ಕಣ್ಣಿರುವಷ್ಟು ನೋಟ

ಕಣ್ಣಿರುವಷ್ಟು ನೋಟ, ಕಾಲು ಸೋಲುವ ತನಕ
ಓಟ, ಹೊಟ್ಟೆಯಲಿ ಡೊಂಬರಾಟ, ಮನಕೆ ಬಿರುಕು
ಬಿದ್ದಲ್ಲೆಲ್ಲ ಎಲುವಿನ ತುಂಡು-ಬೇಟ. ಹರಕು
ಚಿಂದಿಗೆ ಮುರುಕು ಕೋಲಿನ ಕೂಡ ಕುಣಿವ ತವಕ.
ಅಸ್ತಿಪಂಜರದೊಳಗೆ ಕುಸ್ತಿ ನಡೆದಿದೆ ಬನ್ನಿ:

ಚಡ್ಡಿಯಿಲ್ಲದೆ ಹೊರಟ ಕಣಕೆ ನಮ್ಮಿ ಗಡಿ,
ಸಡ್ಡು ಹೊಡೆಯುವ ಮೊದಲೆ ಅಡ್ಡ ಬಿದ್ದನೇ? ಬಿಡಿ
ಅಡ್ಡಿಯಿಲ್ಲ, ಗೊಡ್ಡಮ್ಮೆ ಹಾಲು ಕುಡಿಯಲು ತನ್ನಿ.
ಯುದ್ಧಕ್ಕೆ ಹೋಗುವೆನೆಂದು ದಿನವು ಒಂಬತ್ತು
ಕೋಳಿಯ ತಿಂದು ಬಿದ್ದು ಕೊಂಡನು ನಮ್ಮ ಭೂಪ.
ನೆಲ ಒದ್ದು ನೀರು ಬರಿಸುವೆಯ? ಆ ಪ್ರತಾಪ
ನಿನಗಿಲ್ಲ, ಬರಿಯ ತೂಕದಲಿಲ್ಲ ತಾಕತ್ತು.
ಆಹಾರಕ್ಕೆ ತಕ್ಕ ಅಂಗ ಸಾಧನೆ-ಶಕ್ತಿ
ಬುದ್ಧಿ-ಭಾವದ ಮುತ್ತಿಗವಚಿಕೊಂಡಿದ ಶುಕ್ತಿ.
*****