(ಎಸ್ ಚಂದ್ರಶೇಖರ್‌ರವರ ‘ಅಂಬೇಡ್ಕರ್ ಮತ್ತು ಗಾಂಧಿ” ಕೃತಿಗೆ ಮುನ್ನುಡಿ)
ಚಂದ್ರಶೇಖರರ ಮೊದಲ ಬರವಣಿಗೆಗಲೇ ಕನ್ನಡದಲ್ಲಿ ಹೊಸ ಗಣ್ಯ ಇತಿಹಾಸಕಾರರೊಬ್ಬರು ಬರುತ್ತಿರುವುದನ್ನು ಕಾಣಿಸಿದವು. ಆಗಿಂದಲೂ ಅವರು ಬರೆದದ್ದನ್ನು ಓದಿ ಮೆಚ್ಚಿಕೊಳ್ಳುತ್ತ ಬಂದಿರುವ ನನಗೆ ಪ್ರಸ್ತುತ ಸಂಕಲನ ’ಅಂಬೇಡ್ಕರ್ ಮತ್ತು ಗಾಂಧಿ’ ಬಹಳ ಮೆಚ್ಚಿಗೆಯಾಯಿತು.
ಶುರುವಿಗೇ ಕಾಣುವ ಹಾಗೆ ಇವರ ಬರವಣಿಗೆ ಸರಳವಾಗಿದೆ, ನೇರವಾಗಿದೆ, ಸಾರಸಂಕ್ಷಿಪ್ತವಾಗಿದೆ. ಅನಗತ್ಯವಾದ ಅಲಂಕಾರಗಳಿಂದ ನಮ್ಮ ಮನಸ್ಸನ್ನು ಚೆದುರಿಸುವುದಿಲ್ಲ. ಬರವಣಿಗೆ ಸರಳವಿದ್ದಾಗ್ಯೂ ಹೇಳುವ ವಿಷಯವನ್ನು ಅವರು ಸರಳಗೊಳಿಸುವುದಿಲ್ಲ. ಹಾಗೇನಾದರೂ ಸರಳಗೊಳಿಸಿದ್ದರೆ, ಒಂದೋ ಅಂಬೇಡ್ಕರ್ ಮತ್ತು ಗಾಂಧಿ ಇಬ್ಬರೂ ಮೂಲತಃ ಒಂದೇ ಹೇಳಿದ್ದಾರೆ, ಇವರಲ್ಲಿ ನಿಜವಾಗಿ ಭಿನ್ನಾಭಿಪ್ರಾಯವೇ ಇಲ್ಲ, ಇಬ್ಬರೂ ದೊಡ್ಡವರೇ ಎಂದು ನಿಣ್ಣಗೆ ಸಾರಿಸಿಬಿಡಬಹುದಿತ್ತು. ಅಥವಾ, ಇವರಿಬ್ಬರು ಒಬ್ಬರಿಗೊಬ್ಬರು ಎದುರಿಸಿ ನಿಂತು ಹೋರಾಡಿದ ಶತ್ರುಗಳು ಎನ್ನುವಂತೆ ಕಲ್ಪಿಸಿ ಯಾವುದೇ ಒಂದು ಪಕ್ಷ ವಹಿಸಬಹುದಿತ್ತು. ಚಂದ್ರಶೇಖರರ ಸರಳ ಬರವಣಿಗೆಯು ವಿಷಯವನ್ನು ಹಾಗೆ ಸರಳಗೊಳಿಸದೆ ಅಲ್ಲಿನ ಸಂಕೀರ್ಣತೆಯನ್ನು ಗ್ರಹಿಸಿ ದಾಖಲಿಸುತ್ತದೆ.
ಈ ಲೇಖನದಲ್ಲಿ ಸಂಕ್ಷೇಪ ಗುಣವೂ ಮುಖ್ಯವಾದ್ದೆನಿಸುತ್ತದೆ. ನಮ್ಮ ವಿಶ್ವವಿದ್ಯಾಲಗಳಿಂದ ಪುಂಖಾನುಪುಂಖವಾಗಿ ಹೊರಬರುತ್ತಿರುವ ’ಸಂಶೋಧನ ಮಹಾಪ್ರಬಂಧ’ಗಳನ್ನು ಕಂಡು, ಈ ಗಾತ್ರಗಳನ್ನು ಕಪಾಟಿನಲ್ಲಿ ಜೋಡಿಸಿಟ್ಟು ಸಂತೋಷಪಡಬಹುದಲ್ಲದೆ ಓದಲಿಕ್ಕೆ ಸಾಢ್ಯವಾಗದು, ಅಥವಾ ಕಷ್ಟಪಟ್ಟು ಓದಿದರೂ ಎಲ್ಲೆಲ್ಲಿಂದಲೋ ಅವು ಗುಡಿಸಿ ತಂದು ರಾಶಿ ಹಾಕುವ ತೃಣಕಾಷ್ಠ ವಿವರಗಳಲ್ಲಿ ದಿಕ್ಕು ತಪ್ಪಿಸಿಕೊಂಡು ಕೊನೆಗೆ ಉದ್ದಕ್ಕೂ ಹೊಟ್ಟು ಜಗಿದ ಅನುಭವವೊಂಡೇ ಉಳಿದುಕೊಳ್ಳುತ್ತದೆ – ಎಂಬುದು ನನಗೆ ಖಾತ್ರಿಯಾಗಿರುವುದರಿಂದ ಸಂಕ್ಷೇಪದಲ್ಲಿ ಹೇಳುವ ಗುಣ ಬಹು ದೊಡ್ಡದಾಗಿ ಕಾಣಿಸುತ್ತದೆ. ಈ ವಿಷಯದಲ್ಲಿ ನಾವೆಲ್ಲರೂ ಗಾಂಢೀಜಿಯ ಬರವಣಿಗೆಗಳನ್ನು ಅಧ್ಯಯನ ಮಾಡಿ ಕಲಿತುಕೊಳ್ಳಾಬೇಕು. ಜಗತ್ತಿನ ಈ ಶತಮಾನದ ಶ್ರೇಷ್ಠ ಗ್ರಂಥವಾದ ಗಾಂಧೀಜಿಯ ’ಹಿಂದ್ ಸ್ವರಾಜ್’ ಸುಮಾರು ಒಂದು ನೂರು ಪುಟಗಳ ಗಾತ್ರದ್ದು.
ಎಲ್ಲಕ್ಕಿಂತ ಮುಖ್ಯವಾಗಿ, ಈ ಲೇಖಕರು ಇಲ್ಲಿ ಆರಿಸಿಕೊಂಡಿರುವ ವಿಷಯವೇ ಅವರ ಬರವಣಿಗೆಯನ್ನು ಅತಿ ಮುಖ್ಯವಾದ್ದಾಗಿಸುತ್ತದೆ. ಇದು ಇತಿಹಾಸವನ್ನು, ಅಂದರೆ ನಮ್ಮ ’ಭೂತವನ್ನು’ ಹೇಗೆ ಹಿಡಿಯುತ್ತೇವೆ ಮತ್ತು ಹಿಡಿದು ದುಡಿಸಿಕೊಳ್ಳುತ್ತೇವೆ ಅನ್ನುವುದಕ್ಕೆ ಸಂಬಂಧಿಸಿದ್ದು. ಬಹಳ ಸಾಮಾನ್ಯವಾಗಿ ಇತಿಹಾಸವನ್ನು ಗ್ರಹಿಸುವ ಕ್ರಮವೆಂದರೆ ಹಾಲಿವುಡ್ ಮುಂಬೈಗಳ ಉದ್ಯಮ ಚಲನಚಿತ್ರಗಳನ್ನು ಗ್ರಹಿಸುವ ಕ್ರಮಕ್ಕೆ ಸಂವಾದಿಯಾದದ್ದು. ನಮ್ಮ ಟೊಳ್ಳುಗಳನ್ನು ತುಂಬಿಸಿಕೊಳ್ಳುವ ಹಗಲುಗನಸುಗಳಾಗಿ, ವಿಸ್ಮಾರಕ ಮಾದಕ ದ್ರವ್ಯಗಳಾಗಿ ನಾವು ಅದನ್ನು ಸ್ಚೀಕರಿಸಿ ಬಳಸಿಕೊಳ್ಳುತ್ತೇವೆ. ಅದು ನಮ್ಮನ್ನು ಕ್ರಮಕ್ರಮವಾಗಿಪ್ರಸ್ತುತದಿಂದ ದೂರಗೊಳಿಸುತ್ತದೆ, ದುರ್ಬಲಗೊಳಿಸುತ್ತದೆ, ತಾಮಸಕ್ಕೆ ಅದ್ದುತ್ತದೆ, ಹಿಂಸ್ರವಾಗಿಸುತ್ತದೆ.
ಅಥವಾ, ಉತ್ಖನನ ಸಂಶೋಧನೆಗಳಲ್ಲಿ ಹುಗಿದುಕೊಂಡು ಅಲ್ಲಿ ಸಿಕ್ಕುದನ್ನು ಇದ್ದುದಿದ್ದ ಹಾಗೆ, ವಸ್ತುನಿಶ್ಥವಾಗಿ ಬರವಣಿಗೆಗೆ ರವಾನಿಸುತ್ತೇನೆ ಎನ್ನುವ ಕೇವಲ ಅಕಾಡಮಿಕ್ ಅಧಿಕೃತತೆಯ ಇತಿಹಾಸರಚನೆಯೂ ಪ್ರಸ್ತುತಕ್ಕೆ ಪ್ರಯೋಜಕವಾಗುವುದಿಲ್ಲ. ತಾನು ಗ್ರಹಿಸುವ ಸಂಗತಿಗಳ ಬಗ್ಗೆ ಇತಿಹಾಸಕಾರನಿಗೆ ವಸ್ತುನಿಶ್ಥತೆಯಿರಬೇಕು, ಸರಿ. ಆದರೆ ಅದರ ಜತೆ ಜತೆಯಲ್ಲಿ, ಅದಕ್ಕಿಂತ ಹೆಚ್ಚಾಗಿ ಪ್ರಸ್ತುತದ ಬಗ್ಗೆ ರೋಮರೋಮದಲ್ಲಿ ಮಿಡುಕುವ ಕಾಳಜಿಯಿರಬೇಕು. ಹಾಗಲ್ಲದ ಕೇವಲ ವಸ್ತುನಿಷ್ಠತೆಯು ಆತನನ್ನು ಎರಡು ಕಾಲಿನ ಮುಸಿಯಮ್ಮನ್ನಾಗಿಸುತ್ತದೆ. ಬೇಜವಾಬ್ದಾರಿ ನಾಗರಿಕನನ್ನಾಗಿಸುತ್ತದೆ. ಆತನ ಶೋಧನಗಳು ಪ್ರಸ್ತುತ ಸಮಾಜಕ್ಕೆ ನಿಷ್ಪ್ರಯೋಜಕವಷ್ಟೇ ಅಲ್ಲ, ಅಪಾಯಕಾರಿಯಾಗುತ್ತವೆ.
ಭಿನ್ನವಾದ ದಾರಿಯೆಂದರೆ, ಪ್ರಸ್ತುತದ ತೆವಲು ತುರ್ತುಗಳೇ ಮುಖ್ಯವಾಗಿ ಅವುಗಳಿಗೋಸ್ಕರ ಇತಿಹಾಸವನ್ನು ಗಮನಿಸುವುದು ಮತ್ತು ಅವುಗಳಿಗೋಶ್ಕರವಾಗಿ ’ಭೂತ್’ವನ್ನು ಸೆಳೇದು ದುಡಿಸಿಕೊಲ್ಳುವುದು. ಚಂದ್ರಶೇಖರರ ಇತಿಹಾಸಗ್ರಹಿಕೆ ಈ ಬಗೆಯದಾಗಿರುವುದರಿಂದ ಅವರ ಬರವಣಿಗೆ ಬಹು ಮುಖ್ಯವಾದ್ದಾಗುತ್ತದೆ.
ಇಂಗ್ಲಿಷರ ವಸಾಹತುಶಾಹಿ ದಾಸ್ಯದಲ್ಲಿದ್ದ ನಾವು ಅದರಿಂದ ಬಿಡುಗಡೆ ಪಡೆದು ನಮ್ಮದು ’ಸ್ವತಂತ್ರ ಗಣರಾಜ್ಯ’ ಅಂದುಕೊಂಡೆವು. ಆದರೆ, ಸ್ವಾತಂತ್ರ್ಯದ ನಾಲ್ಕೈದು ದಶಕಗಳ ಅವಧಿಯಲ್ಲಿ ಕ್ರಮೇಣ, ನವ ವಸಾಹತುಶಾಹಿಯ ಬಲೆಯಲ್ಲಿ ಸಿಲುಕಿಕೊಳ್ಳುತ್ತ ಬಂದಿದ್ದೇವೆ. ಹಿಂದಿನ ಥರಾ ಅನ್ಯ ರಾಷ್ಟ್ರದ ವೈಸ್ರಾಇ ಗೌರ್ನರ್ ಸನ್ಯ ಆಡಳಿತ ಯಂತ್ರಗಳ ನೇರ ಆಳ್ವಿಕೆಯಿಲ್ಲ, ನಿಜ. ಆದರೆ ಮುಂದುವರಿದ ರಾಷ್ಟ್ರಗಳ, ಮುಖ್ಯವಾಗಿ ಇವತ್ತು ಜಗತ್ತಿನ ನಾಯಕನೆಂದು ಭ್ರಮಿಸಿರುವ ಅಮೇರಿಕದ ಮಾತು ಕೇಳಿಕೊಂಡೇ ನಮ್ಮ ಆಡಾಳಿತ ನಡೆಸಿಕೊಳ್ಳಬೇಕಾದ ಸೂಕ್ಷ್ಮ ದಾಸ್ಯಕ್ಕೆ ಸಿಕ್ಕುಹಾಕಿಕೊಂಡಿದ್ದೇವೆ. ೧೯೯೦ರ ಈ ದಶಕದಲ್ಲಿ ನಮ್ಮ ಪಾರತಂತ್ರ್ಯವು ಉತ್ಕಟ ಸ್ಥಿತ್ಯನ್ನು ತಲುಪಿದೆ. ಈಗ ಮುಂದೇನು? ನಾಶ ಹೊಂದುತ್ತೇವೆಯೆ? ಇಲ್ಲ ಎನ್ನುವುದಾದರೆ, ಪ್ರಸ್ತುತಕಾಲವನ್ನು ಮತ್ತೊಂದು ಸ್ವಾತಂತ್ರ್ಯ ಹೋರಾಟದ ಪ್ರಾರಂಭಕಾಲವೆಂದು ಗಣಿಸಬೇಕು.
ಹಿಂದಿನ ನಮ್ಮ ಸ್ವಾತಂತ್ರ್ಯ ಹೋರಾಟದ, ಆ ಸುಮಾರು ಒಂಡು ಶತಮಾನದ ಅವಧಿಯಲ್ಲಿ ಇಂಡಿಯಾದಲ್ಲಿ ಮತ್ತೊಂದು ಆಳವಾದ ವ್ಯಾಪಕವಾದ ಜನಪದಕ್ರಿಯೆ ನಡೆದಿತ್ತು. ಸ್ವಾತಂತ್ರ್ಯ ಹೋರಾಟವೆಂಬುದು ಆ ವ್ಯಾಪಕಕ್ರಿಯೆಯ ಅಂಗ ಮಾತ್ರ, ಬಹಿರಂಗವಾಗಿ ಕಾಣಿಸುತ್ತಿದ್ದುದು. ಆ ಪ್ರಕ್ರಿಯೆಯು ಒಂದು ಕಡೆ, ಪೂರ್ವ ಪಶ್ಚಿಮಗಳ ಬಾಹ್ಯ ಮುಖಾಮುಖಿಯಾಗಿದ್ದರೆ ಇನ್ನೊಂದು ಕಡೆ, ಸನಾತನ ಆಧುನಿಕಗಳ ಆಂತರಿಕ ಮುಖಾಮುಖಿಯಾಗಿತ್ತು. ಈ ಎರಡೂ ಬಗೆಯ ಮಂಥನಗಳಲ್ಲಿ ನಾವು ಅಗತ್ಯವನ್ನು ಅರಗಿಸಿಕೊಳ್ಳುತ್ತ ಅನಗತ್ಯವನ್ನು ವಿಸರ್ಜಿಸಿ ಹಾಕುತ್ತ ಹೊಸದಾಗಿ ರೂಪುಪಡೆದುಕೊಳ್ಳುವ ಪ್ರಯತ್ನದಲ್ಲಿ ತೊಇಡಗಿದ್ದೆವು. ಸ್ವಾತಂತ್ರ್ಯದ ಅನಂತರದಲ್ಲಿ ಕೂಡ ಅದೇ ಪ್ರಕ್ರಿಯೆ ಅಳಾದಲ್ಲಿ ಮುಂದುವರಿದುಕೊಂಡು ಬಂದಿದೆ. ಆದರೆ, ಮತ್ತೆ ಮತ್ತೆ ದುರ್ಬಲಗೊಳ್ಳುತ್ತ ಸೊರಗುತ್ತಿದೆ. ಭವಿಷ್ಯವು ಭಯಾನಕವಲ್ಲಿ ಎಂಬ ಭರವಸೆಯಿದ್ದರೆ, ನಾವು ಈ ದುರ್ಬಲಗೊಳ್ಳುತ್ತಿರುವ ಪ್ರಕ್ರಿಯೆಯನ್ನು ಉಜ್ಜೆವಗೊಳಿಸಿಕೊಳ್ಳಬೇಕು. ಸಂಪ್ರಾಣಗೊಳಿಸಿಕೊಳ್ಳಬೇಕು – ಪೂರ್ವ-ಪಶ್ಚಿಮ ಸನಾತನ-ಆಢುನಿಕಗಳಾ ಹೊಸ ಪಾಕಸೃಷ್ಟಿಯಾಗಿ ನಮ್ಮ ಪ್ರಜಾಪ್ರಭುತ್ವ ಗಟ್ಟಿಗೊಳ್ಳುವ ತನಕ, ಮತ್ತು, ಅಂತಿಮವಾಗಿ ಮನುಕುಲದ ಹೊಸ ಸಂಸ್ಕೃತಿಯಿಂದು ಚಿಗುರಲು ತೊಡಗುವತನಕ, ಪ್ರಾಯಃ ದೀರ್ಘಕಾಲ.
ನಮ್ಮ ಹಿಂದಿನ ಸ್ವಾತಂತ್ರ್ಯ ಹೋರಾಟ ಮತ್ತು ಅದರ ಹಿನ್ನೆಲೆಗಿದ್ದ ಮಂಥನ ಮತ್ತು ಜೀರ್ಣಕರಣ ಪ್ರಕ್ರಿಯೆ – ಇವುಗಳ ಮಧ್ಯದಿಂದ ಉದ್ಭವಗೊಂಡು ಬಂದ ಎರಡು ಅತಿ ಮುಖ್ಯ ವ್ಯಕ್ತಿತ್ವಗಳು ಅಂಬೇಡ್ಕರ್ ಮತ್ತು ಗಾಂಧಿಯದು. ನಾವೀಗ ಪುನಃ, ಸುಮಾರು ಆ\ಅವತ್ತಿನಂಧದೇ ಅವಸ್ಥೆಯಲ್ಲಿ ತಲ್ಲಣಿಸುತ್ತಿರುವಾಗ, ಅಂದಿನ ಇತಿಹಾಸದ ಅನುಭವಗಳನ್ನು ಪರಿಶೀಲಿಸಿಕೊಳ್ಳಬೇಕಾದ್ದು ಅತ್ಯಗತ್ಯವಾಗಿದೆ. ಚಂದ್ರಶೇಖರ್ ಅವರು ಅಂಬೇಡ್ಕರ್-ಗಾಂಧಿ ಇತಿಹಾಸವನ್ನು ಪರಿಶೀಲಿಸುತ್ತಿರುವುದು ಇವತ್ತಿನ ಬದುಕಿನ ತಲ್ಲಣಗಳನ್ನು ಸ್ಥೈರ್ಯದಿಂದ ಎದುರಿಸುವುದಕ್ಕೋಸ್ಕರ, ಇವತ್ತಿನ ಪ್ರಾಣ ಪಡೆದುಕೊಳ್ಳಲಿಕ್ಕಾಗಿ, ಈ ಕಾರಣದಿಂದ ಅವರ ಬರವಣಿಗೆ ಬಹು ಮುಖ್ಯವಾಗುತ್ತದೆ.
ಅಂಬೇಡ್ಕರ್ ’ಸಮಾನತೆ’ ಎಂದರು, ಗಾಂಧಿ ’ಸ್ವಾತಂತ್ರ್ಯ’ ಎಂದರು. ಇಬ್ಬರ ಮಧ್ಯೆ ತೀವ್ರ ಭಿನ್ನಾಭಿಪ್ರಾಯಗಳುಂಟಾದವು. ಮಧ್ಯೆ ಮಧ್ಯೆ ಇವರ ಅನುಯಾಯಿಗಳೇ ಕೂಡಿ ಇವರಲ್ಲಿ ರಾಜಿ ಮಾಡಿಸಬೇಕಾಯ್ತು. ಇಬ್ಬರೂ ಹಟದಿಂದ ಸೆಣೆಸಿದರು, ಹಟದಿಂದ ರಾಜಿ ಮಾಡಿಕೊಂಡರು, ರಾಜಿಯಾದ ಮೇಲೂ ಸೆಣೆಸಿಕೊಂಡರು. ಇಬ್ಬರೂ ತೀರಾ ಸಭ್ಯರಿದ್ದೂ ಪರಸ್ಪರ ಬಹು ಕಟುವಾಗಿ ಮಾತಾಡಿಕೊಂಡರು, ಸಂದರ್ಭದಲ್ಲಿ ಪರಸ್ಪರ ಪ್ರಾಂಜಲವಾಗಿ ಪ್ರಶಂಸಿಸಿಕೊಂಡರು ಕೂಡಾ.
’ಸಮಾನತೆ’ಯ ಬಗ್ಗೆ ಅಂಬೇಡ್ಕರ್ ಮತ್ತು ’ಸ್ವಾತಂತ್ರ್ಯ-ಸ್ವರಾಜ್ಯ’ಗಳ ಬಗ್ಗೆ ಗಾಂಧಿ ಉಡದ ಥರಾ ತಮ್ಮದೇ ಹಟ ಹಿಡಿದುಕೊಂಡಿದ್ದರು. ಹಾಗಿದ್ದಾಗ್ಯೂ ’ಸ್ವರಾಜ್ಯ ಸಂವಿಧಾನದಲ್ಲಿ ಮಾತ್ರವೇ ಸಮಾನತೆ ಸಾಧ್ಯ’ ಎಂದು ಅಂಬೇಡ್ಕರರೂ ’ಸಮಾನತೆ ಸಿದ್ದಿಸದೆಯೇ ಭಾರತದ ಸ್ವಾತಂತ್ರ್ಯ ಮತ್ತು ಇದೀ ಜಗತ್ತು ಸಿಗುವುದಾದರೂ ತಿರಸ್ಕರಿಸುತ್ತೇನೆ’ ಎಂದು ಗಾಂಧಿಯೂ ನಿಸ್ಸಂದಿಗ್ಧವಾಗಿ ಘೋಷಿಸಿದರು. ಈ ಇಬ್ಬರ ಮಧ್ಯದ ಸಾಂಯವು ಅಂಬೇಡ್ಖರ್ರೇ ಹೇಳಿಕೊಳ್ಳುವ ಹಾಗೆ, ನಮಗೂ ’ಆಶ್ಚರ್ಯ ಅತ್ಯಾಶ್ಚರ್ಯ’ ಹುಟ್ಟಿಸುತ್ತದೆ.
ಈಯಿಬ್ಬರು ಉನ್ನತನಾಯಕರ ನಡುವಣ ಸಂಬಂಧವು ಅನೇಕಾನೇಕ ರೀತಿಗಳ ಚರ್ಚೆಗೆ ಗುರಿಯಾಗಿದೆ. ಸಾಹಿತ್ಯ ವಿಮರ್ಶೆಯಲ್ಲಿ ಪಾತ್ರಪರಿಶೀಲನೆ ಎನ್ನುವ ಕಲ್ಪನೆಯುಂಟಲ್ಲ, ಆ ಥರದಲ್ಲಿ ಈ ಇಬ್ಬರನ್ನು ವಿವಿಕ್ತ ಪಾತ್ರಗಳಾಗಿ ಪರಿಗಣಿಸಿ ಅವರ ಗುಣಶೀಲ ನುಡಿ ನಡತೆ ವೈಚಾರಿಕತೆಗಳನ್ನು ವಿಮರ್ಶಿಸಿ ಅದರ ತರ್ಕಶುದ್ಧತೆಯನ್ನು ಹುಡುಕಲು ಹೊರಟರೆ ಗೊಂಡಲವಾಗುತ್ತದೆ. ಹಾಗೆ ಇವರನ್ನು ವಿವಿಕ್ತ ಪಾತ್ರಗಳೆಂದು ನೋಡುವುದೇ ಸರಿಯಲ್ಲ. ಇವರು ಇಂಡಿಯಾದ ಒಂದು ಶತಮಾನದ ರಾಷ್ಟ್ರ ಪ್ರಕ್ರಿಯೆಗೆ ಅರ್ಕಪ್ರತಿಮೆಯಾಗಿ ಮೂಡಿದ ಅವಳಿಗಳು. ಹಾಗೆ ನೋಡಿದಾಗ ಮಾತ್ರವೇ ಇವರು ಅರ್ಥವಾಗುತ್ತಾರೆ. ನಿಜವಾದ ಅರ್ಥವಂತಿಕೆಯನ್ನು ಕಾಣಿಸುತ್ತಾರೆ. ಸ್ವಾತಂತ್ರ್ಯ ಹೋರಾಟವನ್ನೂ ತನ್ನ ಪುಟ್ಟ ಅಂಗವಾಗಿಸಿಕೊಂಡು ಶತಮಾನಕಾಲ ಇಂಡಿಯಾದಲ್ಲಿ ಯಾವ ವ್ಯಾಪಕವಾದ ಜನಪದ ಅಥವಾ ರಾಷ್ಟ್ರಪ್ರಕ್ರಿಯೆ ನಡೆಯಿತೋ ಅದರ ಸಂಕೀರ್ಣತೆಯು ಒಂದು ಪ್ರತಿಮೆಯಲ್ಲಿ ತನ್ನನ್ನು ಅಭಿವ್ಯಕ್ತಿಸಿಕೊಳ್ಳುವುದು ಸಾಧ್ಯವಿರಲಿಲ್ಲ, ಪ್ರಾಯಃ ಅಂಬೇಡ್ಕರ್ ಮತ್ತು ಗಾಂಧಿಯ ಈ ದ್ವಿದಳ ಪ್ರತಿಮೆಯಲ್ಲಿ ಮಾತ್ರವೇ ಅದರ ಅಭಿವ್ಯಕ್ತಿ ಸಾಧ್ಯವಾಯ್ತು. ಆ ಕಾಲಕ್ಕೆ ನಮ್ಮಲ್ಲಿ ಗಣ್ಯವ್ಯಕ್ತಿಗಳ ದೊಡ್ಡಪಡೆಯೇ ಹುಟ್ಟಿಬಂತು. ಆದರೂ ಅಂಬೇಡ್ಕರ್-ಗಾಂಧಿಯರ ಎರಡು ವ್ಯಕ್ತಿತ್ವಗಳೇ ಆ ಕಾಲದ ಪ್ರಕ್ರಿಯೆಯನ್ನು ಸಮಗ್ರವಾಗಿ ಪ್ರತಿಮಿಸಿ ಅಭಿವ್ಯಕ್ತಿಗೊಳಿಸುತ್ತವೆ. ಅಂದರೆ, ಇವನ್ನೆಲ್ಲ ಹೇಳುವ ಮೂಲಕ, ಚಂಡ್ರಶೇಖರ್-ರ ಆಯ್ಕೆ ಎಷ್ಟು ಸಮರ್ಕಪವಾದ್ದೆಂಬುದನ್ನು ಸೂಚಿಸುತ್ತಿದ್ದೇನೆ.
ಪ್ರತುತವೇ ನೇರ ಕಾಳಜಿಯಾಗಿರುವ ನಿಷ್ಠಾವಂತ ನಾಗರಿಕನು ಇತಿಹಾಸದ ಅನುಸಂಧಾನಕ್ಕೆ ಹೊರಟಾಗ ಆತನ ಜವಾಬ್ದಾರಿ ದೊಡ್ಡರಿತ್ತದೆ. ಸಂಕೀರ್ಣವಾಗಿರುತ್ತದೆ. ಬ್ರೆಖ್ಟ್ ಹೇಳುತ್ತಾನಲ್ಲ – ’ನಾಟಕವೆನ್ನುವುದು ಪ್ರೇಕ್ಷಕನಿಗೆ ಅದೊಂದು ವಿಶಿಷ್ಟ ಕಾಲ ಸನ್ನಿವೇಷಗಳ ಇತಿಹಾಸವಾಗಿ ಕಾಣಬೇಕು, ತನ್ನ ಕಾಲವು ಬೇರೆಯೇ ಎನ್ನಿಸಬೇಕು, ತನ್ನ ಕಾಲವನ್ನು ಆ ಹಿಂದಿನ ಕಾಲಕ್ಕಿಂತ ಭಿನ್ನವಾಗಿ ಉತ್ತಮವಾಗಿ ಮಾರ್‍ಪಡಿಸಿಕೊಳ್ಳುತ್ತೇನೆ ಎಂಬ ಛಲ ಹುಟ್ಟಬೇಕು’ ಏಂದು. ಹಾಗೆ, ಇತಿಹಾಸ ಪರಿಶೀಲನೆಯು ಉತ್ತಮವಾಗಿ ತಿದ್ದಿಕೊಳ್ಳುವ ಬದಲಿಸಿಕೊಳ್ಳುವ ಛಲ ಹುಟ್ಟಿಸಿಕೊಡಬೇಕು.
ಪ್ರಸ್ತುತ ಜನಪದದಲ್ಲಿ ಶ್ರೇಷ್ಠತೆಯ ಅಹಂಕಾರವೂ ಭಿನ್ನತೆ-ಪಕ್ಷಪಾತ-ಅಸಾಮಾಜಿಕತೆ-ಅಮಾನವೀಯತೆಗಳೂ ತುಂಬಿಕೊಂಡಿವೆಯೆನ್ನೋಣ. ಆಗ ಇತಿಹಾಸಕಾರನು – ’ಇತಿಹಾಸವೆಂದರೆ ಶ್ರೇಷ್ಠರ ಅಥವಾ ಬಲವಂತರ ಕಥೆಯಲ್ಲ, ಅದು ಸಾಮಾನ್ಯ ಜನರ ದುಡಿಮೆಯ ಕತೆ’ ಎಂದು ಇತಿಹಾಸದ ಆ ಮುಖಕ್ಕೆ ಅವಧಾರಣೆ ಕೊಟ್ಟು ಹೇಳುಬೇಕು. ಅಥವಾ ಸಮಾನತೆಯ ಹುಚ್ಚು ನೆಗ್ಸಿನಲ್ಲಿ ಜನ ಪಾಶವೀಯವಾಗುತ್ತಿದ್ದರೆ ಅಂಥ ಸಂದರ್ಭದಲ್ಲಿ – ’ಶ್ರೇಷ್ಠತೆಯನ್ನು ಸಾಧಿಸುತ್ತ ನಡೆವ ಹೆಜ್ಜೆ ಗುರುತಗಳೇ ಇತಿಹಾಸ’ ಎಂದು ಮತ್ತೊಂದು ಮುಖವನ್ನು ಮೇಲಕ್ಕೆತ್ತಿ ಹೇಳಬೇಕು. ಸಮಾಜವು ದನ್ಯ ಶೋಷಣೆಗಳಿಂದ ಕಂಗೆಡುತ್ತಿರುವ ಸ್ಥಿತಿಯಲ್ಲಿ ಆತನು – ’ಇತಿಹಾಸವೆಂಡರೆ ವರ್ಗ ಹೋರಾಟದ ಕಥೆ’ಯೆಂದು ಜನರಲ್ಲಿ ಕೆಚ್ಚು ತುಂಬಬೇಕು; ಅಥವಾ, ಸಮಾಜದಲ್ಲಿ ಹಗೆ ತುಂಬಿ ದಹಿಸತೊಡಗಿದೆಯೆನ್ನಿಸಿದಾಗ – ’ಇತಿಹಾಸವೆಂದರೆ ವರ್ಗ ಸಾಮೀಪ್ಯದ ವರ್ಗ ಸಮೀಕರಣದ ಕಥೆ’ ಎಂದು ಹೊಸ ಸೃಜನಶೀಲತೆಗೆ ಚಾಲನೆ ಕೊಡಾಬೇಕು. ಉನ್ನತ ವ್ಯಕ್ತಿತ್ವವೆನ್ನುವುದು ಒಟ್ಟೂ ಸಾಮಾಜಿಕೆ ಪ್ರಕ್ರಿಯೆಯ ಅಭಿವ್ಯಕ್ತಿಯೇ ಎನ್ನುವ ಅರಿವಿರಬೇಕು ಮತ್ತು ಜತೆಯಲ್ಲಿಯೇ, ಒಂದು ಉನ್ನತ ವ್ಯಕ್ತಿತ್ವವು ಸಾಮಾಜಿಕ ಪ್ರಕ್ರಿಯೆಯನ್ನೇ ಪರಿವರ್ತಿಸಲೂ ಸಾಧ್ಯವೇನೋ ಎಂಬ ಗಾಢ ಅನುಮಾನವೂ ಇರಬೇಕು, ಆತನಿಗೆ.
ಇವನ್ನೆಲ್ಲಾ ಹೇಳುವಾಗ, ಚಂದ್ರಶೇಖರರು ಸರಿಯಾದ ದಾರಿಯಲ್ಲಿದ್ದು ಸಾಮಾಜಿಕವಾಗಿ ಉಪಯುಕ್ತವಾಗಬಲ್ಲರು ಎನ್ನುವ ನನ್ನ ನಂಬಿಕೆಯನ್ನು ಹೇಳಿಕೊಳ್ಳುತ್ತಿದ್ದೇನೆ.
ದಿ.ಗೋಪಾಲಗೌಡ ನೆನಪಿನ ಪುಸ್ತಕಗಳಲ್ಲಿ ಒಂದಾಗಿ ಈ ಪುಸ್ತಕ ಪ್ರಕಟವಾಗುತ್ತಿರುವುದು ತುಂಬ ಸಂತೋಷದ ಸಂಗತಿ. ಗೋಪಾಲಗೌಡರೇನಾದರೂ ಈ ಪುಸ್ತಕವನ್ನೋದಿದ್ದರೆ ತುಂಬ ಮೆಚ್ಚಿಕೊಳ್ಳುತ್ತಿದ್ದರು, ಮತ್ತು ತಮ್ಮ ರೂಢಿಯಂತೆ ಒಂಡೆರಡು ವರ್ಷಕಾಲ ತಾವು ಹೋದಲ್ಲೆಲ್ಲ ಹಳ್ಳಿಹಳ್ಳಿಗಳಲ್ಲಿ ಈ ಪುಸ್ತಕದ ಬಗ್ಗೆ ಹೇಳುತ್ತಿದ್ದರು.
*****
