೧
ಇವನ ಹಾಲ್ದುಟಿಯಂಚಿನಲ್ಲಿ ಮಿಂಚುವ ನಗೆಯು
ತುಂಬುಗಣ್ಣುಗಳಲ್ಲಿ ಹೊಳೆವ ಬದುಕು,
ಧ್ವನಿತರಂಗದಲೆದ್ದು ತೇಲಿ ಬರುತಿಹ ನಾದ
ಚಂದ್ರ-ದೋಣಿಯನೇರಿ ಹುಟ್ಟು ಹಾಕು-
ಹೂವಿಗೆರಗಿದ ತುಂಬಿ, ಸಿಂಪಿಗೊರಗಿದ ಮುತ್ತು
ತಂಪುಗಾಳಿಗೆ ಬಿರಿದ ಸಂಪಿಗೆಯ ಮೊಗ್ಗು,
ತೆಂಗಿನೊಳಗಿನ ತಿಳಿಲು, ಗಾನದಿಂಪಿನ ಹೊಳಲು
ಮನಸಿನೊಳಗಿನ ಕನಸು ಹೀಗೆ ಬೆಳೆದು.
ತಂಗುಗರಿ ಚಾಮರವ ಬೀಸಿ ಬೆಳ್ಗೊಡೆಯೆತ್ತಿ
ಚಿಕ್ಕೆ ಪಲ್ಲಕ್ಕಿಯನು ಸಜ್ಜುಗೊಳಿಸಿ,
ಬೆಳ್ಳಿ-ಗಂಟೆಯ ನುಡಿಸಿ ಹೂವು ಹಡದಿಯ ಹಾಸಿ
ಇರುಳ ದೇವರು ಇಳೆಗೆ ದಯಮಾಡಿಸಿ-
ನೆರಳ ನೇವರಿಸುತ್ತ ಬೆಳಕು ಬೆರಳಾಡಿಸಿತು
ಬೆಳುದಿಂಗಳಿನ ಹಾಲು, ಬೀರು ಕುಡಿಸಿ,
ಹಗಲು ಧಿಮಿ ಧಿಮಿ ಕುಣಿದ ಬಿಸಿಲುಗುದುರೆಯ ಮೈಯ
ತಿಕ್ಕಿ ತೋಬರಿ ಕಟ್ಟಿ ಹಾಯಾಗಿಸಿ.
ಮಗುವಿನೆಳೆಗಂಗಳಲಿ ಬೆಳ್ಳಿ ಚಿಕ್ಕೆಯ ಮಿನುಗು
ಮನಸಿನಲಿ ತಿಂಗಳಿನ ತಂಪು ಕನಸು;
ಹಸು ಹಾಲು ಕರೆದ ತಂಬಿಗೆ ತುಂಬ ಮಲ್ಲಿಗೆಯು-
ಶಿಶು ಕಂಡ ಕನಸಿನಲಿ ಜೀವದುಣಿಸು!
೨
ಬಯಲೆಲ್ಲವೂ ಒಂದೆ ಬೆಟ್ಟವಾಗುತ ನಿಂತು
ಬೆಳೆಯಿತು ಪ್ರಪಂಚ.
ಎಲ್ಲಿ ನೋಡಿದಡಲ್ಲಿ ಬಣ್ಣದಲ್ಲಿ ಆಡಿದವು ನೂರು ಕುಂಚ;
ಸರಸರ ಕೊಂಬೆಯೇರಿ ಇಳಿಯುವ ಅಳಿಲು,
ಎಲೆಗಳಲಿ ಸೋಸಿ ರಂಗವಲ್ಲಿಯ ಬಿಡಿಸಿ ಹಾಸಿದೆಳವಿಸಲು,
ನಿಮಿಷ ನಿಮಿಷಕ್ಕೆ ಗೂಡಿಗೈತಂದು ಹಾರುವ ಗುಬ್ಬಿ,
ಹುಲ್ಲಿನಲಿ ಬಿಸಿಲುಕಾಸುತ ಮಲಗಿ, ಮೈಮುರಿದು
ಬಾಲ ನಿಗುರಿಸಿ ಒಂಟೆ ಡುಬುರಿಯೆತ್ತಿ
ಹೂವಿನ ಮೇಲೆ ಹೆಜ್ಜೆಯಿಡುವಂತೆ ಮೈಗೆ ಮೈ ಸೋಕಿಸುವ ಕಾಮಿ ಬೆಕ್ಕು;
ನುಣ್ಣಗೆ ಸಣ್ಣ ಲೈನು ದಾರಿಯ ರಚಿಸಿ
ಒಂದರ ಹಿಂದೆ ಒಂದು
ಸಕ್ಕರೆಯ ವಾಗೀನು ಸಾಗಿಸುವ ಇರುವೆ ಸಾಲು.
ನಟ್ಟಿರುಳಿನಲಿ ಕಿಡಿಗೆದರಿ ಹಳಿಗುಂಟ ಉರುಳುವ ರೈಲು, ಮೈಲು ಮೈಲು!
ಕಣ್ಣಗೊಂಬೆಗೆ ಮೂಡಿ ಮನಸಿನಲಿ ಅಚ್ಚಾಗಿ
ಕನಸಿನಲಿ ಬಿಚ್ಚುವವು ರೀಲು ರೀಲು!
೩
ನಾನು(ಬೆಳೆದ ಮಗು)
ಮೂರು ಮಕ್ಕಳ ತಂದೆ
ಮೂರುಸಲ ಮಗುವಾಗಿ ಮತ್ತೆ ಬೆಳೆದೆ;
ನೂರು ಕನಸುಗಳನ್ನು ಮರಳಿ ಪಡೆದೆ.
ಎಳೆಯ ಕನಸೇ ಮರಳಿ ಕಳೆಗೂಡಿದಂತಿಹುದು
ಇಂದಿನಿರುಳು:
ಕಣ್ಣಿದಿರು ಕನಕಾಂಗಿ ಮುಗಿಲು ಕಪ್ಪುರಗೊಂಬೆ!
ಚಿಕ್ಕೆ ಲೋಕವ ತೆರೆದು ಅಕ್ಕರತೆ ಬೀರುತಿಹ ಸ್ವಚ್ಛ ಆಕಾಶ,
ಹಚ್ಚೆಯ ಚುಚ್ಚಿದಂತೆ ನೆಲದೊಳಚ್ಚೊತ್ತಿರುವ ಹಸುರ ಕುಸುರು.
ದಿಗಂತದಲಿ ಕೆಳಗೆ ಇಳಿಬಿಟ್ಟಿರುವ ಗಿರಿಸಾನುಗಳ ನೀಲ ತೆರೆ
ಮೇಲೆ ಚಂದ್ರನು ಬರಿಯ ದುಂಡು ಗೆರೆ.
ಕಿವಿಗೊಟ್ಟರೆದೆಗೆ ತೋಟ ಪಟ್ಟಿಯ ತೋಪಿನಿಂಚರದ ದೂರವಾಣಿಯ ಕರೆ.
ನಗರದಲಿ ತುಂಬ ವಿದ್ಯುದ್ದೀಪ-
ಬೆಳಕನ್ನೆ ಬಿಗಿದು ಹಿಡಿದಂತೆ ಹತ್ತೂ ಕಡೆಗೆ ಸುತ್ತು ತಂತಿಯ ಕಂಬ;
ಟಾರು ಬೀದಿಯಲಿ ಕಾರುಗಳ ಮಿಂಚಿನ ಲಾಳಿ,
ತಾಳ್ಮೆಯ ಮೇಲೆ ಕರಹೇರಿ ಕರಕರೆಪಡುವ ರೇಡಿಯೊ ಹಾಡು,
ಈಗ ಮ್ಯಾಟಿನಿ ಮುಗಿದು ಎರಡನೆಯಾಟ ಸುರುವು.
ನಗರ ಸಭೆಯುಪವನದ ಬೆಂಚಿಗೊರಗಿದ ಬಾಯ್ಗೆ ಹುರಿಗಡಲೆ,
ಎರಡು ದುಡ್ಡಿನ ಸುಟ್ಟ ಸೇಂಗಾ,
ಆಣೆಗೆ ಎಂಟು ಪಪ್ಪರಮೆಂಟು:
ಬಾಯಾಡಿಸು, ಯಾರಪ್ಪನದೇನು ಹೋಯ್ತು ಗಂಟು-
ನಗರಭವನದ ಧ್ವನಿವರ್‍ಧಕವ ತೂರಿ, ಸುರಿಯುತ್ತಿವೆ
ರಾಜಾ, ರೋರರ್, ರಾಕೆಟ್, ರಾಣಿ!
ನಾಳೆ ಬೆಳಿಗ್ಗೆ ನೋಡಿದರಾಯ್ತು ಪತ್ರಿಕೆಯಲ್ಲಿ, ಯಾಕ್ರಿ?
ಇದ್ದೇ ಇರುವನಲ್ಲ ಸ್ವಂತ ಸುದ್ದಿಗಾರ.
ಇಲ್ಲಿ ರಹದಾರಿ ಬಂದು. ತೂಗುತಿದ ಕೆಂಪು ಕಂದೀಲು,
ವರ್‍ಷಗಟ್ಟಲೆ ರಿಪೇರಿ ನಡೆಯುತ್ತಿರುವ ರಾಜಮಾರ್‍ಗ!
ಗಂಟೆಯಾಯಿತು, ಈಗ ಹೊರಟದ್ದು ನಿನ್ನೆಯ ರೈಲು.
ಇಂದಿನದು ನಾಳೆ ಎಷ್ಟೊತ್ತಿಗೋ
ದಾರಿಯಲಿ ಬರುವ ಸೇತುವೆಯೆಲ್ಲ ಭದ್ರವೊ-
ಭದ್ರಂ ಶುಭಂ ಮಂಗಲಂ.
* * *
ಹಗಲ ಪಾಜೆಯಗಟ್ಟಿ ಮುಟ್ಟಿ ಮರಳಿದೆ ಇರುಳ ತೇರು
ಆಕಾಶದಾಚೆ ತುದಿಯಿಂದ ಈ ತುದಿಯವರೆಗೆ ಬೆಳ್ಳಿಯ ಬೀದಿ.
ಇಳೆಯ ಹಾಡನ್ನೆಲ್ಲ ಕುಡಿದ ಸಾವಿರ ಚಿಕ್ಕೆ-
ಮಿಡಿಯುತಿವೆ ಇರುಳ ಮೌನ.
ಅಲ್ಲಿ ಮೂಡಿದ ನೂರು ಹೆಜ್ಜೆ ಮಿನುಗಿವೆ ಹರಡಿ ಜೀವಕಾಂತಿ!
ಇಲ್ಲಿರುವ ನಮಗೊ?
ಕಣ್ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿಯೆ ಬೆಳಗು
ಮತ್ತದೇ… ಬೆಳಗು.
*****
