ನಿನಗೆ ಇದು ತಿಳಿಯುವುದಿಲ್ಲ
ಸುಮ್ಮನಿರು ನೀನು
ಎಂದನ್ನುತ್ತಲೇ ಅಪ್ಪ ಸತ್ತ
ಅಜ್ಜ ಸತ್ತ…… ನೀನಿನ್ನೂ ಮಗು
ಅನ್ನುತ್ತಾ ಎಲ್ಲರೂ ಸತ್ತರು
ನಾನೊಬ್ಬ ಉಳಿದೆ
ನನಗದು
ತಿಳಿಯಲಿಲ್ಲ.
ಬೇಡವೇ ಬೇಡ ಎಂದು
ನಾನೂ ಸಾಯಲಿಲ್ಲ… ತಪ್ಪಿ
ಬದುಕಲೂ ಇಲ್ಲ.
ಅವರಂದದ್ದನ್ನೇ ಹಿಡಿದು ಬಾಯಿ
ಪಾಠ ಮಾಡುತ್ತಿದ್ದೆ.
ಒಂದು ದಿನ ಕನಸಲ್ಲೂ
ದೊಡ್ಡ ರಂಪ…
ಸದ್ದುಗದ್ದಲ ಕಂಪ…
ಒಮ್ಮೆಗೇ ಚೀರಿಕೊಂಡೆ.
‘ಏನಾಯ್ತುರೀ’- ಎಂದಳು
ಬದಿಯಲ್ಲಿದ್ದವಳು
ನಕ್ಕಳು ಮುಸಿಮುಸಿ
`ನಿನಗದು ತಿಳಿಯೋಲ್ಲ ಬಿಡೇ’- ಎಂದೆ
ಸರಿದಳು ಹತ್ತಿರ. ಅವಳನ್ನೆಳೆದುಕೊಂಡೆ
‘ತಿಳಿಯಿತು ಬಿಡಿ’- ಅಂದಳು.
ನಕ್ಕೆ ಪೆಚ್ಚಾಗಿ
ನನಗದು ತಿಳಿಯಲಿಲ್ಲ.
*****