ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ರಕ್ತ ಪರದೆಯ ಹಿಂದೆ ಪ್ರೇಮಕ್ಕೆ ಗುಲಾಬಿಯ ಹಾರ
ಉಪಮಾತೀತ ಸೌಂದರ್ಯದ ಜತೆಗೆ ಒಲವಿನ ವ್ಯವಹಾರ
ತರ್ಕ ಹೇಳಿತು, ಆರು ದಿಕ್ಕುಗಳೇ ಗಡಿ, ಆಚೆಗೆ ದಾರಿಯಿಲ್ಲ
ಪ್ರೀತಿ ಹೇಳಿತು: ದಾರಿ ಇದೆ ಅಲ್ಲೊಂದು, ನಾನೇ ಹೋಗಿದ್ದುಂಟು
ತರ್ಕ ಸಂತೆ ಸೇರಿಸಿತು, ಶುರುವಾಯಿತು ವ್ಯಾಪಾರ
ಅದರಾಚೆಗೆ ಕೂಡಿತು, ಪ್ರೇಮದ ಸಂತೆಗಳ ಮಹಾಪೂರ
ಪ್ರೇಮದಾತ್ಮದೊಳಗೆ ಅಡಗಿದ್ದ ಅನುಭಾವಿ ಹಲ್ಲಜ್ ನೂರ್ಮಡಿಸಿ
ಏಣಿ ಹತ್ತಿ ಎಲ್ಲಿಗೊ ಆಯ್ತು ಪಯಣಿಸಿ
ತಳಮಟ್ಟ ಕುಡಿದ ಉನ್ಮತ್ತ ಅಂತರಂಗ
ಕಂಡಿತು ಕನಸು ಅಲ್ಲಿ ಕಪ್ಪು ತರ್ಕದ ನೇತಿಯ ರಣರಂಗ
ತರ್ಕ ಹೇಳಿತು, ಕಾಲಿಡಬೇಡ ಇಲ್ಲಿ ಈ ಬಯಲಲ್ಲಿ ಬರೀ
ಮುಳ್ಳು, ಪ್ರೀತಿ ನುಡಿಯಿತು – ಇಲ್ಲ ಈ ಮುಳ್ಳು ನಿನ್ನ ತರ್ಕದ ದಾರಿ
ಶ್, ಮೌನ, ಹೃದಯ ಪಾದಕ್ಕೆ ಚುಚ್ಚಿರುವ ಮುಳ್ಳು ಕೀಳು
ಅಂತರಂಗದೊಳಗೆ ಅರಳಲಿ ಗುಲಾಬಿಯ ಸಾಲು
ಶಂಸ್, ಶಬ್ದಗಳ ಮೋಡದ ನಡುವೆ ನೀನು ಸೂರ್ಯ
ಆ ಸೂರ್ಯ ಬಂದಾಗ ಎಲ್ಲ ಶಬ್ದಕ್ಕೆ ಸಹಜ ವಿದಾಯ
*****