ಚೋಟುದ್ದ, ಗೇಣುದ್ದ, ಆಕಾಶದುದ್ದ
ಕುತುಬ ಮೀನಾರಕ್ಕೆ ಕೈಯೂರಿ ಎದ್ದ!
ಕೆರೆಯಿಂದ ಸಾಗರದವರೆಗೆ ಸಾಗರಬಿದ್ದ
ರಾಡಿ ಮೈಯಿಂದಲೇ ಮೇಲಕೆದ್ದ-
ಗೌರಿಶಂಕರ ಶಿಖರ ಏರಬೇಕೆಂದಿದ್ದ
ಆದರೀಗಾಗಲೆ ಅದು ನಿಷಿದ್ಧ.
ಬುದ್ಧನೊಬ್ಬನು ಬೇರೆ ಆಗಿ ಹೋಗಿದ್ದ
ಇಲ್ಲದಿದ್ದರೆ ಇವನ ಇಂದಿಗೂ ಮುಂದಿಗೂ ಜಗದೆಲ್ಲ ಮಂದಿಗೂ ಸುಪ್ರಸಿದ್ಧ!
ಅಲ್ಲಿದ್ದ
ಇಲ್ಲಿದ್ದ
ಎಲ್ಲ ಕಡೆಗೂ ಬಾಲ ಗುಂಡಾಡಿಸಿದ್ದ.
ಹೋದ ಹೋದಲ್ಲೆಲ್ಲ ಹದನೋಡಿ ಹುಸಿಗುಂಡು ಹಾರಿಸಿದ್ದ!
ಮುದ್ದಾಗಿ ತೋರಿದವ ಹದ್ದಾಗಿ ಹಾರಿದ.
‘ಉಳಿದ ಪಕ್ಷಿಗಳೇನು ನನ್ನಂತೆ ಹಾರುವವೆ
ಹಾಡಬಲ್ಲವೆ’? ಎಂದು ಡಂಗುರವ ಸಾರಿದ.
‘ಕಿಂಖಿಲಿಲಿಲಿಲಿಲಿ’ ಹರಡಿತ್ತು ನಾದಪ್ರಮಾದ!
ಆಕಾಶದಲ್ಲೆ ಯಾವ ದೇವರಿಗೊ ಪ್ರದಕ್ಷಿಣೆ ಹಾಕುತಿದ್ದವನು
ಕೆಳಗೆ ಸರ್ರನೆ ಇಳಿದು ಕೋಳಿಮರಿಗಳ ಮೇಲೆ
ಬಂದೆರಗಿದ!
ಪೂರ್‍ವಜನ್ಮದ ಸುಕೃತ-
ಈ ಮಹೋದಯ ಕೃಪಾಕಟಾಕ್ಷಕ್ಕೆ ನಾ ಬಿದ್ದೆ ಅಪ್ರಬುದ್ಧ.
ಚಿಕ್ಕ ಬಳಗದ ಚಂದ್ರ ಚೆಲುವಿನಿಂದ್ರ
ನಾಲ್ಕಾಣೆ ಚೂರುಗಳ ನಡುವೆ ಹೊಳೆಯುವ ಬೆಳ್ಳಿರೂಪಾಯಿಯಾದ.
ಬಿಡಲಿಲ್ಲ ಈತ ಅಲ್ಲಿಗೂ ಹೋಗಿ ಗಟ್ಟಿ ತಳವೂರಿದ;
ಹೂವಿನ ಸುವಾಸನೆಯ ಬೆಳದಿಂಗಳಿನ ತಂಪ
ತಕ್ಕಡಿಯ ಪರಡಿಯಲಿ ತೂಗ ಹೊರಟ.
ಕೊಬ್ಬರಿಯ ಜೊತೆಗದರ ಕರಟವನ್ನೂ ಕೂಡ
ತಿಂದು ಬಿಟ್ಟ.
ನಿತ್ಯವೂ ಮೊಗೆಮೊಗೆದು ಕುಡಿಯತೊಡಗಿದನಾಸೆಯಾಮಿಷದ ಪೀಯೂಷ
ಏನು ಕೊಟ್ಟರೆ ತಾನೆ ಬಂದೀತು ಇದರಿಂದ
ಬರುವ ಮಾದಕದಮಲು, ಸರಿಗಟ್ಟಿ ನಿಂತೀತು ದ್ರಾಕ್ಷಾರಸ?
ರೂಪಾಯಿ, ಆಣೆ, ಪೈ.
ಮನಸಿನೊಳಗೇ ನೀನು ಬೇಕಾದ್ದು ಬೈ
(ಪೂರ್‍ಣ ಪರವಾನಿಗಿ)
ಜಮಾಖರ್‍ಚಿಗೆ ಮಾತ್ರ ವ್ಯತ್ಯಯವಾಗದಿರಲಿ
ವೇದದಷ್ಟೇ ಪೂಜ್ಯ ರೋಜ ಕಿರ್‍ದಿ.
ರೂ. ಆ. ಪೈ.
ಇದರ ನಾದವೆ ನಾದ, ಇದುವೆ ಸಂಗೀತ
ಇದರ ಕುಣಿತವೆ ಕುಣಿತ: ಝಣ್ ಝಣ್ ತಕ್ಕಥೈ.
ಸೈ ಸೈ ತಲೆದೂಗಿ ಬೆನ್ನ ಚಪ್ಪರಿಸಿದನು ಕಥೆಯಾಗಿ ಕುಳಿತ ಆ ಮಿಡಾಸ!
ಅವರಿವರು ತೊಟ್ಟ ಬಿಳಿಯ ಬಟ್ಟೆಯ ಮೇಲೆ
ಮಸಿಯ ಸಿಡಿಸಿದರೆಷ್ಟು ಸೊಗಸು ಸಂತೋಷ!
ಯಾರ ತಲೆಗೆಂಥ ಟೊಪ್ಪಿಗೆಯಾದರೊಪ್ಪೀತು-
ಹಗಲಿರುಳು ಅದರದೇ ಧ್ಯಾನ, ಅದುವೆ ಜೀವನೋಲ್ಲಾಸ!
ಕತ್ತರಿಸಿ, ಹೊಲಿದು, ಬಿಚ್ಚಿ ತೇಪೆಯ ಹಚ್ಚಿ ತೊಟ್ಟು
ತೋರಿಸುವನು ತಗೊ ತಾಸಿಗೆ ನೂರು ವೇಷ,
ಊರಿನುಸಾಬರಿ ಇವನ ಊಟಕುಪ್ಪಿನಕಾಯಿ;
ಕೊಂಡಿ ಮಂಚಣ್ಣ, ಶಕುನಿ, ಜಕ್ಕಿಸಿಹೋದರಿವನೆದುರು-
ಅವರಿಗಿದ್ದವೆ ಹೇಳಿ, ನೂರು ಬಾಯಿ?
ಸಮಯಬಂದಾಗಿರಲಿ ಎಂದು ಸಂಗ್ರಹಿಸಿಹನು
ನಸುಗುನ್ನಿಕಾಯಿ.
ಕರಟಕರು ದಮನಕರಿಗೆಲ್ಲ ಇವನೇ ಇಂದು
ತಂದೆ ತಾಯಿ.
ಕಣ್ಣು ಗುಳಿಗಣ್ಣು, ಸದಾ ಒಳಸಂಚುಗಳ ಕೋಣೆ.
ಒಮ್ಮೆಯಾದರೂ ಅಪ್ಪಿ ತಪ್ಪಿ ಹೃದಯದ ಮಾತು ಹೊರಬಂದರಾಣೆ!
ಬಿಂಕದುಟಿಗಳ ಮೇಲೆ ಹಾಸ-ವಿರೋಧಾಭಾಸ
ಒಮ್ಮೊಮ್ಮೆ ಮಾತಿನಲಿ ಚೈತ್ರಮಾಸ!
ಮೊದಲ ನೋಟಕ್ಕಿವನು ಹಸುಳೆ. ಪೂರಾ ಹಸುಳೆ
ಗುಮ್ಮನಗುಸುಗ;
ಭಾವಕೋಶದ ಮೇಲುಮುಸುಗನೆಳೆದರೆ ಸಾಕು
ಮೂಗು ಮುಚ್ಚದೆ ಬೇರೆ ಗತಿಯೇ ಇಲ್ಲ.
ಒಳ ಮುಚುಗ; ನಾಲಗೆಯು ಹೊರಗೆ ಹಾದರೆ ಚುಚುಗ-
ತಿಂದುಚುಗ!
ಬೆಳಕಿಂಡಿಯಲ್ಲಿಳಿದು ಬಂದು ಬೆಣ್ಣೆಯ ತಿಂದು
ಗುರ್ರೆನುವ ಬಾವುಗ!
ಗೋಣಿಚೀಲದಿ ಹಾಕಿ ಹೊತ್ತು ಹೊರಗೊಗೆದರೂ
ಮತ್ತೆ ಹೇಗೋ ಬಂದು ಮೂಸುವದು ಸೋಜಿಗ!
ಅಲ್ಲಿಲ್ಲಿ ಸಂಶಯದಿ ಏಕೆ ಹುಡುಕುತ್ತಿಹಿರಿ?
ಇಲ್ಲಿಯೇ, ಇವನಂತರಂಗದಲ್ಲಿಯೇ ಹೊಗೆಯಾಡುತಿದೆ
ಬನ್ನಿ, ಮೂರನೆ ಮಹಾಯುದ್ಧ.
ಗೊಬೆಲ್ಸ ಮಹಾಶಯ ಕೊನೆಯ ಗಳಿಗೆಯಲಿ ತನ್ನೆಲ್ಲ
ಗುಟ್ಟು ಇವನಿಗೆ ಕೊಟ್ಟು ಪ್ರಾಣ ಬಿಟ್ಟ.
ಕಂಡಿರಾ ನೀವಿವನ, ಪರಮ ಸ್ನೇಹಿತನ?
ಸ್ನೇಹಕೆಂದೇ ಮೂರ್‍ತಿಮತ್ತಾಗಿ ಈ ಇಳೆಗೆ ಅವತರಿಸಿದವನ?
ಮೊನ್ನೆ ಮೊನ್ನೆಯೆ ಆಯಿತೆನಗೆ ತಾನಾಗಿಯೇ
ಇವನೊಡಲ ಬ್ರಹ್ಮಾಂಡದ ಮಹಾದ್ಭುತ ವಿಶ್ವರೂಪದ ದರ್‍ಶನ;
ಸಿಡಿಲೆರಗಿದಂತಾಯ್ತು ನಡುಗಿಹೋಯಿತು ನನ್ನ ಅತ್ಯಲ್ಪ ಚೇತನ.
“ನಮೋನಮಸ್ತೇಸ್ತು ಸಹಸ್ರ ಕೃತ್ವಃ
ಪುನಶ್ಚಭೂಯೋಪಿ ನಮೋ ನಮಸ್ತೆ.”
*****
