ವಸುದೇವ-ದೇವಕಿಯರಂತರ್‍ಭಾವದಿ ಭಗವಜ್ಜ್ಯೋತಿಯು ಹೊತ್ತಿರಲು
ಗಾಳಿಮಳೆಯು, ಕಾರ್‍ಗತ್ತಲು, ಕಾರಾಗೃಹವೇ ಬಾಗಿಲು ತೆರೆದಿರಲು,
ತುಂಬಿದ ಯಮುನೆಯು ಇಂಬಾದಳು, ಬಾ, ‘ಅಂಬಾ’ ಎಂದಿತು ಗೋಕುಲವು
ಶಂಖ, ಚಕ್ರ, ಗದೆ, ಪದ್ಮಧಾರಿ ಕೂಸಾಗಲು ಹರಿಯಿತು ವ್ಯಾಕುಲವು.
ಬೆಣ್ಣೆ ಮೊಸರು ತಿಂದಣ್ಣೆವಾಲು ಕುಡಿದಾಡಿದ ಗೋಪಾಲ
ಚಿಣ್ಣರ ಬಡಿಯುತ, ಹೆಣ್ಣನು ಕಾಡಿದ ಯಾರಿಗು ಇವ ಸೋಲ.
ಹಿಡಿ ಹಿಡಿಯೆಂದರೆ ಹಿಡಿಯಲಿ ಸಿಗುವನೆ ಬ್ರಹ್ಮಾಂಡವೆ ಅತ.
ನವಿಲುಗರಿಯ ನವನೀತ ಚೋರನಾಬಾಲವೃದ್ಧಪ್ರೀತ.
ಹತ್ತಿ ತುಳಿದ ಕಾಳಿಂಗನ ಹೆಡೆಗಳ ಅಹಂಕಾರ ಹಿಳಿದು,
ಎತ್ತಿದ ಗೋವರ್‍ಧನ ಗಿರಿಯನು ಆ ಇಂದ್ರನ ಮುಖದೆದುರು.
ಕಾಮಧೇನು ಅಭಿಷೇಕಿಸೆ ಗೋಕುಲಕಧಿಪತಿ ಗೋವಿಂದ.
ಇಲ್ಲಿ ಹುಡುಕಿದರೆ ಅಲ್ಲಿ ತೋರುವನು ಎಲ್ಲೆಡೆ ಸ್ವಚ್ಛಂದ.
ದೈತ್ಯಬಾಹು ಮುಗ್ಧತೆಯನ್ನು ಹಿಸುಕಲು ಚಾಚಿತು ಹಲಬಾರಿ
ಪೂತನಿ, ಶಕಟಾಸುರ, ಯಮಳಾರ್‍ಜುನ, ಧೇನು ಪ್ರಲಂಬರ ತೋರಿ;
ರಾಕ್ಷಸರೂಪದ ಭೌತಿಕ ಶಕ್ತಿಯ ಗೋಪುರ ನೆಲಕುರುಳಿ
ಕಂಸಾಸುರನೆದೆ ಕುಸಿಯಿತು ಧರ್‍ಮದ ಕೃಷ್ಣಶಕ್ತಿ ಕೆರಳಿ.
ಬೃಂದಾವನದೆದೆಯ ಮಿಡಿದು
ಬಂತು ಕೊಳಲ ಮೆಲ್ಲುಲಿ-
“ಕೈಯೊಳಿದ್ದುದಲ್ಲೆ ಬಿಟ್ಟೆ
ಮೈಯನಲ್ಲಿ ಚೆಲ್ಲಲಿ?”
ಝಣ್ ಝಣ್ ಝಣ ಝಣಿರು ಕುಣಿವ
ಗೋಪಿಕೆಯರು ಸುತ್ತಲು
ಕೃಷ್ಣ-ರಾಸಕ್ರೀಡೆ-ಹಾಸ
ರಮಿಸಿ ನಮಿಸಿ ಮುಕ್ತರು.
ಕೊಳಲೂದಿದ ತುಟಿಗಳಲ್ಲಿ
ಪಾಂಚಜನ್ಯ ಪುಟಿಯಿತು.
ಕುರು-ಪಾಂಡವ-ಕುರುಕ್ಷೇತ್ರ
ಧರ್‍ಮಕೆ ಜಯವೆಂದಿತು.
ಆಯುಧವನು ಹೂಡದೇನೆ
ಆದ ಪಾರ್‍ಥಸಾರಥಿ,
ಯುದ್ಧವೆ ಸ್ಥಿರವಾದರೂನು
ಶಾಂತಿಗಾಗಿ ಧಾವತಿ.
ಭೀಷ್ಮ, ದ್ರೋಣ, ವ್ಯಾಸ, ವಿದುರ
ಭೀಮಾರ್‍ಜುನ, ಯುಧಿಷ್ಟಿರ
ದುರ್‍ಯೋಧನ, ಜರಾಸಂಧ
ಶಿಶುಪಾಲ ವಿಶಿಷ್ಟರ-
ಗುಣಶಕ್ತಿಯ ರಂಗದಲ್ಲಿ
ಕೃಷ್ಣಪ್ರಭೆಯ ಬೆರಗದೋ
ಪುಣ್ಯ ಪಾಪದಲ್ಲೆ ಗೆಟುಕ-
ದಂತೆ ನಿಂತ ನಿಲವದೋ.
ಶ್ರೀಕೃಷ್ಣನು ಸೂತ್ರಧಾರ
ನೂರು ಪಾತ್ರ ಕುಣಿದವು;
ಯಾರುಳಿದರು, ಯಾರು ಇಲ್ಲ?
ಯಾರ ಹೊಟ್ಟೆ ತಣಿದವು?
ಎಂತಾದರು ಈ ದುರಂತ-
ಕಿಹುದೆ ಕೊನೆಯ ಅಂಕವು?
‘ಸಂಭವಾಮಿ ಯುಗೇ ಯುಗೇ’
ಅಗೋ ಧರ್‍ಮಚಕ್ರವು
*****
