ಜಾಗರದ ಜೀವಗಳಿಗೆ…

ಹನ್ನೊಂದರ ಆಸುಪಾಸು ಹೊಟೆಲುಗಳು ಮುಚ್ಚುತ್ತವೆ. ಸಾವಿರಗಟ್ಟಲೆ ಪಾತ್ರೆ ಪಗಡಿ ಲೋಟ ತಾಟುಗಳು ಎರಡೂವರೆಯ ತನಕ ತೊಳೆಯಲ್ಪಡುತ್ತವೆ. ಸಿಂಕುಗಳು, ಕನ್ನಡಿಗಳು ವ್ಹಿಮ್ ಹಾಕಿ ಫಳಫಳ ಉಜ್ಜಲ್ಪಡುತ್ತವೆ. ಟೇಬಲುಗಳ ಮೇಲೆ ಬೋರಲು ಕುರ್ಚಿಗಳನ್ನಿಟ್ಟು ಫಿನೈಲ್ ಹಾಕಿ ನೆಲ ತೊಳೆಯಲಾಗುತ್ತದೆ. ಆಗ ಸಿಗುವ ಪುಟಾಣಿ ಒಂಟಿ ಚಪ್ಪಲಿ, ಎತ್ತಿ ಎಸೆಯಲಾಗುತ್ತದೆ ಅಥವಾ ಇಡಲಾಗುತ್ತದೆ. ತೊಳೆಯುವ ಚಿಣ್ಣರ ಕಾಲಿಗೆ ಅದು ತುಸುವೇ ಚಿಕ್ಕದಾಗಿದೆ. ತೊಳೆಯುವ ಚಿಣ್ಣರ ಬೆಳ್ಳನೆ ಅಂಗೈಯಲ್ಲಿ ಜಿಡ್ಡು. ಕಣ್ಣಲ್ಲಿ ರಸ್ತೆ ದೀಪದ ಹಳದಿ. ಕವಿಯಲ್ಲಿ ಸಪ್ತ ಸಾಗರದಾಚೆಗೆಲ್ಲೋ ಬಿಡ್ತಿಗೆ ತೆಗೆದ ಯಕ್ಷಗಾನದ ಚಂಡೆ. ಮನೆ ಬಿಟ್ಟು ನಿಂತ ಸ್ತಬ್ದ ಕ್ಷಣಗಳಲ್ಲಿ ಓಣಿಯ ಕೊನೆ ತನಕವೂ ಬಣ್ಣದ ಕೈ ಬೀಸುತ್ತಲೇ ಇದ್ದ ಕೇರಿಯ ಗಿಡಮರಗಳು.

ನದಿಯ ತೆಕ್ಕೆಯಲ್ಲಿರುವ ಹಳ್ಳಿ ಹಸುಗಳಿಂದ ಹಾಲುಗಳನ್ನೆತ್ತಿಕೊಂಡ ಟ್ಯಾಂಕರುಗಳು ಮಣ್ಣಿನ ದಾರಿಯಿಂದ ಕೊಂಯ್ಯೋ ಎಂದು ಹೊರಳಿಕೊಂಡು ರಾಷ್ಟ್ರೀಯ ಹೆದ್ದಾರಿಗಳನ್ನೇರಿ ಶಹರಗಳೆಡೆ ಶರವೇಗದಿಂದ ಓಡುತ್ತಿವೆ. ಟಾರ್ಪೋಲಿನ್ ಕತ್ತಲಿನಲ್ಲಿ ಹಸಿರು ತರಕಾರಿಗಳನ್ನು ಹೇರಿಕೊಂಡು ನಿಂತ ಲಾರಿಗಳು ಆಕ್ಟ್ರಾಯ್ ಸುಂಕದವನ ಬಳಿ ನಿದ್ದೆಗಣ್ಣಲ್ಲಿ ದುಃಖ ಹೇಳುತ್ತಿವೆ. ನಡುರಾತ್ರಿಗೇ ಎದ್ದು ರೊಟ್ಟಿ ತಟ್ಟಿ ಪಲ್ಯ ಕಟ್ಟಿಕೊಟ್ಟ ಹೆಂಡತಿಯ ಕೈಯಿಂದ ಬುತ್ತಿಯ ಚೀಲ ಹಿಡಿದು ಹೊರಬಿದ್ದ ನಾವಿಕರ ದೋಣಿಗಳು, ಲಾಂಚುಗಳು ಹೊರ ಸಮುದ್ರದ ಅಲೆಗಳೆಡೆ ಮೂತಿ ಮಾಡಿಕೊಂಡು ರಂಜಕದ ನೊರೆ ಸೀಳುತ್ತ ಹೊರಟಿವೆ. ಎಷ್ಟೋ ತಾಸುಗಳ ಪಯಣ ಮಾಡಿ ಕೆಲಸಕ್ಕೆ ಹೋಗಬೇಕಾಗಿರುವ ಕಾರ್ಮಿಕ ಎದ್ದು ಸಣ್ಣ ಕನ್ನಡಿಯಲ್ಲಿ ದಾಡಿ ಮಾಡಿಕೊಳ್ಳುತ್ತಿದ್ದಾನೆ. ಅವನು ಆಕಳಿಸಿದಷ್ಟೂ ಅವನ ದಾಡಿಗೆ ಅನುಕೂಲವಾಗುತ್ತದೆ. ಹೆಂಡತಿ ಹಚ್ಚಿದ ಸ್ಟೋವಿನ ಸದ್ದಿಗೆಲ್ಲ ಮಗು ಹಾಗೆ ಏಳುವುದಿಲ್ಲ.

ಬಾರುಗಳ ಹಿಂಭಾಗದಲ್ಲಿ, ಕತ್ತಲಿಗೇ ಕಣ್ಣು ಒಡೆದಂತಿರುವ ಮಕ್ಕಳು ಗೋಣಿ ಚೀಲದಲ್ಲಿ ಖಾಲಿ ಬಾಟಲಿಗಳನ್ನು ತುಂಬುತ್ತಿದ್ದಾರೆ. ಹೆಚ್ಚುವರಿ ತಂಗಾಳಿಗಾಗಿ, ಬಲ್ಬು ಹೋದ ದೀಪದ ಕಂಬಗಳಂತೆ ಜನ ಸಾಲು ದೂರದ ಕತ್ತಲಿನ ತನಕ ಅಲುಗದೆ ನಿಶ್ಯಬ್ದದಲ್ಲಿ ನಿಂತಿದೆ. ಒಬ್ಬ ಹುಡುಗ ನಿರ್ಜನ ತರಕಾರಿ ಮಾರ್ಕೆಟ್ಟಿನಲ್ಲಿ ಕೊಳೆಯುತ್ತಿರುವ ಎಲೆ, ಸಿಪ್ಪೆಗಳ ಬೆದಕಿ ಬೆದಕಿ ನಿಧಿ ಹುಡುಕುತ್ತಿದ್ದಾನೆ. ಅವನಿಗೊಂದು ಇಡೀ ಸೇಬಿನಂಥದೇನೋ ಕಂಡಿದೆ. ಅವನು ಮುಗಿ ಬೀಳುತ್ತಿಲ್ಲ. ಇನ್ಯಾರಾದರೂ ಕಂಡು ಕಸಿದರೆ? ಹೀಗೆಂದು ಆತ ಮೆಲ್ಲಗೆ ಏನೂ ಆಗದವನಂತೆ ನಟಿಸುತ್ತ ಆ ಸೇಬನ್ನು ಸಮೀಪಿಸುತ್ತಿದ್ದಾನೆ.

ರಾತ್ರಿಯ ಬಸ್ಸುಗಳು ಘಟ್ಟ ಇಳಿಯುತ್ತವೆ. “ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದಿರುವ” ಚಾಲಕ ನಡುವೊಮ್ಮೆ ನಿಲ್ಲಿಸಿ, ಇಳಿದು, ಎಲ್ಲ ಟಾಯರುಗಳನ್ನು ಕೈಯಿಂದ ಬಡಿದು ನೋಡಿ ಒಂಟಿಯಾಗಿ ಕಾಡಿನ ಕಡೆ ಮುಖ ಮಾಡಿ ಏನೋ ಹೊಸ ಲೋಕದ ಸದ್ದು ಕೇಳುತ್ತಿರುವವನಂತೆ ನಿಂತಿದ್ದಾನೆ. ನಾಟು ತುಂಬಿದ ಲಾರಿಗಳ ಚಾಲಕರು ಕೈ ಸನ್ನೆಯಿಂದೇ “ಏನಾಯಿತಣ್ಣಾ?” ಎಂದು ಕೇಳುತ್ತ ಹಾಯ್ದಿದ್ದಾರೆ.

ಘಟ್ಟ ಮುಗಿದದ್ದೇ ಸಿಗುವ ಧಾಬಾದ ಗಡ್ಡದ ಕಾಕಾನ ಸ್ಟೋವಿನ ಜ್ವಾಲೆಯ ನೀಲಿ ಹೂವು ಭಗ್ಗನೆ ಹೊತ್ತಿಕೊಂಡಿದೆ. ಅವನ ಚಹಾದ ಬಟ್ಟಲಲ್ಲಿ ರೇಡಿಯೋದ ಅನಾಮಿಕ ಸ್ಟೇಷನ್ನುಗಳ ಹಳೇ ಹಾಡು ತೇಲುತ್ತಿವೆ….

ಹಗಲಲ್ಲಿ ಅವಕಾಶವಿಲ್ಲದ ಜೋಪಡಿಯ ತಾಯಂದಿರು ಸಾಲಾಗಿ ನೀರಿನ ಡಬ್ಬ ಹಿಡಿದು ಒಬ್ಬರು ಇನ್ನೊಬ್ಬರ ನೆರಳಲ್ಲಿ ಭೂತಗಳಂತೆ ಕೂತಿದ್ದಾರೆ. ಹಾಯುವ ವಾಹನಗಳ ಬೆಳಕಿಗೆ ಅವರು ಕಣ್ಣುಮುಚ್ಚುತ್ತಾರೆ. ಅಷ್ಟೇ. ಕೈಗೆ ಮೆತ್ತಿಕೊಳ್ಳುವ ಮಸಿಯ ತಾಜಾ ಬಿಸಿ ಸುದ್ದಿಯ ಪತ್ರಿಕೆಗಳ ಕಟ್ಟುಗಳು, ಆಕಾಶದಿಂದ ಸಂತ್ರಸ್ತರಿಗೆ ಒಗೆದ ಪ್ಯಾಕೆಟ್ಟುಗಳಂತೆ ಬೀಳುತ್ತಿವೆ. ಪ್ರತಿ ಪತ್ರಿಕೆಯ ಲಕ್ಷಗಟ್ಟಲೆ ಪ್ರತಿಗಳಲ್ಲೂ ಅದೇ ಸುದ್ದಿ ಇದೆ. ಒಂದೇ ದೈನಿಕ ವ್ಯಂಗ್ಯ ಚಿತ್ರ. ಈ ತನಕ ಬಂದಿದ್ದ ಕಾರ್ಟೂನುಗಳೆಲ್ಲ ರದ್ದಿಯಿಂದೆದ್ದು ಜೇವ ತಳೆದು ನಡೆದು ಬಂದು, ಎಲ್ಲರ ಹಾಗೆ, ಮುಚ್ಚಿದ ಅಂಗಡಿಗಳ ಬಾಗಿಲುಗಳಲ್ಲಿ ಕೈಗಾಡಿಗಳ ಮೇಲೆ, ಪ್ಲಾಟ್ ಫಾರ್ಮುಗಳ ಮೇಲೆ, ಪೋಸ್ಟ್ ಡಬ್ಬಿಗಳ ಬದಿಗೆ ಒಂದಿಂಚೂ ಸರಿಯದೆ, ಹೆಚ್ಚು ಜಾಗ ಆಕ್ರಮಿಸದೆ ಮಲಗಿವೆ. ಉಸಿರಿಗೆ ಅವರ ದೇಹ ಏರಿಳಿಯುವುದು, ಹಾಗೆಲ್ಲ ಫಕ್ಕನೆ ಕಣ್ಣಿಗೆ ತೋರುವುದಿಲ್ಲ. ಬ್ರಹ್ಮ ಕಮಲ ಅರಳುವುದನ್ನು ನೋಡಲು ಕೆಮೆರಾ ಹಿಡಿದು ತಾಸುಗಟ್ಟಲೆ ಕಾಯುತ್ತಾರಲ್ಲ ಹಾಗೆ ಕಣ್ಣು ಕೊಟ್ಟು ನೋಡಿದರೇ ತೋರಬಹುದು ಈ ದೇಹಗಳ ಉಸಿರಿನ ಚಲನವಲನ. ಇಡೀ ಬೀದಿಯಲ್ಲಿ ನಾಯಿಗಳಷ್ಟೇ ಅಪರಿಚಿತ ಸಪ್ಪಳ ಆಲಿಸಿದಂತೆ ಕಿವಿ ನಿಮಿರಿಸಿ ನಿಂತಿವೆ.

ಕಾದಂಬರಿಯ ನಡವೆ ತಲೆ ಇಟ್ಟೇ ದಾದಿಯರು ಸಣ್ಣ ಜೊಂಪಿಗೆ ಇಳಿದಿದ್ದಾರೆ. ಸಲೈನಿನ ಹನಿಹನಿಗಳಲ್ಲಿ ಗಡಿಯಾರದ ಟಿಕ್‌ಟಿಕ್ ಇಳಿಯುತ್ತಿದೆ. ಬೆಳ್ಳನೆ ಗಂಜಿ ಹಾಕಿದ ನರ್ಸಿನ ಗರಿಮಿರಿ ಸಮವಸ್ತ್ರ ಗಾಳಿಗೆ ಬಾಡುತ್ತಿದೆ. ಮೂಗು ಗಂಟಲುಗಳಲ್ಲಿ ನಾಳ ಇರುವ ಪೇಷಂಟ್ ನಂಬರ್ ಹದಿನಾರಿ ಕಣ್ಣಲ್ಲಿ ಪ್ರಾಣ ತಂದು ಏನನ್ನೋ ಹೇಳಲು ಮಿಸುಕಾಡುತ್ತಿದ್ದಾನೆ. ಊರು ತೊರೆದು ಬಂದವರೆಲ್ಲ ಬೇರೆ ಜಾಗಗಳಲ್ಲಿ ನಿದ್ದೆಯಿಲ್ಲದೆ ಹೊರಳಾಡುತ್ತಿದ್ದಾರೆ. ಕಡಿಮೆ ದರ್ಜೆಯ ಎಕ್ಸ್‌ಟ್ರಾಗಳನ್ನು ತಂದು ಉಪನಿರ್ದೇಶಕರು ಖಾಲಿಬೀದಿಗಳಲ್ಲಿ ಕಾರ್‌ಚೇಸ್‌ಗಳನ್ನು ಚಿತ್ರೀಕರಿಸುತ್ತಿದ್ದಾರೆ. ಜೇಲುಗಳ ಒಳಗೆ ಹೋಗಲು ಗಾಳಿ ಹಿಂಜರಿಯುತ್ತಿದೆ. ಇದ್ದ ಒಂದು ಹರುಕು ದುಪ್ಪಟಿಗಾಗಿ ಕಚ್ಚಾಡಿ ಕೊನೆಗೂ ಪರಸ್ಪರ ತಬ್ಬಿಕೊಂಡು ನಿದ್ದೆ ಹೋದ ತೆಳ್ಳನೆ ಮಕ್ಕಳ ನೋಡುತ್ತ ಕಂಗೆಟ್ಟಿದ್ದಾಳೆ ಒಂಟಿ ತಾಯಿ. ಊರನ್ನೇ ನಡುಗಿಸುವಂತೆ ರೋದಿಸುತ್ತಿದೆ ಸರ್ಕಸ್ ಟೆಂಟಿನ ಮುದಿ ಸಿಂಹ.

ಬಟವಾಡೆಯಾಗದೆ ಮರಳಿದ ಪತ್ರಗಳು ಮರಣ ದಂಡನೆಗೆ ಕಾದವರಂತೆ ಪ್ರಧಾನ ಅಂಚೆ ಕಛೇರಿಯಲ್ಲಿ ಕೂತಿವೆ. ಊರ ಚೌಕಗಳ ಪ್ರತಿಮೆ ಪುತ್ಥಳಿಗಳೆಲ್ಲ ನಿಂತಲ್ಲೇ ತಮ್ಮಷ್ಟಕ್ಕೇ ಏನೋ ಮಾತಾಡುತ್ತಿವೆ. ಕಾಮಾಟಿಪುರದ ಹತ್ತನೇ ಪಂಜರದಲ್ಲಿ ಹೆರಿಗೆ ಆಗಿದೆ. ಹೆಣ್ಣು ಹುಟ್ಟಿದೆ ಎಂದು ಎಲ್ಲ ಕುಣಿಯುತ್ತಿದ್ದಾರೆ. ಗಿರಾಕಿಗಳೂ ಪೇಡೆ ಹಂಚಿದ್ದಾರೆ. ಪಂಜರದ ಪರದೆಗಳು ಸಹಸ್ರವರ್ಷಗಳಿಂದ ಹಾಗೇ ತೂಗಿವೆ. ನಿರೋಧದ ಪೊಟ್ಟಣಗಳನ್ನು ಹೂವಿನಂತೆ ಕೈಲಿ ಹಿಡಿದು ಪುಟ್ಟ ಮಕ್ಕಳು ಮಾರಲೆಂದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಇಲ್ಲಿಯ ಮಕ್ಕಳಿಗೆಂದೇ ರಾತ್ರಿ ತೆರೆವ ಶಿಶುವಿಹಾರದಲ್ಲಿ ಗೊಂಬೆಗಳು ಕಣ್ತೆರೆದು ಮಲಗಿವೆ.

ಜಾಗರದ ಜೀವಿಗಳಿಗೆ ಇನ್ನೇನು ಕಣ್ಣು ಹಿಡಿಯುವ ಹೊತ್ತು ಮೂಡಣದಲ್ಲಿ ಒಂದು ಬಾಂಬು ಸದ್ದಿಲ್ಲದೆ ಸ್ಫೋಟಗೊಂಡಿದೆ. ಗಾಯ ನೋವು ಹಾನಿಗಳ ತಪಶೀಲು ಹೊತ್ತ ಇಡೀ ಒಂದು ಹಗಲು, ಬಾಗಿಲಲ್ಲಿ ರದ್ದಿಯಾಗುತ್ತ ಬಿದ್ದುಕೊಂಡಿದೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ