ನೀರು ಹರಿದಿದೆ ನಿರಾತಂಕ

ಆಗಸದ ಆಣೆಕಟ್ಟನು ಒಡೆದು ನುಗ್ಗಿದವು
ನೂರು ನಾಯ್ಗರಾ ತಡಸಲು!
ಕಣ್ಣು ಕಟ್ಟಿ, ಗಿಮಿಗಿಮಿ ಗಾಣವಾಡಿಸಿತು ಗಾಳಿ
ನೆನೆ ನೆನೆದು ನೆಲವೆ ಕುಪ್ಪರಿಸಿತ್ತು,
ಮುಗಿಲು ಹೊಚ್ಚಿತು ಕಪ್ಪು ಕಂಬಳಿಯ ಕತ್ತಲು,
ರಮ್….ರಮ್….ರಮ್….
ರಣ ಹಲಗೆ ಸದ್ದಿನಲಿ ಜಿದ್ದು ಕಟ್ಟೆದ್ದಿರುವ
ಜಡಿಮಳೆಯ ರುದ್ರಾವತಾರ!

“ಯಾ ಆಪೋ ದಿವ್ಯಾ ಉತ ವಾ ಸ್ರವನ್ತಿ ಖನಿತ್ರಿಮಾ
ಉತ ವಾ ಯಾಃ ಸ್ವಯಂ ಜಾಃ
ಸಮುದ್ರಾರ್‍ಥಾ ಯಾಃ ಶುಚಯಃ ಪಾವಕಾಸ್ತಾ
ಆಪೋ ದೇವೀರಿಹ ಮಾಮವನ್ತು”,
ನೆಲದ ಆಧಾರದಲಿ ನಿಂತು ಹರಿಯುವ ನೀರು
ನೆಲದೊಡಲ ಕೊರೆದು ಮುಕ್ಕಿತು ಒಂದೆ ತೆಕ್ಕೆಯಲಿ
ಇಕ್ಕೆಲದ ಬಾಳು-ಬದುಕು,
(ಇರಬೇಕು ಎಲ್ಲೊ ಯಾರಿಗೋ ಮೈಸೂಕ್ಕು.
ನೆಲದ ಮೇಲಿಷ್ಟೆ ಅಲ್ಲ, ಆಕಾಶದಲ್ಲೂ ಇಹುದು
ನಮಗು ನಿಮಗೂ ಹಕ್ಕು.)
ಅಶ್ವಿನೀ ಭರಣೀ, ಕೃತ್ತಿಕಾ,
ರೋಹಿಣೀ, ಮೃಗಶಿರಾ, ಆರ್‍ದ್ರಾ,
ಪುನರ್‍ವಸು, ಪುಷ್ಯ….
ಒಬ್ಬೊಬ್ಬರೂ ನುಡಿದು ಹೋದರಯ್ಯ ಇವರು
ಪ್ರಳಯದ ಭವಿಷ್ಯ!
ಹೋದರೋ?- ಇವರು ನಾಪತ್ತೆ, ಮುಗಿಲ
ಹಿಂಡಿದರು ಒಂದು ಹನಿ ಹೊರಡದಂತೆ-
ಕೆರೆ, ಬಾವಿ, ಹಳ್ಳ, ಹೊಳೆ ಬತ್ತಿ, ಬೆನ್ನಿಗೆ ಹೊಟ್ಟೆ ಹತ್ತಿ
ನೆಲವದ್ದು ಬಡಿಯುವಂತೆ!
ಕಾರ ಮಳೆಯೆ, ಕಪ್ಪತ ಮಳೆಯೆ
ಸುರಿಮಳೆಯೆ, ಸುರಿಮಳೆಯೆ.
ಬಂದರೋ-ಈಗ ಬಂದಂತೆ ದಂಡೆತ್ತಿ ಇದ್ದು-
ಬಿದ್ದುದನೆಲ್ಲ ಕೊಚ್ಚಿಕೊಂಡೊಯ್ಯುವರು
ತುಂಬುವರು ಕಡಲಿನೊಡಲು.

ಆಕಾಶ, ಪಾತಾಳ, -ಎರಡರಲ್ಲೂ ಇಲ್ಲ ತಾಳ ಮೇಳ.
ಭೂಗೋಳಕ್ಕೆ ಬೆನ್ನು ಹತ್ತಿಹುದು ಬೇತಾಳ-ಆದರೂ
ತಪ್ಪುವಂತಿಲ್ಲ ಕುರುಕ್ಷೇತ್ರದಲಿ ಕುಂಭಮೇಳ.

ಒಮ್ಮೊಮ್ಮೆ-ಮನಸು ತಿಳಿದಾಗೆಲ್ಲ
ನೂರು ಝರಿ ತೊರೆಗಳಲಿ ಬಳುಕಿ ಕಚಕುಳಿಯಿಟ್ಟು
ಹಸುರ ನಗಿಸುತ, ಗದ್ದೆ ಹೊಲಗಳಲಿ ಹೊಂಬಿಸಿಲ ತುಂಬು ನಗೆ ಹರಿಸಿ
ಹರಿದಿಹುದು ನೀರು ನೀರೇ ನಿರಾತಂಕ-
ಗಿರಿಶಿಖರದಿಂದ, ನದಿನದಿಯ ಮುಖದಿಂದ
ಮರಳುಗಾಡಿನ ಒಡಲಿನಂತಃಕರಣದಿಂದ-
ನಿಂತದ್ದೆ ನೀರು ಹರಿದದ್ದೆ ತೀರ್‍ಥವಾಗಿ.
ನಿಂತಲ್ಲೆ ನಿಲ್ಲುವದೆ ನೀರು?- ಕೈಚಾಚಿ
ಹರಿಯುವುದು, ನೆಲದ ಒಳಸೇರುವದು,
ಕಾದು ಮೇಲೇರುವುದು.
ದಿಕ್ಕು ದಿಕ್ಕಿಗೆ ಮೋಡ
ಪಕ್ಕ ಬೀಸುವದು.
ಎದುರು ಬಂದುದನಮರಿ ತೆಕ್ಕೆ ಹಾಯುವದು!
ಪೃಥ್ವಿ, ಅಪ್, ತೇಜ, ವಾಯು, ಆಕಾಶ –
ಐದರಾವರಣದಲಿ ತೋರಣವ ಕಟ್ಟಿ
ತೂಗಿರಲು ಮಾನವ ಯಥಾವಕಾಶ,
ನೆರೆಯೇರಿ ನರೆಯಿಳಿದು, ವರದ ಶಾಪವ ತೊರೆದು
ಕೂರಸಿಯ ಕಾರ್‍ಯ ಪೂರೈಸಿ, ಹಂದಿಹುದು
ನೀರು ನಿರ್‍ಮಲ ನಿರಾತಂಕ.
*****