ಎಂದು ಇಲ್ಲದ ವಿರಸವಿಂದು ಕೂರಸಿಯಾಗಿ
ಮಾತು ಮಾತಿನ ಮೊನೆಯ ಮಸೆಯಿತೆಂತು?
ನಿನ್ನೆದೆಯ ಸಂತಾಪವಿಂತು ಹರಿಯಿತೆ ಪಾಪ!
ಮೌನದೇವತೆ ಶಾಪವಿತ್ತಳೆಂತು?
ಜಗದ ವ್ಯವಹಾರಿಕತೆಗೇಕೆ ವ್ಯಥೆ ಕಿಂಕರತೆ?
ಪ್ರೀತಿ ಅಂತಃಕರಣ ನಿನ್ನದಿದೆಕೊ!
ಅದನುಳಿದರೇನುಂಟು? ಬರಿಯ ಗಾಳಿಯ ಗಂಟು!
ತೆರೆದ ಹೃಯದೊಳದನೆ ಬರಮಾಡಿಕೊ!
ಬಿಡಿಸಿದಷ್ಟೂ ಬಾಳು ಬರಿ ಗುಂಜು ತೊಡಕು
ಕಂಡಕಂಡೆಡೆಯಲ್ಲಿ ಕರುಣೆಯನೆ ಹುಡುಕು;
ಅವರಿವರ ಅಲ್ಪತನಕಿನ್ನೇನು ಬೇಕು?
ನಿನ್ನ ನೋವಿಗೆ ನಿನ್ನ ಕಂಬನಿಯೆ ಸಾಕು!
*****