ಸೂಫಿ ಸಖ್ಯದ ಆಖ್ಯಾನ

ವಸಂತಸ್ಮೃತಿ – ಮುನ್ನುಡಿ

ರೂಮಿ ವಿಶ್ವಮಾನವ ಆದರ್‍ಶದ ಕವಿ.

ನೆನೆಸಿಕೊಂಡರೆ ಈಗ ದಟ್ಟ ಆಶ್ಚರ್‍ಯ ಹುಟ್ಟುತ್ತದೆ. ರೂಮಿಯನ್ನು ನಾನು ಮೊದಲು ಕೇಳಿದ್ದು ಸುಮಾರು ಎರಡೂವರೆ ದಶಕಗಳ ಹಿಂದೆ. ಕೇಳಿದ ಕಥೆ ರೂಮಿಯ ಮೂಲದ್ದು ಎಂದು ಗೊತ್ತಿಲ್ಲದೆ ಕೇಳಿದ್ದು.

ಜೂನ್ ತಿಂಗಳ ಮಳೆಗಾಲದ ರಾತ್ರಿ ಏಳೂವರೆ ಇರಬೇಕು. ಹೊರಗೆ ಆಕಾಶವೇ ಕಳಚಿಬಿದ್ದಂತ ಮಳೆ. ಇಡೀ ಊರಿನಲ್ಲಿ ವಿದ್ಯುತ್ತಿರಲಿಲ್ಲ. ೨೪ ಗಂಟೆಯೂ ವಿದ್ಯುತ್‌ ಮಗ್ಗಗಳ ಸದ್ದೇ ತುಂಬಿರುವ ಊರಲ್ಲಿ ವಿದ್ಯುತ್ತಿಲ್ಲದಿದ್ದಾಗ ತುಂಬ ಭಾರವಾದ ಮೌನ. ಮುಸ್ಸಂಜೆ ಹೊತ್ತಲ್ಲಿ ಬೂಬಮ್ಮ ಮನೆಗೆ ಬಂದು ಕೂತಳು. ಬಂದ ತಕ್ಷಣ ಧಾರಾಕಾರ ಮಳೆ, ಕತ್ತಲು, ದೀಪಹಚ್ಚಿಟ್ಟು ಅಮ್ಮ ಮತ್ತು ಬೂಬಮ್ಮ ಮಾತು ಪ್ರಾರಂಭಿಸಿದರು. ಮಳೆ ಬರೀ ಪ್ರೇಮದ ನೆನಪನ್ನಷ್ಟೇ ಅಲ್ಲ ಆಧ್ಯಾತ್ಮಿಕ ಪರವಶತೆಯನ್ನೂ ಉದ್ದೀಪಿಸುತ್ತದೆ. (ಇವೆರಡೂ ಒಂದೇ ಎನ್ನುವುದು ರೂಮಿಯ ಆಶಯ). ಚಿಕ್ಕ ಬುಡ್ಡಿಯ ಬೆಳಕಿನಲ್ಲಿ ಸುತ್ತ ವಿಚಿತ್ರ ನೆರಳುಗಳು ಹಬ್ಬಿ ಆ ಇಬ್ಬರು ಹೆಂಗಸರು ತಾವು ಹೇಳುತ್ತಿದ್ದ ಕಥೆಗಳ ಪಾತ್ರವೇ ಆಗಿಬಿಟ್ಟರು. ಅವರು ಹೇಳುತ್ತಿದ್ದ ರಮ್ಯ ನಿಗೂಢ ಕಥೆಗಳಿಗೆ ಬೆರಗಾಗಿ ಮೂಲೆಯಲ್ಲಿ ಉಸಿರು ಬಿಗಿಹಿಡಿದು ಕೇಳುತ್ತಿದ್ದ ಹನ್ನೆರಡು-ಹದಿಮೂರು ವರ್ಷದ ಬಾಲಕ ನಾನು. ಅಮ್ಮ ಎಂಥದೊ ಒಳಕಲ್ಲು ತೀರ್ಥದ ಬಗ್ಗೆ ಮಾತನಾಡಿದಳು. ಅಲ್ಲಿ ಪುಣ್ಯವಂತರಿಗೆ ಮಾತ್ರ ಕೈಗೆ ನೀರು ಸಿಗುತ್ತದೆ ಎಂದಳು. ನಗುತ್ತ ತಾನು ಪರೀಕ್ಷೆ ಮಾಡಲು ಹೋಗಲೇ ಇಲ್ಲ ಎಂದೂ ಸೇರಿಸಿದಳು. ಅಮೇಲೆ ತನ್ನ ತಂಗಿ ಊರಿನ ಹತ್ತಿರದ ಶಿವಗಂಗೆ ಬೆಟ್ಟದ ಬಗ್ಗೆ ತನ್ಮಯತೆಯಿಂದ ಮಾತನಾಡಿದಳು. ಯಾವ ಕಾಲದಲ್ಲೋ ಯಾರೋ ಒಬ್ಬ ಜೋಗಿಯ ಹೆಣವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟು ಬೆಟ್ಟದ ಮೇಲಕ್ಕೆ ಒಯ್ದರಂತೆ. ಬೆಟ್ಟದ ಮೇಲೆ ಪೆಟ್ಟಿಗೆ ತೆರೆದಾಗ ಬರೀ ಸುಗಂಧರಾಜ ಹೂಗಳಂತೆ.

ಹೆಣ ಮತ್ತು ಸುಗಂಧರಾಜ ಹೂಗಳ ಬೆರಕೆ ಮೈಯಲ್ಲಿ ಬೆರಗು ಹೊಡೆಸಿ ಬಿಟ್ಟಿತ್ತು. ಆಮೇಲೆ ಬೂಬಮ್ಮ ತನ್ನ ರಾಗದ ಆಲಾಪನೆಯ ಧ್ವನಿಯಲ್ಲಿ ತಮ್ಮ ಮನೆಗೆ ಹಬ್ಬಕ್ಕೆ ಬಂದಿದ್ದ ಮುಸ್ಲಿಂ ಸನ್ಯಾಸಿ ಹೇಳಿದ್ದ ಕಥೆ ಹೇಳಿದಳು. ಆ ಕಥೆ ಏಕೆ ಹೇಳಿದಳು, ಅದರ ಕೊಂಡಿ ಎಲ್ಲಿತ್ತು ಎಂಬುದು ಈಗಲೂ ಅರ್‍ಥವಾಗಿಲ್ಲ. ಆದರೆ ಆ ಕಥೆ ವಿಚಿತ್ರವಾದದ್ದು. ಚಳಿಯಿಂದ ಸೆಡೆತು ಸತ್ತಂತೆ ಬಿದ್ದಿದ್ದ ಹಾವೊಂದನ್ನು ಹಾವಾಡಿಗನೊಬ್ಬ ಬಾಗ್‌ದಾದ್‌ ನಗರಕ್ಕೆ ತಂದು ಬಿಸಿಲಲ್ಲಿ ಬೀದಿಗೆ ಹಾಕಿದ. ಅದು ಸತ್ತಿದೆ ಎಂದೇ ಭಾವಿಸಿದ್ದ ಆತ, ಬಿಸಿಲಿಗೆ ಜೀವ ಚೈತನ್ಯ ಮತ್ತೆ ಉಕ್ಕಿ ಹಾವು ಎಲ್ಲರನ್ನೂ ಕಚ್ಚಿ ನಾಶಮಾಡಿತಂತೆ. ಸ್ವತಃ ಮಂಜನ್ನ ಕಂಡವಳಂತೆ, ಬಾಗ್‌ದಾದ್ ಬೀದಿಗಳಲ್ಲಿ ಅಡ್ಡಾಡಿದವಳಂತೆ ದೊಡ್ಡಬಳ್ಳಾಪುರ ತಾಲೂಕ್ ಗಡಿದಾಟದ ಬೂಬಮ್ಮ ಕನ್ನಡವನ್ನು ಮಣಿಸಿ, ಮಣಿಮಿಂಚಾಗಿಸಿ ಕಥೆ ಹೇಳಿದಳು. ಮಳೆ ನಿಂತಿತು. ಸಣ್ಣ ಹನಿ ತೊಟ್ಟಿಕ್ಕುತ್ತಿತ್ತು. ಎದ್ದು ಸೀರೆ ಕೊಡವಿ ಬೆಳ್ಳಿಕೂದಲ ಬೂಬಮ್ಮ ಹೇಳಿದಳು- “ಅಯ್ಯೋ, ಈ ಮೈಯೇ ಹಾವು ಕಣೇ ತಾಯಿ.” ಹಾಗೆ ಹೇಳಿದವಳೇ ಕತ್ತಲಲ್ಲಿ ತನ್ನ ಸೊಸೆಯನ್ನು ಬೈಯುತ್ತ ನಡೆದು ಹೋದಳು. ಇಡೀ ಮಾತು, ಕಥೆ ಎಲ್ಲೊ ಆ ಬೂಬಮ್ಮನ ಸೊಸೆಯ ಅಸಾಧ್ಯ ಸಂಭ್ರಮದ ಮೈಗೆ ಸಂಬಂಧಿಸಿದ್ದಿರಬೇಕು ಎಂದು ಈಗ ಹೊಳೆಯುತ್ತಿದೆ!

ಮನಸ್ಸಿನೊಳಗೆ ಅಮ್ಮ ಹೇಳಿದ ಹೆಣ ಹೂವಾದ ಕಥೆ ಮತ್ತು ಬೂಬಮ್ಮನ ಹಾವಿನ ಕಥೆಗಳೆರಡೂ ಆಳವಾಗಿ ಬೇರು ಬಿಟ್ಟಿದ್ದವು. ಆದರೆ, ನಾನು ಮುಂದೆ ಬೆಂಗಳೂರಿಗೆ ಬಂದು ಕಾಲೇಜಿಗೆ ಸೇರಿ ಉಗ್ರ ವಿಚಾರವಾದಿಯಾದೆ. ಆ ಕಥೆಗಳನ್ನು ನಂಬುವ ಮನಃಸ್ಥಿತಿಯಿಂದ ಪೂರ್‍ಣವಾಗಿ ದೂರವಾದೆ. ಆ ಕಥೆಗಳ ಮೇಲೆ ವಿಚಾರವಾದದ ಮಂಜು ಕೂರತೊಡಗಿತ್ತು. ಈ ಎಲ್ಲ ಕಥೆಗಳು ಮೊದಲಿನಂತೆ ರೋಮಾಂಚನ ಹುಟ್ಟಿಸುತ್ತಿರಲಿಲ್ಲ. ಬದಲಾಗಿ ಇವೆಲ್ಲ ಶೋಷಣೆಯನ್ನು ಸಹಿಸುವ ಮನಃಸ್ಥಿತಿಗಳು ಎನ್ನಿಸುತ್ತಿತ್ತು. ಉಗ್ರ ತಾರ್ಕಿಕತೆಯ, ಬೌದ್ಧಿಕತೆಯ ಘಟ್ಟ ಅದು. ಆಗ ಪಾರದರ್ಶಕ ಚರಿತ್ರೆಯೇ ಏಕ ಮಾತ್ರ ಸತ್ಯ. ಸಮಾಜವಾದ, ಮಾರ್ಕ್ಸ್‌ವಾದಗಳ ತೀವ್ರ ಆರಾಧನೆಯ ಘಟ್ಟ ಅದು.

ಆದರೆ, ಚರಿತ್ರೆಯ ಕಟ್ಟಡದ ಬಿರುಕಿನೊಳಗಿಂದ ಪ್ರಕೃತಿ ನಾಯಿಕೊಡೆಯಾಗಿ ಅಣಕಿಸುತ್ತಿದೆ. ಬರೀ ನಾಯಿಕೊಡೆಯೇ ಏಕೆ, ಒಮ್ಮೊಮ್ಮೆ ದೊಡ್ಡ ಗಿಡಗಳೇ ಹುಟ್ಟಿಬಿಡುತ್ತವೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ತವರು ಕಲ್ಕತ್ತದ ಧರಂತಲ ನೆನಪಿಗೆ ಬರುತ್ತಿದೆ. ಅಲ್ಲಿ ಬ್ರಿಟಿಷರು ಮೊದಲಿಗೆ ಕಟ್ಟಿದ ವಿಲಾಸದ, ಅಟ್ಟಹಾಸದ ಕಟ್ಟಡಗಳು, ಆ ಬೃಹತ್ ಕಟ್ಟಡಗಳ ಮೈಯಿಂದ ಗಿಡಗಳು ಹುಟ್ಟಿ ಈಗ ಬೀಗುತ್ತಿವೆ! ಚಾವಣಿಗಳಲ್ಲೂ ಪುಟ್ಟ ಮರಗಳು!

೧೯೭೬-೭೭ ರಲ್ಲಿ ಇರಬೇಕು. ಕೊರೆವ ಚಳಿಗಾಲದ ಸಂಜೆಯೊಂದರಲ್ಲಿ ಎಂದಿನ ‘ಸ್ಪಿರಿಚುಯಲ್’ ಯಾತ್ರೆಗಾಗಿ ಇನ್ನೂ ಬಾರದ ಗೆಳೆಯರನ್ನು ಕಾಯುತ್ತ ಸೆಂಟ್ರಲ್ ಕಾಲೇಜು ಲೈಬ್ರರಿಯಲ್ಲಿ ‘ಮಸ್ನವಿ’ಯ ಪ್ರತಿಯನ್ನು ಸುಮ್ಮನೆ ತಿರುವಿ ಹಾಕಿದೆ. ಅದು ಟ್ರಬನರ್ ಓರಿಯಂಟಲ್ ಸೀರೀಸ್‌ನ ಪುಸ್ತಕ. ೧೮೭೭ ರಲ್ಲಿ ಪ್ರಕಟವಾದದ್ದು. ಕಾಲ ಕೊಳೆಯುತ್ತದೆ ಎನ್ನುವುದನ್ನು ತನ್ನ ವಾಸನೆಯಿಂದ ಹೇಳುತ್ತಿದ್ದ ಪುಸ್ತಕ. ಅನ್ಯ ಮನಸ್ಕತೆಯಿಂದ ಕಣ್ಣಾಡಿಸುತ್ತ ಹೋದಂತೆ ಹಾವಾಡಿಗ ಮತ್ತು ಹಾವಿನ ಪ್ರಸಂಗ ಕಂಡಿತು. ವೈರುಗಳು ಕನಕ್ಟಾಗಿ ಜಗ್ಗೆಂದಿತು ದೀಪ. ಅದೇ ಅಕ್ಷರ ಬಾರದ ಬೂಬಮ್ಮ ಹೇಳಿದ ಕಥೆ!

ಶತಮಾನಗಳ ಅಂತರವನ್ನು ದಾಟಿ, ದೇಶ ಖಂಡಗಳನ್ನು ದಾಟಿ ಕರ್ನಾಟಕದ ಚಿಕ್ಕ ಊರಿಗೆ ಹೇಗೆ ಬಂದಿರಬಹುದು ಆ ಕಥೆ ಎಂಬ ಅಂಶವೇ ರೋಮಾಂಚಕಾರಿ. ಪರ್ಶಿಯನ್ ಸಾಹಿತ್ಯ ಸಂಪಾದಕರು ಭಾರತದಲ್ಲಿ ಸಿಕ್ಕಿರುವ ಹಸ್ತ ಪ್ರತಿಗಳನ್ನೂ ಸಾಕಷ್ಟು ಬಳಸಿದ್ದಾರೆ ಎಂಬ ಅಂಶ ಗೊತ್ತಿದ್ದೂ ಆ ರೋಮಾಂಚನಕ್ಕೆ ರೆಕ್ಕೆ ಮೂಡಿ ಹಾರುತ್ತದೆ. ಪರ್ಶಿಯನ್ ಸಾಹಿತ್ಯ ಚರಿತ್ರೆ ಬರೆದ ಬ್ರೌನ್‌ನ ಕೃತಿಯಲ್ಲಿ ಮತ್ತೆ ಮತ್ತೆ ಈ ರೀತಿಯ ಭಾರತೀಯ ಹಸ್ತ ಪ್ರತಿಗಳ ಉಲ್ಲೇಖ ಕಂಡೂ ಮನಸ್ಸು ಹಾರುತ್ತದೆ. ಬಿಜಾಪುರ, ಬೀದರ್, ಗುಲಬರ್ಗಾಗಳ ವೈಭವದ ಕಾಲದಲ್ಲಿ ಈ ಸೂಫೀ ಅನುಭಾವೀ ಧಾರೆಗಳು ಹರಿದುಬಂದವು, ಈ ವಿಸ್ಮಯಕಾರೀ ಪ್ರಯಾಣದ ಕಥೆಯನ್ನು ವಿಸ್ಮಯತಟ್ಟದ ತಣ್ಣನೆ ಶೈಲಿಯಲ್ಲಿ ಈಟನ್ ತನ್ನ ಬಿಜಾಪುರದ ಸೂಫಿಗಳ ಮೇಲಿನ ಪುಸ್ತಕದಲ್ಲಿ ಗುರುತಿಸುತ್ತಾನೆ. ಈಗಲೂ ಆ ಕೋಟೆ ಕೊತ್ತಲ ಅರಮನೆಗಳ ಅವಶೇಷಗಳಲ್ಲಿ ಅಥವಾ ಮಸೀದಿಗಳ ಕಂಭದ ಕೆಳಗೆ ಕಪ್ಪುಬಟ್ಟೆ ಮತ್ತು ಥರಾವರಿ ಮಣಿ ಹಾಕಿ ತೇಲುಗಣ್ಣಾಗಿ ಕೂತಿರುವ ಮುಸ್ಲಿಂ ಸನ್ಯಾಸಿಗಳು ಇನ್ಯಾವುದೋ ಬೇರೆ ಕಾಲ ದೇಶಗಳಿಂದ ದಾಟಿ ಬಂದಂತೆ ನನಗೆ ಕಾಣುತ್ತಾರೆ. ಅವರು ಅಧಿಕೃತರೊ ನಿರುಪಯುಕ್ತರೊ ಎಂದು ತಿಳಿಯದೆ ಹುಂಬ ಗೌರವ ಮತ್ತು ಸಿನಿಕ ತಿರಸ್ಕಾರಗಳ ನಡುವೆ ತೊಯ್ದಾಡಿದ್ದೇನೆ.
* * *

ಆದರೆ, ಆ ಸಂಜೆ ಲೈಬರಿಯಲ್ಲಿ ಕಾಣಿಸಿಕೊಂಡ ರೂಮಿ ನನ್ನ ಪ್ರಜ್ಞೆಯ ಕೇಂದ್ರಕ್ಕೆ ದಿನಗಳಲ್ಲಿ ಬರಲಿಲ್ಲ. ಆತ ಹೆಚ್ಚೆಂದರೆ ಆಗ ಅಗತ್ಯವಿದ್ದಾಗ ಮೆರೆಸಲು ಬೌದ್ಧಿಕ ಅಹಂಕಾರದ ಅಲಂಕಾರ ಮಾತ್ರವಾಗಿದ್ದ. ನನ್ನಂಥವರ ಮನಸ್ಥಿತಿಯೇ ಹಾಗಿತ್ತು. ಒಂದು ರೀತಿಯ ನಿರ್ದಿಷ್ಟ ಸಮಾಜವಾದ, ವಿಚಾರವಾದ, ಮಾರ್ಕ್ಸವಾದಗಳು ಸಂವೇದನೆಯನ್ನು ರೂಪಿಸುತ್ತಿದ್ದ ಕ್ರಮವೇ ಹಾಗಿತ್ತು. ಹಿಂಸೆಗೆ ಬೆದರಿದ ಮಗು ಸ್ಥಿತಿಯ ಮನಸ್ಸು ಚರಿತ್ರೆ ಎಂಬ ತಾಯ ಸೆರಗಲ್ಲೆ ಅವಿತು ನಡೆಯುತ್ತಿತ್ತು. ಕಣ್ಣು ಕೋರೈಸುವ ಬೆಳಕಿನ ಪ್ರೋ ಮಿತ್ಯೂಸ್ ಆಪ್ತ ಆದರ್‍ಶ. ರೂಮಿಯಂಥವರು ಕತ್ತಲಿನ ಹುತ್ತವಾಗಿ ಕಾಣುತ್ತಿದ್ದರು. ಆದರೆ, ಆ ರೀತಿಯ ಬೀಜಗಳು ಕತ್ತಲಿನ ಒಳಪದರಗಳಲ್ಲಿ ಸಹಿಷ್ಣುತೆಯಿಂದ ಕಾಯುತ್ತವೆ. ಮುಂದಕ್ಕೆ ಎಂದೋ ಬಿರುಕುಗಿ ನುಗ್ಗಿ ಗಿಡವಾಗಿ ಅರಳುತ್ತವೆ. ಪ್ರಕೃತಿ ಚರಿತ್ರೆಯೊಳಗೆ ನುಗ್ಗಿ ಅದನ್ನು ಮುಂದುವರೆಸುವುದು ಹೀಗೆ.

ಸಿದ್ಧಾಂತಗಳು ನಮ್ಮ ಸಂವೇದನೆಯನ್ನು ರೂಪಿಸುವ ಕ್ರಮಕ್ಕೆ ಸಾಧಿಕಾರತ್ವದ ಗುಣವಿದೆ. ನಂಬಿಕೆಗಳು ಸೆರೆಮನೆಗಳಾಗಿ ಬಿಡುತ್ತವೆ. ನನ್ನನ್ನ ರೂಪಿಸಿದ ಚಿಂತನಾ ಕ್ರಮಗಳ ಅಪೂರ್‍ಣತೆಯನ್ನು ಅರ್ಥಮಾಡಿಕೊಳ್ಳಲು ಸಾಹಿತ್ಯಕ ರೂಪಕಗಳಿಗೆ ಹೋಗುವುದೇ ಕ್ಷೇಮ.

ಸಾಮಾನ್ಯವಾಗಿ ಮಧ್ಯಯುಗೀನ ಭಾರತೀಯ ಕಾವ್ಯಗಳಲ್ಲಿ ಒಂದು ಸನ್ನಿವೇಶ ಬರುತ್ತದೆ. ಸುಂದರಿಯೊಬ್ಬಳು ಬಿಸಿಲು ಮಚ್ಚಿನಲ್ಲಿ ನಿಂತು ತನ್ನ ತಲೆಕೂದಲು ಹರಹುತ್ತಾಳೆ. ಆ ದಟ್ಟ ಕೂದಲಿಗೆ ಕಪ್ಪು ಮೋಡದಂಥ ವಿಸ್ತಾರವಿದ್ದು ಒಂದು ಕ್ರಿಯಾ ಪರಂಪರೆಯೇ ಪ್ರಾರಂಭವಾಗಿ ಬಿಡುತ್ತದೆ. ಮಳೆ ಬರುವ ಗಳಿಗೆ ಎಂಬ ಭ್ರಮೆಯಿಂದಾಗಿ ಪಕ್ಷಿ ಪ್ರಾಣಿಗಳೆಲ್ಲ ಅದಕ್ಕೆ ತಕ್ಕಂತೆ ವರ್ತಿಸಿ, ಅವು ಒಂದಕ್ಕೊಂದು ಕೊಂಡಿಯಾಗುತ್ತ ಹೋಗಿ ಭ್ರಮೆ ನಿಜವಾಗಿಬಿಟ್ಟು ಕಡೆಗೆ ಮಳೆಯೇ ಬಂದು ಬಿಡುತ್ತದೆ. ಒಂದು ಮಟ್ಟದಲ್ಲಿ ಬರೀ ಚಮತ್ಕಾರದ ಪ್ರತಿಮಾವಳಿ. ಮಧ್ಯಯುಗೀನ ಭಾರತೀಯ ಕಾವ್ಯದಲ್ಲಿ ಸಾಮಾನ್ಯವಾಗಿ ತುಂಬಿರುವ ಚಮತ್ಕಾರ ಕವಿತಾ ಸನ್ನಿವೇಶದ ಇನ್ನೊಂದು ತಂತ್ರದಂತೆ ಇದು ಕಾಣುತ್ತದೆ ಎಂಬ ಅಂಶವೂ ನಿಜ. ಆದರೆ, ಇನ್ನೊಂದು ಮಟ್ಟದಲ್ಲಿ ಒಂದು ನಿರ್ದಿಷ್ಟ ರೀತಿಯ ಗ್ರಹಿಕೆ ಮತ್ತು ಸಂವೇದನೆಗಳ ಪ್ರಾತಿನಿಧಿಕ ಅಭಿವ್ಯಕ್ತಿ ಈ ರೂಪಕಾವಳಿ, ಸಾಮಾನ್ಯವಾಗಿ ಜನಪ್ರಿಯ ಸಮಾಜವಾದಿ ಅಥವಾ ಮಾರ್ಕ್ಸ್‌ವಾದೀ ಸಂವೇದನೆಗೆ ಸಾಧ್ಯವಾಗದಂಥ ಸೃಜನಶೀಲ ವಿನ್ಯಾಸ ಇದು. ಇದನ್ನು ಕೊರಾನ್‌ನ ಪರಿಕಲ್ಪನೆ ‘ತೌಹಿದ್’ ಸಮರ್ಥವಾಗಿ ವಿವರಿಸುತ್ತದೆ. ಇದಕ್ಕೆ ‘ದಿವೈಕ್ಯ’ ಎಂದರ್‍ಥ. ಎಲ್ಲವೂ ಒಂದರೊಳಗೊಂದು ಬೆರೆತಿವೆ, ಅಖಂಡವಾಗಿವೆ. ಬೌದ್ಧ ಧರ್‍ಮ ಇದನ್ನೆ ಇನ್ನೊಂದು ನೀತಿಯಲ್ಲಿ ‘ಪ್ರತೀತ್ಯ ಸಮುಪ್ಪಾದ’ ಎನ್ನುತ್ತದೆ. ಕನ್ನಡದಲ್ಲಿ ಷಡಕ್ಷರಿಯ ಬೌದ್ಧಿಕ ಚಮತ್ಕಾರದಲ್ಲಿ ಸಹಜವಾಗಿ ಹರಿದು ಬಂದದ್ದು ಈ ರೀತಿಯ ಪರಸ್ಪರಾಂತರ್‍ಗತ ನೆಂಟಿನ ದರ್‍ಶನ. ಚರಿತ್ರೆ ಮತ್ತು ಪ್ರಜ್ಞೆಗಳ ನಡುವಣ ಸಂಬಂಧವನ್ನು ಸೀಮಿತವಾಗಿ ನೋಡುವುದರಿಂದಲೇ ನಮ್ಮಂಥ ಸಾಮಾನ್ಯರಲ್ಲಿ ಭೌತವಾದಿ ಸಿದ್ಧಾಂತಗಳು ಇನ್ನಷ್ಟು ಜಡವಾಗಿ ಬಿಡುತ್ತವೆ. ಆದರೆ, ನೆರೂದನಂಥ ಕವಿಗಳು ಅನೇಕ ಕವಿತೆಗಳಲ್ಲಿ ಈ ಬಗೆಯ ಜಡಗ್ರಹಿಕೆಯನ್ನು ದಾಟುತ್ತಾರೆ. “ಎಷ್ಟೊಂದು ಹೆಸರುಗಳು” ರೀತಿಯ ಕವಿತೆಗಳಲ್ಲಿ ಈ ಅಂತರ್‍ಗತ ಅಖಂಡತೆಯ ದರ್ಶನದ ಕಾರಣಕ್ಕಾಗಿ ನೆರದ ಒಬ್ಬ ಸೂಫಿ ಕವಿಯ ಹಾಗೇ ಅದ್ವಿತಿಯ ಹಾಗೆ, ಬೌದ್ಧ ಅನುಭಾವಿಯ ಹಾಗೆ ಕಾಣತೊಡಗುತ್ತಾನೆ. ಬ್ಲೇಕ್ ಈ ಬಗೆಯ ಕವಿ, ಒಳಗೆ ಅಜ್ಞಾತವಾಗಿ ಹಬ್ಬಿರುವ ಸಂಬಂಧಗಳು ಥಟ್ಟನೆ ಹೊಳೆದು ಅದನ್ನು ರೂಪಕವಾಗಿ ಆತ ಕಟ್ಟಬಲ್ಲ. ಬ್ಲೇಕ್‌ನಲ್ಲಿ ಯಜಮಾನನ ಗೇಟಿನ ಬಳಿಯ ಪ್ರಾಣಿಯ ಹಸಿವಿನ ಆಕ್ರಂದನ ಪ್ರಭುತ್ವದ ವಿನಾಶವನ್ನು ಹೇಳುತ್ತದೆ. ಹಸಿವಿನಿಂದ ನರಳುವ ನಾಯಿಯ ಕೂಗಿಗೂ ಪ್ರಭುತ್ವದ ವಿನಾಶಕ್ಕೂ ಇರುವ ಸಂಬಂಧವನ್ನು ಗ್ರಹಿಸಲು ಭೌತವಾದಕ್ಕೆ ಅನೇಕ ಕಷ್ಟಗಳಿವೆ. ಆದರೆ, ಬೇಕ್ ಹಾಗೆ ಗ್ರಹಿಸಬಲ್ಲ. ಬೇಂದ್ರೆಯವರ ‘ಬೆಳಗು’ ಪದ್ಯದ ಅನುಭವವೂ ಆ ಬಗೆಯದೇ. ಬೇಂದ್ರೆಯವರ ಅತ್ಯುತ್ತಮ ಕವಿತೆಗಳ ಅನುಭವ ಈ ಬಗೆಯ ರೂಪಕ ಶಕ್ತಿಯಿಂದ ಅಜ್ಞಾತ ಸಂಬಂಧಗಳನ್ನು ದೀಪ್ತವಾಗಿಡುತ್ತದೆ.

ಧಾರವಾಡದ ಸೋನೆಮಳೆಯ ಸಂಜೆಯಲ್ಲಿ ಸುತ್ತಲಿನ ಗುಡ್ಡಗಳು ಇನ್ನಾವುದೊ ದಟ್ಟ ಪ್ರೇಮದ ಅನುಭವವನ್ನು ಪ್ರತೀತಗೊಳಿಸುತ್ತದೆ. ಸೋಮೇಶ್ವರವನ್ನು ಕಾಣಲು ಹೋಗುವ ಪ್ರಯಾಣ ಗುಡ್ಡದ ಮಡಿಲಿನ ಒಂದು ಪುಟಾಣಿ ಗುಡಿಯನ್ನು ನೋಡುವ ಯಾತ್ರೆಯಾಗದೆ ಆಧ್ಯಾತ್ಮದ ಸಂಕೇತವನ್ನೆ ಪಡೆವ ಪ್ರಯಾಣವಾಗುತ್ತದೆ. ಧಾರವಾಡದಲ್ಲಿ ಒಂದೇ ಸಮನೆ ಅಸರಂತ ಕೂಗುವ ಕೋಗಿಲೆ ಸಾಮಾನ್ಯ ಪಕ್ಷಿಯೂ ಹೌದು. ಜತೆಗೆ ಶೃಂಗಾರ-ಅನುಭಾವಗಳ ಮಿಲನದ ಜೋಡಿ ಸಂಕೇತವೂ ಹೌದು. ಇಡೀ ಧಾರವಾಡದ ನಿಸರ್ಗ ಒಂದು ಸಖ್ಯದ ಅಖ್ಯಾನವಾಗಿ ಬಿಡುತ್ತದೆ. ಇದು ನನ್ನ ಧಾರವಾಡದ ಅನುಭವ. ವಸಂತ ಸಂಭ್ರಮ ಆ ನೆಲದಲ್ಲಿ ನಿಸರ್ಗಾನುಭಾವವಾಗಿ ಬಿಡುತ್ತದೆ. ಕವಿ ಬೇಂದ್ರೆಯ ಕೃಪೆ.

ಈ ಬಗೆಯ ಅನುಭವವನ್ನು ಪಡೆಯಬೇಕಾದರೆ ಆಂತರಿಕ ಭಾವ-ಜ್ಞಾನ ಕೋಶಗಳ ಪರಿವರ್‍ತನೆ ಆಗಬೇಕು. ಏಕಾಂತದ ಜಿನುಗು ಮತ್ತು ಲೋಕಾಂತದ ಮೊರೆತ ಒಂದರೊಳಗೊಂದು ಬೆರೆತು ಹೋಗಬೇಕು.
* * *

ಈ ಎಲ್ಲ ಹಿನ್ನೆಲೆಯಲ್ಲಿ ಹಳೆಯ ಜಡತೆಗಳನ್ನು, ಹಳೆಯ ಸ್ಥಾಗಿತ್ಯಗಳನ್ನು ಕಳಚಿಕೊಳ್ಳುವ ದಾರಿಯಲ್ಲಿ ಮತ್ತೆ ರೂಮಿ ಸಿಕ್ಕ. ಒಂದು ಮಟ್ಟದಲ್ಲಿ ಹಳೆಯ ಮಾನಸಿಕ ರೂಢಿಗಳಿಂದ ಬಿಡುಗಡೆಯ ದಟ್ಟ ಪ್ರಯತ್ನ. ಆದರೆ, ರೂಮಿಯ ಕೇಂದ್ರ ದರ್ಶನ ಅದಕ್ಕೆ ಅಷ್ಟು ಸುಲಭವಾಗಿ ಅವಕಾಶ ಕೊಡುವಂಥದಲ್ಲ. ಏಕೆಂದರೆ, ರೂಮಿಯಲ್ಲಿ ಸ್ಮೃತಿ ಅಥವಾ ನೆನಪು ಮುಖ್ಯಪ್ರಾಣ ಕಲ್ಪನೆ. ಸಸ್ಯಕ್ಕೆ ತಾನೊಮ್ಮೆ ಜಡ ಪದಾರ್ಥವಾಗಿದ್ದರ ನೆನಪು. ಸಸ್ಯ ಮುಂದೆ ಪ್ರಾಣಿಯಾಗುತ್ತದೆ. ಹೀಗಾಗಿ, ರೂಮಿಯ ಅಧ್ಯಯನ, ಗ್ರಹಿಕೆಗಳಿಂದಾಗಿ ಹಳೆಯ ಸಿದ್ಧಾಂತಗಳ ಮೂಲದರ್ಶನವನ್ನು ಹೊಸ ರೀತಿಯಲ್ಲಿ ಮತ್ತೆ ಆಪ್ತವಾಗಿಸಿಕೊಳ್ಳುವುದು ಸಾಧ್ಯವಾಯಿತು. ‘ಅಂತರ್‍ಗತ ಅಖಂಡತೆ’ಯ ಪರಿಕಲ್ಪನೆಯಿಂದಾಗಿ ಸಮಾಜವಾದ, ಸಾಂಸ್ಕೃತಿಕ ಪರಂಪರೆಗಳ ಮತ್ತು ಪರಿಸರ ದರ್ಶನಗಳು ಒಂದರೊಳಗೊಂದು ಬೆರೆತು ಅಖಂಡವಾದವು.

ಹೀಗಾಗಿ ರೂಮಿಯ ದಾರ್‍ಶನಿಕ ಒಡನಾಟ ಕೂಡಾ ಅಂತಿಮವಾಗಿ ರಾಜಕೀಯವಾಗಿ ಪರಿವರ್‍ತನೆಯಾಯಿತೆ ಎಂಬ ವ್ಯಂಗ್ಯ ಈಗಲೂ ಕಾಡುತ್ತಿದೆ. ಆದರೆ, ಅದು ಹಳೆಯದಲ್ಲ ಎಂಬುದಷ್ಟೇ ಸಮಾಧಾನ.

ರೂಮಿ ೧೨೦೭ ರಲ್ಲಿ ಈಗಿನ ಆಫ್‌ಘಾನಿಸ್ಥಾನದ ಗಡಿಪ್ರದೇಶದ ಬಾಲ್ಕ್ ಎಂಬಲ್ಲಿ ಹುಟ್ಟಿದ. ಏಶ್ಯಾಟಿಕ್ ಟರ್ಕಿಯಲ್ಲಿ ೧೨೭೩ ರಲ್ಲಿ ನಿಧನ ಹೊಂದಿದ. ಈ ಮಧ್ಯೆ ಪರ್ಶಿಯಾದ ಅತ್ಯಂತ ಮುಖ್ಯ ಅನುಭಾವೀ ಕವಿಯಾದ.

ಲೌಕಿಕ ಚಾರಿತ್ರಿಕ ಪರಿಭಾಷೆಯಲ್ಲಿ ರೂಮಿಯ ಜೀವನವನ್ನು ವಿವರಿಸಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ಆದರೆ, ಸಾಂಪ್ರದಾಯಕ ಸೂಫಿ ಪರಿಕಲ್ಪನೆಗಳ ಹಿನ್ನೆಲೆಯಲ್ಲಷ್ಟೇ ಅದನ್ನು ನೋಡಿದರೆ ಚಾರಿತ್ರಿಕ ಪ್ರಸ್ತುತತೆ ಬರುವುದಿಲ್ಲ. ಹೀಗಾಗಿ, ಚಾರಿತ್ರಿಕ ಜೀವನ ಮಂಡನೆ ಮತ್ತು ಸಾಂಪ್ರದಾಯಕ ಸೂಫೀ ಪರಿಕಲ್ಪನೆಗಳನ್ನು ಒಂದಕ್ಕೊಂದು ಮುಖಾಮುಖಿಯಾಗಿಸಿ ವಿವರಿಸುವುದೇ ಮೇಲು. (ಸೂಫೀ ಪರಿಕಲ್ಪನೆಗಳನ್ನು ಅನ್ವಯಿಸುವಲ್ಲಿ ರೂಮಿಯ ಮೇಲೆ ತುಂಬ ಮುಖ್ಯ ಪುಸ್ತಕ ಬರೆದ ರೇಜಾ ಅರಾಸ್ಟೆ ಎಂಬ ಲೇಖಕನ ಚಿಂತನೆಗಳಿಗೆ ಋಣಿಯಾಗಿದ್ದೇನೆ).

ರೂಮಿಯ ಜೀವನ ಮಾನಸಿಕ ಪುನರ್‌ಜನ್ಮಗಳ ಒಂದು ರೋಮಾಂಚಕ ಕಥೆ. ವಿವಿಧ ಮನಸ್ಥಿತಿಗಳು ಅಥವಾ ಸ್ಥಲಗಳು ಅಲ್ಲಿ ತುಂಬ ಮುಖ್ಯ. ಮೊದಲ ಘಟ್ಟದಲ್ಲಿ ರೂಮಿಯ ಸಾಂಪ್ರದಾಯಕ ವ್ಯಕ್ತಿತ್ವವನ್ನು ಕಾಣುತ್ತೇವೆ. ಮೊದಲಿಗೆ ಈತ ಪ್ರಸಿದ್ಧ ವಿದ್ವಾಂಸ ಬಹಾಲುದೀನ್ ವಲಾದ್‌ನ ಮಗ. ಪ್ರತಿಷ್ಠಿತ ಮನೆತನದ ಅತ್ಯುತ್ತಮ ಫಲ. ೨೧ ನೆ ವಯಸ್ಸಿಗೆ ಮದುವೆಯಾದ. ಇಬ್ಬರು ಮಕ್ಕಳ ತಂದೆಯಾದ. ಮೊದಲ ಹೆಂಡತಿಯ ಸಾವಿನಿಂದ ಮತ್ತೆ ಮದುವೆಯಾಗಿ ಒಬ್ಬ ಮಗ ಮತ್ತು ಮಗಳನ್ನು ಪಡೆದ. ಇಸ್ಲಾಮಿಕ್ ಕಾನೂನು ಮತ್ತು ದೇವತಾ ಶಾಸ್ತ್ರಗಳಲ್ಲಿ ದೊಡ್ಡ ಪಂಡಿತನಾಗಿ ಹೆಸರು ಪಡೆದ. ಈ ಮಧ್ಯೆ ಪ್ರಸಿದ್ಧ ಸೂಫಿ ಬುರ್ಹಾನ್ ಅಲ್‌ದೀನ್‌ನಿಂದ ಒಂಭತ್ತು ವರ್ಷ ಸೂಫೀ ತತ್ವಗಳನ್ನೂ ಕಲಿತ. ನಂತರ ನಾಲ್ಕು ವರ್ಷ ಏಕಾಂಗಿಯಾಗಿ ಸೂಫೀ ಕೇಂದ್ರಗಳಿಗೆ ಯಾತ್ರೆಮಾಡಿದ. ಡಮಾಸ್ಕಸ್‌ಗೆ ವಾಪಸಾಗಿ ಮತ್ತೆ ಐದು ವರ್ಷ ಶಿಷ್ಯರಿಗೆ ಧಾರ್‍ಮಿಕತತ್ವ ಪಾಠ ಹೇಳಿದ.

ಸಾಂಪ್ರದಾಯಿಕ ವ್ಯಕ್ತಿತ್ವ ಕೀರ್ತಿ ಮತ್ತು ಪ್ರತಿಷ್ಠೆಗಳ ಶೃಂಗಕ್ಕೆ ಏರುತ್ತಿದ್ದ ಹಾಗೇ ಒಳಗಿಂದ ದಟ್ಟ ಅನುಮಾನಗಳು ಕೊರೆಯತೊಡಗಿದ್ದವು. ‘ಫಿಹಿಮಾ ಫಿಹಿ’ ಎಂಬ ತನ್ನ ಸಂವಾದ ಗ್ರಂಥದಲ್ಲಿ ಆತ ಈ ಬಗೆಗೆ ಒಳನೋಟ ಕೊಡುತ್ತಾನೆ. (ಫಿಹಿಮಾ ಫಿಹಿ ಅನೇಕ ದೃಷ್ಟಿಗಳಿಂದ ‘ಶೂನ್ಯ ಸಂಪಾದನೆ’ ಇದ್ದ ಹಾಗೆ) ಗಂಧರ್‍ವರಿಗೆ ಮುಕ್ತಿ ಎನ್ನುವುದು ನಿಜವಾದ ಜ್ಞಾನದಿಂದ ಬರುತ್ತದೆ. ಪ್ರಾಣಿಗಳಿಗೆ ಶುದ್ಧ ಅಜ್ಞಾನದಿಂದ ಆದರೆ, ಮಾನವ ಇವೆರಡರ ಮಧ್ಯೆ ಸಿಕ್ಕಿಬಿದ್ದಿದ್ದಾನೆ. ಒಮ್ಮೆ ಮೇಲಕ್ಕೆ ಮೊತ್ತೊಮ್ಮೆ ಅಧಃಪಾತಾಳಕ್ಕೆ ಎಂದೂ ವಿವರಿಸಿದ. ಸುತ್ತಲಿನ ಬದುಕಿನ ಅಸಂಬದ್ಧತೆಗೂ ಮತ್ತು ತನ್ನ ಸಾಂಪ್ರದಾಯಕ ವ್ಯಕ್ತಿತ್ವಕ್ಕೂ ಇರುವ ಅಖಂಡ ಸಂಬಂಧವನ್ನು ಗಮನಿಸಿ ದಿಗ್ಭ್ರಮೆಗೆ ಒಳಗಾದ.

ಮಹತ್ವದ ಪುನರ್‌ಜನ್ಮಕ್ಕೆ ರೂಮಿ ಸಿದ್ಧನಾಗುತ್ತಿದ್ದ, ಪಾಂಡಿತ್ಯದ ಹುತ್ತಗಟ್ಟುತ್ತಿದ್ದಂತೆ ಒಳಗೆ ಉಸಿರುಕಟ್ಟಿ ಚಡಪಡಿಸಿದ. ಆತ್ಮಸಂಶಯದ ಹೊಡೆತಕ್ಕೆ ಸಾಂಪ್ರದಾಯಕ ಸ್ವ ಚೂರುಚೂರಾಗಿ ಬೀಳುತ್ತಿತ್ತು. ಸಾಂಪ್ರದಾಯಕ ಸ್ವ ಮತ್ತು ವಿಶ್ವಾತ್ಮಗಳ ನಡುವಣದ ತಲ್ಲಣಕಾರೀ ಅಂತರಗಳನ್ನು ರೂಮಿ ಕಾಣುತ್ತ ಅದನ್ನು ದಾಟಬೇಕೆಂದು ನಿಶ್ಚಯಿಸಿದ. ಅತ್ಯಂತ ಗೌರವಾರ್ಹ ವಿದ್ವಾಂಸನಿಗೆ ಒಳಗೆ ಅಶಾಂತಿಯ ಸಮುದ್ರಗಳು ಮೊರೆಯತೊಡಗಿದ್ದವು.

ಆಗ ಆಕಸ್ಮಿಕವೊ ಇಲ್ಲ ಸೂತ್ವ ನಿಯೋಜಿತವೊ ತಿಳಿಯದು. ಶಂಸ್ ಭೇಟಿಯಾದ. ತೊರೆ ಬಂದು ಹಾಯ್ದಂತೆ ಅದು. ಈ ಭೇಟಿಗೆ ಲೌಕಿಕ ಹಾಗೂ ಅಲೌಕಿಕ ಮಹತ್ವಗಳೆರಡೂ ಇವೆ.

ಲೌಕಿಕ ಜೀವನ ಶಂಸ್‌ನ ಸ್ನೇಹದಿಂದಾಗಿ ತೀವ್ರ ಬಿಕ್ಕಟ್ಟಿಗೆ ಸಿಕ್ಕಿತು. ಇವರಿಬ್ಬರು ಸಖ್ಯದ ತೀವ್ರತೆಯಿಂದಾಗಿ ಅಸೂಯೆಯಿಂದ ಉರಿದು ಹೋದ ರೂಮಿಯ ಪರಿವಾರ ಸೃಷ್ಟಿಸಿದ ವಾತಾವರಣ ಭೀಕರವಾದದ್ದು. ಆದರೆ, ಹೊರಗಿನ ಈ ಅಲ್ಲೋಲ ಕಲ್ಲೋಲಕ್ಕೆ ಸಮನಾಗಿ ರೂಮಿಯ ಆಂತರಿಕ ಜೀವನ ಹೆಚ್ಚು ಸಮೃದ್ಧ ರೀತಿಯಲ್ಲಿ ವಿಕಾಸವಾಗುತ್ತ ಹೋಯಿತು. ಅದು ತುಂಬ ಮೃದುವಾಗಿತ್ತು ಎಂದೇನೂ ಅಲ್ಲ. ಆದರೆ, ಪ್ರಜ್ಞೆಗೆ ಹತ್ತಿದ್ದ ಜಡತೆ ಮತ್ತು ಮಂಪರುಗಳು ಹೋಗಿ ಅವನ ಅನುಭಾವೀ ಜೀವನ ವಿಕಾಸಶೀಲವಾಗುತ್ತ ಹೋಯಿತು.

ಯಾರು ಈ ಶಂಸ್? ಈತ ತಬ್ರೀಜ್‌ನವನು. ಅಲ್ಲಿಯ ಬುಟ್ಟಿ ಹೆಣೆವ ಕಸುಬಿನ ಸೂಫಿ ಅಬುಬೇಕರ್ ಜನ್‌ಬಿಲ್‌ಬಾಫ್‌ ಎಂಬಾತನಿಂದ ಸೂಫೀ ಶಿಕ್ಷಣ ಕಲಿತವನು. (ಬಹುಮಟ್ಟಿಗೆ ಎಲ್ಲ ಮಹತ್ವದ ಸೂಫೀಗಳೂ ಹೀಗೆ ಸಾಧಾರಣ ಕಸುಬುಗಳನ್ನು ಮಾಡುತ್ತ ಬದುಕಿದವರು) ಗುರು ಶಿಕ್ಷಣ ಸಾಲದೆ ಸ್ವಂತದ ದಾರಿ ಹುಡುಕುತ್ತ ಹೊರಟು ಎಲ್ಲ ಬಗೆಯ ಅಧಿಕಾರಗಳ ವಿರುದ್ಧ ಬಂಡೆದ್ದು ಅಲೆಮಾರಿಯಾಗಿ ಬದುಕಿದವನು. ಆತನಿಗೂ ರೂಮಿಯ ಸಖ್ಯದ ಅಗತ್ಯತೆ ಇತ್ತು. ಆತ ರೂಮಿಗಿಂತ ೨೨ ವರ್ಷ ದೊಡ್ಡವನು. ಈ ಸಖ್ಯದ ಆಖ್ಯಾನವೇ “ದಿವಾನ್-ಇ-ಶಂಸ್” ಎಂಬ ಕವನ ಸಂಕಲನ. ೨,೫೦೦ ಪದ್ಯಗಳಿರುವ ಈ ಕೃತಿಗೆ ಜಗತ್ತಿನ ಸಾಹಿತ್ಯದಲ್ಲೇ ಅತ್ಯಂತ ಮುಖ್ಯ ಸ್ಥಾನವಿದೆ.

ರೂಮಿ ಮತ್ತು ಶಂಸ್‌ನ ಸಂಬಂಧ ಎಲ್ಲ ಅನುಭಾವಿಕ ಸಂಬಂಧದ ಸಂಕೇತ. ಅಕ್ಕಮಹಾದೇವಿ-ಚೆನ್ನಮಲ್ಲಿಕಾರ್ಜುನರ ಸಂಬಂಧದ ಹಾಗೆ, ಮೀರಾ ಮತ್ತು ಶ್ಯಾಮನ ಸಂಬಂಧದ ಹಾಗೆ, ರಾಧಾ ಮತ್ತು ಕೃಷ್ಣರ ಸಂಬಂಧದ ಹಾಗೆ, ಇಂಥ ಸಂಬಂಧಗಳಿಂದಾಗಿ ವ್ಯಕ್ತಿತ್ವದ ಕ್ರಾಂತಿಕಾರಕ ಪರಿವರ್ತನೆಯಾಗಿ ಬಿಡುತ್ತದೆ. ವಸಂತದಿಂದಾಗಿ ಭೂಮಿಯಲ್ಲಿ ಸಂಪೂರ್ಣ ಪರಿವರ್ತನೆಯಾದ ಹಾಗೆ. ಅಲ್ಲಿಂದಾಚೆಗೆ ಎಲ್ಲವೂ ಹೊಸದು. ನವನವೀನ.

ರೂಮಿ ಮತ್ತು ಶಂಸ್‌ರ ಸಖ್ಯದ ಅಖ್ಯಾನದಲ್ಲಿ ಜಗತ್ತಿನ ಅನುಭಾವೀಪ್ರೇಮದ ಅತ್ಯುತ್ತಮ ಕವನಗಳಿವೆ. ಆದರೆ, ಅದು ನಮ್ಮ ದಾಸಸಾಹಿತ್ಯದ ಶೃಂಗಾರಾನುಭಾವವಲ್ಲ. ನಮ್ಮಲ್ಲಿ ಲಾಲಿತ್ಯ ಮತ್ತು ಅಲಂಕಾರಗಳೇ ಪ್ರಧಾನ. ರೂಮಿಯಲ್ಲಿ ಶೃಂಗಾರವಿದೆ, ಲಾಲಿತ್ಯವಿದೆ, ಮೋಹಕ ಲೋಕಗಳ ಸ್ವಪ್ನಮಯತೆ ಇದೆ. ಆದರೆ, ಅದರ ಜತೆಗೇ ಹಳೆಯ ಸಾಮಾಜಿಕ ವ್ಯಕ್ತಿತ್ವದ ಪಳೆಯುಳಿಕೆಗಳು ಮತ್ತು ದಿವ್ಯಸ್ಮೃತಿಯ ತೀವ್ರ ಘರ್ಷಣೆ ಇದೆ. ಇವೆರಡರ ಸಂಘರ್ಷದ ವಿವಿಧ ಮಜಲುಗಳೇ ರೂಮಿಯ ಆಂತರಿಕ ಜೀವನದ ವರ್‍ಣರಂಜಿತ ಗುಣಗಳಿಗೆ ಕಾರಣವಾಗಿವೆ. ಈ ಘರ್ಷಣೆಯೇ ‘ಗಳಿಗೆ, ಅರೆಗಳಿಗೆ’ಯ ವಸ್ತು. ಒಂದು ಗಳಿಗೆ ತಾನು ಹೀಗೆ, ಇನ್ನೊಂದು ಗಳಿಗೆ ತಾನು ಹಾಗೆ ಎಂದು ಆರ್ತನಾಗುವ ರೂಮಿಯ ಕವನಕ್ಕೆ ವಿಚಿತ್ರ ನಾಟಕೀಯ ಗುಣವಿದೆ. ಪದ್ಯದ ಕಡೆಯ ಸಾಲಿನಲ್ಲಿ ತಾನು ದಿವ್ಯ ಸ್ಮೃತಿಯ ಕಡೆಗೆ ಮರಳಿ ಪ್ರಯಾಣ ಮಾಡುವ ಸಂಕಲ್ಪ ಪ್ರಕಟಿಸುತ್ತಾನೆ.

ಈತ ಹದಿನೈದು ತಿಂಗಳು ಶಂಸ್‌ನ ಜತೆಗಿದ್ದ. ಜ್ಞಾನದ ದೌಲು ಇಳಿದು ಪ್ರೇಮವೇ ಸರ್‍ವತ್ರ ವ್ಯಾಪಿಸಿದ ಶಕ್ತಿಯಾಯಿತು. “ಜಪಮಣಿ ಕಿತ್ತು ಹಾಡು ಕೊಟ್ಟ” ಸಂಬಂಧ ಇದು. ಮಾನ ಮರ್‍ಯಾದೆ ಎಲ್ಲ ಹರಜಾಯಿತು. ಸುತ್ತಲಿನ ಲೋಕಕ್ಕೆ ದೊಡ್ಡ ಶಾಕ್ ಅದು. ರೂಮಿ ಮೊದಲಿನಂತಿರಲಿಲ್ಲ. ಹಳೆಯ ಯಾವುದೂ ಅವನಿಗೆ ರುಚಿಸುತ್ತಿರಲಿಲ್ಲ. ಅದ್ಭುತವಾಗಿ ಮಾತನಾಡುತ್ತಿದ್ದವನಿಗೆ, ಧರ್ಮವನ್ನು ತರ್ಕಕ್ಕೆ ಇಳಿಸಿ ಅತ್ಯಂತ ಆಕರ್ಷಕವಾಗಿ ವಿಚಾರ ಮಂಡಿಸುತ್ತಿದ್ದವನಿಗೆ, ಮಾತಿನ ಬಗ್ಗೆ ಉಪೇಕ್ಷೆ ಬಂದಿತು. ತಾರ್ಕಿಕ ಜ್ಞಾನ ಸಂಕೋಲೆಯಾಗಿ ಕಂಡಿತು. ಜನರ ಕೋಪ ಶಂಸ್‌ನ ವಿರುದ್ಧ ತಿರುಗಿತು. ಅವರು ಆ ತಬ್ರೀಜಿನ ಶಂಸ್‌ನ ಮೇಲೆ ತಿರುಗಿಬಿದ್ದರು. ಒಂದು ದಿನ ಶಂಸ್‌ ಕಾಣೆಯಾದ. ಮತ್ತೆ ರೂಮಿಗೆ ಅಗಾಧ ಒಂಟಿತನ. ಆದರೆ, ಶಂಸ್ ಈಗ ಮೌನಿಯಾಗಿದ್ದ. ಗುರುತಿನ ವಿಹ್ವಲ ಸ್ಥಿತಿ ನೋಡಲಾಗದೆ ಮತ್ತೆ ಶಂಸ್ ಜನ್ಮ ಹುಡುಕಿದರು. ಕರೆತಂದರು. ಆದರೆ, ಎರಡನೆ ಬಾರಿಯೂ ಶಂಸ್ ಇಲ್ಲವಾದ.

ಈ ಅವಧಿಯಲ್ಲಿ ರೂಮಿ ತೀವ್ರವಾದ ರೀತಿಯಲ್ಲಿ ಹಲವಾರು ಮಾನಸಿಕ ಪುನರ್‌ಜನ್ಮಗಳನ್ನು ಪಡೆಯತೊಡಗಿದ್ದ. ಆದರೆ, ಒಂದೇ ಒಂದು ನಿರ್ದಿಷ್ಟ ದರ್ಶನ ಹೆಚ್ಚು ಹೆಚ್ಚು ನಿರ್ದಿಷ್ಟವಾಗುತ್ತ, ಆಳವಾಗುತ್ತ ಹೋಗಿತ್ತು. ಅದೇ ಪ್ರೇಮತತ್ವ ಶಂಸ್ ಬೌದ್ಧ ತಾಂತ್ರಿಕರು ಹೇಳುವ “ಮಹಾಸಖ”ದ ಪ್ರತೀಕವಾಗಿ ಬಿಟ್ಟಿದ್ದ. ತನ್ನ ಪ್ರೀತಿಯನ್ನೆ ಪ್ರಯಾಣದ ದಾರಿಯನ್ನಾಗಿ ಕಟ್ಟತೊಡಗಿದ. ಶಂಸ್ ಮತ್ತು ತನ್ನ ನಡುವಿನ ಅಂತರವೇ ಇಲ್ಲವಾಗತೊಡಗಿತ್ತು. ಅಥವಾ ಲೋಕಾತ್ಮ-ವಿಶ್ವಾತ್ಮಗಳ ನಡುವಣ ಅಂತರವೇ ಇಲ್ಲವಾಗಿತ್ತು. ಶಂಸ್‌ನ ಜತೆಗಿನ ತಾದಾತ್ಮ್ಯದ ಕಥೆಗೆ ಹೀಗೆ ಅನುಭಾವೀ ಚಿಂತನೆಯಲ್ಲಿ ಅನೇಕ ಸಂಕೀರ್ಣ ಮುಖಗಳಿವೆ. ಶಂಸ್ ವಿಶ್ವಾತ್ಮದ ಪ್ರತೀಕವಾಗಿದ್ದ. ಭಿನ್ನಸ್ಥಿತಿಯಿಂದ ಪ್ರಾರಂಭವಾಗಿ ಐಕ್ಯಸ್ತಿತಿಯ ಹಂಬಲದ ಅಥವಾ ಐಕ್ಯ ಸ್ಥಿತಿಯ ಅನುಭವದಿಂದಲೇ ಅನೇಕ ಕವಿತೆಗಳು ಮುಗಿಯುವುದನ್ನು ಈ ಹಿನ್ನೆಲೆಯಿಂದ ನೋಡಬಹುದು. ‘ದಿವಾನ್-ಇ-ಶಂಸ್’ ನಲ್ಲಿ ಈ ಸ್ಥಿತಿಗಳ ನಾಟಕೀಯ ಚಿತ್ರಣ ಕಂಡರೆ, ‘ಮಸ್ನವಿ’ಯಲ್ಲಿ ಈ ಪ್ರಕ್ರಿಯೆಯನ್ನು ಇನ್ನಷ್ಟು ವ್ಯಾಪಕ ಹಿನ್ನೆಲೆಯಲ್ಲಿ ರೂಮಿ ಮಂಡಿಸುತ್ತಾನೆ. ಶಂಸ್ ಗೀತ ಗುಚ್ಛ ಅನುಭಾವೀ ಭಾವಗೀತವಾದರೆ, ‘ಮಸ್ನವಿ’ ಅನುಭಾವದ ಮಹಾಕಾವ್ಯ. ಈ ಎರಡೂ ಕಡೆಗಳಲ್ಲಿ ‘ಆತ್ಮ’ ಎನ್ನುವುದು ಅಪ್ಪ-ಸಮಾಜ ಸೃಷ್ಟಿಸಿದ ಸ್ಥಿತಿ ಎಂಬರ್ಥದಲ್ಲೂ ಬಳಕೆಯಾಗುತ್ತದೆ. ಈ ವಿಶ್ವಾತ್ಮ ಸೃಷ್ಟಿಸಿದ ಸ್ವಂತದ ತುಣುಕು ಎಂಬಂರ್ಥದಲ್ಲೂ ಬಳಕೆಯಾಗುತ್ತದೆ.

ಆಧ್ಯಾತ್ಮಿಕ ಪರಿಭಾಷೆಯನ್ನು ಬಿಟ್ಟರೂ ನಮಗೆ ಇಲ್ಲಿ ಮುಖ್ಯವಾಗುವುದು ಈ ಸಂಬಂಧ ರೂಮಿಯನ್ನು ಪರಿವರ್ತಿಸಿದ ರೀತಿ. ಲೋಕದ ಎಲ್ಲದರ ಜತೆಗೆ ಆತ ತೀವ್ರವಾಗಿ ಸಂಬಂಧವನ್ನು ಕಟ್ಟಿಕೊಂಡ ರೀತಿ. ಅವನಿಗೆ ಎಲ್ಲವೂ ಆಪ್ತವೇ. ಮೊದಲು ಸಾಧಾರಣವಾಗಿ ಕಂಡ ನೆಲ, ಈಗ ನಂದನ. ಕಾರಣ, ಪ್ರೇಮಿಯ ಪದಾರ್ಪಣ, ಹಕ್ಕಿ, ಗಿಡ, ಮರ, ಆಕಾಶ, ಮೋಡ ಎಲ್ಲವೂ ಆಪ್ತವೇ, ಆತ್ಮೀಯವೇ. ಕಾರಣ, ಪ್ರೇಮದ ಸ್ಪರ್ಶ. ಈಗ ಯಾವುದೂ ಜಡವಲ್ಲ. ಎಲ್ಲವೂ ದೀಪ್ತವಾಗಿದೆ. ಅನುಭಾವದ ಅಂತಿಮ ವ್ಯಾಖ್ಯೆ ಕಡೇ ಪಕ್ಷ ಕಾವ್ಯದ ಮಟ್ಟಿಗೆ ಇದೇ ಇರಬೇಕು. ಮೂಲತಃ ಮೃಗದ ಮದಜಲದಿಂದ ಅದು ಶುರು. ಮೈಯ ಕಾಮದ ಮೃಗೀಯ ರಸದ ಸ್ಪರ್ಶ ಗಮ್ಮೆನ್ನುತ್ತದೆ. ಓಲ್ಡ್ ಟೆಸ್ಟ್ಮೆಂಟಿನ ‘ಹಾಡುಗಳ ಹಾಡು’ ಸಾಂಪ್ರದಯಕರಿಗೆ ಬೆಚ್ಚಿಸಿದ್ದು ಈ ರೀತಿಯ ಕಾರಣಕ್ಕೆ. ಅಲ್ಲಿ ಬೆರಳುಗಳಿಂದ ತೊಟ್ಟಿಕ್ಕುವ ಅತ್ತರು, ಚಿಲುಕಕ್ಕೆ ಅಂಟುವ ಅತ್ತರು ಕೃತಕವಾದ ಅತ್ತರಿನದಲ್ಲ. ಮಿಲನಕ್ಕೆ ಹಾತೊರೆವ ಮೈಯ ಮಜ್ಜೆಯ ಜಲ ಅದು. ಮೃಗೀಯ ಮದ ಜಲದಿಂದ ಶುರುವಾಗಿ ಮಾನವ ಪ್ರೇಮದ ಆರ್ತತೆ, ಸಂಭ್ರಮಗಳನ್ನೂ ಒಳಗೊಂಡು ದೈವಿಕ ಐಕ್ಯದ ಅನುಭವಕ್ಕಾಗಿ ತುಡಿಯುತ್ತದೆ. ಇವುಗಳಲ್ಲಿ ಯಾವುದು ಕಡಿಮೆಯಾದರೂ ಅದು ಅನುಭಾವೀ ಕಾವ್ಯವಲ್ಲ. ಮೈಯ ಮೃಗಜಲಕ್ಕಷ್ಟೇ ನಿಂತರೆ ಅದು ಭಾರತೀಯ ಕಾವ್ಯಗಳಲ್ಲಿನ ಶೃಂಗಾರ. ಅಥವಾ ಆಧುನಿಕ ಕಾಮ ಕೇಂದ್ರಿತ ಅನುಭವ. ಮಾನವ ವ್ಯಾಪಾರಕ್ಕಷ್ಟೇ ನಿಂತರೆ ಅದು ಸಭ್ಯ ಪ್ರೇಮದ ಕಾವ್ಯ. ಅದೇನಿದ್ದರೂ ಕೆ.ಎಸ್‌.ನ ಕಾವ್ಯದಲ್ಲಿನ ಪ್ರೇಮದ ಉತ್ಕಟ ರೂಪ. ಬರೀ ದೈವಿಕ ಐಕ್ಯಕ್ಕಷ್ಟೇ ಹಂಬಲಿಸಿದರೆ ದಾಸರ ಪದಗಳ ತೆಳುವಾದ ಆಧ್ಯಾತ್ಮಿಕ ಹಂಬಲ. ಈ ಮೃಗ-ಮಾನವ-ದೈವೀ‌ಐಕ್ಯದ ಸ್ಥಿತಿಗಳು ಮೂರು ಒಂದರೊಳಗೊಂದು ಬೆರೆತು ವಿಂಗಡಿಸಲು ಅಸಾಧ್ಯವಾದ ರೀತಿಯಲ್ಲಿ ಅಖಂಡವಾಗಬೇಕು.

ಈ ದೃಷ್ಟಿಯಿಂದ ಪ್ರಭುವಿಗೂ ರೂಮಿಗೂ ಇರುವ ವ್ಯತ್ಯಾಸಗಳು ಕುತೂಹಲಕಾರಿ. ಪ್ರಭು ಮುಸ್ಲಿಂ ಅನುಭಾವಿ ಅಲ್‍ಜೃ‍ನ್ಯಾದ್ ಹೇಳುವ ನಿರ್‍ವಾಣ-ಸಂಸಾರದ ಪ್ರತ್ಯೇಕೀಕರಣದ ಅನುಭಾವಿ. (ಆರ್.ಸಿ.ಜಾಹ್‍ನರ್ ತನ್ನ “ದಿ ಸಿಟಿ ವಿಥಿನ್ ದಿ ಹಾರ್ಟ್” ಕೃತಿಯಲ್ಲಿ “ಪ್ರೇಮವಿರದ ಅನುಭಾವ” ಎಂಬ ಅಧ್ಯಾಯದಲ್ಲಿ ಚರ್ಚಿಸುವ ವಿಚಾರಗಳು ಈ ನೆಲೆಯಲ್ಲಿ ತುಂಬ ಉಪಯುಕ್ತ) ಅಲ್ಲಮನಲ್ಲಿ ಪ್ರೇಮ ಎನ್ನುವುದು ಮುಖ್ಯಾನುಭವವಲ್ಲ. ಆತನಲ್ಲಿ ಕೂಡಾ ಬೌದ್ಧ ತಾಂತ್ರಿಕರು ಬಳಸುವ “ಮಹಾಸುಖ” ಎಂಬ ಪದದ ಬಳಕೆ ಬರುತ್ತದೆ. ಆದರೆ, ಅವನು ಲೋಕಕ್ಕೆ ಮರಳಿ ಬಂದು ಸಾಮಾನ್ಯ ಲೋಕದ ಪರಿಭಾಷೆಯಲ್ಲಿ ಅದರ ಬಗ್ಗೆ ಹೇಳಲಾರ. ಶಬ್ದಕ್ಕೆ ಲಜ್ಜೆಯಾಗುತ್ತದೆ ಎನ್ನುತ್ತಾನೆ. ಹೀಗಾಗಿ, ಮಹಾಸುಖ ಅಥವಾ ಪ್ರೇಮ ಅಲ್ಲಮನ ಲೋಕದ ಸಾಮಾನ್ಯ ವಿವರಗಳಲ್ಲಿ ಪ್ರಕಟವಾಗುವುದಿಲ್ಲ. ಅವನ ಲೋಕದ ಗಿಡ, ಮರ, ಪ್ರಾಣಿ, ಪಕ್ಷಿ, ಆಕಾಶ, ಬೆಟ್ಟ, ಪ್ರೇಮದಿಂದ ಉನ್ಮತ್ತವಾಗಿ ತೂರಾಡುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಗತಕಾಲದ ಮಾನವ ಪ್ರೇಮದ ಅನುಭವವನ್ನು ಪವಿತ್ರ ಸ್ಥಿತಿಯನ್ನಾಗಿ ಅಲ್ಲಮ ಬಳಸಿಕೊಳ್ಳುವುದಿಲ್ಲ. ಈ ಕಾರಣಕ್ಕಾಗಿಯೇ ಅಲ್ಲಮನಿಗೆ ನೆನಪಿನ ಹಂಗಿಲ್ಲ. ಮಹಾಸುಖದ ನೆನಪು ಅವನ ಕಂಗಳಿಗೆ ಬಂದರೂ ಅದನ್ನು ಅವನು ನಮಗೆ ದಾಟಿಸುವುದಿಲ್ಲ. ಈ ದೃಷ್ಟಿಯಿಂದ ಅಲ್ಲಮನ ತಾತ್ವಿಕ ಭಿತ್ತಿಯಲ್ಲೇ ಈ ಬಗೆಗೆ ನಿಯಂತ್ರಣವಿದೆ. ಅಲ್ಲಮನ ತಾತ್ವಿಕ ವಿನ್ಯಾಸ ಸಿದ್ಧಿಗೆ ಮೊದಲು, ಹೊಸ ಆಧ್ಯಾತ್ಮಿಕ ಎಚ್ಚರಕ್ಕೆ ಮೊದಲು ದಿವೈಕ್ಯದ ಸ್ಥಿತಿ ಇತ್ತು ಎನ್ನುವುದನ್ನು ಒಪ್ಪುವುದಿಲ್ಲ. ಅಥವಾ ಅದಕ್ಕೆ ಅಷ್ಟು ಪ್ರಾಮುಖ್ಯತೆ ಇಲ್ಲ. ಅದಕ್ಕೇ ಅಲ್ಲಮನಿಗೆ ನೆನಪಿನ ಹಂಗಿಲ್ಲ ಎಂದದ್ದು.

ಆದರೆ, ರೂಮಿಯ ದಾರ್‍ಶನಿಕ ನೆಲೆ ಇದಕ್ಕಿಂತ ಬೇರೆ ರೀತಿಯದು. ಅವನಲ್ಲಿ ವಿಕಾಸದ ಪ್ರಾರಂಭವೇ ಮೂಲ ನೆನಪನ್ನು ಮತ್ತೆ ನೆನಪು ಮಾಡಿಕೊಳ್ಳುವುದು. ಸ್ಮೃತಿಯೇ ರೂಮಿಯ ಕಾವ್ಯದ ಜೀವಾಧಾರ. ಥಟ್ಟನೆ ಎಲ್ಲವೂ ನೆನಪಾಗುತ್ತದೆ. ‘ವಿಕಾಸ’ ಪದ್ಯದ ಅನುಭವವೇ ಅದು. ನಿಸರ್ಗದ ಸ್ಥಿತಿ, ಪ್ರಾಣಿ ಪಕ್ಷಿಯ ಸ್ಥಿತಿ ಮಾನವ ಸ್ಮೃತಿಗಳ ಸ್ಥಿತಿಗಳು ಒಟ್ಟಿಗೆ ನುಗ್ಗುತ್ತವೆ. ಇವೆಲ್ಲವೂ ‘ತೌಹಿದ್’ ನ ಅನುಭವ.

ರೂಮಿಯಲ್ಲಿ ವಸಂತ ಮೂಲಭೂತ ಸಂಕೇತವಾಗಿರುವುದು ಕೂಡಾ ಈ ಕಾರಣಕ್ಕಾಗಿಯೇ. ವಸಂತಾನುಭವ ಎಂದರೆ ಪ್ರಕೃತಿ-ಆತ್ಮ ಎಲ್ಲ ದಿವೈಕ್ಯದಲ್ಲಿರುವ ಸ್ಥಿತಿ ಮತ್ತೆ ಮತ್ತೆ ರೂಮಿಯ ಕಾವ್ಯದಲ್ಲಿ ವಸಂತದ ಸಂಕೇತ ಬರುವುದನ್ನು ಈ ಹಿನ್ನೆಲೆಯಲ್ಲಿಯೇ ನೋಡಬೇಕು. ವೈಯಕ್ತಿಕ ಜೀವನದ ರೋಮಾಂಚಕಾರೀ ಸಖ್ಯಕ್ಕೆ ಇನ್ನೊಂದು ಹೆಸರು ವಸಂತ. ಅದೇ ನಿಸರ್ಗದ ರೂಪಕ ಮತ್ತು ಆಧ್ಯಾತ್ಮಿಕಾನುಭವ ಸಂಕೇತ.
* * *

ರೂಮಿಯ ಕಾವ್ಯ ನಿರ್‍ಮಿತಿಯ ಸ್ವರೂಪ ಪೂರ್‍ಣವಾಗಿ ತಿಳಿಯಬೇಕಾದರೆ ಈ ಪುಸ್ತಕದಲ್ಲಿ ‘ನಿನ್ನೆ ರಾತ್ರಿ’ ಎಂದು ಕರೆಯಲಾಗಿರುವ ಕವಿತೆಯನ್ನು ಬಳಸಿಕೊಳ್ಳಬಹುದು. ನಾನು ಓದಿರುವ ಅತ್ಯುತ್ತಮ ಅನುಭಾವೀ ಕವಿತೆಗಳಲ್ಲಿ ಒಂದು ಇದು. ಈ ಕವನ ಒಂದು ಸಾಧಾರಣ ಅನುಭವದ ನೆನಪು ಅಥವಾ ಕಥನ ಎಂದೇ ಪ್ರಾರಂಭವಾಗುತ್ತದೆ.

ನಿನ್ನೆ ರಾತ್ರಿ ನಮ್ಮ ಐರಾವತಕ್ಕೆ ನೆನಪಾಗಿ ಭಾರತ
ಒಂದೇ ಸಮನೆ ಘೀಳಿಟ್ಟು ರಾತ್ರಿಯ ತೆರೆ ಹರಿಯಿತು.

ಇದನ್ನು ಅಲ್ಲಮ ಪ್ರಭುವಿನ ವಚನದ ಜತೆಗೆ ಹೋಲಿಸಿ.

ತಲೆಯಿಲ್ಲದ ಮೃಗವು ಒಡಲಿಲ್ಲದ ಆಹಾರವ ಕೊಂಡಿತ್ತು
ಹೆಜ್ಜೆಯಿಲ್ಲದೆ ಹರಿಯಿತ್ತು

ರೂಮಿಯ ಕವಿತೆ ಪ್ರಾರಂಭವಾಗುವುದು ನಿಜವಾದ ಆನೆಯ, ನಿಜವಾದ ಕ್ರಿಯೆಯ ಪ್ರಸ್ತಾಪದಿಂದ. ಆದರೆ, ಪ್ರಭುವಿನ ಮಾರ್ಗ ಬೇರೆ. ಅದು ಮೊದಲಿಗೆಯೇ ಲೋಕದ ಸಾಮಾನ್ಯ ಮೃಗವಲ್ಲ. ತಲೆಯಿಲ್ಲದ ಮೃಗ ಅದು. ಪ್ರಭುವಿನ ಈ ಪದ್ಯವಷ್ಟೇ ಅಲ್ಲ, ಶೂನ್ಯಾನುಭವವನ್ನು ಹೇಳುವ ಬಹುಮಟ್ಟಿನ ಪದ್ಯಗಳಲ್ಲಿ ಬರುವ ಪ್ರತಿಮಾವಳಿ ಅಲೌಕಿಕದ್ದು. ಅಲ್ಲಿ ಬರುವ ಗಿಳಿ, ಹಂಸ ಬರೀ ಬೆಂಕಿಯಷ್ಟೇ ಅಲ್ಲ. ಪ್ರಾರಂಭದಲ್ಲೇ ದಿವ್ಯಾನುಭವದ ಅಮೂರ್ತತೆಯನ್ನು ಹೊಂದಿರುವಂಥದ್ದು. ‘ಕಂಭ ಬೆಂದಿತ್ತು, ಹಂಸೆ ಹಾರಿತ್ತು’ ಎನ್ನುವ ಸಾಲುಗಳ ಸಂಕೇತಕ್ಕೆ ಮೊದಲೇ ಅನುಭಾವಾರ್‍ಥ ಆರೋಪಿತವಾಗಿರುತ್ತದೆ. ಅಥವಾ ಬೆಡಗಿನ ಭಾಷೆ ಎಂಬ ಶಾಸ್ತ್ರಕ್ಕೆ ಹತ್ತಿರಿರುವ ವಿಶೇಷ ಗುಪ್ತ ಭಾಷೆಯಿಂದ ಹೊರಡುತ್ತದೆ. ಮರಳಿ ಅಲ್ಲಿಗೇ ಸೇರುತ್ತದೆ. ನಡುವೆ ತಜ್ಞರ, ಪಂಡಿತರ ಟೀಕು ಈ ಬೆಡಗನ್ನು ಬಿಡಿಸಿ ಹೇಳುತ್ತದೆ. ಬೆಡಗಿನ ರಚನೆಗಳ ವಿಶೇಷ ಸೌಂದರ್‍ಯ ಮತ್ತು ಸಮಸ್ಯೆ ಎರಡೂ ಇರುವುದು ಇಲ್ಲಿಯೇ.

‘ನಿನ್ನೆ ರಾತ್ರಿ’ ಕವಿತೆಯಲ್ಲಿ ರೂಮಿ ನಿಜವಾದ ಅನುಭವದಿಂದ ಪ್ರಾರಂಭವಾಗಿ ಮುಂದಿನ ಸಾಲಿನಲ್ಲಿ ನಿಧಾನಕ್ಕೆ ಅದನ್ನು ಇನ್ನಷ್ಟು ಸೂಕ್ಷ್ಮಕ್ಕೆ ಹೊರಳಿಸುತ್ತಾನೆ. ನಿಧನಿಧಾನಕ್ಕೆ ಅದು ಸಾಮಾನ್ಯ ಆನೆಯಲ್ಲ, ಪ್ರಭು ಹೇಳುವ “ತಲೆಯಿಲ್ಲದ ಮೃಗವೇ” ಎಂದು ತುಂಬ ಮೆಲುದನಿಯಲ್ಲಿ ಸೂಚಿಸುತ್ತಾನೆ. ಒಂದೇ ಸಮನೆ ಘೀಳಿಟ್ಟು ರಾತ್ರಿಯ ತೆರೆ ಹರಿಯಿತು ಎಂಬ ಸಾಲನ್ನು ಕೂಡಾ ನಿಧಾನಕ್ಕೆ ಹೊರಳಿಸಿ ಇನ್ನೊಂದು ಬಣ್ಣ ಕಾಣುವ ಹಾಗೆ ಮಾಡುತ್ತಾನೆ. ಈ ಅನುಭವ ಕೂಡಾ ಪ್ರಭುವಿನ “ಹೆಜ್ಜೆಯಿಲ್ಲದೆ ಹರಿಯಿತ್ತು,” ಅನುಭವವೇ. ಇದಕ್ಕೆ ಪ್ರಮಾಣ, ಸಿಂಗಳದ ಸಿದ್ಧ ಬಸವರಾಜ ದೇವರು ಆ ವಚನದ ಮೇಲೆ ವ್ಯಾಖ್ಯಾನಿಸಿರುವ ರೀತಿ, ಅವರು ಹೇಳುತ್ತಾರೆ- ವೃತ್ತಿ ಜ್ಞಾನವಿಲ್ಲದ ಸಜ್ಜೀವಾತ್ಮವೇ ತಲೆಯಿಲ್ಲದ ಮೃಗ, ಎರಡನೇ ಸಾಲಿಗೆ ಅರ್‍ಥ ಆ ಸಜ್ಜೀವನು ತನುಗುಣರಹಿತವಾಗಿ ಶಿವ ಸುಖಾನಂದವ ಸವಿವುತ್ತ ಅಭಿನ್ನಕ್ರಿಯಾ ಚರಿತ್ರವಿಡಿದು ಗಮನಿಸುತ್ತಿರಲು… ಪ್ರಭುವಿನ ವಚನಕ್ಕೆ ಮೊದಲಿಗೇ ಥಟ್ಟನೆ ಕೆನ್ನೆಗೆ ಬಡಿವ ವೈರುದ್ಧ್ಯದ ಗುಣವಿದೆ. ಅದು ನಮಗೆ ಪೂರ್‍ಣವಾಗಿ ಅರ್‍ಥವಾಗಲು ಸಿಂಗಳದ ವ್ಯಾಖ್ಯಾನಕಾರರು ಬೇಕು. ಇದು ರೂಮಿಯಷ್ಟೇ ದೊಡ್ಡ ಅನುಭಾವಿಯಾದ ಪ್ರಭುದೇವರ ಕವಿತಾ ಮಾರ್‍ಗ.

ಆದರೆ, ರೂಮಿ ಇದು ಬರೀ ಆನೆಯ ಘೀಳಷ್ಟೆ ಇರಲಾರದು ಎಂಬ ಅರ್ಥ ಪರಂಪರೆಯನ್ನು ನಾಲ್ಕನೆ ಸಾಲಲ್ಲಿ ತಂದು ಸೇರಿಸುತ್ತಾನೆ. ಆ ಮೂಲಕ ಹಿಂದಿನ ಮತ್ತು ಮುಂದಿನ ಸಾಲುಗಳು ಕೂಡಾ ಬದಲಾಗುತ್ತವೆ. ಆ ಸಾಲು- “ಆ ರಾತ್ರಿಯಂತೆ ಸಾಗಬಾರದೆ ಜೀವನ ಪುನರುತ್ಥಾನದ ತನಕ?” ಅಂದರೆ, ಆ ರಾತ್ರಿ ಸಜೀವಾತ್ಮಕ್ಕೆ ಎಂಥದೊ ದೊಡ್ಡ ಅನುಭವವಾಗಿದೆ. ಅದು ಪ್ರಾರಂಭವಾದದ್ದು ‘ರಾತ್ರಿ’ಯ ತೆರೆ ಹರಿಯುವುದರಿಂದ. ಇಡೀ ಕವನದಲ್ಲಿರುವ ಹಾಗೆ ಅದು ನಿಜವಾದ ರಾತ್ರಿಯೂ ಹೌದು, ಸಾಂಕೇತಿಕ ರಾತ್ರಿಯೂ ಹೌದು. ರಾತ್ರಿ ಹರಿದದ್ದೆ ಅದು ಸಮಾಧಿಯ ಅನುಭವಕ್ಕೆ ಅಥವಾ ಶೂನ್ಯಾನುಭವಕ್ಕೆ ದಾರಿ. ಆ ಅನುಭವ ಎಂದರೆ ಇಡೀ ವಿಶ್ವ ತಲೆಕೆಳಗಾದಂತೆ, ಮಿದುಳಲ್ಲಿ ಮಹಾಬಿರುಗಾಳಿ ಭೋರ್‍ಗರೆಯುತ್ತದೆ. ಆಕಾಶದಲ್ಲಿ ಅಲ್ಲೋಲ ಕಲ್ಲೋಲ ವೇಳುತ್ತದೆ. ಈ ದಿವ್ಯಾನುಭವದ ಮುಂದೆ ಎಲ್ಲ ರೀತಿಯ ಅಧಿಕಾರವೂ ತೊಪ್ಪೆ. ಅದಕ್ಕೆಂದೇ ಲಕ್ಷಾಂತರ ಜನ ಪರ್ಶಿಯಾದ ದೊರೆಗಳು ಶರಣಾಗಿ ಹೊರಳಾಡಿದರು. ರೂಮಿ ಈ ಎಲ್ಲ ಅಸಾಮಾನ್ಯ ಅನುಭವದ ನಡುವೆಯೂ ಒಂದು ಸಣ್ಣ ಆದರೂ ಮುಖ್ಯ ತಾತ್ವಿಕ ಪ್ರಸ್ತಾಪವೊಂದನ್ನು ಮರೆತಿಲ್ಲ. ಮುಂದಿನ ಸಾಲುಗಳು ಹೀಗಿವೆ.

ಆ ರಾತ್ರಿಯಲ್ಲೆ ಅದೃಷ್ಟ ದಿಗ್ವಿಜಯಗಳ ಸಂಗಮವಾಗಿತ್ತು
ಕಗ್ಗತ್ತಲ ಒಡಲಿಂದ ಸೂಫೀ ಸಂತರಿಗಾಗಿ ಹಗಲು ಚಿಮ್ಮಿತ್ತು.

ಇದು ಆಯಾಚಿತವಾಗಿ ಬಂದ ಅದೃಷ್ಟವೆ? ಅಷ್ಟೇ ಅಲ್ಲ. ಆಧ್ಯಾತ್ಮಿಕ ಸಂಕಲ್ಪವೂ ಬೇಕು. ಅದಕ್ಕೆಂದೇ ಇದು ಅದೃಷ್ಟ-ದಿಗ್ವಿಜಯಗಳ ಸಂಗಮ. ಆದರೆ, ಕವನದ ಪ್ರಾರಂಭಿಕ ಕಾಲ ಒಂದು ನೈಸರ್‍ಗಿಕ ರಾತ್ರಿ ಎಂಬುದನ್ನು ರೂಮಿ ಮರೆತಿಲ್ಲ. ಅದೇ ಹಗಲಾಗಿಬಿಡುವ ಪವಾಡವನ್ನು ಜತೆಗೇ ಸೂಚಿಸುತ್ತಾನೆ. ಆಧ್ಯಾತ್ಮಿಕ ಸಂಕಲ್ಪದಿಂದಾಗಿ ಆತ ಆಶಾವಾದಿ. ಇದರ ಫಲ ಎಂಬಂತೆ ಪ್ರೇಮದ ಮಹಾಪೂರ, ದೊರೆಯ ಕೃಪೆಯನ್ನು ಕೂಡಾ ವಿಧೇಯ ತನ್ಮಯತೆಯ ಪರಮಾವಧಿಯಂತೆ ಆರಾಧಿಸುತ್ತಾನೆ. ಪತಿತರೂ ಪಾವನವಾದರು. ಆದರೆ, ಮರುಕ್ಷಣವೇ ದೈವಿಕ ವ್ಯಂಗ್ಯದ ಅರಿವನ್ನೂ ಪ್ರಕಟಿಸುತ್ತಾನೆ.

ನನ್ನ ದೊರೆಯಿಂದಾಗಿ ಪತಿತರೂ ಪಾವನವಾದರು
ಅವನೇ ಸಾಖಿಯಾದಾಗ ಜನ ಜಾರದ ಹೇಗೆ ಉಳಿದಾರು?
ಕೊಚ್ಚಿದೆ ಆತ್ಮ ಪ್ರಯತ್ನವನ್ನು ಕಡಲು
ಚೂರಾಗಿದೆ ಶ್ರದ್ಧೆಯ ಕಾರ್‍ಯ

ಆಧ್ಯಾತ್ಮಿಕ ಸಂಕಲ್ಪವನ್ನೆ ಕಡಲು ಕೊಚ್ಚಿಹಾಕುತ್ತದೆ. ಕಡಲು ಎನ್ನುವುದು ರೂಮಿಯಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುವ ವಿಶ್ವಾತ್ಮ (ಕಾಸ್ಮಿಕ್ ಸೆಲ್) ನ ಸಂಕೇತ. ದಿಗ್ವಿಜಯ, ಅದು ಆಧ್ಯಾತ್ಮಿಕ ಸಂಕಲ್ಪದ ದಿಗ್ವಿಜಯವೇ ಆಗಿದ್ದರೂ ತುಂಬ ಸೂಕ್ಷ್ಮವಾದ ರೀತಿಯಲ್ಲಿ ನಿರಾಕರಣಕ್ಕೆ ಒಳಗಾಗುತ್ತದೆ. ಕಡೆಯಲ್ಲಿ ದೊರೆಯ ಕೃಪಾರೂಪದ ಉಲ್ಲೇಖದೊಂದಿಗೆ ಕವಿತೆ ಮುಗಿಯುತ್ತದೆ. ಇದಕ್ಕೆ ಹೋಲಿಸಿ ನೋಡಿದರೆ ಪ್ರಭುವಿನ ಕವಿತೆಯ ಅಂತ್ಯವೂ ಕುತೂಹಲಕಾರಿಯೆ.

ವೆಚ್ಚವಿಲ್ಲದ ಮಣಿಯ ದಾರವಿಲ್ಲದೆ ಪವಣಿಸುವ
ಗುಹೇಶ್ವರಾ ನಿಮ್ಮ ಶರಣನ ಪರಿಯ ನೋಡಾ

ರೂಮಿ ತೀವ್ರ ಮಾನವಾನುಭವದ, ಉತ್ಕಟ ಭಾವುಕ ನೆಲೆಯಲ್ಲೇ ಅಪಾರ ನಾಟಕೀಯ ತಿರುವುಗಳನ್ನು ಒದಗಿಸಿ ಕವಿತೆ ಮುಗಿಸುತ್ತಾನೆ. ಕವಿತೆಯೊಳಗೆ ಅತ್ಯಂತ ಸೂಕ್ಷ್ಮ ಸ್ಥಲಗಳನ್ನು ನಮ್ಮ ಪ್ರಮಾಣಕ್ಕೆ ಕಾಣುವ ರೀತಿಯಲ್ಲಿ ರೂಮಿ ಸೃಷ್ಟಿಸುತ್ತಾನೆ. ಮಾನವ ವ್ಯಾಪಾರಗಳ ಕವಿ ತಾನು ಎಂಬ ಹಂಗಿದೆ ರೂಮಿಗೆ. ಆದರೆ, ಪ್ರಭು ದೊಡ್ಡ ವಿಸ್ಮಯಕಾರೀ ವೈರುಧ್ಯಗಳಿಂದ ಪ್ರಾರಂಭಿಸಿ ಅಂಥದೇ ವೈರುಧ್ಯದಿಂದ ಕವಿತೆ ಮುಗಿಸುತ್ತಾನೆ. ಸಂಪೂರ್‍ಣವಾಗಿ ಜ್ಞಾನಕ್ಕೆ ಮಾತ್ರ ದಕ್ಕುವ ವೈರುಧ್ಯ ಇದು. ಭಾವ ಜಗತ್ತು ಇಲ್ಲಿ ದೀಪ್ತವಾಗುವುದಿಲ್ಲ. ಬೆಡಗಿನ ವಚನಗಳ ಒಟ್ಟಾರೆ ಸಮಸ್ಯೆ ಇದು. ರೂಮಿ ಈ ದೃಷ್ಟಿಯಿಂದ ಹೆಚ್ಚು ಶಕ್ತನಾದ ಕವಿ. ಬೆಡಗಿನ ವಚನಗಳು ಹೇಳುವ ಅನುಭವಗಳನ್ನು ಹೆಚ್ಚು ಭಾವಸ್ಥ ರೂಪಕಗಳಲ್ಲಿ ನಮಗೆ ಪ್ರತೀತಗೊಳಿಸಬಲ್ಲಂಥವನು.


ಆದರೆ, ಆಧುನಿಕ ಸಂವೇದನೆಗೆ ಬೆಡಗಿನ ವಚನಗಳೇ ಹೆಚ್ಚು ಆಕರ್‍ಷಕವಾಗಿ ಕಾಣುತ್ತದೆ. ಬೌದ್ಧಿಕ ವೈರುಧ್ಯಗಳ ಮೂಲಕ ಅನುಭವವನ್ನು ಹೇಳುವ ಕ್ರಮಗಳೇ ಈಗ ಹೆಚ್ಚು ಬಿಗಿಯಾಗಿ, ಗಾಢವಾಗಿ ಕಾಣುತ್ತವೆ. ಆಧುನಿಕ ಮನಸ್ಸು ಬೌದ್ಧಿಕ ರೋಮಾಂಚನಕ್ಕೆ ತೀರಾ ವಿಶೇಷ ಒಲವು ತೋರಿಸಿ ಇನ್ನಷ್ಟು ಅತಿ ಮುಖ್ಯ ಸಂಗತಿಗಳನ್ನು ಮರೆಯುತ್ತದೆ. ಕಲಾಮೀಮಾಂಸೆಯಲ್ಲೂ ಹೀಗೇ ಆಗಿದೆ. ರೂಮಿಯ ಕಾವ್ಯ ಈ ದೃಷ್ಟಿಯಿಂದ ಹೆಚ್ಚು ಸಾಂಪ್ರದಾಯಕ ಶಕ್ತಿ ಮೂಲಗಳದು. ಬೌದ್ಧಿಕ ವೈರುಧ್ಯಗಳನ್ನು ಭಾವುಕ ಬೆಡಗಿನಲ್ಲಿ ನಿಯಂತ್ರಿಸಿ ಎರಡನ್ನೂ ಅಖಂಡವಾಗಿಸುತ್ತ ಹೋಗುವ ಪ್ರತಿಭೆ ಅದು. ಹೀಗಾಗಿ, ಅತಿ ಪರಿಚಿತದಂತೆ ಕಂಡರೂ ನಾವು ಅಲ್ಲೇ ಬೇರೂರಿದರೆ ರೂಮಿಯ ಜಗತ್ತು ನವನವೀನವಾಗಿ ಕಾಣುತ್ತದೆ. ಎಲ್ಲಕ್ಕೂ ಆತುರದಿಂದ ಧಾವಿಸುವ ಆಧುನಿಕ ಮನಸ್ಥಿತಿಯನ್ನು ನಿಯಂತ್ರಿಸಿ ರೂಮಿಯ ಜಗತ್ತಿನೊಳಗೆ ಹೋಗಬೇಕು.

ಇನ್ನು ಭಾಷಾಂತರದ ಬಗೆಗೆ.

ಪರ್‍ಶಿಯನ್ ಕವಿ ರೂಮಿಯನ್ನು ಮುಖ್ಯವಾಗಿ ಇಂಗ್ಲಿಷ್ ಮೂಲಕ ಕನ್ನಡಕ್ಕೆ ತಂದಿದ್ದೇನೆ. ಈ ಅಂಶ ಭಾಷಾಂತರದ ಬಗೆಗೆ ಅನೇಕ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತದೆ. ಆಧುನಿಕರು ಈ ಬಗೆಯ ಪ್ರಯತ್ನದ ಬಗ್ಗೆಯೇ ತಕರಾರು ಎತ್ತಲು ಸಾಧ್ಯ. ನನ್ನ ಭಾಷಾಂತರದ ತಾತ್ವಿಕ ನೆಲೆಗಳನ್ನು ಸ್ಥೂಲವಾಗಿ ವಿವರಿಸಿದರೆ ನನ್ನ ಧೈರ್‍ಯದ ಹಿಂದಿನ ಕಾರಣ ಕೊಂಚ ಸ್ಪಷ್ಟವಾಗಬಹುದು. ಈ ತತ್ವದ ಪ್ರೇರಣೆ ದೊರಕಿದ್ದು ‘ಕರ್ನಾಟಕ ಶಬ್ದಾನುಶಾಸನ’ದ ಮೊದಲ ಪದ್ಯದಲ್ಲಿ.

ನಮಃ ವರ್‍ಧಮಾನಾಯ ವಿಶ್ವವಿದ್ಯಾವ ಭಾಸೀನೇ
ಸರ್‍ವಭಾಷಾಮಯೀ ಭಾಷಾಪ್ರವೃತ್ತಾಯನ್ಮು ಖಾಂಬುಜಾತ್
(ವರ್‍ಧಮಾನನ ಕಮಲ ಮುಖದಿಂದ ಸರ್‍ವಭಾಷಾಮಯಿ
ಭಾಷಾ ಪ್ರವೃತ್ತಿ ಹುಟ್ಟಿತು)

ಇಲ್ಲಿ ತುಂಬಾ ಪ್ರಸ್ತುತ ಪರಿಕಲ್ಪನೆ ಎಂದರೆ “ಸರ್‍ವಭಾಷಾಮಯೀ ಭಾಷಾ ಪ್ರವೃತ್ತಿ” ಎನ್ನುವುದು. ಅಂದರೆ ಪರ್‍ಶಿಯನ್, ಇಂಗ್ಲಿಷ್, ಸೊಹಿಲಿ, ಕನ್ನಡ, ಉರ್‍ದು ಇತ್ಯಾದಿಗಳ ಹಿಂದೆ ಒಂದು ಸಮಾನವಾದ ಭಾಷಾ ಪ್ರವೃತ್ತಿ ಇದೆ. ಇದನ್ನೇ ಇನ್ನೊಂದು ರೂಪಕದಲ್ಲಿ ಕನ್ನಡ ಪರಂಪರೆ ವಿವರಿಸಲು ಯತ್ನಿಸುತ್ತದೆ. ಮೋಡದಿಂದ ಬಂದ ಮಳೆಯ ನೀರು ಮೊದಲಿಗೆ ಒಂದೇ. ನಂತರ ಕಟು, ಸಿಹಿ, ಉಪ್ಪು ಹೀಗೇ ಆಯಾ ನೆಲದ ಗಾಳಿಯ, ಜನದ ಗುಣಗಳನ್ನು ಕೂಡಿಕೊಂಡು, ಭಿನ್ನವಾಗುತ್ತದೆ. ಹೀಗೆ ಭಾಷೆ ವಿಶಿಷ್ಟವೂ ಹೌದು. ವಿಶ್ವಾತ್ಮವೂ ಹೌದು.

ಭಾಷಾಂತರ ನೆಲೆಯೇ ‘ಸರ್‍ವಭಾಷಾಮಯೀ ಭಾಷಾ ಪ್ರವೃತ್ತಿ’ ಯನ್ನು ಹಿಡಿವ ಪ್ರಯತ್ನ. ಈ ನೆಲೆ ಜಲ ಜನ ಗಾಳಿಗಳಿಂದ ವಿಶಿಷ್ಟವಾಗಿ ರೂಪುಗೊಂಡ ಭಾಷೆಯಿಂದ ಹೊರಟು ಮೂಲ ಭಾಷಾ ಪ್ರವೃತ್ತಿಯನ್ನೆ ಆವಾಹಿಸುವುದು. ದೊಡ್ಡ ಸಾಹಿತ್ಯದ ಸತ್ವ ವಿಶಿಷ್ಟ ಭಾಷೆಯಿಂದ ಹೊರಟು ಮೂಲಭಾಷಾ ಪ್ರವೃತ್ತಿಯಲ್ಲಿ ಸೇರಿ ಹೋಗಿರುತ್ತದೆ. ಇದನ್ನು ‘ಮೂಲವಾಕ್’ವಾದ ಎಂದು ಕರೆಯಬಹುದು. ಬೃಹದಾರಣ್ಯಕದಲ್ಲಿ ವಾಕ್‌ನ ಉಗಮದ ಬಗೆಗಿನ ಸೂಕ್ತಗಳಲ್ಲಿ ಮೂಲವಾಕ್ ಬಗೆಗೆ ಸಾಕಷ್ಟು ಹೊಳಹು ಸಿಗುತ್ತದೆ.

ಈ ಹಿನ್ನೆಲೆಯಿಂದ ಹೇಳುವುದಾದರೆ, ಬಹುಭಾಷಾ ಮಾಧ್ಯಮಗಳನ್ನು ದಾಟಿ ಬಂದ ಸಾಹಿತ್ಯಾನುವಾದಕ್ಕೆ ಮಾಟದ ರಚನೆಯಿದೆ. ಕನ್ನಡದ ಮಾಡದ ಬೊಂಬೆ ಮೂಲಕವೇ ಏಕಾಗ್ರವಾಗಿ ಬೇರೆಯದನ್ನು ಆವಾಹಿಸಿದರೆ ಅದು ಬಂದು ಕೂರುತ್ತದೆ. ಪರ್‍ಶಿಯನ್ ವಿಶಿಷ್ಟ ವಿವರಗಳು ಬರದೇ ಇರಬಹುದು. ಆದರೆ, ಅದರ ವಿಶ್ವಾತ್ಮದ ಆಕೃತಿ ಧಾವಿಸುತ್ತದೆ. ಅದು ಕರೆವ ವ್ಯಕ್ತಿಯ ಮಾಟದ ಶಕ್ತಿಯ ಮೇಲೆ ಅವಲಂಬಿಸಿದೆ. ಕಾವ್ಯಾನುವಾದದ ಕೆಲಸದಲ್ಲಂತೂ ಈ ಬಗೆಯ ಭಾಷಿಕ ಅನುಭಾವದ ನಂಬಿಕೆಯಿಲ್ಲದಿದ್ದರೆ ಪದಗಳು ತಾವಾಗಿ ಅವತರಿಸುವುದಿಲ್ಲ. ಯಾವುದೋ ಪ್ರಾಚೀನ ಶಕ್ತಿಯ ಸೆಳೆತದಂತೆ ಕನ್ನಡ ಇನ್ನೊಂದನ್ನು ಕರೆದುಕೊಳ್ಳಲು ತಹತಹಿಸುವುದಿಲ್ಲ. ರೂಮಿ, ವ್ಯಾಸ, ವಾಲ್ಮೀಕಿ, ಅಲ್ಲಮಪ್ರಭು, ಎಲಿಯಟ್, ಯೇಟ್ಸ್‌ಗಳು ಮೂಲ ಭಾಷಾ ಪ್ರವೃತ್ತಿಗೆ ಸೇರಿ ಹೋದ ಕವಿಗಳು.

ಈ ಮಹಾಕವಿಗಳನ್ನು ಎಷ್ಟೇ ಭಾಷೆಗಳ ಅಂತರವಿದ್ದರೂ ವಿಶಿಷ್ಟ ಭಾಷಾ ಮಾಟದ ಬೊಂಬೆಯಲ್ಲಿ ಆವಾಹಿಸಲು ಸಾಧ್ಯ ಎಂಬ ನಂಬಿಕೆಯೇ ಇಲ್ಲಿಯ ಭಾಷಾಂತರ ತತ್ವ. ಇಲ್ಲಿ ರೂಮಿಯ ಕಾಯವೇ ಬಂದಿಳಿದಿದೆ ಎಂದರೆ ದುರಹಂಕಾರದ ಮಾತಾಗುತ್ತದೆ. ಇಲ್ಲಿ ಬಂದಿರುವುದು ಆ ಮಹಾಕಾಯದ ನೆರಳು ಮಾತ್ರ.

ರೂಮಿಯ ಪದ್ಯಗಳು ದ್ವಿಪದಿಲಯದ್ದು. ಪ್ರತಿ ದ್ವಿಪದಿಯೂ ಸಮಾನ ಪ್ರಾಸದಲ್ಲೇ ಮುಕ್ತಾಯವಾಗುತ್ತದೆ. ರೂಮಿಯ ಛಂದಸ್ಸಿನ ಬಗ್ಗೆ ತಜ್ಞರ ವಿವರಗಳಿಗೆ ಹೋಗದೆ ಸಮಾನ ಪ್ರಾಸವನ್ನೆ ಕೇಂದ್ರವಾಗಿರಿಸಿಕೊಂಡಿದ್ದೇನೆ. ರೂಮಿಯ ಭಾಷೆ ಸಾಹಿತ್ಯಕ ಪ್ರಭಾವಗಳಿಂದ ರೂಪುಗೊಂಡಿದ್ದರೂ ಅದು ಮುಖ್ಯವಾಗಿ ಆಡು ನುಡಿಯದು. ಮೂಲಭಾಷಾ ಪ್ರವೃತ್ತಿಯಿಂದ ರೂಮಿ ವಿಶಿಷ್ಟ ಭಾಷೆ ಕನ್ನಡಕ್ಕೆ ಬಂದಾಗ ಇಲ್ಲಿ ಲಭ್ಯವಿರುವ ಪ್ರಭು, ಬಸವಣ್ಣ, ಅಕ್ಕ, ಪುರಂದರ, ಷರೀಫ, ಬೇಂದ್ರೆಗಳ ಲಯಗಳು ಮೆಲುವಾಗಿ ಪ್ರತಿ ಧ್ವನಿಸಿವೆ.

ಕಳೆದ ಎರಡೂವರೆ ವರ್‍ಷಗಳಲ್ಲಿ ಈ ಅನುವಾದದ ಕೆಲಸ ತುಂಬ ಅನುರಕ್ತವಾಗಿ ಮಾಡಿದೆ. ನನ್ನ ಮಟ್ಟಿಗೆ ಇದು ತೀವ್ರ ಸಖ್ಯದ ಆಖ್ಯಾನ. ನಾನೇ ಬೆರಗಾಗಿ ಬಿಟ್ಟ ಸಖ್ಯದ ಸ್ಮೃತಿ ಇದು.
*****
ಡಿ ಆರ್ ನಾಗರಾಜ್
(ಫೆಬ್ರುವರಿ ೧೯೯೦- ಮೇ ೧೯೯೨)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ