ಇವು ನನ್ನ ಹಾಡೆಂಬ ಹಗರಣದಿ ಮೈಮರೆತು
ಅಹಮಿಕೆಯ ದರ್ಶನವ ಮಾಡಲೇಕ್ಕೆ ದೇವ;
ನೀನಿತ್ತ ಸಂಪದವ, ನಿನ್ನಾಣತಿಗೆ ಮಣಿವ
ಅಣುರೇಣು ಜೀವಾಣು ನಿನ್ನ ಚರಣವನೋತು
ಚೆಲುವಿನೊಲವಿನ ವಿವಿಧ ವಿನ್ಯಾಸಗಳನಾಂತು
ಹೆಜ್ಜೆಯಿಡುತಿರಲದರ ಹಲವಾರು ಹವಣಿಕೆಯ
ಕರಣಿಕನು ನಾನಾಗಿ ನುಡಿಯುತಿರೆ, ಚೆಲುವಿಕೆಯ
ಸತ್ಯತೆಯ ದಾಸಾನುದಾಸನೆಂಬೀ ಮಾತು
ಎನ್ನೆದೆಯ ಹೊಕ್ಕು ನಿಚ್ಚಳವಾಗಿ ಪಡಿನುಡಿದು-
ಸೊಗದ ಸಿರಿ ಹೂಗರೇರಿ, ತನ್ನ ತನ ಗುರಿದೋರಿ
ಹೊಂಬಿಸಿಲ ಹೂಮಳೆಯ ಮುತ್ತು ಹನಿ ಸೊದೆಬೀರಿ
ಮತ್ತೆ ನಿನ್ನಡಿಗಳೆಡೆ ಭಕ್ತಿಯಲಿ ಬಲವಂದು-
ಅಕ್ಷಯದ ಪಾತ್ರೆಯಿಂದೆರಡು ಹನಿ ತನಿರಸವ
ನೀಡೆಂದು ಪ್ರಾರ್ಥಿಸುವದೆನ್ನ ಕವನದ ಭಾವ.
*****