ಸೊಳ್ಳೆ

ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ
ಚಾಣದಲಿ ಹೊಡೆದಂತೆ ಹತ್ತು ಗಂಟೆ
ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು
ಇರಲಿ ಬಿಡು, ನಮಗೇತಕದರ ತಂಟೆ ?
ಮಂದ ಬೆಳಕ ತಂದ್ರಿಯಲ್ಲಿ
ಇಂದ್ರಚಾಪದಂತೆ ಬಾಗಿ
ಒಲವು ಸವಿಯ ನೀಡಿತು;
ಹಿಗ್ಗು ಪಡೆದ ಪ್ರಣಯಪಕ್ಷಿ
ನೀಲದಾಳದಲ್ಲಿ ಸುಳಿದು
ನಿರಾಯಾಸವಾಗಿ ಇಳಿದು
ಎದೆಯಗೂಡ ಸೇರಿತು.

ದೀಪವಿಳಿದು ಆರಿತು
ಕತ್ತಲೆ ಮೈ ಚಾಚಿತು

ನಿದ್ದೆಲೋಹಚುಂಬಕದೊಲು
ಎಳೆವ ಸೆಳೆವ ಹೊತ್ತಿನಲ್ಲೆ
ತಂಬೂರಿಯ ನಾದದಂತೆ
ನಾರದರವತರಿಸಿದಂತೆ
ಝೇಂಕರಿಸಿತು
ಮೂಲೆಯಲ್ಲಿ ಕಾದು ಕುಳಿತ ಸೊಳ್ಳೆ
ತನ್ನ ಗತ್ತಿನಲ್ಲೆ!


ಕೊಳ್ಳೆ ಹೊಡೆಯಲು ಬರುವ ಮೆತ್ತಗಿನ ಕಳ್ಳನೊಲು
ಸುಳ್ಳು ಸುಳ್ಳೇ ಹಾಡಿ ಹರಸುತಿತ್ತು;
ಬಾಂಬನಸೆಯುವ ಮೊದಲು ಅತ್ತಿತ್ತ ಹಾರಾಡಿ
ಸುತ್ತುವ ವಿಮಾನದೊಲು ಮರಸುತಿತ್ತು.
ಬಂತು ಅಗೊ!
ಬಂದೇಬಿಟ್ಟಿತು
ಮಹಾಸೈನ್ಯವನು ಹಿಂದಿರಿಸಿ ಮೊರೆದು ‘ಸ್ವಾಹಾ’
“ನೀನಾರಿಗಾದೆಯೋ ಎಲೆ ಮಾನವಾ”
ಪರಿಚಿತರು ಸಲಿಗೆಯಲಿ ಮಾತನಾಡುತ್ತ ಬಂದು
ಹೆಗಲಮೇಲೆಯೆ ಕೈಯನಿರಿಸುವಂತೆ
ಬಂದು ಕುಳಿತಿದೆ ಮುಖದಮೇಲೆ ಅಂತೆ ;
ಕೈ ಮುಟ್ಟಿ ಮೈ ಮುಟ್ಟಿ ಬಂದು
ಗುಂಯ್‌ ಗುಟ್ಟುತಿದೆ
ಕಿವಿಯಲ್ಲಿ ಸ್ಕ್ರೂ ಇಟ್ಟು ತಿರುವಿದಂತೆ
ರೋಮರೋಮಕೆ ಸೂಜಿ ಮದ್ದಿನಂತೆ!
ಇಂಥ ಧೈರ್ಯವದೆಂತು ಬಂತೋ ಕಾಣೆ.
ಕೋಣೆಯಾಚೆಗೆ ಇದನು
ಹೊಡೆದೋಡಿಸದೆ ಮಾಣೆ!


ಅದು ಮುಂದು ಮುಂದೆ
ನಾನು ಸೂತ್ರದಗೊಂಬೆ
ಅಂತೆ ಆಡಿಸಿತೆನ್ನ ಹಿಂದುಮುಂದೆ.
ಗುಂಗಾಡಗುಂಗು ಮೈದುಂಬಿ ಹಂಗಿಸುತಿತ್ತು
ಆದರೂ ಆಗಲೆಂದೆ;
ಮನಕೆ ಮಾಯಾಮೃಗದ ನೆನಪು ತಂದು
ಪುಂಗಿಯೂದಿತು ಕಿವಿಯ ಬಳಿಗೆ ಬಂದು;
ಚಪ್ಪಾಳೆಗೂ ಸೊಪ್ಪು ಹಾಕದೆಯೆ ಕೈ ತಪ್ಪಿ
ಮೂಲೆಯ ಕಪಾಟಿನಲ್ಲಿ ಲೀನವಾಯ್ತು.

ಶಿಸ್ತಿನಿಂದ ಹಿಂದೆ ಸರಿದ
ಸೈನಿಕನೊಲು ಮರಳಿದೆ,
ಹಾಸಿಗೆಯಲ್ಲಿ ಹೊರಳಿದೆ
…………..
ಕನಸಿನಲ್ಲಿ ಗೊರವ ಬಂದು
ಜಾಗಟೆಯನು ಬಡಿದನು:
‘ಏಳ್ಕೋಟಿಗೇಳ್ಳೋಟಿಗೇಳ್ಕೊಟಿಗೋ’
ಕಣ್ಣೆರೆದೆನು
? ? ?
ಕಿವಿ ನಿಮಿರಿತು
! ! !
ಗಡಿಯಾರ ಬಾರಿಸಿತು
ಏಳುಗಂಟೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ