ಮೇಘೋಪಾಸನೆ

ಎಂದಿನಿಂದಲೋ ಬಾನಬಟ್ಟೆಯಲ್ಲಿ ಮೋಡ ಓಡುತಿಹವು!
ನೋಡ ನೋಡುತಿರೆ ಕಾಡುಮೇಡುಗಳ ದಾಟಿ ಸಾಗುತಿಹವು;
ಗಾಳಿ-ಗೆಳೆಯನೊಡನಾಟವಾಡಿ ಬೇಸರವ ನೀಗುತಿಹವು
ಹಸುಳರಂತೆ ನಸುನಕ್ಕು ಅಂಬೆಗಾಲಿಕ್ಕಿ ನಡೆಯುತಿಹವು.

ಹಂಸ ಕುರಿಯಮರಿ ಆನೆ ಒಂಟಿ ಹಸು ಪ್ರಾಣಿರೂಪ ತಳೆದು
ತಾಗಿ ತುರುಗಿ ದಿಗ್ವಿಜಯಕೆಯ್ದುವಾ ಸೈನ್ಯದಂತೆ ನಡೆದು;
ಉಣ್ಣೆಯಾಗಿ ಮಿದುಬೆಣ್ಣೆಯಾಗಿ ಹಿಂಜಿರುವ ಅರಳೆಯಾಗಿ
ತೊಟ್ಟಿಲಾಗಿ ತೂಗುವವು ಮೋಡವಡೆ ನಡೆವ ಬೆಟ್ಟವಾಗಿ.

ಕ್ಷಿತಿಜದಂಚಿನಲಿ ಸಂಚುವೆತ್ತು ಮುಂಜಾವು ಮೌನವಾಂತು
ತಲೆಯ ಬಾಗಿ ನಿಂತಿರಲು ಬಾಲರವಿ ಕಿರಣಕ್ಕೆಗಳೋತು,
ಉಬ್ಬಿ ತಬ್ಬಿ ಚೆಂಬೆಳಕನುಣಿಸಿ ಹೊಂದೊಡವ ತೊಡಿಸಿ ಮುಡಿಸಿ
ರಮಿಸಲಾಗಿ ನಿಬ್ಬಣದ ಬೀಗರೆನೆ ಹರುಷ ಗರುವವೆರಸಿ-

ನೀಲಗಗನದಲಿ ತೇಲಿಬಹವು ಸಿಂಗಾರಗೊಂಡು ಮುದದಿ
ಅಂತರಿಕ್ಷದಲಿ ಯಕ್ಷಕನ್ನೆಯರ ಬಿನದ ಲೀಲೆ ತೆರದಿ;
ವ್ಯೋಮರಂಗದಲಿ ಗಾಳಿಸಂಗದಲಿ ನಲಿದು ನೃತ್ಯವಾಡಿ
ಮುಗಿಲಯುಗಲಗಳು ಮುಂದೆ ಸಾಗುವವು ಬಂದ ದಾರಿ ನೋಡಿ.

ಹೊತ್ತು ಮೀರಿ ನಡುನೆತ್ತಿಗೇರಿ ಬರೆ ಬಿಸಿಲಹಣ್ಣನುಂಡು
ಮೆಲ್ಲ ಮೆಲ್ಲನೇ ಕಲ್ಲು ಬಂಡೆಯೊಲು ನಿಲ್ಲುವುದನ್ನು ಕಂಡು,
ಮೂರು ದಾರಿ ಕೂಡಿರುವ ಧೂಳಿಯೊಡನೆದ್ದು ಗಾಳಿ ಬೀಸೆ
ಎತ್ತಲೆತ್ತಲೋ ಕತ್ತನೆತ್ತಿ ಸಾಗುವವು ಜೀವ ರೋಸೆ.

ಯಾವ ಹರಕೆಯನ್ನು ಹೊತ್ತು ಹಡೆದಳೋ ಕಡಲರಾಣಿ ಇವನು!
ನಿಮಿಷ ನಿಮಿಷಕೂ ಭ್ರಮಿಸುತಿರುವ ಕ್ರಮವರಿತ ತ್ರಿಪುರ ಹವಣು.
“ನಿಂತ ಬಾಳು ಬಾಳಲ್ಲ, ಮಲೆತು ನಿಂತಿರುವ ನೀರು ನೋಡ”
ಎಂದು ಜಗದ ಜಂಗುಳಿಗೆ ಅರುಹಲಿಕೆ ಬಂದವೇನೊ ಮೋಡ!

ಕಾದು ಸೀದು ನೆಲ ಮೋದಗೆಟ್ಟು, ಬಾಯ್ವಿಟ್ಟು ಹಲುಬುತಿರಲು
ತಾರವಾದ ತಿರೆ ಪ್ರಾಣತಂತುವೊಲು ತಂಪು ಗಾಳಿ ಹುಗಲು
ಕರುಣೆ ಕರಗಿ ನೀರಾಗಿ ಸುರಿವ ತೆರ ಮೋಡದೊಡಲಿನಿಂದ
ಮಳೆಯು ಬೀಳೆ ಹೊಸ ಕಳೆಯು ಹೊಮ್ಮುವದು ಇಳೆಯ ಬಸಿರಿನಿಂದ.

ತಂಪು ಸೊಂಪು ಏನಿಳೆಯ ಕಂಪು! ಸುರಿಮಳೆಯ ತಳಿಯ ಸೆಳಕು
ಮೋಡ ಸರಿಸಿ ಕಣ್ಣಾಡಿಸಿರಲು ರವಿ, ಹೊನ್ನ ಬಿಸಿಲ ಥಳಕು.
ನರಿಯ ಮದುವೆ ನಡೆದಿರಲು ಮುತ್ತುಹನಿ ಚೆಲ್ಲವರಿದ ಸೊಗವು,
ತಡೆದರಿಲ್ಲ ಚಣ ಮಾಯವಾಗುವುದು ಮುಗಿಲಕಾಂತಿ ಹರವು.

ಆಹ! ನೋಡ ಮಳೆಬಿಲ್ಲ ಮೋಡ ಹನಿಯಂಬನೆಸೆಯುತಿಹುದು
ಏಳು ಬಣ್ಣಗಳ ಮೇಳದಲ್ಲಿ ಕಾರಂಜಿ ಪುಟಿಯುತಿಹುದು.
ಬಾನು ಬುವಿಯ ಅಂತರವನಳೆದು ಮಳೆಬಿಲ್ಲ ಸೇತು ನಿಲಿಸಿ
ಮೆರೆಯುತಿಹುದು ಸಿರಿ ಸಗ್ಗದಪ್ಸರೆಯ ಸೆರಗ ಬೆರಗೊ ಎನಿಸಿ.

ಅಸ್ತಗಿರಿಗೆ ರವಿ ತೆರಳುತಿರಲು ಓ, ಬಾನ ತುಂಬ ಹಬ್ಬ!
ಬಣ್ಣದೋಕುಳಿಯ ಮಿಂದ ಮೇಘಪುರ ಬಾನಿನೆದೆಯ ಕಬ್ಬ.
ಸಂಜೆಯಾಗಸದಿ ಕಪ್ಪು ಮೋಡವೂ ಹೂವಿನಂತೆ ಅರಳಿ
ಬಾಳು ಒಳ್ಳಿತೆನೆ ಕಣ್ಣ ಸೆಳೆಯುವದು ಬಿಟ್ಟು ಬಿಡದೆ ಮರಳಿ.

ಇರುಳಿನಾಳದಲಿ ತೆಪ್ಪಗಾಗಿ ತಿರೆ ನಿದ್ರೆಗೈಯುತಿರಲು
ಕಾರಮುಗಿಲು ತೇರೈಸಿ ಬರಲು ಜಗ ಕಪ್ಪು ತಿಮಿರ ಕಡಲು;
ಮಿಂಚು ಗೊಂಚಲಲಿ ಬೆಳಕ ಚಿಮ್ಮುತಲಿ ಹೊಸತು ಮಾಯೆ ಎನಿಸಿ
ಹೊಂಚು ಹಾಕಿ ಧಡಧಡಿಸಿ ಗುಡುಗೆ ಘನಘೋರ ಮಳೆಯಸುರಿಸಿ.

ಚಿಕ್ಕ ಚಂದ್ರಮಾ ಏನು ಸಂಭ್ರಮಾ ಮನದ ಭ್ರಮೆಯ ಹರಿಸಿ
ಮನುಜಲೋಕ ಮಂದಾರನಾಕವಾಗಿರುವುದೇನೋ ಸ್ಮರಿಸಿ;
ತಿರುಕರಂತೆ ಸೋಮಾರಿಯಂತೆ ತುರುಮೋಡ ತಿರುಗುತಿರಲು
ಚಂದ್ರನೆದೆಯ ಚೆಲ್ವೆಳಕ ನೀಡುವನು ಸ್ನೇಹಕಾಗಿ ಬರಲು.

ಚಂದ್ರಕಾಂತಶಿಲೆಯಂತೆ ಮೋಡ ಬೆಳುದಿಂಗಳನ್ನು ಕುಡಿದು
ಬಾನದೇಗುಲದಿ ಬೆಳ್ಳಿ ತೇರಿನೊಲು ಮಂದವಾಗಿ ನಡೆದು-
ಸಾಲುಗೊಂಡು ಕೆಲ ಮೋಡದಂಡು ಗಿರಿಶಿಖರದಲ್ಲಿ ತಳುವಿ
ಬೆಳ್ಳಿ ಬಟ್ಟಲದ ಸುಧೆಯ ಕಾಯುವವು ಆಗದವರ ತರುಬಿ.

ಏಸು ರಾಜ್ಯದಲಿ ಅಲೆದರೂನು ನೆಲೆಯಿಲ್ಲದಾಯಿತಿವಕೆ
ಏಸೊ ಜನದ ಮತ್ತೇಸೂ ಬನದ ಸಿರಿಕಾಂಬ ಕಣ್ಣೊ ಇವಕೆ!
ಸುತ್ತುತಿರುವ ಧರ ಸುತ್ತು ತಿರುಗುತಿವೆ ತಲುಪಲಿಲ್ಲ ಕೆಲಕೆ;
ಸುರಿಯಬೇಕು ಸರಿ, ನೀಗಬೇಕು ಉರಿ- ಎಂಬ ಬಯಕೆ ಇವಕೆ.

ಮುಗಿತವಿಲ್ಲದಿಹ ಗಗನದಲ್ಲಿ ಹಗಲಿರುಳಿನಲ್ಲು ಪಯಣ
ಬೆಂದ ನೆಲಕೆ ಕಣ್ಣೀರ ಕರೆಯೆ ಅದೆ ಸಾರ್ಥಮಾಯ್ತು ಹರಣ.
ದಿಗ್ದಿಗಂತಗಳ ಹಂತವೇರಿ ಅಗ್ಗಲಿಸುತಿಹವು ಕಣ್ಣ,
ಬಾನದಿಬ್ಬಣದಿ ಬಣ್ಣ ತಿಣ್ಣದಲಿ ನುಣ್ಣಗಾದುವಣ್ಣ.

ಬಾಲ್ಯದಿಂದಲೂ ಮುಗಿಲ ಕಂಡು ಮೈಮರೆತ ದಿನಗಳೆನಿತು!
ಆವುಗಳಾಟದಲಿ ಮೈಯಮಾಟದಲಿ ಜೀವ ತುಂಬಿ ಬಂತು.
ಗಾಸಿಗೊಂಡ ಎದೆಯಾಸೆ ಕನಸುಗಳನಲ್ಲಿ ನೇಯುತಿಹೆನು
ಹಕ್ಕಿ ಮೋಡದೆಡೆ ಹಾರಿ ಹಾಡುವೊಲು ಕರೆಯ ಕೇಳುತಿಹನು.

ಮೇಘಮಂಡಲವು ಜಗದ ಜನದ ಮನದಾಸೆ ಗೋಪುರಹುದು
ಗತಿಸಿ ಹೋದ ಹಿರಿಜೀವರುಗಳ ಹಿರಿ ತತ್ವ ಸಾರುತಿಹುದು;
ಧೀರ ಪೌರುಷದಿ ಬಾಳ ಬಿತ್ತರಿಸಿ ಮಿಂಚಿರೆಂಬ ಉಲುಹು
ಇಷ್ಟವಿರದ ಕಡುಕಷ್ಟವಡಸಿದರು ಮೊಳಗಿರೆಂಬ ಬಲುಹು.

ಗಾಳಿಗೂಡಿ ಕಿರುಮೋಡವಾಗಿ ಬಾನೆಲ್ಲ ಅಲೆಯುವಾಸೆ,
ಬಾನದೇಗುಲದಿ ನಮ್ರವಾಗಿ ಮೈದುಂಬಿ ನಿಲ್ಲುವಾಸೆ,
ಮಳೆಯಬಿಲ್ಲ ಮೈದೊಡವ ಧರಿಸಿ ಮಣಿಹನಿಗಳಾಗುವಾಸೆ,
ಚಂದ್ರನೆದೆಯ ತಿಳಿಯೊಲವನುಂಡು ಶ್ರೀಕಾಂತಿಪಡೆಯುವಾಸೆ.

ನೋಡೆ ನೋಡೆ ಎನಿತನಿತೊ ಆಸೆ ಅದಕಾದಿ ಅಂತ್ಯವಿಲ್ಲ;
ಹಿಂಡು ಹಿಂಡಿನಲಿ ತೋರಿ ಮರೆಯುತಿವೆ ಏಕೊ ಯಾವ ಬಲ್ಲ;
ಹಿರಿದು ಮನಸು ಹಿರಿದಾದ ಭಾವ ಮುಗಿಲಗಲವಾಗಬೇಕು
ಮೋಡನೋಡಿ ದಿಙ್ಮೂಢನಾಗಿ ಮೈಮರೆವನಲ್ಲ ಸಾಕು.
*****