ಜಗದೇಕಮಲ್ಲ

ಯಾವುದಕ್ಕೂ ಇವಗೆ ಸಂಪೂರ್‍ಣ ಸ್ವಾತಂತ್ರ್ಯ-
ಬೇಕಾದಷ್ಟು ಉದ್ದ ನಾಲಗೆಯ ಹರಿಬಿಡಬಲ್ಲ,
ಯಾರೆಷ್ಟು ಒದರಿಕೊಂಡರೂ ಕೇಳಿಸದ ಲಂಬಕರ್‍ಣ.
ರಸ್ತೆಯಲಿ ಬದಿಗೆ ನಡೆದವರ ಮೇಲೆಯೇ
ಕಾರು ಹಾಯಿಸಬಲ್ಲ;
ಅದಕೆ ಬ್ರೇಕಿಲ್ಲ.
ಸೀದಾರಸ್ತೆ ಇವನೆಂದೂ ಕಂಡುದಿಲ್ಲ.
ಬೇಕಾದವರನೆತ್ತಿ ಮುಗಿಲಿಗೆ ತಲೆಯ ತಾಗಿಸಬಲ್ಲ
ಬೇಡಾದವರನೊತ್ತಿ ಪಾತಾಳಕ್ಕೆ,-
ಪದ್ಮಾಸನವ ಹಾಕಿ ಕೂಡಬಲ್ಲ.
‘ಜನತೆ ಜನತಾ’ ಎಂದು ಬುಡುಬುಡಿಕೆ ಬಾರಿಸುತ
ದೇಶದ ಭವಿಷ್ಯವನ್ನು ಸಾರಬಲ್ಲ.
ಓಡುವವರಿಗೆ ಅಡ್ಡಗಾಲು ಹಾಕುತ ಮುಂದೆ
ಮುಗ್ಗರಿಸಿ ಬೀಳುವುದ ನೋಡಬಲ್ಲ.
ಬೆನ್ನು ಚಪ್ಪರಿಸಿದರೆ ಬೆಳತನಕ ಬೇಸೂರು ಹಾಡಬಲ್ಲ.
ಎಮ್ಮೆಗಳ ಜೊತೆಯಲ್ಲಿ ರಾಡಿ ನೀರೊಳು
ಸಲೀಸು ಈಜಾಡಬಲ್ಲ.
ಕೊಂಬೆ ಕೊಂಬೆಗೆ ಜಿಗಿದು ಚಿಗುರು, ಹೂ, ಕಾಯಿಗಳ
ಕಡಿ ಕಡಿದು ಹಾಕಬಲ್ಲ.
ಗಿಳಿಗಿಂತ ಚೆನ್ನಾಗಿ ಮಾತಾಡಬಲ್ಲ,
ದೊಡ್ಡವರ ಬಾಲಕ್ಕೆ ಜೋತಾಡಬಲ್ಲ,
ಎಲ್ಲಿ ಏನಾದರೂ ಅನರ್‍ಥ ಸಂಭವಿಸಿದರೆ
ಅದರ ಅಡಿಗಲ್ಲಿವನ ಅಮೃತಹಸ್ತ.
(ಎಲ್ಲದಕ್ಕೂ ಬರಿಯ ಹಲ್ಲುಕಿಸ್ತ).
ದಿನದ ಇಪ್ಪತ್ನಾಲ್ಕು ತಾಸು ಪಿರಿಪಿರಿ ತಿರುಗಿ
ದೇಶದುದ್ಧಾರಕೆ ದೇಹವನು ತೇಯಬಲ್ಲ;
ಮಂದಿ ಹೊಲಗಳ ನುಗ್ಗಿ ಮೇಯಬಲ್ಲ.
ಇವನಿಲ್ಲದೆಯೆ ಯಾವ ಸಭೆ ಸಮಾರಂಭಕ್ಕು
ಶೋಭೆಯಿಲ್ಲ.
ಇಲ್ಲ, ಪುರಸೊತ್ತಿಲ್ಲ,
ಪಂಚೇತಿಯಿಂದ ಆ ವಿಧಾನಸೌಧದವರೆಗು
ಬಲೆ ಬೀಸಿ, ಬಕನಂತೆ ಕಾಯಬಲ್ಲ.
‘ಎಲ್ಲ ಬಲ್ಲವರಿಲ್ಲ’
‘ಬಲ್ಲಿದರು ಬಹಳಿಲ್ಲ’
ಏಕಿಲ್ಲ? ಇವನಿಲ್ಲವೇ ನಮ್ಮ ಜಗದೇಕಮಲ್ಲ?
ಕಳಿಸಿರಿವನನು ಮೊದಲು ದುರದ ಹಿಮಾಲಯಕೆ
ಅಲ್ಲಿಯೇ ಹಿಡಿದಿರಲಿ ಜಯಪತಾಕೆ.
*****