು ಏನೋ ಹುಡುಕುವಂತೆ ಮುಚ್ಚಿಸಿದ್ದನ್ನು ಕಂಡು ಶಾಸ್ತಿಗಳಿಗೆ ಭಯವನ್ನೂ ಭರವಸೆಯನ್ನೂ ಕುದುರಿಸಿತ್ತು.ಇಷ್ಟರಲ್ಲಿ ತನ್ನ ಮಾಂಸದ ಊಟ ಮುಗಿಸಿ ಕೆಳಗಿಳಿದವನು ಇಂಗ್ಲಿಷಿನಲ್ಲಿ , ‘ನಿಮ್ಮ ಹೆಸರು ಕೇಳಬಹುದೆ?’ ಎಂದ, ಕುಟ್ಟವಲಕ್ಕಿಯನ್ನು ನಿಧಾನವಾಗಿ ಮೆಲ್ಲುತ್ತಲೇ ಇದ್ದ ಅಯ್ಯಪ್ಪ ವ್ರತದವನಿಗೆ. ವ್ರತದವನು ಕುಶಲದ ಪ್ರಶ್ನೆಯನ್ನು ಗಮನಿಸಲಿಲ್ಲ. ಆದರೆ ನಿಧಾನವಾಗಿ ತನಗಾಗಿ ಮಾತ್ರ ತೆರೆದ ಅವನ ಕಣ್ಣುಗಳಲ್ಲಿ ನೀರನ್ನು ಕಂಡು ಶಾಸ್ತಿಗಳು ಗಾಬರಿಯಾಗಿ ‘ಖಾರವ?’ ಎಂದರು. ಹಿಂದುಸ್ತಾನಿಯಲ್ಲಿ ಅದೇ ಪ್ರಶ್ನೆ ಕೇಳಿದರು. ಅವನು ಮೊದಲ ಸಾರಿಗೆ ಮುಗುಳ್ನಕ್ಕು ಹಿಂದಿನಂತೆಯೇ ತಲೆಯಾಡಿಸಿದ. ಡಬ್ಬಿಯಿಂದ ಹೊರ ಹೋಗಿ ಕೈತೊಳೆದು ಬಂದವನು ತನ್ನ ಜೀನ್ಸ್‌ನ ಜೋಬಿನಿಂದ ಕರ್ಚೀಫನ್ನು ತೆರೆದು ಕೈಯೊರೆಸಿಕೊಳ್ಳುತ್ತ ಮತ್ತೊಮ್ಮೆ ಅದೇ ಪ್ರಶ್ನೆಯನ್ನು ಇನ್ನಷ್ಟು ಪೊಲೈಟಾಗಿ ಕೇಳಿದ : “ನಿಮ್ಮ ಹೆಸರು ಕೇಳಬಹುದೆ?“
ಅವನು ಕಣ್ಣೊರೆಸಿಕೊಂಡು ತನ್ನ ವಸ್ತದ ಕಡೆ ಬೆರಳು ಮಾಡಿ ‘ಸ್ವಾಮಿ’ ಎಂದ. ‘ನನ್ನ ಹೆಸರನ್ನು ಕಳೆದುಕೊಂಡಿದ್ದೇನೆ’ ಎಂದ ನಿರ್ಭಾವದಲ್ಲಿ. ಆದರೆ ಜೀನ್ಸ್‌ಧಾರಿ ತನ್ನ ಉತ್ಸಾಹ ಕಳೆದುಕೊಳ್ಳಲಿಲ್ಲ.
“ಈ ನಿಮ್ಮ ಉಡುಪಿನಲ್ಲೂ ನನಗೆ ಗೊತ್ತಾಗಲಿಲ್ಲವೆಂದುಕೊಂಡಿರ? ನೀವು ದಿನಕರ್. ಟೀವಿಯಿಂದಾಗಿ ನೀವು ದೇಶದಲೆಲ್ಲ ಪ್ರಸಿದ್ಧರು. ನನ್ನ ತಮ್ಮನಿಗೆ ನೀವು ದೊಡ್ಡ ಹೀರೋ. ಏಷ್ಯಾ ಖಂಡದ ಎಲ್ಲ ನಾಯಕರನ್ನು ನೀವು ಮಾಡಿರುವ ಇಂಟರ್‍ವ್ಯೂ ನೋಡದವರು ಇಲ್ಲ. ನೀವು ದೆವರು ಗೀವರುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವವರಲ್ಲ ಎಂದುಕೊಂಡು ಇಷ್ಟುಹೊತ್ತೂ ಅನುಮಾನದಲ್ಲೇ ನಿಮ್ಮನ್ನು ನೋಡುತಿದ್ದೆ. ಅಮಿತಾಬ್ ಬಚನ್ ಕೂಡ ಅಯ್ಯಪ್ಪ ದರ್ಶನ ಮಾಡಿದನೆಂದು ಕೇಳಿದ್ದೇನೆ. ಇಂಟರಸ್ಟಿಂಗ್. ಮದ್ರಾಸಿನಲ್ಲಿ ನೀವು ರೈಲು ಹತ್ತಿದ್ದೇ ಯಾರೋ ಪರಿಚಯದವರಂತೆ ಕಾಣುತ್ತಾರಲ್ಲ ಎಂದು ಚಿಂತಿಸುತ್ತಲೇ ಇದ್ದೆ. ಮದ್ರಾಸಿನ ಸುತ್ತಮುತ್ತಲ ದೇವಸ್ಥಾನಗಳನ್ನು ನೀವು ನೋಡಿ ಬಂದಿರಬೇಕು. ದೆಹಲಿಯಿಂದ ಪ್ರಯಾಣ ಮಾಡುತ್ತಿರಬೇಕು. ಟೀವಿಯಲ್ಲೂ ನಿಮ್ಮನ್ನು ನೋಡದೆ ತಿಂಗಳ ಮೇಲಾಯಿತು. ನಿಮ್ಮನ್ನು ದುರುಗುಟ್ಟಿ ನೋಡುವುದು ಇಂಪೊಲೈಟ್ ಎಂದು ಇಷ್ಟು ಹೊತ್ತೂ ಸುಮ್ಮನಿದ್ದೆ. ಕ್ಷಮಿಸಿ. ನಾನು ಡಿಸೈನರ್ ಬಟ್ಟೆಯ ಎಕ್ಸ್‌ಪೋರ್‍ಟರ್ – ಬೊಂಬಾಯಿಯವನು. ಮದ್ರಾಸಿಗೆ ಬಟ್ಟೆ ಖರೀದಿಸಲು ಬಂದಿದೆ“ ಎಂದು ಕೈಯೊಡ್ದಿದ. ತನ್ನ ಪತ್ತೆಯ ಖುಷಿಯಲ್ಲಿದ್ದ ಜೀನ್ಸ್ ಧಾರಿ ಅಯ್ಯಪ್ಪ ವ್ರತದವನು ಕೈಯೊಡ್ದಲಿಲ್ಲವೆಂದು ಹುರುಪು ಕಳೆದುಕೊಳ್ಳಲಿಲ್ಲ. ಸೊಗಸಾದ ಶರ್ಟ್‌ಗಳನ್ನು ಧರಸಿ ನುಣ್ಣಗೆ ಕ್ಷೌರ ಮಾಡಿಕೊಂಡ ನಗುಮುಖದ ತನ್ನ ಟೀವಿ ಹೀರೋ ಜೊತೆಯೇ ಅವನು ಮಾತು ಮುಂದುವರಿಸಿದ್ದ : “ನನ್ನ ಮಗಳು ಎಂಬಿಬಿಎಸ್ ಒದುತ್ತಿದ್ದಾಳೆ. ಅವಳಿಗಾಗಿ ನಿಮ್ಮ ಆಟೋಗ್ರಾಫ್ ಬೇಕು. ಬೆಂಗಳೂರಿನಲ್ಲಿ ಇಳಿಯುವುದಲ್ಲವೇ? ನಿಮ್ಮ ಆಟೋಗ್ರಾಫ್ ಆಮೇಲೆ ತೆಗೆದುಕೊಳ್ಳುವೆ“ ಆಟೋಗ್ರಾಫ್ ಸಿಗುವುದು ಖಚಿತವೆಂಬಂತೆ ಮಾತಾಡಿ ಎದುರಿನ ಸೀಟಿನಲ್ಲಿ ಕೂತು ಇಂಗ್ಲಿಷ್ ಮ್ಯಾಗಸೀನ್ ಒಂದನ್ನು ತೆರೆದು ಓದತೊಡಗಿದ.
ಶಾಸ್ತಿಗಳು ಬಟ್ಟಲನ್ನು ಎದುರು ಹಿಡಿದು ಇನ್ನಷ್ಟು ಸಂಜ್ಙೆಗೆ ಕಾದವರಂತೆ ಎವೆಯಿಕ್ಕದೆ ಅವನ ಕಡೆ ನೋಡುತ್ತಲೇ ಇದ್ದರು. ಅವನು ಅಯ್ಯಪ್ಪ ವ್ರತ ಹಿಡಿದಿದ್ದರಿಂದ ಕೇವಲ ’ಸ್ವಾಮಿ’ ಎಂಬ ಹೆಸರಿನವನೆಂದೂ, ಟೀವಿಯಲ್ಲಿ ಅವನು ಖ್ಯಾತನೆಂದೂ ಅವರು ಅರ್ಧಂಬರ್ಧ ಅರ್ಥ ಮಾಡಿಕೊಂಡಿದ್ದರು. ಅವನು ಕುಟ್ಟವಲಕ್ಕಿಯನ್ನು ಆಸಕ್ತಿಯಿಂದ ನೋಡುತ್ತಿದ್ದಾನೆಂದು ಅವರಿಗೆ ಹಿತವಾಯಿತು. ಇನ್ನೊಂದು ಬಟ್ಟಲಿನಿಂದ ಮೊಸರು ತೆಗೆದು,
‘ಕೈಕಾಲು ತೊಳೆದು ಬಂದು ಇದನ್ನು ತಿನ್ನಿ’ ಎಂದರು. ಸ್ವಾಮಿಗೆ ಶಾಸ್ತಿಗಳ ಮಾತು ಅರ್ಥವಾಗದಿದ್ದರೂ ಆಗ್ರಹ ತಿಳಿದಂತೆ ಕಂಡಿತು. ಎದ್ದು ಡಬ್ಬಿಯ ಬಾಗಿಲು ತೆರೆದು ಹೋದನು. ತನ್ನೊಳಗೆ ಆವೆಶವಾದ್ದು ಅಪದೇವತೆಯಲ್ಲವೆಂದು ಸಮಾಧಾನಪಡುತ್ತ ಕೊರಳಿನಿಂದ ರುದ್ರಾಕ್ಷಿ ತೆಗೆದು ಆಗ ತಾನು ಜಪಕ್ಕೆ ತೊಡಗಿದ್ದೆ ಎಂದು ಶಾಸ್ತಿಗಳು ನೆನೆಯುವರು.
ಡಬ್ಬಿಯಲ್ಲಿ ಕೂತಿದ್ದ ಇನ್ನೊಬ್ಬ ಊಟ ಮುಗಿಸಿ ಎಲೆಗೆ ಸುಣ್ಣ ಹಚ್ಚುತ್ತ ಶಾಸ್ತಿಗಳ ಜೊತೆ ಮಾತಿಗೆ ತವಕಿಸಿದ. “ತಾವು ಪ್ರಸಿದ್ಧ ಕೀರ್ತನಕಾರ ವಿಶ್ವನಾಥ ಶಾಸ್ತಿಗಳೆಂದು ನನಗೆ ಗೊತ್ತಿದೆ. ನಾನೂ ನಿಮ್ಮಕಡೆಯವನೇ, ನಮ್ಮ ಅಜ್ಜನ ಕಾಲದಲ್ಲಿ ಅಡಿಕೆ ತೋಟ ಕಳೆದುಕೊಂಡು ಊರು ಬಿಟ್ಟಿದ್ದು,
ಎಮ್‌ಡನ್ ಹಡಗಿನ ಕಥೆ ತಾವು ಕೇಳಿರಬಹುದು. ಹಾಗಾಗಿ ನಾವು ನಿರ್ವಾಹವಿಲ್ಲದೆ ವ್ಯಾಪಾರಕ್ಕೆ ಇಳಿದ್ದದು. ನನ್ನ ಉದ್ಯೋಗ ಮಲೆನಾಡಿನಲ್ಲಿ ಅಡಿಕೆ ಕೊಂಡು ಮಾರುವುದು. ನೀವು ಶಿವಳ್ಳಿ ಸ್ಮಾರ್ತರಾದರೆ ನಾನು ಮಾಧ್ವರವನು. ನಿಮ್ಮ ಹರಿಕಥೆ ಕೇಳಿಸಿಕೊಂಡಿದ್ದೇನೆ. ಶ್ರೀಕೃಷ್ಣ ಪರಮಾತ್ಮನನ್ನು ಕಣ್ಣಿಗೆ ಕಟ್ಟುವಂತೆ ಹಾಡುತ್ತ ನೀವು ವರ್ಣಿಸುತ್ತೀರಿ. ನಿಮ್ಮ ಭೇಟಿಯಾದ್ದು ನನ್ನ ಪುಣ್ಯ“ ಎಂದು ತನ್ನ ಎಲೆಯಡಿಕೆ ಕೈಚೀಲವನ್ನು ಶಾಸ್ತಿಗಳಿಗೆ ಒಡ್ಡಿದನು.
ಜಪದ ಮಣಿಯನ್ನು ಹಿಡಿದುಕೊಂಡೇ ಕಣ್ಣು ಬಿಟ್ಟು ಶಾಸ್ತಿಗಳು,
‘ನನ್ನದಿನ್ನೂ ಫಲಾಹಾರವಾಗಿಲ್ಲ’ ವೆಂದರು. “ಅವರಿಗೆ ನಿಮ್ಮ ಫಲಾಹಾರ ಕೊಟ್ಟು ಬಿಡುತ್ತಿದ್ದೀರಲ್ಲ. ನಿಮಗೇನು ಉಳಿಯುತ್ತದೆ, ಮುಂದಿನ ಸ್ಟೇಶನ್ನಿನ್ನಲ್ಲಿ ಇಡ್ಲಿ ಸಿಗುತ್ತದೆ. ತಂದುಕೊಡಲೆ?” ಎಂದ. “ನಾನು ಹೊಟೆಲಲ್ಲಿ ತಿನ್ನುವುದಿಲ್ಲ. ಪ್ರಯಾಣ ಮಾಡುವಾಗ ಸ್ವಲ್ಪ ಅವಲಕ್ಕಿ ಮೊಸರು ತೆಗೆದುಕೊಳ್ಳುತ್ತೇನೆ ಅಷ್ಟೆ. ಅವರಿಗೆ ಕೊಟ್ಟೂ ನನಗೆ ಮಿಕ್ಕಿರುತ್ತದೆ. ನಿಮ್ಮ ಉಪಕಾರಕ್ಕೆ ಕೃತಜ್ಙ. ತಮ್ಮ ನಾಮಧೇಯ ತಿಳಿಯಬಹುದೋ?” ಎಂದರು. ಶಾಸ್ತಿಗಳಿಗೆ ತನ್ನ ಭಾಷೆಗೆ ಮರುಕಳಿಸುವುದು ಸಾಧ್ಯವಾಗಿ ಸಂತೋಷವಾದಂತೆ ಇತ್ತು.
ಅಧ್ಯಾಯ-೨
ತಟ್ಟೆಯಲ್ಲಿ ಹಾಕಿಕೊಟ್ಟ ಕುಟ್ಟವಲಕಿಯನ್ನೂ ಮೊಸರನ್ನೂ ಸ್ವಾಮಿಯ ರೂಪದಲ್ಲಿದ್ದವ ಬಹಳ ದಿನ ಹಸಿದಿದ್ದವನಂತೆ ತಿನ್ನುವುದನ್ನು ತನಗೆ ಅರ್ಥವಾಗದ ವೇದನೆಯಿಂದ ನೋಡುತ್ತ ಕೂತಿದ್ದೆ ಎಂಬುದು ಶಾಸ್ತಿಗಳಿಗೆ ತನ್ನ ದೌರ್ಬಲ್ಯದಲ್ಲಿ ಆಧಾರವಾಗುವ ನೆನಪು. ಮುಚ್ಚಿದ ಯಾವುದೋ ಬಾಗಿಲು ತೆರೆದಿತ್ತು. ದಿಗಿಲಾಗಲು ತೊಡಗಿತ್ತು. ಮಡಿಗಂಟಿನಿಂದ ಬಾಳೆಹಣ್ಣಿಗಾಗಿ ತಾನು ಹುಡುಕುತ್ತಿದ್ದಾಗ ಸ್ವಾಮಿ ಸದೃಶನಂತೆ ಕಾಣುತ್ತ ಹೋದ ಅವನು ತನ್ನ ಚೀಲದಿಂದ ಸೇಬನ್ನೂ ಬಾಳೆಹಣ್ನನ್ನೂ ಸಿಹಿ ದ್ರಾಕ್ಷಿಯನ್ನೂ ಎಡಗೈಯಲ್ಲಿ ತೆಗೆದು ಸೀಟಿನ ಮೇಲಿಟ್ಟು, ತನ್ನ ಬಲಗೈಯಿಂದ ಕೊಳ್ಳಿರೆಂದು ಹಣ್ಣನ್ನು ತೋರಿಸಿದ್ದ. ಒಳ್ಳೆಯ ಮಡಿವಂತ ಕುಟುಂಬದವನಿರಲೇ ಬೇಕು. ಹಿಂದಿಯಲ್ಲಿ ಅವನು ಆಡಿದ ಮಾತಿಗೆ ಅದೇ ಭಾವದಲ್ಲಿ ತಾನು ಉತ್ತರಿಸುತ್ತಿದ್ದೇನೋ ತಿಳಿಯದೆ ತಮ್ಮ ಪೂರ್ವಜನ್ಮದ ಬೊಂಬಾಯಿ ಹಿಂದಿಯಲ್ಲಿ ಶಾಸ್ತಿಗಳು ಕೇಳಿದ್ದರು:“ ಹೊಟ್ಟೆ ತುಂಬಿತೆ ಸ್ವಾಮಿ?”
“ ನನ್ನನ್ನು ಹಿರಿಯರಾದ ತಾವು ದಿನಕರ ಎಂದು ಕರೆಯಬಹುದು”.
ಸ್ವಲ್ಪ ತಡೆದು, ಅದೆಷ್ಟು ಮೃದುವಾಗಿ, ತನಗೆ ತನ್ನ ಪೂರ್ವಜನ್ಮದ ಸುಕೃತ ಎಂಬಂತೆ, ನರಕದ ತನ್ನ ಆತಂಕ ಕಳೆಯುವಂತೆ ಹೇಳಿದ್ದ:
“ ಬೇಡ, ಬೇಡ ನಿಮ್ಮ ಕುಟ್ಟವಲಕ್ಕಿಯಿಂದ ನನ್ನ ತಾಯಿ ಕರೆಯುತ್ತಿದ್ದ ಹೆಸರು ನೆನಪಾಯಿತು. ಪುಟಾಣಿ, ಪುಟಾಣಿ ಎಂದರೆ ಏನು? ಆ ಹೆಸರಿಗೆ ನಾನು ಯೋಗ್ಯ ಎನ್ನಿಸಿದರೆ ಹಾಗೇ ಕರೆಯಿರಿ.”
ಫ್ಯಾಷನಬಲ್ ಆದ ಜೀನ್ಸ್ ಧರಿಸಿದವನು, ಇದನ್ನು ಕೇಳಿಸಿಕೊಳ್ಳುತ್ತಾ ತಾನು ಓದುತ್ತಿದ್ದ ಇಂಡಿಯಾ ಟುಡೆ ಮುಚ್ಚಿ ನಕ್ಕ.
“ ಅಚ್ಛಾ ನನ್ನ ಊಹೆ ಹಾಗಾದರೆ ನಿಜವಾಯಿತು” ಎಂದು ತನ್ನ ಮ್ಯಾಗಜೀನ್‌ಗೆ ಹಿಂದಿರಿಗಿದ್ದ- ಈ ಬಾರಿ ಹಿಂದಿಯಲ್ಲಿ ಮಾತಾಡಿ.
ದಿನಕರ ನಿಧಾನವಾಗಿ ಶಾಸ್ತಿಗಳಿಗೆ ಅರ್ಥವಾಗುವಂತೆ ಸರಳವಾದ ಹಿಂದಿಯಲ್ಲಿ ಹೇಳತೊಡಗಿದ:
“ ನನ್ನ ತಾಯಿ ಕನ್ನಡದವರು ಇರಬಹುದೆಂದು ಕೇಳಿದ್ದೇನೆ. ನನಗೆ ಐದು ವರ್ಷವಿದ್ದಾಗ ಅವರು ಗಂಗಾನದಿಯ ಪಾಲಾಗಿ ಹರಿದ್ವಾರದಲ್ಲಿ ಸತ್ತರು. ಅವರು ಕುಟ್ಟವಲಕ್ಕಿಯನ್ನು ನನಗೆ ಪ್ರಿಯವೆಂದು ತಿನ್ನಿಸುತ್ತಿದ್ದರೆಂದು ಬಹಳ ವರ್ಷಗಳ ನಂತರ ಇನ್ನೊಬ್ಬ ತಾಯಿ ನೆನಪು ಮಾಡಿಕೊಟ್ಟದ್ದನ್ನು ಈಗ ನಿಮ್ಮ ವಿಶ್ವಾಸದಿಂದಾಗಿ ಥಟ್ಟನೆ ನೆನಪಾಯಿತು. ನನ್ನ ತಂದೆ ಯಾರೋ ನನಗೆ ಗೊತ್ತಿಲ್ಲ. ಮೊದಲೇ ಅವರನ್ನು ಕಳಕೊಂಡಿರಬಹುದು. ಆಮೇಲೆ ತಾಯಿಯನ್ನು ಕಳೆದುಕೊಂಡೆ. ಒಂದೆರಡು ತಿಂಗಳುಗಳ ಹಿಂದಿನಿಂದ ನನ್ನ ಹೆಸರನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.”
‘ಅಚ್ಛಾ’ ಎಂದು ಕುಶಲವಾಗಿ ನಕ್ಕ. ಅದೆಷ್ಟು ನಿರಾಯಾಸವಾದ ಸಲಿಗೆಯಲ್ಲಿ ಮಾತಾಡಲು ಅವನು ತೊಡಗಿದ್ದ! ಥಟ್ಟನೆ ಒದಗಿಬಿಟ್ಟ ಕೃಪೆಯಂತೆ ಅವನ ಮಾತು ಕಂಡಿತ್ತು. ‘ನಿಮ್ಮ ವಿಶ್ವಾಸಕ್ಕಾಗಿ ಮತ್ತೆ ನನ್ನ ಹೆಸರಿಗೆ ಹಿಂದಿರುಗುತ್ತೀನಿ. ನಿಮಗಿಷ್ಟವಾದರೆ ನನ್ನ ತಾಯಿ ಕರೀತಿದ್ದ ಹೆಸರಿಗೂ.” ಈ ಬಾರಿ ತನ್ನನ್ನೇ ಹಾಸ್ಯ ಮಾಡಿಕೊಳ್ಳುವವನಂತೆ ತನ್ನ ಟೀವಿ ವ್ಯಕ್ತಿತ್ವದ ಮೋಹಕವಾದ ಧಾಟಿಯಲ್ಲಿ ಹೇಳಿ ಗಂಭೀರವಾಗಿ ಮುಂದುವರಿದ:
“ ಅಚ್ಛಾ, ನಿಮ್ಮಿಂದ ಒಂದು ಸಹಾಯವಾಗಬೇಕು ನನಗೆ. ಇಪ್ಪತ್ತೈದು ವರ್ಷಗಳ ಕೆಳಗೆ ನನಗೊಬ್ಬರು ಮಂಗಳೂರಿನವರು ಹರಿದ್ವಾರದಲ್ಲಿ ಗುರುತಾಗಿದ್ದರು. ಈಗ ಅವರು ಪ್ರಸಿದ್ಧರಾದ ಅಡ್ವೊಕೇಟರಾಗಿದ್ದರೆಂದು ಕೇಳಿದ್ದೇನೆ. ಅವರು ಒಂದು ತಿಂಗಳ ಕಾಲ ನನ್ನ ಅತ್ಯಂತ ಆತ್ಮೀಯರಾದರು. ಅದಕ್ಕೆ ಕಾರಣ ಅವರ ತಾಯಿ, ಸೀತಮ್ಮ ಅಂತ. ನನಗೆ ತಾಯಿ ಅನ್ನಿಸಿದ್ದು ಅವರೊಬ್ಬರೇ. ಅವರು ಬದುಕಿದ್ದರೆ ಅವರನ್ನು ನೋಡಬೇಕು”
ಎಂದು ದಿನಕರ ತನ್ನ ಚೀಲದಿಂದ ಒಂದು ಹಳೆಯ ಅಡ್ರೆಸ್ ಪುಸ್ತಕ ತೆಗೆದು ‘ನಾರಾಯಣ ತಂತ್ರಿ’ ಎಂಬುವರ ವಿಳಾಸ ತೋರಿಸಿದ. ಶಾಸ್ತಿಗಳಿಗೆ ತನ್ನ ಬದುಕು ಬದಲಾಗುವ ಸಂಜ್ಞೆ ಗಟ್ಟಿಯಾದಂತಾಗಿ, ವೇದನೆಯಾಗಿ, ಆದರೆ ಅವನಂತೆಯೇ ತನ್ನ ದೈನಿಕ ವ್ಯಕ್ತಿತ್ವಕ್ಕೆ ಹೊರಳಿ ಕೇಳಿದರು:
“ ಅಯ್ಯೋ ಇವರು ನನಗೆ ಬೇಕಾದವರು. ಅವರ ಮನೆಯಲ್ಲಿ ಒಂದು ದಿನವಿದ್ದೇ ನಾನು ನನ್ನ ಊರಿಗೆ ಹೋಗುವುದು. ಅವರ ತಾಯಿ ಇನ್ನೂ ಇದ್ದಾರೆ. ಅವರ ಮನೆಗೆ ಹೋದಾಗಲೆಲ್ಲ ನಾನು ಅವರಿಗೆ ಪುರಾಣ ಓದಿ ಹೇಳಬೇಕು. ಅದೇ ಪುರಾಣವನ್ನು ಅದೆಷ್ಟೋ ಸಲ ಈ ಹತ್ತು ಹದಿನೈದು ವರ್ಷಗಳಿಂದ ಅವರಿಗೆ ಪಠಿಸಿದ್ದೇನೆ. ನಿಮ್ಮನ್ನು ನಾನೇ ಖುದ್ದು ಕರೆದುಕೊಂಡು ಹೋಗುತ್ತೇನೆ. ಬೆಂಗಳೂರಿಗೆ ಈ ರೈಲು ಸಂಜೆ ತಲುಪುತ್ತದೆ. ರಾತ್ರೆ ಲಕ್ಸುರಿ ಬಸ್ಸಿದೆ ಮಂಗಳೂರಿಗೆ” ಎಂದು ಆಡಬಾರದಷ್ಟು ಮಾತನ್ನು ಆಡಿಬಿಟ್ಟರು.
ಇಂಥ ಪರಿಶುದ್ಧವಾದ ಮಾತುಗಳನ್ನಾಡಲು ಅವರು ಈ ಭಾಷೆಯನ್ನು ಬಳಸಿದ್ದೇ ನೆನಪಾಗಿತ್ತು; ತಾನು ಶರ್ಟು ಪೈಜಾಮಗಳನ್ನು ಹಾಕಿಕೊಂಡು, ಜುಟ್ಟು ಮುಚ್ಚಲೆಂದು ತಲೆಯ ಮೇಲೊಂದು ಕಪ್ಪು ಟೊಪ್ಪಿಯನ್ನೂ ಧರಿಸಿ, ಹಣೆಯ ಮೇಲೆ ಅಕ್ಷತೆಯಿಲ್ಲದೆ, ಬೊಂಬಾಯಿ ಬೀದಿಗಳಲ್ಲಿ ಸುಮಾರು ಅರ್ಧ ಶತಮಾನಗಳ ಹಿಂದೆ ಅಂತರ ಪಿಶಾಚಿಯಾಗಿ ಅಲೆದಾಡುತ್ತ ರೂಢಿಮಾಡಿಕೊಂಡಿದ್ದ ಭಾಷೆ ಅದು. ಆದ್ದರಿಂದ ಹೀಗೆ ಮಾತಾಡುತ್ತಿರುವುದು ತಾನಲ್ಲ, ತನ್ನನ್ನು ಹೊಕ್ಕ ಅಪದೇವತೆ ಎನ್ನಿಸಿತ್ತು. ಆದರೆ ಅವರ ಮುಖ ಆರ್ತವಾದ ನಿರೀಕ್ಷೆಯಲ್ಲಿ ಅವನನ್ನು ನೋಡುತ್ತಿತ್ತು. ಬಾಯಿಗೆ ಬಂದದ್ದನ್ನು ಹೇಳಿಬಿಟ್ಟಿದ್ದರು: “ಪುಟಾಣಿ ಎಂದರೆ ಮುದ್ದಿನ ಮಗ ಅಂತ . ನನಗೆ ಈಗ ಮಕ್ಕಳಿಲ್ಲ. ಇದ್ದ ಒಬ್ಬಮಗಳು ಎರಡು ವರ್ಷಗಳ ಕೆಳಗೆ ಮನೆಬಿಟ್ಟು ನಡೆದುಬಿಟ್ಟಳು. ಒಟ್ಟು ನನ್ನ ಗ್ರಹಚಾರ ಎನ್ನದೇ ವಿಧಿಯಿಲ್ಲ. ನನಗೆ ನೀವು ಮಗನಾಗಬಹುದಿತ್ತು.” ಹೀಗೆ ತಾನು ಎಸೆದುಬಿಟ್ಟ ಮಾತಿಗೆ ದಿನಕರ ಸುಲಭವಾದ ಸೌಜನ್ಯದಿಂದ ಉತ್ತರಿಸಿದ್ದ. “ದಾಡಿ ಬಿಟ್ಟ ನನ್ನಂಥ ದಾಂಢಿಗನನ್ನು ಹಾಗೆ ಕರೆಯೋದು ಸರಿ ಅನ್ನಿಸಿದರೆ ನಿಮ್ಮನ್ನ ಎನೂಂತ ಕರೀಲಿ? ಚಿಕ್ಕಪ್ಪನೋ ದೊಡ್ಡಪ್ಪನೋ ಮಾವನೋ?” ಈ ಮಾತು ಕೇಳಿ ತಾನು ಪ್ರೇತ ಸಮಾನವಾಗಿ ಬಿಟ್ಟೆ ಎಂದು ವೃದ್ಧನಾದ ತನಗೆ ಅನ್ನಿಸಿತ್ತು. ಆದರೆ ಅವನು ಎಷ್ಟು ಗೆಲುವಾಗಿ ಬಿಟ್ಟಿದ್ದನೆಂದರೆ, ಆಟೋಗ್ರಾಫ್ ಪುಸ್ತಕವನ್ನು ತನ್ನ ಲೆದರ್ ಬ್ರೀಫ್‌ಕೇಸಿನಿಂದ ತೆಗೆದು ಒಡ್ಡಿದ ಜೀನ್ಸ್‌ದ್ಧಾರಿಗೂ ಖುಷಿಯ ಹಾಸ್ಯದಲ್ಲಿ ಹೀಗೆ ಹಿಂದಿಯಲ್ಲಿ ಬರೆದಿದ್ದ : “ಟೀವಿಯ ದಿನಕರನಲ್ಲ. ಅವನಿಂದ ಕಳಚಿಕೊಂಡು ಬೆಂಗಳೂರು ತಲುಪುತ್ತಿರುವ ಅರಿಯದ ಒಬ್ಬ ಪುಟಾಣಿ” ಮತ್ತೆ ಬಿಳಿಚಿಕೊಂಡಿದ್ದ ತನ್ನ ಕಡೆ ನೋಡಿ, ಪುಟಾಣಿಯಂತೆಯೇ ಮುದ್ದಾಗಿ ಅಂದಿದ್ದ: “ಚಿಕ್ಕಪ್ಪ, ನಿಮ್ಮ ಕಚ್ಚಾ ಹಿಂದಿ ಚೆನ್ನಗಿಯೇ ಇದೆ. ಆದರೆ ನನಗೆ ಬಹುವಚನ ಉಪಗೋಗಿಸಬೇಡಿ.” ದಿನಕರನ ಕೊರಳಿನ ತಾಯಿತವನ್ನು ತಾನು ನೋಡುತ್ತಿರುವುದನ್ನು ಗಮನಿಸಿ ಅಪರಿಚತನಾದ ತನಗೆ ಅವನು ಹೇಳಿಬಿಟ್ಟ ಮುಂದಿನ ಮಾತು ಶಾಸ್ತಿಗಳನ್ನು ಇನ್ನಷ್ಟು ಅಧೀರಗೊಳಿಸಿತ್ತು. “ಚಿಕ್ಕಪ್ಪ ನೋಡಿ, ಈ ತಾಯಿತವನ್ನು ನನ್ನ ತಾಯಿ ಗಂಗೆಯಲ್ಲಿ ಇಳಿಯುವುದಕ್ಕೆ ಮುಂಚೆ ನನ್ನ ಕೊರಳಲ್ಲಿ ಹಾಕಿದ್ದು. ನೀರಿಗಿಳಿದವರು ಮತ್ತೆ ಬರಲಿಲ್ಲ. ನೀವು ಕೊಟ್ಟ ತಿಂಡಿಯ ಫಲವಾಗಿ ಈಗ ಮತ್ತೆಲ್ಲ ನೆನೆಪು. ಈ ನಲವತ್ತು ವರ್ಷಗಳಿಂದ ಈ ತಾಯಿತ ನನ್ನ ಕೊರಳಲ್ಲೇ ಮಾತೃರಕ್ಷೆಯಾಗಿ ಇದೆ” ಎಂದಿದ್ದ. ಈ ಮಾತು ಕೇಳಿ ಶಾಸ್ತಿಗಳು ‘ಶಿವ ಶಿವಾ ನನ್ನನ್ನು ಕಾಪಾಡು’ ಎಂದು ಜಪಮಣಿ ಹಿಡಿದು ಕಣ್ಣುಮುಚ್ಚಿ ಫ್ರಾರ್ಥಿಸಿದ್ದರು.
ಅಧ್ಯಾಯ ೩
ಶಾಸ್ತಿಗಳು ಗರ ಬಡಿದವರಂತೆ ಮಂಕಾಗಿ ಬಿಟ್ಟಿದ್ದರು. ಪುರಾಣ ಪ್ರವಚನದಿಂದ ತನಗೆ ಅಭ್ಯಾಸವಾದ ಅನ್ಯಶ್ರವಣಕ್ಕಾಗಿ ಸೊಗಸುಗೊಂಡ ಭಾಷೆಯೂ, ಪೂರ್ವಜನ್ಮದಂತೆ ನೆನಪಾಗುವ ತನ್ನ ಬೊಂಬಾಯಿ ವ್ಯಸನದ ಭಂಡು ಭಾಷೆಯೂ ತನಗೇ ಅವರು ಭಯಪಡುತ್ತ ಅಂದುಕೊಳ್ಳುತ್ತಿದ್ದುದನ್ನು ಹೆಳಲಾರದಾಗಿ ಬಿಟ್ಟಿತ್ತು. ದಿನಕರ ಕಾರು ಮಾಡಿಕೊಂಡು ಮಂಗಳೂರಿಗೆ ಹೋಗೋಣವೆಂದು ಒತ್ತಾಯ ಮಾಡಿದ : “ಅಯ್ಯಪ್ಪ ವ್ರತ ಹಿಡಿದಿದ್ದರೂ ನನ್ನ ಹತ್ತಿರ ಕ್ರೆಡಿಟ್ ಕಾರ್ಡಿದೆ. ಇದೋ ನೋಡೆ ಚಿಕ್ಕಪ್ಪ”. “ಅಯ್ಯೋ ಅದು ಖರ್ಚಿನ ಪ್ರಶ್ನೆಯಲ್ಲ. ರಾತ್ರೆ ಘಾಟಿನಲ್ಲಿ ಪ್ರಯಾಣ ಕ್ಷೇಮವಲ್ಲ. ನನ್ನ ಹತ್ತಿರವು ಮಸ್ತು ದುಡ್ಡಿದೆ. ಅಡಿಕೆಯಲ್ಲಿ ಪ್ರತಿವರ್ಷ ಐದುಲಕ್ಷಕ್ಕೂ ಕಮ್ಮಿಯಿಲ್ಲದಂತೆ ಮಿಕ್ಕುತ್ತದೆ. ನನಗೇನು ಮಕ್ಕಳೊ, ಮರಿಯೋ-ಯಾವುದರ ಖರ್ಚು? ಕರ್ಮ ಸವೆಸಲೆಂದು ಹಚ್ಚಿಕೊಂಡವ್ಯಸನ ಇದು-ಪುರಾಣ ಪ್ರವಚನ ಅಂತ ಅಲೆದಾಡೋದು”. ಇಷ್ಟು ಮಾತನ್ನು ಕಷ್ಟಪಟ್ಟು ಹೊರಗೆ ಹಾಕುವಾಗ ಅವನನ್ನು ‘ಪುಟಾಣಿ’ಯೆಂದು ಸಂಬೋಧಿಸಬೇಕೆಂದರೂ ಗಂಟಲು ಕಟ್ಟಿತ್ತು. ಅವನು ಆ ಸೂಳೆಮಗ ಪಂಡಿತನ ಮಗನಾಗಿದ್ದರೆ? ಸ್ಟೇಶನ್ನಿನಿಂದ ಟ್ಯಾಕ್ಸಿ ಮಾಡಿಕೊಂಡಿ ಕಿರಿದಾದ ಬೀದಿಗಳಲ್ಲಿ ಸುತ್ತಿ ಬಳಸಿ ಹತ್ತಿ ಇಳಿದು ಅಡ್ವೊಕೇಟ್ ನಾರಾಯಣ ತಂತ್ರಿಗಳ ಬಂಗಲೆಯ ಎದುರು ಇಳಿದರು. ಮನೆಗಳಿಗೆ ಹೊದಿಸಿದ ಹೆಂಚುಗಳ ಅದೇ ಬಣ್ಣದ ಹಲವು ಶೇಡುಗಳು, ಹಳೆಯ ಕಾಲದ ಮನೆಗಳ ಮುಖಮಂಟಪಗಳು, ಬಳಸುತ್ತ ಸಾಗುವ ಬೀದಿಗಳು-ಇವು ದೆಹಲಿಯಲ್ಲಿ ಕಣ್ಣು ಕಿವಿಗಳನ್ನು ಕೆಡಿಸಿಕೊಂಡ ದಿನಕರನಿಗೆ ಖುಷಿಕೊಟ್ಟಿದ್ದವು. “ನಾನು ಯಾರೆಂದು ಹೇಳಬೇಡಿ ಚಿಕ್ಕಪ್ಪ. ಅಮ್ಮನಿಗೆ ಈ ಇಪ್ಪತೈದು ವರ್ಷಗಳ ನಂತರ ಗುರ್ತು ಹತ್ತತೋ ನೋಡುವ, ಅದೂ ಈ ನನ್ನ ವೇಷದಲ್ಲಿ, ಹತ್ತಿದರೆ ಇನ್ನೂ ದಿನಕರ ನಿರ್ನಾಮವಾಗಿಲ್ಲ ಅಂತ.” ದಿನಕರ ಹಗುರಾಗಿ ಬಿಟ್ಟಿದ್ದ. ಲಗುವಗೆಯಿಂದ ತನ್ನ ಕೈಚೀಲವನ್ನು ಹೆಗಲಿಗೆ ನೇತುಹಾಕಿ ಗೇಟನ್ನು ತೆಗೆದು ನೋಡಿದ. ಹಸಿರಾದ ಸಾಲು ಮರಗಳನ್ನೂ, ಮಾವಿನ ಮರಗಳನ್ನೂ, ತೆಂಗಿನ ಮರಗಳನ್ನೂ ಸಮೃದ್ಧವಾಗಿ ಪಡೆದು, ಕಂಡೂ ಕಾಣದ ಹಾಗೆ, ಕಣ್ಣು ಮುಚ್ಚಾಲೆಯಾಡುವ ಹಳೆಯ ಕಾಲದ ಬಂಗಲೆಯನ್ನು ಸುಮಾರು ಎರಡು ಎಕರೆ ತೋಟದ ಡ್ರೈವ್‌ವೇನಲ್ಲಿ ಸುತ್ತಿ ಬಳಸಿ ನಡೆದು ಮುಟ್ಟಬೇಕು. ಜಪದ ಮಣಿ ಎಣಿಸುತ್ತ ಶಾಸ್ತಿಗಳು ಹಿಂಬಾಲಿಸಿದ್ದರು. ಮನೆಯ ಎದುರಿನ ಅಂಗಳದಲ್ಲಿ ಬಿಳಿಕೂದಲನ್ನು ನೀಟಾಗಿ ಬಾಚಿಕೊಂಡ ಮುದುಕಿಯೊಬ್ಬಳು ನಿಂತಿದ್ದಳು. ಬರುತ್ತಿರುವವರನ್ನು ಕಾಣಲೆಂದು ನಿರೀಕ್ಷೆಯಲ್ಲಿ ಎತ್ತಿದ ಸುಕ್ಕುಗಟ್ಟಿದ ಮುಖದ ಮೇಲೆ ಮನೆಯೆದುರು ನೆಟ್ಟ ಕಂದೀಲಿನ ಬೆಳಕು ತುಸುಬಿದ್ದು ಅವಳ ಕಣ್ಣುಗಳು ಹೊಳೆಯುತ್ತಿದ್ದವು. ಸಪುರವಾದ ಮೈಕಟ್ಟಿನವರಿಗೆ ವಯಸ್ಸಾದ್ದು ಗೊತ್ತಾಗುವುದಿಲ್ಲವೆನ್ನುತ್ತಾರೆ. ಹರಿದ್ವಾರದಲ್ಲಿ ಕಂಡಂತೆಯೇ ಸೀತಮ್ಮ ಲಕ್ಷಣವಂತೆಯಾಗಿ ಕಂಡಿದ್ದರು. ಇನ್ನಷ್ಟು ಸುಕ್ಕು,ಇನ್ನಷ್ಟು ಬಿಳಿಕೂದಲು ಬಿಟ್ಟರೆ ಬದಲಾವಣೆಯಿಲ್ಲ. ಅವರು ತೊಟ್ಟ ಶುಭ್ರವಾದ ಬಿಳಿಸೀರೆ, ಒಣಗಲೆಂದು ತುದಿಯಲ್ಲಿ ಗಂಟು ಹಾಕಿದ ಕೂದಲು ನೋಡಿದರೆ, ಸ್ನಾನ ಮಾಡಿದಂತೆ ಕಾಣುತ್ತಿತ್ತು. ಅಂಗಳದಲ್ಲಿ ಯಾಕೆ ನಿಂತಿದ್ದಾರೆಂಬುದು ಅವರು ಕೈಯಲ್ಲಿ ಹಿಡಿದ ರಂಗೋಲೆ ಬಟ್ಟಲಿನಿಂದ ಖಚಿತವಾಗಿತ್ತು. ಕಪ್ಪುಕಲ್ಲಿನ ಆ ಬಟ್ಟಲೂ ಹರಿದ್ವಾರದಲ್ಲಿ ಖರೀದಿಸಿದ್ದಿರಬೇಕು. ಹರಿದ್ವಾರದಲ್ಲಿ ತನ್ನ ಸಾಕುತಂದೆ ಕಟ್ಟಿಸಿದ ಛತ್ರದಲ್ಲಿ ನಿಲ್ಲಲೆಂದು ಎಲ್ಲ ಯಾತ್ರಿಕರಂತೆ ಯಾರೋ ಅಪರಿಚಿತರಾಗಿ ಬಂದವರು, ತಮ್ಮ ದಿವ್ಯವಾದ ಮುಖಲಕ್ಷಣದ ತೇಜಸ್ಸಿನಿಂದ ಒಂದೆರಡು ದಿನಗಳಲ್ಲೇ ತನ್ನ ಸಕುತಂದೆಗೆ ಬೇಕಾದವರಾಗಿ ತಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು. ನಸುಕಿನಲ್ಲೆದ್ದು ಮನೆಯ ಅಂಗಳ ಗುಡಿಸಿ, ಸಾರಿಸಿ, ಗಂಗಾಸ್ನಾನ ಮಾಡಿಕೊಂಡು ಒದ್ದೆಗೂದಲನ್ನು ಬೆನ್ನಿನ ಬೇಲೆ ಹರಡಿಕೊಂಡು ಎಷ್ಟು ಏಕಾಗ್ರವಾಗಿ, ಸುಂದರವಾಗಿ, ದಿನಕ್ಕೊಂದು ಬಗೆಯ ರಂಗೋಲಿಯನ್ನು ಅಂಗಳದಲ್ಲಿ ಬಿಡಿಸುತ್ತಿದ್ದರೆಂದರೆ ತ್ರಿಪಾಠಿಗಳ ಪುರಾತನ ಮನೆಗೆ ಸೌಭಾಗ್ಯದ ಕಳೆ ಬಂದಿತ್ತು. ರಂಗೋಲೆ ಮುಗಿದದ್ದೇ ಸೀತಮ್ಮ ಸ್ವಯಂಪಾಕದ ವ್ರತ ಹಿಡಿದವರಾದ್ದರಿಂದ ತಾವೇ ಸ್ವತ: ಅಡಿಗೆ ಮನೆಗೆ ಒತ್ತಾಯದಿಂದ ನುಗ್ಗಿ, ಅವಲಕ್ಕಿಯ ಉಪ್ಪಿಟ್ಟನ್ನೋ, ಕೇಸರಿಬಾತನ್ನೋ, ಇಡ್ಲಿಯನ್ನೋ ಮಾಡಿ ಮನೆ ಮಂದಿಗೆಲ್ಲಾ ಹೊಸರುಚಿಯ ತಿಂಡಿಗಳನ್ನು ಬಡಿಸಿ, ಎಲ್ಲರಿಗೂ ಪ್ರೀತಿಯ ಅಮ್ಮನಾಗಿಬಿಟ್ಟಿದ್ದರು. ಅವರಿಗೆ ಆಗ ನಡುಪ್ರಾಯ. ನಲವತೈದು ವರ್ಷದ ವಿಧವೆ. ತ್ರಿಪಾಠಿಗಳಿಗೆ ಆಗಲೇ ಎಪ್ಪತೈದು ವರ್ಷ. ಕುಲೀನ ಶ್ರೀಮಂತರು. ಮಹಾಧರ್ಮಿಷ್ಠರು. ಸೀತಮ್ಮನನ್ನು ಅವರು ಅಕ್ಕರೆಯಿಂದ ‘ತಂಗಿ’ ಎಂದು ಕರೆಯುವುದು : “ತಂಗಿ ನಾವು ಕೂಡ ಬ್ರಾ ಹ್ಮಣರೇ. ಈರುಳ್ಳಿಯನ್ನು ಕೂಡ ತಿನ್ನುವವರಲ್ಲ. ನಮ್ಮ ಅಡಿಗೆ ನೀವು ಊಟ ಮಾಡಬಹುದು.” ಅವರು ಹಿಂದಿಯಲ್ಲಿ ಮಾತಾಡಿದ್ದು ಸೀತಮ್ಮನಿಗೆ ಅರ್ಥವಾಗುತ್ತಿರಲಿಲ್ಲ. ಅವರ ಮಗ ನಾರಾಯಣ ತಂತ್ರಿಗೆ ಸ್ಕೂಲಿನಲ್ಲಿ ಹಿಂದಿ ಪ್ರಚಾರ ಸಭಾದ ಉತ್ಸಾಹ ಫಲವಾಗಿಯಲ್ಲದೆ, ಅವನ ಚಿಕ್ಕವಯಸ್ಸಿನ ಡಿಬೇಟಿನ ಮೋಜಿನಿಂದಾಗಿ ಅಷ್ಟಿಷ್ಟು ಹಿಂದಿ ಬರುತ್ತಿತ್ತು. ಅವನಿಗೆ ಸತತವಾಗಿ ದುಭಾಷಿಯ ಕೆಲಸ.
ಸೀತಮ್ಮನ ಎದುರು ಹೋಗಿ ದಿನಕರ ನಿಂತ. ‘ಅಮ್ಮ’ ಎಂದ. ಸೀತಮ್ಮ ದಿನಕರನ ಕೊರಳಿನ ತಾಯಿತವನ್ನು ಕಣ್ಣು ಕಿರಿದು ಮಾಡಿ ಶಾಸ್ತಿಗಳಂತೆಯೇ ದಿಟ್ಟಿಸಿದ್ದರು. ಮತ್ತೆ ಅವನನ್ನು ಕಣ್ಣಿಗೆ ಕಣ್ಣಿಟ್ಟು ನೋಡಿದ್ದರು. ಅವರ ಕಣ್ಣುಗಳು ಕ್ರಮೇಣ ಮಾತೃವಾತ್ಸಲ್ಯದಲ್ಲಿ ಬೆಳಗುತ್ತ, ಕಾಲದಲ್ಲಿ ಹಿಂದಾಗುತ್ತ, ತನ್ನನ್ನು ಪುನ: ಸೃಷ್ಟಿಸಿಕೊಳ್ಳುವುದನ್ನು ಆತಂಕದಲ್ಲೂ ಏರಿ ಇಳಿಯುವ ಸುಖಕರವಾದ ವೇದನೆಯಲ್ಲೂ ನಿರೀಕ್ಷಿಸುತ್ತ ದಿನಕರ ನಿಂತಿದ್ದ. “ಅಯ್ಯೋ ದಿನಕರನಲ್ಲವ” ಎಂದ್ದಿದ್ದರು. ಅವನನ್ನು ಮಡಿಯಲ್ಲಿದ್ದುದರಿಂದ ಆ ಕ್ಷಣವೇ ತಬ್ಬಿಕೊಳ್ಳಲಿಲ್ಲ, ಅಷ್ಟೆ. ಆದರೆ ಅವರ ಕಣ್ಣುಗಳು ಮಾತೃಸ್ಪರ್ಶದ ಸುಖವನ್ನೆಲ್ಲ ಅವನಿಗೆ ಕೊಟ್ಟಿತ್ತು. ಹೀಗೆ ಒಂದು ಕ್ಷಣ ಕಳೆಯಿತು ಅಷ್ಟೆ. ಸೀತಮ್ಮ ಶಾಸ್ತಿಗಳ ಕಡೆ ತಿರುಗಿ, ‘ಏನು ಶಾಸ್ತಿಗಳೆ, ಮತ್ತೆ ಸ್ನಾನ ಮಾಡಿ ನಿಮಗೆ ಫಲಾಹಾರ ಮಾಡಿದರಾಯಿತು, ಅಲ್ಲವ?’ ಎಂದು ಹತ್ತಿರ ಬಂದು ಅವನ ಕೈಹಿಡಿದುಕೊಂಡರು. ಇಷ್ಟು ವರ್ಷ ಯಾಕೆ ತನ್ನನ್ನು ಬಂದು ನೋಡಲಿಲ್ಲೆಂದು ಕೇಳಿರಲಲ್ಲ. “ನಾಗವೇಣಿ ಕಾಫಿ ತಗೊಂಡು ಬಾ” ಎಂದು ಕೂಗಿದ್ದರು. ತಾವೇ ಒಳಗಿನಿಂದ ಬೆತ್ತದ ಕುರ್ಚಿಗಳನ್ನು ಅಂಗಳಕ್ಕ ತರಲು ಸೀತಮ್ಮ ಹೋಗುವುದನ್ನು ಕಂಡು ದಿನಕರ ಲಗುಬಗೆಯಿಂದ ಹೇಳಿದ್ದ. ‘ಅಮ್ಮ ರಂಗೋಲೆಯಿಕ್ಕಿ, ನೋಡಬೇಕು’. ಸೀತಮ್ಮನಿಗೆ ಅರ್ಥವಾಗದಿದ್ದರೂ ಗೊತ್ತಾದಂತೆ ಇತ್ತು. ‘ನಿನಿಗೆ ಇಷ್ಟವಲ್ಲವ? ಕೂತುಕೋ. ನಿನಿಗೆ ಹರಿದ್ವಾರದಲ್ಲಿ ಇಷ್ಟವಾದ್ದನ್ನೇ ಬಿಡಿಸುತ್ತೇನೆ. ಕಾಫಿ ಕುಡುಯುತ್ತಾ ನೋಡುವಿಯಂತೆ. ಶಾಸ್ತಿಗಳೇ ನೀವು ಒಳಗೆ ಹೋಗಿ ಸ್ನಾನ ಮಾಡಿ. ಬೇಕಾದರೆ ಬಿಸಿ ನೀರು ಕಾಯಿಸಿದ್ದಿದೆ’ ಎಂದು ತನ್ನಷ್ಟಕ್ಕೆ ನಗುತ್ತ ರಂಗೋಲೆಯಿಕ್ಕಲು ಕೂತರು ಸೀತಮ್ಮ. ಶಾಸ್ತಿಗಳು ತಮ್ಮ ಹಿಂದುಸ್ತಾನಿಯಲ್ಲಿ ಭಾಷಾಂತರಿಸಿ ಸ್ನಾನದ ಮನೆಗೆ ಹೋಗಿದ್ದರು. ಹೆಬ್ಬೆರೆಳಿಂದಲೂ ತೋರು ಬೆರೆಳಿಂದಲೂ ರಂಗೊಲೆ ಪುಡಿಯನ್ನು ಹಿಡುದು, ಅದನ್ನು ಬೆರೆಳಿನಲ್ಲಿ ತಿಕ್ಕುತ್ತ ಬಿಗಿಮಾಡಿ, ರೇಖೇಗೆ ಅಗತ್ಯವಾದಷ್ಟು ಅದನ್ನು ಸರಿಸುತ್ತ, ಕ್ಷಣಾರ್ಧದಲ್ಲಿ ಸಾರಿಸಿದ ಅಂಗಳದ ನಡುವಿನಲ್ಲೆಂದರೆ ನಡುವಿನಲ್ಲಿ, ಎರಡು ತ್ರಿಕೋಣಗಳನ್ನು ಒಂದರೊಳಗೊಂದು ಮೂಡಿಸಿದ್ದರು. ಒಂದರಲ್ಲಿ ದೇವರ ಕೃಪೆ ಮೇಲಿನಿಂದ ಭೂಮಿಗಿಳಿದರೆ, ಇನ್ನೊಂದರಲ್ಲಿ ಜೀವಾತ್ಮನ ಆಕಾಂಕ್ಷೆ ಕೆಳಗಿನಿಂದ ಮೇಲೇರುತ್ತಿತ್ತು. ಎರಡೂ ಸೀತಮ್ಮನ ನಿರ್ದೋಷದ ನೋಟದಿಂದಾಗಿ ಒಂದಕ್ಕೊಂದು ಸಮನಾಗಿ ಸಂಧಿಸಿತ್ತು. ತಾನು ರುಚಿಕರವಾದ ಬಿಸಿಯಾದ ಕಾಫಿಯನ್ನು ಬೆಳ್ಳಿಯ ಬಟ್ಟಲಿನಲ್ಲಿ ಇಪ್ಪತೈದು ವರ್ಷಗಳ ಹಿಂದಿನಂತೆಯೇ ಚೂರು ಚೂರೇ ಕುಡಿಯುತ್ತ ಸೀತಮ್ಮನ ಸೃಷ್ಟಿಯಲ್ಲಿ ಏಕಾಗ್ರನಾಗಿ ಬಿಟ್ಟಿದ್ದೆ. ಸಾವಿರಾರು ವರ್ಷಗಳಿಂದ ಸತತವಾಗಿ ದೇವಾಲಯಗಳ ಗೋಡೆಗಳ ಮೇಲೂ ಬಡವರ ಗುಡಿಸಲುಗಳ ಅಂಗಳದಲ್ಲೂ ಮೂಡುತ್ತಲೇ ಇದ್ದುದ್ದು ಈ ಪ್ರಾತಃಕಾಲವೂ ಸಗಣಿ ಹಾಕಿ ಸಾರಿಸಿದ ಅಂಗಳದಲ್ಲಿ ಮೂಡತೊಡಗಿತ್ತು. ಎಲ್ಲಿ ಬೇಕೋ ಅಲ್ಲಿ ಬಳ್ಳಿ, ಬಳ್ಳಿಗೆ ಎಲೆ, ಎಲೆ ಎಲೆಗೂ ಹೂವು, ರಕ್ಷೆಗೆಂದು ಅಲ್ಲಿ ಇಲ್ಲಿ ಮೂಲೆಯಲ್ಲಿ ಸ್ವಸ್ತಿಕ, ಮತ್ತೆ ನವಿಲುಗಳು-ಮತ್ತೆ ಅದೋ ಗಣೇಶ. ಅವನಿಗೋಂದು ಮೂಷಿಕ ಕೂಡ. ಇಲಿಯನ್ನು ಬಿಡಿಸುತ್ತ ಸೀತಮ್ಮ ಮುಗುಳ್ನಕ್ಕು ಹೇಳಿದ್ದರು: ‘ಸ್ವಲ್ಪ ಅಡ್ಡಂಬಡ್ಡವಾಗಿ ಬಿಟ್ಟಿತು. ಈಗ ನನ್ನ ಬೆರಳಿಗೆ ಶಕ್ತಿ ಸಾಲದು. ಕೈ ನಡುಗುತ್ತೆ. ನಾಳೆ ಇನ್ನೂ ಚೆನ್ನಾಗಿ ಬಿಡಿಸುವೆ, ಆಯಿತಾ ದಿನಕರ? ನಾಳೆ ಗಣೇಶ ನಡುವೆ ಬರುತ್ತಾನೆ. ಕೂತಿರುವುದಿಲ್ಲ ಕುಣಿಯುತ್ತಾನೆ’ ಎಂದು ತನ್ನಷ್ಟಕ್ಕ ಅಂದುಕೊಂಡರು. ದಿನಕರನಿಗೆ ಕನ್ನಡ ಅರಿಯದೆಂದು ಅವರಿಗೆ ಎಗ್ಗಿಲ್ಲ.
ಅಧ್ಯಾಯ ೪
“ನಾಣಿ ಯಾವಾಗಲೂ ಏಳುವುದು ತಡ. ಅವನ ಮಗ ಗೋಪಲ ಮಾತ್ರ ಬೇಗ ಎದ್ದು ಬಿಡುತ್ತಾನೆ. ನಾವು ಹರಿದ್ವಾರಕ್ಕೆ ಬಂದಾಗ ಅವನು ಕೂಸು. ತಾಯಿಯನ್ನು ಕಳೆದುಕೊಂಡ ಕೂಸು. ಕೂಸನ್ನು ನೋಡಿಕೊಳ್ಳಲೆಂದು ಗಂಗೂಬಾಯಿ ಎಂಬ ಹುಡುಗಿ ನಮ್ಮ ಜೊತೆಗಿದ್ದಳು. ನಿನಗವಳು ನೆನಪಿರಬೇಕು. ಬಳೆ ತೊಡಿಸಿಕೊಳ್ಳೋದೂಂದರೆ ಅವಳಿಗೆ ಹುಚ್ಚು. ಕಂಡಲ್ಲಿ ಬಳೆ ತೊಡಿಸಿಕೊಳ್ಳಬೇಕು ಅವಳಿಗೆ. ನಿನಗೆ ನೆನಪಿರಲಿಕ್ಕ ಸಾಕು. ಅವಳಿಗೂ ಈಗ ಒಬ್ಬ ಮಗ ಇದ್ದಾನೆ. ಗೋಪಾಲನಿಗಿಂತ ಒಂದು ವರ್ಷ ಚಿಕ್ಕವನು. ಅವಳು ಶಾಲೆಗೆ ಹೋಗಿ ಕಲಿತು ಈಗ ಹೈಸ್ಕೂಲಿನಲ್ಲಿ ಮೇಡಂ. ಅವಳ ಮಗನ ಹೆಸರು ಪ್ರಸಾದ. ನಾಣಿಯೇ ಅವರಿನೋಂದು ಮನೆ ಕಟ್ಟಿಸಿಕೊಟ್ಟ. ಗಂಗೂಬಾಯಿಗೆ ಸೋದರಿಕ ಸಂಬಂಧ. ಅವಳ ಗಂಡನಿಗೆ ಏನೂ ತಿಳಿಯದು. ಹಸುವಿನಂಥ ಸಾಧುಪ್ರಾಣಿ. ಮನೇಲಿ ದನ ಸಾಕಿಕೊಂಡು ಹಾಲು ಕರೀತಾನೆ. ತಮಗಷ್ಟು ಇಷ್ಟುಕೊಂಡು ನಮಗಷ್ಟು ಕೊಟ್ಟು ಉಳಿದಿದ್ದನ್ನು ಮಾರತಾನೆ. ಆಯಿತ? ನನ್ನ ಮೊಮ್ಮಗನೋ ಈಚೆಗೆ ಬಹಳ ಹಾರಾಡಕ್ಕೆ ಶುರು ಮಾಡಿದಾನೆ. ನನ್ನ ಮಗ ಇಲ್ಲಿಯ ಮುನಿಸಿಪಾಲಿಟಿಯ ಫ್ರೆಸಿಡೆಂಟಾಗೆ ಭಾರೀ ಕಡಿದದ್ದು ಆಯಿತು. ಈಗ ಮೊಮ್ಮಗ ದೇಶೋದ್ದಾರದ ಕೆಲಸಕ್ಕೆ ಶುರು ಮಾಡಿದಾನೆ. ಅಪ್ಪನ ಜೊತೆ ಲಾಯರು ಅಂತ ನೆವಕ್ಕೆ ಬೋರ್ಡ್ ಹಾಕ್ಕೊಂಡಿದಾನೆ. ಆದರೆ ಅಪ್ಪನ ಮಾತು ಕೇಳ್ತಾನೋ? ಇವತ್ತು ಈ ಪಾರ್ಟಿಯಾದರೆ, ನಾಳೆ ಇನ್ನೊಂದು ಪಾರ್ಟಿ. ಬೆಳ್ಳಿಗ್ಗೆ ಎದ್ದು ಫೋನ್ ಮಾಡಕ್ಕೆ ಶುರು ಮಾಡ್ತಾನೆ-ಸುಬ್ಬಲಕ್ಷ್ಮಿ ಸ್ತೋತ್ರಾನ್ನ ಕೇಳಿಸಿಕೊಳ್ತಾ. ನೋಡ್ತಾ ಇರು: ನಿನ್ನ ಕಂಡದ್ದೇ ಹೇಗೆ ಹಾರಾಡ್ತಾನೆ ಅಂತ. ನಿನ್ನನ್ನ ಟೀವಿಯಲ್ಲಿ ನೋಡಿದಾಗಲೆಲ್ಲ ನಾವು ಮಾತಾಡಿಕೋತೀವೆ. ನಮ್ಮನ್ನು ಮರೆತುಬಿಟ್ಟಿರಬೇಕು ಅಂತ ನಾಣಿ ಹೇಳ್ತಾನೆ. ಆದರೆ ನಾನು ಹೇಳ್ತೀನೆ: ಅವನನ್ನು ಮತ್ತೆ ನೋಡದೆ ನಾನು ಸಾಯಲ್ಲ ಅಂತ. ‘ನೀನೇ ಬರೆಯೋ’ ಎಂದರೆ ನಾಣಿಗೆ ಸೋಮಾರಿತನ. ಎಷ್ಟು ವರ್ಷ ಬಿಟ್ಟಿತು, ಮರೆತಿರಬಹುದು. ಬಹಳ ದೊಡ್ಡ ಮನುಷ್ಯ ಆಗಿಬಿಟ್ಟಿದ್ದಾನೆ ಅಂತ ಮುಜುಗರ. ಆದೇನು ದೊಡ್ಡ ಮನುಷ್ಯನೋ ನೀನು?” ಎಂದು ಅಡಿಗೆ ಮನೆಯಲ್ಲಿ ಸ್ಟೂಲಿನ ಮೇಲೆ ಕೂತು ತನಗೆ ಏನೇನೂ ಅರ್ಥವಾಗದ ಸೀತಮ್ಮನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ದಿನಕರನ ಕೆನ್ನೆ ಚಿವುಟಲು ಬಂದು ಸೀತಮ್ಮ, ತಾನು ಮಡಿಯಲ್ಲಿದ್ದೇನೆಂದು ನೆನಪಾಗಿ, ನಗುತ್ತಾ ಹಿಂದಕ್ಕೆ ಸರಿದು ಮತ್ತೆ ಒಲೆಯೆದುರು ಕೂತರು. ದಿನಕರನಿಗೆ ಕನ್ನಡ ಬರದೆಂಬುದನ್ನು ಸಂಪೂರ್ಣ ಮರೆತಂತೆ ಅವನ ಮೇಲೆ ಪ್ರೀತಿ ಸುರಿಯುವ ನೆಪದಲ್ಲಿ ಸೀತಮ್ಮ ಮಾತಾಡುತ್ತಲೇ ಹೋದರು, ಕಡುಬು ಬೇಯುವುದನ್ನು ಕಾಯುತ್ತ. ಸೀತಮ್ಮ ಕೂತೇ ಅಡಿಗೆ ಮಡುವುದು. ಅದೂ ಸೌದೆ ಉರಿಯ ಮೇಲೆ, ಅವರೇ ಮಣ್ಣು ಕಲೆಸಿಕಟ್ಟಿದ ಕೂಡಲೊಲೆಯ ಮೇಲೆ. ನಿತ್ಯ ಬೆಳ್ಳಿಗ್ಗೆ ಈ ಒಲೆಯನ್ನು ಶುಭ್ರಮಾಡಿ, ಕರಿ ಬೆರೆಸಿದ ಸಗಣಿಯಲ್ಲಿ ಸಾರಿಸಿ, ಅದರ ಮೇಲೂ ರಂಗೋಲೆ ಬಿಟ್ಟಿರಬೇಕು. ಅವರು ಕಟ್ಟಿಗೆ ಜೋಡಿಸಿದರೆ ಉರಿ ಹತ್ತಿಕೊಳ್ಳುವ ಹಾಗೆ ಬೇರೆಯವರು ಜೋಡಿಸಲಾರರು. ಉರಿ ಒಲೆಯಲ್ಲಿ ಹೆಚ್ಚಾಗಿ, ಇನ್ನೆರಡು ತೂತುಗಳಲ್ಲಿ ಸ್ವಲ್ಪ ಸ್ವಲ್ಪ ಕಡಿಮೆಯಾಗಿ, ಉರಿಯ ಪ್ರಮಾಣಕ್ಕೆ ಉಚಿತವಾದ ಮೇಲೋಗರಗಳನ್ನು ಬೇಯಿಸುತ್ತದೆ. ಸೀತಮ್ಮ ಒಲೆಯಲ್ಲಿ ಜೋಡಿಸಿದ ಕಟ್ಟಿಗೆಯನ್ನು ಅಲ್ಲಿ ಇಲ್ಲಿ ಚೂರು ಚೂರೇ ಒಳದಬ್ಬುತ್ತ, ಹೊರಗೆಳೆಯುತ್ತ, ಒಂದರ ಮೇಲೋಂದು ಒಡ್ಡಿಕೋಂಡು ಉರಿಯಲು ಸಹಕರಿಸುವಂತೆ ತುಸುವೇ ಹಂದಿಸುತ್ತ, ರಂಗೋಲೆಯಿಕ್ಕುವಾಗಿನಂತೆಯೇ ಏಕಾಗ್ರರಾಗುತ್ತರೆ. ದಿನಕರನಿಗೆ ಹರಿದ್ವಾರದಲ್ಲಿ ಅವರೊಡನೆ ಕಳೆದ ದಿನಗಳು ಅವರು ಒಲೆ ಉರಿಸುವ ಕೌಶಲ್ಯ ಕಂಡು ನೆನಪಾಗಿತ್ತು.ತ್ರಿಪಾಠಿಗಳ ಮನೆಯಲ್ಲೂ ಅವರು ತಕ್ಕುದಾದ ಮಣ್ಣು ತರಿಸಿಕೊಂಡು ಒಲೆಯನ್ನು ನಿರ್ಮಿಸಿ ಅಡಿಗೆ ಮಾಡುತ್ತಿದ್ದದ್ದು. ಹತ್ತು ದಿನಕ್ಕೆಂದು ಬಂದವರು ಒಂದು ತಿಂಗಳು ಇದ್ದರು.
‘ಏನೋ ಹೇಳ್ತ ಇದ್ದೆ’ ಎಂದು ಸೀತಮ್ಮ ಮತ್ತೆ ದಿನಕರನ ಜೊತೆ ಮಾತಿಗೆ ಪ್ರಾರಂಭಿಸಿದ್ದರು. “ನಿನ್ನ ಕತ್ತಿನ ತಾಯಿತ ನೋಡಿದ್ದೆ ನೀನು ಯಾರೆಂದು ಗೊತ್ತಾಗಿ ಬಿಟ್ಟಿತು. ನಾಣಿಗೂ ನಿನ್ನ ಈ ವೇಷದಲ್ಲಿ ಗೊತ್ತಾಗತ್ತ ನೋಡಬೇಕು. ಗಂಗೂಗು ಗೋತ್ತಾಗತ್ತಾ ನೋಡಬೇಕು. ಟೀವಿಯಲ್ಲಿ ನಿನ್ನ ನೋಡಿದವರು ಯಾಕೆ ಮರೀತಾರೆ? ನಿನ್ನ ಕಣ್ಣನ್ನ ಯಾಕೆ ಮರೀತಾರೆ? ನೀನು ಹೀಗೆ ವ್ರತ ಹಿಡೀದೇ ಇದ್ದಿದ್ದರೆ ನಿನಗೆ ದೃಷ್ಟಿ ಸುಳಿದು ಹಾಕ್ತಾ ಇದ್ದೆ.” ಸೀತಮ್ಮ ಅಡಿಗೆ ಮನೆ ಬಾಗಿಲಲ್ಲಿ ಶಾಸ್ತಿಗಳು ತನ್ನ ಮಾತು ಕೇಳಿಸಿಕೊಳ್ಳುತ್ತ ನಿಂತುದನ್ನು ನೋಡಿದರು: “ನನ್ನ ಹುಚ್ಚು ಕಂಡುಬಿಟ್ಟಿರಾ ಶಾಸ್ತಿಗಳೆ. ಈ ಮಾಣಿಗೆ ಕನ್ನಡ ಬರಲ್ಲಾ ಅನ್ನೋದನ್ನ ಮರತೇಬಿಟ್ಟು ಹೇಗೆ ಬಡಬಡಿಸ್ತ ಇದೀನಿ ನೋಡಿ. ಇದು ಪರದೇಶಿ ಮಾಣಿ ಅಂತ ನನ್ನ ಕರಳು ಚುಂಯ್ ಎಂದು ಬಿಟ್ಟಿತು ನೋಡಿ: ತ್ರಿಪಾಠಿಗಳ ಮನೇಲಿ ಬೇಳಿತಿದ್ದ ಇದನ್ನು ಕಂಡು. ಅವರು ಪಾಪ ದೊಡ್ಡವರು – ಇವನನ್ನು ಬಿಟ್ಟು ಹಾಕಲಿಲ್ಲ. ಕೂಸಿಗೆ ಐದು ವರ್ಷ : ಅದರ ತಾಯಿ ಅವರ ಮನೇಲಿ ಪರದೇಶಿ ಹಾಗೆ ಬಂದಿಳಿದಗ. ಒಂದು ಟ್ರಂಕು, ಕೈಚೀಲದಲ್ಲಿ ಒಂದಷ್ಟು ಬಟ್ಟೆ ಇಟ್ಟುಕೊಂಡು ಸೀದಾ ಇದರ ಅಮ್ಮ ತ್ರಿಪಾಠಿಗಳ ಮನೆಗೆ ಬಂದದ್ದಂತೆ. ಅವರಿಗೆ ಇವನ ತಾಯಿ ದಕ್ಷಿಣ ದೇಶದವಳು ಅಂತ ಮಾತ್ರ ಗೊತ್ತು. ತ್ರಿಪಾಠಿಗಳು ದೊಡ್ಡ ಮನಸ್ಸಿನವರು. ಅವಳಿದ್ದ ಪಾಡು ನೋಡಿ ಯಾರು ನೀನು? ಏನು? ಎತ್ತ? ಯಾವುದೂ ಕೇಳಲಿಲ್ಲ. ಅಡಿಗೆ ಮಾಡಿಕೊಂಡು ಇರೋದಿಕ್ಕೆ ಜಾಗ ಕೊಟ್ಟರು. ಬೇಕಾದ ಸಾಮಾನು ಸರಂಜಾಮು ಒದಗಿಸಿದರು. ಹಣೆಯಲ್ಲಿ ಕುಂಕುಮವಿದ್ದದ್ದು ಕಂಡು ‘ನಿನ್ನ ಗಂಡನ್ನ ಹುಡುಕಿಕೊಂಡು ಬರಲ?’ ಅಂತ ಒಂದು ಸಾರಿ ಮಾತ್ರ ಕೇಳಿದ್ದರಂತೆ. ಅವಳಿಗೆ ಅಷ್ಟಿಷ್ಟು ಹರಕು ಮುರಕು ಹಿಂದಿ ಗೊತ್ತಿತ್ತಂತೆ. ಅವಳು ಏನೂ ಉತ್ತರ ಕೊಡದೆ ಕಣ್ಣು ತುಂಬ ನೀರು ತುಂಬಿಕೊಂಡು ನಿಂತದ್ದು ಕಂಡು ಮತ್ತೆ ತ್ರಿಪಾಠಿಗಳು ಆ ಪ್ರಶ್ನೆ ಕೇಳಲೇ ಇಲ್ಲವಂತೆ. ಏನೂ ಕೇಳಕೂಡದು ಅಂತ ಮನೆ ಹೆಂಗಸರನ್ನು ಗದರಿಸಿ ಇಟ್ಟಿದ್ದರಂತೆ. ಒಂದು ಹೆಂಗಸಿಗೆ ಇನ್ನೊಂದು ಹೆಂಗಸೂಂದರೆ ಕುತೂಹಲ ಅಲ್ಲವ?” ಶಾಸ್ತಿಗಳು ಬಿಳುಚಿಕೊಂಡದ್ದು ನೋಡಿದ ಸೀತಮ್ಮ, ‘ಯಾಕೆ ಹುಷಾರಿಲ್ವ? ರಾತ್ರೆ ನಿದ್ದೆ ಬರಲಿಲ್ಲವ?’ ಎಂದು ಅಡಿಗೆ ಮನೆಯಲ್ಲಿ ಒಂದು ಮಣೆ ಹಾಕಿ ಕೂರಿಸಿದರು. “ಸುಮಾರು ಹೀಗೆ ಐದಾರು ತಿಂಗಳು ಕಳಿತಂತೆ. ಒಂದು ದಿನ ಬೆಳಗಿನ ಜಾವ ಇವನ ತಾಯಿ ಎದ್ದವಳು ಸೀದ ತ್ರಿಪಾಠಿಗಳಿದ್ದಲ್ಲಿಗೆ ಹೋದಳಂತೆ. ಅವರು ಆಗ ತಮ್ಮ ಪೂಜೆಯ ಮನೆಯಲ್ಲಿ ಕೂತು ಧ್ಯಾನ ಮಾಡ್ತ ಇದ್ದರು. ಇವರ ಅಮ್ಮ ನೋಡೋಕೆ ತುಂಬ ಲಕ್ಷಣವಂತೆ. ಇವನದೇ ಕಣ್ಣಂತೆ. ಈ ತಾಯಿತದ ಜೊತೆ ಮಂಗಳಸೂತ್ರ ಅವಳ ಕೊರಳಲ್ಲಿ ಇತ್ತಂತೆ. ಇದನ್ನೆಲ್ಲ ತ್ರಿಪಾಠಿಗಳೇ ನನಗೆ ಹೇಳಿದ್ದು. ಆಯಿತ? ಏನೋ ಹೇಳಲಿಕ್ಕೆ ಹೋಗಿ ಇನ್ನೇನೋ ಹೇಳ್ತಾ ಇದೀನಿ. ತ್ರಿಪಾಠಿಗಳಿಗೆ ಇವನ ತಾಯಿ ನಮಸ್ಕಾರ ಮಾಡಿ, ಅವರ ಎದರು ತನ್ನ ಟ್ರಂಕನ್ನು ಇಟ್ಟು, ಅದರ ಮುಚ್ಚಳ ತೆಗೆದಳಂತೆ. ತ್ರಿಪಾಠಿಗಳಿಗೆ ತಮ್ಮ ಕಣ್ಣನ್ನು ನಂಬಲಿಕ್ಕೆ ಆಗಲಿಲ್ಲ. ಅದರಲ್ಲಿ ಎರಡು, ಮೂರು ಮಣದಷ್ಟಾದರೂ ಬಂಗಾರ. ಕತ್ತಿನ ಸರ, ಬುಗುಡಿ, ಬೆಂಡೋಲೆ, ಬಳೆ, ಬಂಗಾರದ ಪಟ್ಟಿ ಮಾತ್ರವಲ್ಲ, ಮುರಸದ ಬಂಗಾರದ ಗಟ್ಟಿಗಳು – – ನನಗೂ ಈ ಟ್ರಂಕನ್ನು ಬಿಚ್ಚಿ ತ್ರಿಪಾಠಿಗಳೇ ತೋರಿಸಿದ್ದು. ಈ ಟ್ರಂಕಿನ ಮೇಲೆ ಸರ್ಪಗಾವಲು ತ್ರಿಪಾಠಿಗಳದ್ದು. “ನನ್ನ ಮಗನನ್ನು ನಿಮ್ಮ ಮೊಮ್ಮಗ ಅಂತ ತಿಳಕೊಳ್ಳಿ. ನನ್ನನ್ನು ನಿಮ್ಮ ಮಗಳು ಅಂತ ತಿಳಕೊಳ್ಳಿ” ಎಂದು ಇವನ ತಾಯಿ ದೇವರಿಗೂ, ತ್ರಿಪಾಠಿಗಳಿಗೂ ನಮಸ್ಕಾರ ಮಾಡಿದಳಂತೆ. ತ್ರಿಪಾಠಿಗಳು ಅವಳ ತಲೆ ಮುಟ್ಟಿ ಆಶೀರ್ವದಿಸಿ, ಪೆಟ್ಟಿಗೆಯನ್ನು ತಮ್ಮ ತಿಜೋರಿಯಲ್ಲಿಟ್ಟು ಬಂದರಂತೆ. ಆ ಬಂಗಾರವನ್ನು ನೋಡಲಿಕ್ಕೆ ಎರಡು ಕಣ್ಣು ಸಾಲದ್ಶ್ಠು. ವಿಜಯನಗರದ ಕಾಲದ ಆಭರಣಗಳು ಮೇಲೆ, ಕೆಳಗೆ ಬಂಗಾರದ ಇಡಿ ಇಡೀ ಗಟ್ಟಿಗಳು. ಇದಾದ ಮೇಲೆ ಒಂದು ತಿಂಗಳು ಎಲ್ಲ ಸುಸೂತ್ರವಾಗಿ ಕಳೀತು. ತ್ರಿಪಾಠಿಗಳು ದಿನಕರನನ್ನು ಮನೇ ಮಗು ಅಂತಲೇ ಹಚ್ಚಿ ಕೊಂಡರು. ತಮ್ಮ ಮನೇಲೇ ಇಟ್ಟುಕೊಂಡರು. ತನ್ನ ಖರ್ಚಿನಲ್ಲೇ ಓದಿಸಿದರು. ಆ ಬಂಗಾರವನ್ನು ಮುಟ್ಟಲಿಲ್ಲ. ಅದೊಂದು ದೊಡ್ಡ ಕಥೆ ಎನ್ನಿ. ಒಂದು ದಿನ ಬೆಳಿಗ್ಗೆ ಗಂಗಾಸ್ನಾನಕ್ಕೆ ಅಂತ ಹೋದ ಇವನ ತಾಯಿ ಹಿಂದಕ್ಕೆ ಬರಲಿಲ್ಲ. ಎಲ್ಲೋ ದೂರದಲ್ಲಿ ಅವಳ ಹೆಣ ಸಿಕ್ಕಿತು. ಕಾಲು ಜಾರಿ ತೇಲಿ ಹೋಗಿರಬಹುದು ಅಂತಲೂ ಅಂತಾರೆ. ಆದರೆ ತ್ರಿಪಾಠಿಗಳ ಮನೆ ಮಂದಿಗೆಲ್ಲ ಆಶ್ಚರ್ಯ ಎಂದರೆ ಅವಳು ಗಂಗಾಸ್ನಾನಕ್ಕೆ ಹೋಗೋಕೆ ಮುಂಚೆ ತನ್ನ ಕತ್ತಿನಲ್ಲಿದ್ದ ತಾಯಿತವನ್ನು ಮಗನ ಕೊರಳಿಗೆ ಯಾಕೆ ಹಾಕಿದಳು? ಯಾಕೆ ಮಗನ್ನ ಅಷ್ಟು ಬೇಗ ಎಬ್ಬಿಸಿ ಹಾಲನ್ನು ಕಾಯಿಸಿ ಕುಡಿಸಿದಳು?” ಸೀತಮ್ಮ ಅಳಲು ಪ್ರಾರಂಭಿಸಿದ್ದರು. ದಿನಕರ ಮಾತಾಡದೆ ಕೇಳಿಸಿಕೊಳ್ಳುತ್ತ ಅವರು ಏನು ಹೇಳುತ್ತಿದ್ದಾರೆಂದು ಊಹಿಸಿದ್ದ. ಶಾಸ್ತಿಗಳು ಕಣ್ಣುಮುಚ್ಚಿ ಕೂತು ಜಪದ ಸರ ಎಣಿಸುತ್ತಿದ್ದರು. “ನಾನು ತಾಯಿತ ನೋಡಿದ್ದೇ ಇದರೊಳಗೆ ಶ್ರೀಚಕ್ರ ಇದೆ. ಇದು ನಮ್ಮ ಕಡೇದು ಎಂದುಬಿಟ್ಟೆ. ಯಾರ ಮನೆಯ ಮಾಣಿಯೋ? ಇದರ ಅಪ್ಪ ಯಾರೊ? ಯಾಕೆ ಇವನ ತಾಯಿ ಹಸುಗೂಸು ಕಟ್ಟಿಕೊಂಡು ಮನೆ ಬಿಡಬೇಕಾಯಿತೋ? ಪುರಾಣ ಹೇಳ್ತೀರಲ್ಲ ಶಾಸ್ತಿಗಳೇ, ವೇದವ್ಯಾಸರು ಮಾತ್ರ ಇವನ ಕಥೆ ಬರೆದಾರು. ಇಡೀ ದೇಶವೆಲ್ಲಾ ಈ ಮಾಣಿಯನ್ನು ಭಾರಿ ತಿಳುವಳಿಕಸ್ತ ಅಂತ ಗೌರವಿಸುತ್ತದೆ. ಆದರೆ ಈ ಮಾಣಿಗೆ ತನ್ನ ತಾಯಿ ಯಾರು ತಿಳಿಯಡು. ತಂದೆ ಯಾರು ತಿಳಿಯದು. ತನ್ನ ಊರು ಯಾವುದು ತಿಳಿಯದು. ಅದಕ್ಕೇ ದೇವರನ್ನೆ ತಾಯಿ, ತಂದೆ ಅಂತ ತಿಳೀಲಿಕ್ಕೆ ಏನೋ ಈ ವೇಷದಲ್ಲಿ ಅಲೀತಿದೆ.” ಶಾಸ್ತಿಗಳನ್ನು ನೋಡಿ ಸೀತಮ್ಮ ಗಾಬರಿಯಾಗಿ, “ಯಾಕೆ?” ಎಂದು ಅವರಿಗೆ ಕುಡಿಯಲು ನೀರು ಕೊಟ್ಟರು.
ಅಧ್ಯಾಯ ೫
ಸೀತಮ್ಮನ ಮಾತು ಕೇಳಿಸಿಕೊಳ್ಳುತ್ತ ತನ್ನ ತಲೆಯಲ್ಲಿ ಎರಡು ಜೊತೆ ಕೆಂಗಣ್ಣುಗಳು ಕೆಕ್ಕರಿಸುತ್ತ ಒಂದನ್ನೊಂದು ದಿಟ್ಟಿಸುತ್ತಿದ್ದಾವೆ ಎಂದು ಶಾಸ್ತಿಗಳಿಗೆ ಎನ್ನಿಸಿತ್ತು. ತನ್ನ ಎರಡನೇ ಹೆಂಡತಿ ಮಹಾದೇವಿ ಮೌನವಾಗಿ ಹೀಗೆ ತನ್ನನ್ನು ದ್ವೇಷದಲ್ಲಿ ನೋಡುವುದಿದೆ. ತಾನೂ ಹಾಗೆ ಅವಳನ್ನು ನೋಡುವುದಿದೆ.
ಮುಂದುವರೆಯುವುದು
“ಬರಹ”ಕ್ಕೆ ಇಳಿಸಿದವರು: ಸೀತಾಶೇಖರ್