ಇಂಥವರೂ ಇದ್ದಾರೆ

ಈ ಜಗತ್ತಿನಲ್ಲಿ ಬಗೆ ಬಗೆಯ ಜನರಿದ್ದಾರೆ. ಯಾರು- ಯಾರನ್ನು ಯಾವಾಗ ಹೇಗೆ ಶೋಷಣೆ ಮಾಡುತ್ತಾರೆ ಎಂದು ಹೇಳುವುದೂ ಕಷ್ಟ.

ಈ ಮಾತು ಬಂದಾಗ ಮೊನ್ನೆ ಮೈಸೂರಿನಲ್ಲಿ ಲಿಂಗದೇವರು ಹಳೇಮನೆ ಒಂದು ಸೊಗಸಾದ ಪ್ರಸಂಗ ಹೇಳಿದರು.

ಒಂದು ಹಳ್ಳಿ. ಅಲ್ಲೊಬ್ಬ ಜಾನಪದ ಗಾಯಕ ಅದ್ಭುತವಾಗಿ ಹಾಡುತ್ತಿದ್ದನಂತೆ. ಕೋಗಿಲೆ ಹಾಡುವುದು ತನ್ನ ಖುಷಿಗೇ ಹೊರತು-ಯಾರನ್ನೂ ಮೆಚ್ಚಿಸುವುದಕ್ಕಲ್ಲ. ಅಕಸ್ಮಾತ್ತಾಗಿ ಆತನ ಹಾಡು ಒಬ್ಬ ರಿಸರ್ಚ್ ಸ್ಕಾಲರ್ ಕಿವಿಗೆ ಬಿತ್ತು. ಕೇಳಿ ತುಂಬ ಖುಶಿಯಾದ ಆ ವ್ಯಕ್ತಿ ಆತನ ಇಂಪಾದ ಗಾಯನವನ್ನು ಘಂಟೆಗಟ್ಟಲೆ ರೆಕಾರ್ಡ್ ಮಾಡಿಕೊಂಡ. ತನ್ನ ಬಗ್ಗೆ ಇಷ್ಟೊಂದು ಪ್ರೀತಿ ತೋರಿದ್ದಕ್ಕೆ ಜಾನಪದ ಗಾಯಕ ಹಿರಿಹಿರಿ ಹಿಗ್ಗಿ ಸಂತಸ ವ್ಯಕ್ತಪಡಿಸಿದ.

ತಕ್ಷಣ ಆ ರಿಸರ್ಚ್ ಸ್ಕಾಲರ್ ಗಾಯಕನಿಗೊಂದು ಚಿನ್ನದ ಉಂಗುರ ಉಡುಗೊರೆಯಾಗಿತ್ತ.

ದೇವರು ಕಣ್ಣು ಬಿಟ್ಟ, ತನ್ನ ಪಾಲಿಗೆ ಎಂದುಕೊಂಡ ಆ ಗಾಯಕ. ತಕ್ಷಣ ಆ ಗಾಯಕನನ್ನು ಮಾರಮ್ಮನ ಗುಡಿಗೆ ಕರೆದೊಯ್ದು ಆ ಪುಣ್ಯಾತ್ಮ “ಇನ್ನು ಮುಂದೆ ಯಾರ ಮುಂದೆಯೂ ಹಾಡಬಾರದು ನನ್ನ ಮುಂದೆ ಮಾತ್ರ ಹಾಡಬೇಕು” ಎಂದು ಪ್ರಮಾಣ ಮಾಡಿಸಿಕೊಂಡು ಒಂದು ಸಾವಿರ ರೂಪಾಯಿ ನಗದು ನೀಡಿದ.

ಆ ಹಳ್ಳಿಯ ಮುಗ್ಧನ ಪಾಲಿಗೆ ‘ರಿಸರ್ಚ್ ಸ್ಕಾಲರ್’ ದಾನಶೂರ ಕರ್ಣನಂತಾದ ಅಂದು.

ಆನಂತರ ಅವನು ಯಾರ ಮುಂದೆಯೂ ಹಾಡಲಿಲ್ಲ ಏಕೆಂದರೆ ನಾಲಿಗೆಯ ಮೇಲೆ ನಿಗಾ ಇದ್ದ ವ್ಯಕ್ತಿ ಆತ. ಮಾರಮ್ಮನ ಮೇಲೆ ಪ್ರಮಾಣ ಮಾಡಿದ್ದರಿಂದ ಅಮ್ಮ ಕುಪಿತಳಾದಾಳೆಂಬ ಭಯವೂ ಇತ್ತು.

ಆದರೆ ಗಾಯಕರಿಗೆ – ನಟರಿಗೆ – ಕಲಾವಿದರಿಗೆ ಒಂದು ರೀತಿ ತುಡಿತವೂ ಇರುತ್ತದೆ. ಉಕ್ಕಿಬಂದ ಭಾವನೆಗಳ ಮಹಾಪೂರವನ್ನು ಹೊರಹಾಕಲೇಬೇಕು.

ಆದರಿಂದ ಹೊಲ-ಗದ್ದೆಗಳಲ್ಲಿ ಕಾಡು-ಮೇಡುಗಳಲ್ಲಿ ‘ಏಕಾಂಗಿ’ಯಾಗಿ ಕುಳಿತಾಗ ಮನಬಿಚ್ಚಿ ಹಾಡುತ್ತಿದ್ದ.

ಹೂವಿನ ಕಂಪು-ಕಂಠದ ಇಂಪು ಯಾರು ತಾನೆ ಬಚ್ಚಿಡಲು ಸಾಧ್ಯ. ಇಲ್ಲೊಬ್ಬ ಸೊಗಸಾದ ಗಾಯಕನಿದ್ದಾನೆ ಎಂಬ ಮಾತು ಎಲ್ಲೆಡೆ ಹಬ್ಬಿತು ಕ್ರಮೇಣ.

ಆಗ ಮತ್ತಷ್ಟು ಮಂದಿ ಈತನನ್ನು ಹುಡುಕಿ ಬಂದರು. ಅವರು ಬಂದೊಡನೆ ಹಾಡುತ್ತಿದ್ದವನು ಹಾಡು ನಿಲ್ಲಿಸಿದ. ಇವರು ಎಷ್ಟೇ ಪೀಡಿಸಿ-ಗಲಾಟೆ ಹೊಡೆದರೂ ನನಗೆ ಹಾಡಲು ಬರುವುದೇ ಇಲ್ಲ ಎಂದು ಬಗೆಬಗೆಯಾಗಿ ವಾದಿಸಿದ.

ಅವರು ಏನಾದರೂ ಮಾಡಿ ಇವನ ಹಾಡುಗಳನ್ನು ಧ್ವನಿ ಮುದ್ರಿಸಿಕೊಂಡು ಹೋಗಲೇಬೇಕೆಂದು ಹಠ ತೊಟ್ಟು ಬಂದಿದ್ದರು.

ತುಂಬ ಒತ್ತಾಯ ಮಾಡಿದ ಮೇಲೆ “ನಾನು ಇಂಥವರಿಂದ ಒಂದು ಚಿನ್ನದ ಉಂಗುರ ಹಾಗೂ ಒಂದು ಸಾವಿರ ರೂ ಸಂಭಾವನೆ ಸ್ವೀಕರಿಸಿರುವೆ ಮಾತ್ರವಲ್ಲ ಮಾರಮ್ಮನ ಮುಂದೆ ಇನ್ನು ಯಾರೆದುರಿಗೂ ಹಾಡುವುದಿಲ್ಲ ಎಂದು ಪ್ರಮಾಣ ಮಾಡಿರುವೆ” ಎಂಬ ನಿಜಾಂಶ ತಿಳಿಸಿದ.

ಈ ಮಾತು ಕೇಳಿದ ಮರುಘಳಿಗೆ ಅವರು ಗಹಿಗಹಿಸಿ ನಕ್ಕು “ಈ ಕಾಲದಲ್ಲಿ ನಿನ್ನಂತಹ ದಡ್ಡರಿದ್ದಾರೆ ಅಂತ ನಮಗೆ ತಿಳಿದೇ ಇರಲಿಲ್ಲ. ಅಲ್ಲ ಕಣಯ್ಯ ಆ ಸ್ಕಾಲರು ನಿನ್ನ ಹಾಡುಗಳನ್ನು ಕ್ಯಾಸೆಟ್ ಮಾಡಿ ವಿದೇಶಕ್ಕೆ ಕಳಿಸಿ ಸಖತ್ ದುಡ್ಡು ಮಾಡಿದಾನೆ”

“ಮಾಡ್ಲಿ ಬಿಡಿ. ನಂಗೆ ಸಾವಿರ ಕೊಟ್ರಲ್ಲ”

“ನಿಂಗೆ ಸಾವಿರ ಕೊಟ್ರು ನಿನ್ನ ಹಾಡಿಂದ ಅವರು ೪೦-೫೦ ಸಾವಿರ ಮಾಡಿಕೊಂಡ್ರು”

“ಆಯಿತು. ಈಗ ನೀವು ಹೇಳೋದೇನು?”

“ಅವರು ಒಂದು ಚಿನ್ನದ ಉಂಗುರ ೧ ಸಾವಿರ ರೂ ಕೊಟ್ರು ಅಂದೆಯಲ್ಲ. ನಾವು ೩ ಸಾವಿರ ರೂ. ಕೊಡ್ತೀವಿ. ಹಾಡು ನಮಗೂ ಒಂದಷ್ಟು” ಅಂದ್ರು

“ದುಡೇನೂ ಕೊಡ್ತೀರಿ. ಆದ್ರೆ ಮಾರಮ್ಮನ ಎದುರಿಗೆ ಬೇರೆಯವರ ಎದುರಿಗೆ ಹಾಡಲ್ಲ ಅಂತ ಪ್ರಮಾಣ ಮಾಡಿದೀನಲ್ಲ”

“ಅಯ್ಯೋ ಬೆಪ್ತಕ್ಕಡಿ ಬಾ ನಾವೂ ಮಾರಮ್ಮನ ಗುಡಿಗೆ ಹೋಗೋಣ. ತಪ್ಪು ಕಾಣಿಕೆ ಐವತ್ತೋ-ನೂರೋ ಹಾಕಿದ್ರಾಯ್ತು. ಮಾರಮ್ಮ ನಿನ್ನ ಕ್ಷಮಿಸೇ ಕ್ಷಮಿಸ್ತಾಳೆ” ಅಂತ ಅಂದು ಇವರು ಒಂದಷ್ಟು ಹಾಡು ಮಾಡಿಕೊಂಡು ಹೋದರು ಅನ್ನುವ ಕತೆ ಹೇಳಿ ಅವರೂ ಬಿದ್ದುಬಿದ್ದು ನಕ್ಕು ಇದು ಕಟ್ಟುಕಥೆಯಲ್ಲ ನಾನು ಕಣ್ಣಾರೆ ಕಂಡ ಕಥೆ ಎಂದರು.

ಅಕ್ಷರ ಬಲ್ಲ ಜಾಣರು, ಲೇಖನಿಯ ಅಹಮಿಕೆ ಇರುವವರು-ಯಾರ್ಯಾರನ್ನ ಎಲ್ಲೆಲ್ಲಿ ಹೇಗೆ ಸದ್ದಿಲ್ಲದೆ ಮಟ್ಟಹಾಕುತ್ತಿರುತ್ತಾರೆ, ಗಾಯಕಿಯನ್ನು ವರ್ಲ್ಡ್ ಫೇಮಸ್ ನಾಯಕಿ ಎಂದು ಹೇಗೆ ಬಿಂಬಿಸುತ್ತಾರೆ, ಬಿಚ್ಚಮ್ಮನನ್ನು ಗರತಿ ಗಂಗಮ್ಮನೆಂದು ಹೇಗೆ ಹಾಡಿ ಹೊಗಳುತ್ತಾರೆ, ಬೇನಾಮಿ ಹೆಸರುಗಳಲ್ಲಿ ವ್ಯಕ್ತಿಯ ಮಾನಾಪಹರಣಮಾಡಿ-ಅದನ್ನು ಜಾಣೆಯಿಂದ ಬೇರೊಬ್ಬರ ಮೇಲೆ ಹೇಗೆ ಗೂಬೆ ಕೂರಿಸುತ್ತ ಒಂದು ರೀತಿ ಟೆರರಿಸ್ಟ್‌ಗಳಾಗಿರುತ್ತಾರೆ ಎಂಬುದು ಕಂಡಾಗ ಯಾರಾದರೂ ಬೆಚ್ಚುವುದು ಸಹಜ.

ಸುಳ್ಳೇ ಬರಾಕಿಲ್ಲ ನಮ್ಗೆ
ಆದ್ರೆ ಸುಳ್ಳೇ ನಮ್ಮನೆ ದ್ಯಾವ್ರು

ಅಂತ ಹಾಡುವವರನ್ನು ಕಂಡರೆ ಉಸಿರುಕಟ್ಟಿದಂತಾಗುತ್ತದೆ.

“ನೋಡಿ ಮೂರ್ತಿಯವರೆ, ಕಾಡಿನಲ್ಲಿರುವ ಗಿರಿಜನರು ಆನೆಗೆ ಹೆದರಲ್ಲ ಕರಡಿಗೆ ಹೆದರಲ್ಲ ಆದರೆ ಸೂಟ್ ಹಾಕಿಕೊಂಡ ಓದಿದ ಒಬ್ಬ ವ್ಯಕ್ತಿ ಎದುರು ಬಂದರೆ ಗಡಗಡನೆ ನಡುಗ್ತಾರೆ ಯಾಕೇಂದ್ರೆ ಓದಿದ ಜನ ಯಾವಾಗ ಎಲ್ಲಿ ತಿರುಗಿಬಿದ್ದು ಏನು ಮಾಡಿಬಿಡ್ತಾರೋ ಅನ್ನೋ ಭಯ” ಎಂದರು.

ಖಂಡಿತಾ ಸತ್ಯವಾದ ಮಾತು ಎನ್ನಿಸಿತು.

ಆದರೆ ಎಲ್ಲರು ಹಾಗೆ ಇರುತ್ತಾರೆ ಎಂದು ಹೇಳುವಂತಿಲ್ಲ. ಸಿನಿರಂಗಕ್ಕೆ ಬಂದರೆ ಇಲ್ಲಿ ಕೋಟಿ ಕೋಟಿ ಕಳಕೊಂಡವರೂ ಇದ್ದಾರೆ. ಲಕ್ಷಾಂತರ ಹಾಕಿ ಕೋಟಿ ಕೋಟಿ ಬಾಚಿಕೊಂಡವರೂ ಇದ್ದಾರೆ.

ಆದರೆ ‘ಬಾಬಾ’ ಚಿತ್ರ ತೆರೆಗಿತ್ತ ರಜನೀಕಾಂತ್. ತನ್ನ ಚಿತ್ರ ಕೊಂಡವರು ಮುಳುಗುವ ಪರಿಸ್ಥಿತಿ ಬಂದಿದೆ ಎಂದಾಗ ಅವರ ಹಣ ವಾಪಾಸ್ಸು ಮಾಡಿ ‘ಭಲೆ’ ಎನಿಸಿಕೊಂಡದ್ದು ಕಂಡಾಗ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬಾರದು ಎನಿಸಿ ಇಂಥವರೂ ಇದ್ದಾರಲ್ಲ ಈ ಕಾಲದಲ್ಲಿ ಎಂದು ಅಚ್ಚರಿ ಎನಿಸಿದ್ದು ನಿಜ.

ಇಂಥ ಅನೇಕ ಅಂಶಗಳನ್ನು ಮೆಲುಕು ಹಾಕಿದ ಆ ಸಂಜೆ ನಿಜಕ್ಕೂ ಒಂದು ರಸ ಸಂಜೆ.
*****
(೦೪-೧೦-೨೦೦೨)