ಮಿಲಾನ್ ಕುಂಡೇರ ಹೇಳಿದ ಕಥೆ

ಸಾವಿರದ ಒಂಬೈನೂರ ನಲವತ್ತೆಂಟನೇ ಇಸವಿಯಲ್ಲಿ
ಫೆಬ್ರುವರು ತಿಂಗಳಲ್ಲಿ, ಚಳಿಗಾಲದಲ್ಲಿ
ಯೂರೋಪ್ ಖಂಡದಲ್ಲಿ, ಇದು ನಡೆದ ಸ್ಥಳ:
ಪ್ರಾಗ್, ಚೆಕೋಸ್ಲವೇಕಿಯಾದ ರಾಜಧಾನಿ ಪ್ರಾಗ್.

ಲಕ್ಷಾಂತರ ಜನ ನೆರೆದಿದಾರೆ, ನೆರದ ಜನರ ಎದುರು ನಿಂತಿದಾನೆ
ಗಾಟ್‌ವಾಲ್ದ್
ಶೂರ ಧೀರ ಕ್ರಾಂತಿಕಾರ.

ಚೆಕ್ ಚರಿತ್ರೇಲೇ ಸುವರ್ಣಾಕ್ಷರದಲ್ಲಿ …. ಇತ್ಯಾದಿಯಾಗಿ
ಪ್ರಗತಿಶೀಲರು ಕೊಡಾಡುವ ಈ ದಿನ
ನಿಂತಿದಾನೆ ಜನಸಾಮಾನ್ಯರ ಗೆಳೆಯ, ಹಾಗೂ ನಾಯಕ
ಗಾಟ್‌ವಾಲ್ದ್
ಈ ಲಕ್ಷಾಂತರ ಜನರ ಕಣ್ಣೆದುರಿಗೇನೇ

ನಿಂತಿದಾನೆ ಗಾಟ್‌ವಾಲ್ದ್ ಜತೆ, ಜತೆಗಾರ
ಕ್ಲೆಮಂಟಸ್ ಎನ್ನುವ ಕಾಮ್ರೇಡ್.

ಗಾಟ್‌ವಾಲ್ಡ್ ಪಕ್ಕ ಕ್ಲೆಮೆಂಟಸ್, ಕಾಮ್ರೇಡರು,
ಫೆಬ್ರುವರಿ ಚಳಿಯಲ್ಲಿ ಲಕ್ಷಾಂತರ ಜನರ ಕಣ್ಣಲ್ಲಿ ನಿಂತಿದಾರೆ
ಸ್ನೋ ಬೀಳ್ತಿದೆ. ಅದರೆ ಆವರಿಗೆ ಎಗ್ಗಿಲ್ಲ.

ಕ್ಲೆಮೆಂಟಸ್ ತಲೇಮೇಲೆ ಬೆಚ್ಚಗಿನ ಫರ್‌ಕ್ಯಾಪ್ ಇದೆ,
ಆದರೆ ಗಾಟ್‌ವಾಲ್ಡ್ ತಲೆ ಬರಿದು,
ಸ್ನೋ ಬೀಳುವ ಚಳಿಯಲ್ಲಿ ಪ್ರೀತಿಯ ಕಾಮ್ರೇಡ್ ಗಾಟ್‌ವಾಲ್ಡ್ ತಲೆ ಹಿಡಿದು
ಅಂತ ಅಕ್ಕರೆ ಉಕ್ಕಿ ಬಂದು ಕಾಮ್ರೇಡ್ ಕ್ಲೆಮೆಂಟಸ್‌ಗೆ, ಏನು ಮಾಡ್ತಾನೆ ಅಂದರೆ
ತನ್ನ ಫರ್‌ಕ್ಯಾಪನ್ನೇ ತೆಗೆದು ಗಾಟ್‌ವಾಲ್ಡ್ ತಲೆ ಮೇಲೆ ಇಡ್ತಾನೆ. ಆಗ ಜನರ
ಚಪ್ಪಾಳೆಯೋ ಚಪ್ಪಾಳೆ.

ಈ ಇಬ್ಬರೆ ಈ ಪೋಶ್ಟರು-
ಕ್ಲೆಮೆಂಟಸ್ ಫರ್‌ಕ್ಯಾಪ್ ಹಾಕಿಕೊಂಡು ಗಾಟ್‌ವಾಲ್ಡ್ ಮಾತಾದ್ತಿರೋದು
ಪಕ್ಕದಲ್ಲಿ ಕ್ಲೆಮೆಂಟಸ್ ನಿಷ್ಠೆಯಿಂದ ಪ್ರೀತಿಯಿಂದ ನಿಂತಿರೋದು-
ಎಲ್ಲೆಲ್ಲೂ ಇದ್ದವು,
ಸ್ಕೂಲಲ್ಲಿ, ರೈಲ್ವೆ ಸ್ಟೇಶನ್ನಲ್ಲಿ, ಬಸ್ ನಿಲ್ದಾಣಗಳಲ್ಲಿ, ಫ್ಯಾಕ್ಟರಿಗಳಲ್ಲಿ
ಮಲಗುವ ಮುನ್ನ ಆಪ್ತ ಕೋಣೆಗಳಲ್ಲೂ- ಎಲ್ಲೆಲ್ಲೂ.

ಈ ಪೋಸ್ಟರ್ ನೋಡ್ತ ನಾಲ್ಕು ವರ್ಷ ಕಳೆದವು
ಆಮೇಲೆ ಕ್ಲೆಮೆಂಟಸ್ ಧೇಶ ದ್ರೋಹಿಯಾಗಿ ಬಿಟ್ಟು
ಅದು ಮುಂಚಿಂದ ಅವನ ಸಂಚೂಂತ ಗೊತ್ತಾಗಿ ಬಿಟ್ಟು
ಅವನಿಗೆ ಗುಲ್ಲಾಗಿ ಬಿಟ್ಟು
ಚರಿತ್ರೇಂದ ಅವನು ಹೊರ ಹಾಕಲ್ಪಟ್ಟು
ಪ್ರಗತಿಶೀಲರ ವೇಸ್ಟ್‌ಪೇಪರು ಬಾಸ್ಕೆಟ್ಟಲ್ಲಿ
ಹರಿದು ಹಾಕಿದ ಕನಸಾಗಿ ಬಿಟ್ಟು
ಎಲ್ಲ ಪೋಸ್ಟರ್‌ಗಳಿಂದ ಅವನು ಮಾಯವಾಗಿ ಬಿಟ್ಟದ್ದು
ಈಗ ಹಳೇಯ ಕಥೆ.

ಈಗ ಪೋಸ್ಟರ್‌ನಲ್ಲಿ ಎಲ್ಲೆಲ್ಲೂ ಗಾಟ್‌ವಾಲ್ಡ್ ಒಬ್ಬನೇ ನಿಂತಿದಾನೆ,
ಏಕಾಂಗಿ ಚಳಿ ಲೆಕ್ಕಿಸದೆ, ಬೀಳ್ತ ಇರೋ ಸ್ನೋ ಕೆಳಗೆ
ಲಕ್ಷಾಂತರ ಜನರ ಎದುರು
ಶೂರ, ಧೀರ, ಪ್ರಗತಿ ಶೀಲರ ಕಣ್ಮಣಿ

ರಾಜದ್ರೋಹಿ ಕ್ಲೆಮೆಂಟಸ್ ಅವನ ಜೊತೆ ಇಲ್ಲ. ಯಾಕೇಂದ್ರೆ ಇರಲಿಲ್ಲ. ಆದರೆ
ಫರ್‌ಕ್ಯಾಪ್ ಇದೆ, ಗಾಟ್‌ವಾಲ್ಟ್ ತಲೆ ಮೇಲೆ ಇದೆ,
ಚಳೀಲಿ ಎಲ್ಲರೆ ತಲೆ ಮೇಲೂ ಇರೋ ಹಾಗೆ ಸಹಜವಾಗಿ ಇದೆ,
ಎಲ್ಲ ಪೋಸ್ಟರುಗಳಲ್ಲೂ
*****
೩-೧-೯೨

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.