ನೆಲ-ಮುಗಿಲು

ಕಣ ಕಣದ ಗತಿ-ಮತಿಯ ಗುರುತಿಸು, ಆದರೀಗಲೆ
ಅದರ ಇತಿವೃತ್ತವನು ಬರೆಯದಿರು, ನೀನಾಗಿ
ಕೊರೆಯದಿರು ದಾರಿಯನು, ಬಯಲ ಬಿಡುಗಡೆ ನುಂಗಿ
ನೀರು ಹಿಡಿಯಲಿ, ವಿಶ್ವವೆಲ್ಲವು ತೆರೆದ ಬಾಗಿಲೆ.
ಹಾರಿ ಹಕ್ಕಿಯಾಗಲಿ: ತುತ್ತ ತುದಿಗಿದೆ ಚುಕ್ಕಿ.

ಮೀರಿ ಹರಿಯಲಿ ದಡವನೆರಡೂ ಕಡೆಗೆ ಬಾಚಿ,
ಬತ್ತಿತೋ? ಚಿಮ್ಮುವದು ಒರತೆ ನಾಲಗೆ ಚಾಚಿ.

ಆಕಾಶ ಕೈ ಹಿಡಿದು ಎತ್ತುವದು, ಮುತ್ತಿಕ್ಕಿ
ಭೂಮಿಗಿಳಿಸುವದು: ತೊಡೆಯ ಮೇಲಾಡುವದು ಮಗು.

ತಾಯ ಮೊಗ ಸೂರ್‍ಯಪಾನವು ಹೊರಳೆ ಹೊಂಬೆಳಗು!
ಎಲ್ಲೆಡೆಗು ಏಕಕಾಲಕೆ ಬಹುದೆ ಮಳೆ? ಹರಗು
ಒಳ ಹೊರಗು ಸಿದ್ಧವಿರು. ಹೊಸ ನೀರು ನಿಬ್ಬೆರಗು.

ಗುರುತ್ವಾಕರ್‍ಷಣ ಕರುಣೆ-ಕೇಂದ್ರ ನೆಲದೊಡಲು
ಬಾನತೀಂದ್ರಿಯ ಸ್ಪರ್‍ಶ, ತುಂಬಿ ತೇಲಿವೆ ಮುಗಿಲು.
*****