ತಿರುಮಲೇಶ, ರಿಲ್ಕ್, ಪರಮಹಂಸ ಮತ್ತು ಬೆಕ್ಕು

ತಿರುಮಲೇಶಗೆ ಬೆಕ್ಕು ಧುತ್ತೆಂದು ಎದುರಾಗಿ
ಹುರಿನಿಂತ ಛಲದಲ್ಲಿ ದುರುಗುಟ್ಟಿತು,
ಕ್ಷಣ ಮಾತ್ರ ಚಂಚಲಿಸಿ ಕವಿಯ ಹಠ ಕೊನೆಯಲ್ಲಿ
ಗೆದ್ದ ಭಮೆ ಕಲಕೊಂಡು ಕವಿಯಾಯ್ತು
ಅನ್ಯಕೆ ಎಡೆಯಿರುವ ವಿನಯವಾಯ್ತು

ಎಲ್ಲ ತಿಳಿದೇ ತೀರಬೇಕೆಂಬ ಫಾಸ್ಟ್ ಛಲದ
ಐರೋಪ್ಯ ರಿಲ್ಕನೂ ಕಂಡದ್ದು ಬೆಕ್ಕೇ
ತನ್ನಷ್ಟೆ ತಾನಾಗಿ ಇರುವ ಬೆಕ್ಕಿನ ಸ್ವಾಸ್ಥ್ಯ
ಕವಿಯ ಅಸ್ವಸ್ಥತೆಯ ಪ್ರತಿಮೆಯಾಯ್ತು
ಬೆಕ್ಕು ಬೆಕ್ಕೇ ಆಗಿ ಉಳಿಯದಂತಾಯ್ತು

ಪ್ರತಿಮೆಯೂ ತಾಯೆಂದು, ಸಿಗಲೊಲ್ಲೆ ಏಕೆಂದು
ಬಿಕ್ಕಿ ಬಿಕ್ಕೀ ಅಳುವ ಪರಮಹಂಸರಿಗೊ
ತಾಯಿ ಸಾಕ್ಷಾತ್ಕರಿಸಿ ಕೆಂಪುನಾಲಗೆ ತೋಚಿ
ಸದ್ದಿರದೆ ಎದುರಾದ್ದು…ಬೆಕ್ಕೆ ಆಗಿ
ಬೆಕ್ಕು ಬೆಕ್ಕಾಗಿದ್ದೆ ಬಲು ಮುದ್ದು ತಾಯಿ.


೮-೧-೯೨

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.