ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಅಯ್ಯಾ, ನನ್ನ ಆತ್ಮ ಕನ್ನಡಿಯಂತೆ ಗುಟ್ಟು ಹೊರ ಚೆಲ್ಲುತ್ತದೆ
ನಾನು ಮೂಕ, ಆದರೆ ಅದು ತಿಳಿಯುತ್ತದೆ
ಅಯ್ಯಾ, ದೇಹ ಹೊರದಬ್ಬಿದ ಪರದೇಶಿ ನಾನು, ಚೈತನ್ಯಕ್ಕೆ ನಾನೆಂದರೆ ಭಯ
ನನ್ನಾಣೆ, ನಾನು ಅಜ್ಞಾನಿ, ನಾನು ಎಲ್ಲಿಯೂ ಸಲ್ಲುವುದಿಲ್ಲಯ್ಯ
ನಾನು ಶೋಧಕ, ವಾಸನೆಗಳು ಬಂದು ಮುತ್ತಿದ್ದು ತಿಳಿದರೆ ಅದು ಮೃತ್ಯು
ನನಗೆ ಜೀವವಿದೆ ಎನ್ನಬೇಡಿರಯ್ಯ, ನನ್ನದು ಶವದ ಸ್ಥಿತಿ
ನನ್ನ ಕೊಂಕು ಎತ್ತಾಡಬೇಡಿ, ಕೇಳಿ ಈ ನೇರನುಡಿ
ನಾನು ಬಾಗಿದ ಬಿಲ್ಲಯ್ಯ, ಮಾತು ಮಾತ್ರ ನೇರ ಬಾಣ
ಮೇಲೆ ಸೋರೆ ಬರುಡೆಯಂಥ ತಲೆ, ದರವೇಶಿ ಬಟ್ಟೆಯಂಥ ದೇಹ
ನಾನ್ಯಾರು? ಈ ಲೋಕದ ಸಂತೆಯಲ್ಲಿ ನಾನು ಯಾರಯ್ಯ?
ತಲೆ ಮೇಲಿನ ಸೋರೆಯಲ್ಲಿ ತುಂಬಲಿ ಸುರೆ
ತಲೆ ಕೆಳಗಾದರೂ ಒಂದು ಹನಿಯೂ ಚೆಲ್ಲದಯ್ಯ
ಒಂದು ಹನಿ ಚೆಲ್ಲಿದರೂ ಧರೆಗೆ
ಅದರ ಬದಿಗೆ ನಾನು ಕಡಲ ಮುತ್ತು ಆಯುವೆ, ದೇವ ಕೃಪೆಯಯ್ಯಾ
ನನ್ನ ಕಣ್ಣು ಮೋಡದಂತೆ ಆಯುತ್ತದೆ ಮುತ್ತು
ನನ್ನ ಚೈತ್ಯ ಮೋಡವೀಗ ಧಾವಿಸುತ್ತದೆ ಅವನ ಸ್ವರ್‍ಗಕ್ಕೆ
ಶಂಸ್‌ನ ಸನ್ನಿಧಿಯಲ್ಲಿ ನಾನು ಮಳೆಯಾಗುತ್ತೇನೆ
ನನ್ನ ನಾಲಿಗೆಯಲ್ಲಿ ಮಲ್ಲಿಗೆ ಬೆಳೆಯುತ್ತದೆ.
*****
