ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಅಷಾಢ ಹೊರ ಹೋಗಿ
ಶ್ರಾವಣ ಕಾಲಿಟ್ಟಿದೆ
ಆತ್ಮ ಶರೀರದಾಚೆ ಹೋಗಿ
ಚೆನ್ನಿಗನ ಪ್ರವೇಶವಾಗಿದೆ
ಅಜ್ಞಾನ ಅಹಂಕಾರಗಳು ಆಚೆ ಧಾವಿಸಿ
ಕ್ಷಮೆ ದಮೆಗಳು ಕಾಲಿಟ್ಟಿವೆ
ಹೃದಯ ಚಿಗುರಿಸಿದೆ ಜಾಜಿ ಮಲ್ಲಿಗೆ ಮಂದಾರ
ಔದಾರ್‍ಯದ ಮೋಡದಿಂದ ಮಳೆಯ ಮಹಾಪೂರ
ಮ್ಲಾನಿಗಳ ಬಾಯೊಳಗೆ ಬಂದಿಳಿಯಿತು ಸಕ್ಕರೆ
ಮುಖದ ಮೇಲೆ ಮಿಂಚಿತು ಮಂದಹಾಸ
ಸೂರ್‍ಯನಂತೆ ನಲ್ಲನ ಕೊರಳಲ್ಲಿದೆ ಬಂಗಾರದ ಹಾರ
ಬಂಗಾರ ಚೆದುರಿಸುವ ಚಂದ್ರಮುಖ ಕಾಣಿಸಿಕೊಂಡ
ಪ್ರೇಮ ಕಿನ್ನರಿಯೆ ಹಾಡು, ಮಾತನಾಡು
ಅವನಾಗಮನದ ನರ್‍ತನ ನೋಡು
ನಿನ್ನೆಗಳೆಲ್ಲ ಹಾಗೇ ಕರಗಿಬಿಟ್ಟಿವೆ?
ವರ್‍ತಮಾನ ಮಾತ್ರ ಶಾಶ್ವತ
ಎರಡನೆಯ ಖಲೀಫ ಉಮರ್‌ನ ನಿರ್‍ಗಮನ
ನಂತರದ ಉತ್‌ಮಾನನ ಆಗಮನ
ಶಾಶ್ವತ ಸಿರಿಯ ಆಗಮನವಾಯಿತು
ಅಂತ ಹಳೆಯ ಜೀವನವೆಲ್ಲ ಮರುಕಳಿಸಿತು
ನುಗ್ಗಿತೆ ಪ್ರಳಯ ಪ್ರವಾಹದ ತೊರೆ?
ನೋಹನ ನಾವೆಯಲ್ಲಿ ನಿನಗೆ ನಿಶಾ ನಿದ್ರೆ
ತಬ್ರೀಜಿನ ಈ ನೆಲ ಆಕಾಶದಂತೆ ಮಿರಿ ಮಿರಿ ಮಿಂಚುತ್ತಿದೆ
ಕಾರಣ? ಈ ಬಯಲಿಗೆ ಶಂಸ್‌ನ ಪಾದಾರ್‍ಪಣ
*****
