ಎಗ್ಗಿಲ್ಲದ ಪ್ರಣಯಿ
ಯಾಕೆ?
ದಿಕ್ಕು ದಿವಾಣಿ ಇಲ್ಲದ ಅವಧೂತ ಕೂಡ-
ದಿಟ್ಟರು, ಮೊಂಡರು,
ಮೋಟುಮರ ಗಾಳಿಮಿಂಡ ಅಂತಾರಲ್ಲ
ಹಾಗೆ ಜಗಭಂಡರು
ಸೊಂಪಾಗಿ ಸುಮ್ಮನೇ
ಗಾಳಿಗೂ ಬಿಸಿಲಿಗೂ ಚಳಿಗೂ ಸಲ್ಲುವ ಉಪಾಯದ ಅವಕಾಶಗಳನ್ನು ರೆಂಬೆಕೊಂಬೆಗಳಲ್ಲಿ
ರೂಢಿಸಿಕೊಂಡು
ತನ್ನ ಅಪಾರ ತೂಕವೂ ಹಗುವೆಂಬಂತೆ ಸದ್ಯದ ಗಾಳಿಗೆ ತೂಗುತ್ತ
ಬಾಳಿ ತಾಳುವ ಅಶ್ವತ್ಥದ ಕೆಳಗೆ
ನೆರಳಿಗೆ ಸುಖಿಸಿ, ಅಪರೂಪಕ್ಕೆ
ಉದಾಸೀನದಲ್ಲಿ ಹಾಯಾಗಿ ಕಾಲುಚಾಚಿ ಕೂತವ
ಸಂಸಾರಿ.
ತೊಟ್ಟುತಾನೇ ಕಳಚಿ ಉದುರುವ ಎಲೆಯೊಂದನ್ನು ಹೀಗೆ ಗಮನಿಸಿ
ಹೀಗೇ ನಿರ್ಗಮಿಸುವ ಆಸೆಯ
ಮೊಮ್ಮಗನಿಗೆ ಬುಗುರಿ ಆಟ ಕಲಿಸುವ
ವ್ಯಾಮೋಹಿ ಕೂಡ
*****