ಗಗನದಿ ಸಾಗಿವೆ

ಗಗನದಿ ಸಾಗಿವೆ, ಬಾಗಿವೆ ಮೋಡ
ಹೋಗಿವೆ ನೀರನು ಸುರಿದು;
ಬರುವವು, ಬಂದೇ ಬರುವವು ನೋಡ
ತುಂಬಿಸಿ ತುಳುಕಿಸಿ ಹರಿದು.

ಇಳೆಗೂ ಬಾನಿಗು ಮಳೆ ಜೋಕಾಲಿ-
ತೂಗಿದೆ, ತಂಗಿದೆ ಚೆಲುವು;
ಹಸುರೇ ಹಬ್ಬಿದೆ, ಹಸುರೇ ತಬ್ಬಿದೆ
ಹೆಸರಿಗು ಕಾಣದು ನೆಲವು.
ನಸುಕೋ, ಸಂಜೆಯೊ, ಮಿಸುಕದು ಬೆಳಕು-
ತಾಯಿಯ ಮೊಲೆಗಿದೆ ಕೂಸು.
ಇರುಳೇ ಹೊರಳಿತು, ಹಗಲೇ ಮರಳಿತು
ಚಿಗುರೆಲೆ ಹೂವಿಗೆ ಹಾಸು.
ಬೇಸಗೆ ಬಣ ಬಣ, ಚಳಿಗೋ ಒಣ ಒಣ
ಶ್ರಾವಣ ತಣ್ಣಗೆ ನಡುವೆ;
ಎಲ್ಲಿದೆ ಬೆಂಕಿ? ಎಲ್ಲಿದೆ ಬೆಳಕು?
ಬೀಸುವ ಗಾಳಿಗೆ ಬಿಡುವೆ?
ನೀರೇ ಹರಿದಿದೆ, ನೀರೇ ಬರೆದಿದೆ
ನೀರೇ ಕರೆದಿದೆ ಮೊರೆದು;
ಯಾರೆ? ಎಂದರು ನೀರೇ ಬರುವದು
ಬೆನ್ನಿನ ಹಿಂದೆಯೆ ಸರಿದು.
ಬೆಚ್ಚಗೆ ಒಳಗೆ, ಹಚ್ಚಗೆ ಹೊರಗೆ
ಹುಚ್ಚನು ಬಿಡಿಸಿದೆ ಮಳೆಯು,
ಎಚ್ಚರು ಎಚ್ಚರು ಎನ್ನುತ ಹರಿದಿದೆ
ತುಂಬಿದ ಬಾಳಿನ ಹೊಳೆಯು.
*****